ಸಹಾರಾ ಜೊತೆ ಮಾತುಕತೆಗೆ ಮುಂದಾಗಲಿರುವ ಬಿಸಿಸಿಐ

7

ಸಹಾರಾ ಜೊತೆ ಮಾತುಕತೆಗೆ ಮುಂದಾಗಲಿರುವ ಬಿಸಿಸಿಐ

Published:
Updated:

 ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದಿರುವ ಸಹಾರಾ ಇಂಡಿಯಾ ಜೊತೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾತುಕತೆಗೆ ಮುಂದಾಗುವ ಸಾಧ್ಯತೆಯಿದೆ. ಈ ಮೂಲಕ ಈಗ ತಲೆದೋರಿರುವ ಬಿಕ್ಕಟ್ಟನ್ನು ಬಗೆಹರಿಸುವ ವಿಶ್ವಾಸವನ್ನು ಮಂಡಳಿ ಹೊಂದಿದೆ.ಭಾರತ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿಯುವ ಅಚ್ಚರಿಯ ನಿರ್ಧಾರವನ್ನು ಸಹಾರಾ ಶನಿವಾರ ತೆಗೆದುಕೊಂಡಿತ್ತು. ಮಾತ್ರವಲ್ಲ ಐಪಿಎಲ್‌ನಿಂದಲೂ ಹಿಂದೆ ಸರಿದಿತ್ತು.ಸಹಾರಾ ತನ್ನ ನಿರ್ಧಾರ ಬದಲಿಸಲಿದ್ದರೆ, ಬಿಸಿಸಿಐಗೆ 2234 ಕೋಟಿ ರೂ. ನಷ್ಟವಾಗುವ ಸಾಧ್ಯತೆಯಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮಂಡಳಿಯು ಸಹಾರಾ ಮನವೊಲಿಸಲು ಪ್ರಯತ್ನ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಮಂಡಳಿಗೆ ಇತರ ಪ್ರಾಯೋಜಕರನ್ನು ಆಹ್ವಾನಿಸಿ ಈ ನಷ್ಟವನ್ನು ಸರಿದೂಗಿಸಬಹುದು. ಆದರೂ ತನಗೆ ಕಳೆದ 11 ವರ್ಷಗಳಿಂದ ಹಣಕಾಸು ಒಳಗೊಂಡಂತೆ ವಿವಿಧ ರೀತಿಯ ಬೆಂಬಲ ನೀಡುತ್ತಿರುವ ಸಹಾರಾ ಜೊತೆಗಿನ ಸಂಬಂಧ ಕಡಿದುಕೊಳ್ಳಲು ಬಿಸಿಸಿಐಗೆ ಮನಸ್ಸಿಲ್ಲ.ಸಹಾರಾ 2010ರ ಜುಲೈ 1 ರಂದು ಮಂಡಳಿ ಜೊತೆಗಿನ ಒಪ್ಪಂದವನ್ನು ನವೀಕರಿಸಿತ್ತು. ಇದರ ಅವಧಿ 2013ರ ಡಿಸೆಂಬರ್ 31ರ ವರೆಗೆ ಇದೆ. ಈ ಕಾರಣ ಶನಿವಾರ ಕೈಗೊಂಡ ನಿರ್ಧಾರ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.`ಪುಣೆ ವಾರಿಯರ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದೆ ಎಂಬ ವಿಶ್ವಾಸ ನಮ್ಮದು. ಈಗ ಉಂಟಾಗಿರುವ ಬಿಕ್ಕಟ್ಟು ಬಗೆಹರಿಯಲಿದೆ. ಪ್ರಾಯೋಜಕತ್ವದಿಂದ ಹಿಂದೆ ಸರಿದಿರುವ ಕುರಿತು ಸಹಾರಾ ಇನ್ನೂ ಅಧಿಕೃತವಾಗಿ ನಮಗೆ ಯಾವುದೇ ಮಾಹಿತಿ ನೀಡಿಲ್ಲ~ ಎಂದು        ಬಿಸಿಸಿಐನ ಉನ್ನತ ಮೂಲವೊಂದು ತಿಳಿಸಿದೆ. ಪುಣೆ ವಾರಿಯರ್ಸ್ ಆಡದಿದ್ದರೆ ಐಪಿಎಲ್ ಸಂಘಟಕರು ಇಕ್ಕಟ್ಟಿಗೆ ಸಿಲುಕುವುದು ಖಚಿತ. ಬಿಸಿಸಿಐ ಮುಂದೆ ಕೇವಲ ಎರಡು ಆಯ್ಕೆಗಳು ಇವೆ. ಒಂದೋ ಎಂಟು ತಂಡಗಳೊಂದಿಗೆ ಟೂರ್ನಿ ನಡೆಸಬೇಕು. ಇಲ್ಲದಿದ್ದರೆ ಪುಣೆ ತಂಡಕ್ಕೆ ಹೊಸ ಮಾಲೀಕರನ್ನು ಕಂಡುಕೊಳ್ಳಬೇಕು.ಆದರೆ ಏಪ್ರಿಲ್ 4 ಕ್ಕೆ ಐಪಿಎಲ್ ಆರಂಭವಾಗಲಿರುವ ಕಾರಣ ಅದಕ್ಕೂ ಮುನ್ನ ತಂಡವನ್ನು ಇನ್ನೊಬ್ಬರಿಗೆ ಮಾರಾಟ ಮಾಡುವುದು ಅಸಾಧ್ಯ. ಸಹಾರಾ ತನ್ನ ನಿರ್ಧಾರ ಬದಲಿಸದಿದ್ದರೆ, ಪುಣೆ ತಂಡದ ಆಟಗಾರರ ಭವಿಷ್ಯ ಕೂಡಾ ಅತಂತ್ರ ಎನಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry