ಭಾನುವಾರ, ಮೇ 9, 2021
19 °C

ಸಹಾರಾದಿಂದ ರೂ 52 ಕೋಟಿ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರಿಗೆ ಮರಳಿಸಬೇಕಾಗಿದ್ದ ಮೊತ್ತದಲ್ಲಿ ರೂ52 ಕೋಟಿಯನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ಸಹಾರ ಸಮೂಹದಿಂದ ವಸೂಲು ಮಾಡುವಲ್ಲಿ ಯಶಸ್ವಿಯಾಗಿದೆ. ಜತೆಗೆ ಕಂಪೆನಿಯ ಒಡೆತನಕ್ಕೆ ಸೇರಿದ ವಿವಿಧ ಜಿಲ್ಲೆಗಳಲ್ಲಿರುವ 450 ಏಕರೆ ಭೂಮಿ ಕುರಿತೂ ಮಾಹಿತಿ ಕಲೆ ಹಾಕಿದೆ.ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಸಹಾರ ಸಮೂಹದ ಎರಡು ಸಂಸ್ಥೆಗಳು ಹೂಡಿಕೆದಾರರಿಗೆ ಒಟ್ಟು ರೂ24 ಸಾವಿರ ಕೋಟಿ ಹಣ ಮರು ಪಾವತಿ ಮಾಡಬೇಕಿದೆ. ಒಂದು ವೇಳೆ ಹೂಡಿಕೆದಾರರ ಹಣವನ್ನು ಮೂರು ತಿಂಗಳ ಒಳಗೆ ಮರು ಪಾವತಿಸದೇ ಇದ್ದರೆ ಈ ಕಂಪೆನಿಗಳಿಗೆ ಸೇರಿದ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂಬ ನಿರ್ಣಯವನ್ನು ಕಳೆದ ಫೆಬ್ರುವರಿಯಲ್ಲಿಯೇ `ಸೆಬಿ' ತೆಗೆದುಕೊಂಡಿದೆ.ಈವರೆಗೆ ಮರುಪಾವತಿಗೆ ಸಂಬಂಧಿಸಿದಂತೆ ಸಹಾರಾ ಒಟ್ಟು ರೂ5,120 ಕೋಟಿ ಮೊತ್ತವನ್ನು `ಸೆಬಿ' ಖಾತೆಯಲ್ಲಿ ಠೇವಣಿಯಾಗಿ ಇರಿಸಿದೆ. ರೂ20 ಸಾವಿರ ಕೋಟಿಯನ್ನು ಹೂಡಿಕೆದಾರರಿಗೆ ನೇರವಾಗಿ ಪಾವತಿಸಿರುವುದಾಗಿಯೂ ಹೇಳಿದೆ.`ಸಹಾರಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್' ಮತ್ತು `ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್'ಗೆ ಸೇರಿದ ಬ್ಯಾಂಕ್ ಖಾತೆಗಳಿಂದ  ರೂ23 ಕೋಟಿ ವಶಪಡಿಸಿಕೊಳ್ಳಲಾಗಿದೆ.  ಮ್ಯೂಚುವಲ್ ಫಂಡ್ ಮತ್ತು ಡಿಮ್ಯಾಟ್ ಖಾತೆಗಳಿಂದ ರೂ28 ಕೋಟಿ ವಸೂಲು ಮಾಡಲಾಗಿದೆ. ಈ ಮೊತ್ತವನ್ನು ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು(ಎನ್‌ಬಿಎಫ್‌ಸಿ) `ಆರ್‌ಬಿಐ' ಸೂಚನೆ ಅನ್ವಯ `ಸೆಬಿ' ಖಾತೆಗೆ ವರ್ಗಾಯಿಸಿವೆ ಎಂದು ಮೂಲಗಳು ತಿಳಿಸಿವೆ.ಪ್ರಕರಣ ಇತ್ಯರ್ಥಗೊಳ್ಳುವವರೆಗೆ ಸಹಾರ ಸಮೂಹದ ಒಡೆತನಕ್ಕೆ ಸೇರಿದ ಭೂಮಿಯನ್ನು ಮಾರಾಟ ಮಾಡಲು ಇಲ್ಲವೇ ಪರಭಾರೆ ಮಾಡಲು ಅವಕಾಶ ಕೊಡಬಾರದು ಎಂದು `ಸೆಬಿ' 600 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ. ಕಂದಾಯ ಅಧಿಕಾರಿಗಳು ವಿವಿಧ ಜಿಲ್ಲೆಗಳಲ್ಲಿ ಸಹಾರ ಸಮೂಹಕ್ಕೆ ಸೇರಿದ 450 ಏಕರೆ ಭೂಮಿ ಕುರಿತು ಈವರೆಗೆ `ಸೆಬಿ'ಗೆ ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.