ಶುಕ್ರವಾರ, ಡಿಸೆಂಬರ್ 6, 2019
17 °C

ಸಹಾಯಮಾತೆಯ ನೆನೆ ನೆನೆ

Published:
Updated:
ಸಹಾಯಮಾತೆಯ ನೆನೆ ನೆನೆ

ನಗರದ ದಂಡು ಪ್ರದೇಶದ ಹಳೆಯ ಬಡಾವಣೆ ರಿಚರ್ಡ್ಸ್ ಟೌನಿನ ಪವಿತ್ರಾತ್ಮರ (ಹೋಲಿ ಘೋಸ್ಟ್) ಚರ್ಚ್‌ನಲ್ಲಿ ಈಗ ದೇವಮಾತೆ ಮರಿಯಾಳನ್ನು ಆರಾಧಿಸುವ ಮಹೋತ್ಸವದ ಆಚರಣೆ.

ಗುರುಗಳಾದ ಮೊನ್ಸಿಜ್ಞೊರ್ ಸಿ. ಫ್ರಾನ್ಸಿಸ್ ಇತ್ತೀಚೆಗೆ ಧ್ವಜಾರೋಹಣ ಮಾಡಿ ದೇವಮಾತೆ ಎಡೆಬಿಡದ ಸಹಾಯಮಾತೆಯ ವಾರ್ಷಿಕ ಮಹೋತ್ಸವಕ್ಕೆ ಚಾಲನೆ ನೀಡಿದರು. ಕ್ರೈಸ್ತ ವಿಶ್ವಾಸಿಗಳ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಪೂರೈಸಲು 1950ರಲ್ಲಿ ಇಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಪವಿತ್ರಾತ್ಮರ ಚರ್ಚ್‌ನ ಉಸ್ತುವಾರಿ ವಹಿಸಿರುವ ರಕ್ಷಕರ (ರಿಡಂಪ್ಟರಿಸ್ಟ್) ಸಭೆಯ ಯಾಜಕರ ಬಳಗದ ಆರಾಧ್ಯ ದೈವ `ಎಡೆಬಿಡದ ಸಹಾಯ ಮಾತೆ~.

ದೇವನೊಬ್ಬ ನಾಮ ಹಲವು ಎಂದಿದ್ದಾರೆ ಜ್ಞಾನಿಗಳು. ಕ್ರೈಸ್ತ ವಿಶ್ವಾಸಿಗಳು ಆದರಿಸಿ ಗೌರವಿಸುವ ಭಗವಂತ ಯೇಸುವಿನ ತಾಯಿ ಮರಿಯಾ ಮಾತೆಯ ಹಲವಾರು ನಾಮಾಂಕಿತಗಳಲ್ಲಿ `ಎಡೆಬಿಡದ ಸಹಾಯ ಮಾತೆ~ (Our Lady of Perpetual Help) ಎಂಬ ಹೆಸರಿಗೆ ತನ್ನದೆ ಆದ ಇತಿಹಾಸವಿದೆ.

ಐತಿಹ್ಯವೊಂದರ ಪ್ರಕಾರ ಅನಾಮಿಕ ಕಲಾಕಾರನೊಬ್ಬ ಕಟ್ಟಿಗೆಯ ಫಲಕದ ಮೇಲೆ ಬಂಗಾರದ ಬಣ್ಣದ ಹಿನ್ನೆಲೆಯಲ್ಲಿ ಬೈಜೆಂಟಿನ್ ಮಾದರಿಯಲ್ಲಿ ಮಾತೆ ಮರಿಯಾ ಮತ್ತು ಬಾಲಯೇಸು ಸ್ವಾಮಿಯ ಚಿತ್ರವನ್ನು ಬಿಡಿಸಿದ್ದ. ಆ ಚಿತ್ರವು ಗ್ರೀಸ್‌ನ ಕ್ರೀಲ್ ನಗರದ ಚರ್ಚ್‌ನಲ್ಲಿತ್ತು. ವರ್ತಕನೊಬ್ಬ ಅದನ್ನು ಕದ್ದು ರೋಮ್ ನಗರಕ್ಕೆ ಸಾಗಿಸಿದ. ತೀವ್ರ ಅಸ್ವಸ್ಥನಾದ ಆಲ್ ಸಾಯುವ ಗಳಿಗೆಯಲ್ಲಿ ತನ್ನ ಸ್ನೇಹಿತನನ್ನು ಕರೆಸಿ ತನ್ನ ಅಪರಾಧಕ್ಕೆ ಪಶ್ಚಾತ್ತಾಪ ಪಟ್ಟು ಆ ಚಿತ್ರಪಟವನ್ನು ಸಮೀಪದ ಚರ್ಚ್‌ಗೆ ಒಪ್ಪಿಸುವಂತೆ ಕೋರಿಕೊಂಡ. ಆದರೆ ಆ ಗೆಳೆಯನ ಹೆಂಡತಿಗೆ ಚಿತ್ರಪಟವನ್ನು ಚರ್ಚಿಗೆ ಒಪ್ಪಿಸಲು ಮನಸ್ಸು ಬರಲಿಲ್ಲ. ಒಂದು ದಿನ ಆ ಮಹಿಳೆಯ ಮಗಳ ಕನಸ್ಸಿನಲ್ಲಿ ಕಾಣಿಸಿಕೊಂಡ ಮಾತೆ ಮರಿಯಾ ಆ ಚಿತ್ರಪಟದಲ್ಲಿರುವ ತನ್ನನ್ನು `ಎಡೆಬಿಡದ ಸಹಾಯ ಮಾತೆ~ ಹೆಸರಲ್ಲಿ ಆರಾಧಿಸಬೇಕು ಎಂದು ತಿಳಿಸಿದಳು. ನಂತರ ಆ ಕುಟುಂಬದವರು ಆ ಚಿತ್ರಪಟವನ್ನು ಸಮೀಪದ ಸಂತ ಪ್ರೇಷಿತ ಮತ್ತಾಯರ (ಖಠಿ. ಠಿಛಿಡಿ) ಚರ್ಚ್‌ನಲ್ಲಿ ಪ್ರತಿಷ್ಠಾಪಿಸಲಾಯಿತು. ಇದು ನಡೆದದ್ದು 1499ರ ಮಾರ್ಚ್ 17ರಂದು. ಸುಮಾರು ಮೂರು ಶತಮಾನ ಹಲವಾರು ಪವಾಡಗಳನ್ನು ಮೆರೆದ ಎಡೆಬಿಡದ ಸಹಾಯ ಮಾತೆಯ ಆ ಚಿತ್ರಪಟ ರಾಜಕೀಯ ಕಾರಣಕ್ಕೆ ಹಳೆಯ ಚರ್ಚ್‌ನಲ್ಲಿ ಮೂಲೆಗುಂಪಾಯಿತು.

ಅದು 19ನೇ ಶತಮಾನದ ಆದಿಯಲ್ಲಿ ರಕ್ಷಕರ ಸಭೆಯ ಯಾಜಕರ ಕೈ ಸೇರಿತು. ಅಂದಿನ ಪೋಪ್ ಜಗದ್ಗುರು 9ನೇ ಭಕ್ತಿನಾಥರು 1866ರಲ್ಲಿ ಆ ಚಿತ್ರಪಟವನ್ನು ಸನ್ಮಾನಿತ ಜಾಗದಲ್ಲಿ ಪ್ರತಿಷ್ಠಾಪಿಸಿ ಗೌರವ ಸಲ್ಲಿಸಲು ಅಪ್ಪಣೆ ಕೊಡಿಸಿದರು. ರಕ್ಷಕರ ಸಭೆಯ ಪಾಲಕಿಯಾಗಿರುವ ಆ ಚಿತ್ರಪಟವನ್ನು ಸಂತ ಅಲ್ಫೋನ್ಸಸ್ ಅವರ ಚರ್ಚ್‌ನಲ್ಲಿ ಪ್ರತಿಷ್ಠಾಪಿಸಲಾಯಿತು. ಅಂದಿನಿಂದ ಎಡೆಬಿಡದ ಸಹಾಯ ಮಾತೆಯ ಕ್ರೈಸ್ತ ವಿಶ್ವಾಸಿಗಳ ಬೇಡಿಕೆಗಳಿಗೆ ಸ್ಮರಿಸುತ್ತಾ, ಹರಕೆಗಳನ್ನು ಪಡೆಯುತ್ತಾ, ಅವರ ವಿಶ್ವಾಸವನ್ನು ಬಲಪಡಿಸುತ್ತಾ ಬಂದಿದ್ದಾಳೆ. ವಿಶ್ವಾಸಿಗಳ ದೊಡ್ಡ ನಿಧಿಯಾಗಿರುವ ಆ ಚಿತ್ರಪಟದ ಪ್ರತಿಕೃತಿಗಳು, ಛಾಯಾ ಚಿತ್ರಗಳು ಚರ್ಚ್‌ಗಳಲ್ಲಿ, ಮನೆ ಮನೆಗಳಲ್ಲಿ ಪೂಜಾ ಪೀಠಗಳನ್ನು ಅಲಂಕರಿಸಿವೆ. ಆ ಚಿತ್ರಪಟದ ಎಡೆಬಿಡದ ಸಹಾಯ ಮಾತೆಯ ಮೂಲಕ ಕ್ರೈಸ್ತ ವಿಶ್ವಾಸಿಗಳು ದೇವರ ಆಶೀರ್ವಾದ ಪಡೆಯುತ್ತಿದ್ದಾರೆ, ಸ್ವಸ್ಥರಾಗುತ್ತಿದ್ದಾರೆ. ಈ ಎಡೆಬಿಡದ ಸಹಾಯ ಮಾತೆಯ ಮಹೋತ್ಸವ 9 ದಿನಗಳ ಪೂಜೆ ಪುರಸ್ಕಾರಗಳ ನಂತರ ಶನಿವಾರ (ಜ.28) ಮೆರವಣಿಗೆಯ ಮೂಲಕ ಅಂತ್ಯಗೊಳ್ಳಲಿದೆ.

ಪ್ರತಿಕ್ರಿಯಿಸಿ (+)