ಶುಕ್ರವಾರ, ಜನವರಿ 24, 2020
20 °C

ಸಹಿಸಲಾಗದ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ಕ್ರಿಕೆಟ್ ತಂಡ ಈಗ ಪಾತಾಳಕ್ಕೆ ಬಿದ್ದಿದೆ. ಎಂಟು ತಿಂಗಳು ಹಿಂದೆ ವಿಶ್ವಕಪ್ ಕಿರೀಟ ಧರಿಸಿದ್ದು ಇದೇ ತಂಡವೇ ಎಂದು ಬೇಸರದಿಂದ ಕೇಳುವಷ್ಟು ಧೋನಿ ಪಡೆಯ ಆಟ ಕುಸಿದಿದೆ.ವಿಶ್ವಕಪ್ ನಂತರ ಇಂಗ್ಲೆಂಡ್‌ನಲ್ಲಿ ಎಲ್ಲ ನಾಲ್ಕೂ ಟೆಸ್ಟ್‌ಗಳನ್ನು ಸೋತಿದ್ದ ಭಾರತ ಈಗ ಆಸ್ಟ್ರೇಲಿಯದಲ್ಲಿ ಮೊದಲ ಮೂರೂ ಟೆಸ್ಟ್‌ಗಳಲ್ಲಿ ಮೇಲೇಳಲಾಗದ ರೀತಿಯಲ್ಲಿ ಬಡಿಸಿಕೊಂಡಿದೆ. ಕೊನೆಯ ಟೆಸ್ಟ್‌ನ್ಲ್ಲಲಿ ಪವಾಡ ಆಗುವ ಸಾಧ್ಯತೆ ಇಲ್ಲ.ವರುಷಗಳ ಹಿಂದೆ, ವಿದೇಶ ಪ್ರವಾಸಗಳಲ್ಲಿ ಭಾರತ ತಂಡ ಸೋಲುವುದು ವಿಶೇಷವೇನೂ ಆಗಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ, ವಿಶ್ವ ಕ್ರಿಕೆಟ್ ರಂಗದ ಅಗ್ರಮಾನ್ಯ ತಂಡವಾಗಿ ರೂಪುಗೊಂಡಿತ್ತು. ಭಾರತದಲ್ಲೇ ನಡೆದ ಪಂದ್ಯಗಳಲ್ಲಂತೂ ಹುಲಿಯಾಗಿಯೇ ಮೆರೆದಿತ್ತು.

 

ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ನೂರನೇ ಶತಕಕ್ಕಾಗಿ ಪರದಾಡುತ್ತಿರುವ ಸಚಿನ್ ತೆಂಡೂಲ್ಕರ್, ತಂಡಕ್ಕೆ ಗೋಡೆಯಂತೆ ಆಸರೆಯಾಗಿ ನಿಂತಿದ್ದ ರಾಹುಲ್ ದ್ರಾವಿಡ್, ಆಪದ್ಬಾಂಧವ ವಿ.ವಿ.ಎಸ್. ಲಕ್ಷ್ಮಣ್, ಎಂಥ ದಾಳಿಯನ್ನೂ ಛಿದ್ರಗೊಳಿಸಬಲ್ಲ ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಹಾಗೂ ನಾಯಕ ಮಹೇಂದ್ರಸಿಂಗ್ ದೋನಿ - ಇವರೆಲ್ಲ ಬ್ಯಾಟಿಂಗ್ ಮರೆತೇ ಹೋದಂತೆ ಆಡುತ್ತಿರುವುದು ಆಶ್ಚರ್ಯಕರವಾಗಿದೆ.

 

ಕ್ರೀಡಾಪಟುವಿಗೆ ಕೆಟ್ಟ ಕಾಲ ಅನ್ನುವುದೊಂದು ಇರುತ್ತದೆಯಾದರೂ ಅದು ಸತತವಾಗಿ ಮುಂದುವರಿದಾಗ, ಅವರ ಆಡುವ ದಿನಗಳು ಮುಗಿದುಹೋಗಿವೆ ಎಂದೇ ಅರ್ಥ. ರಾಹುಲ್, ಸಚಿನ್, ಲಕ್ಷ್ಮಣ್ ಆಸ್ಟ್ರೇಲಿಯದಿಂದ ವಾಪಸಾದ ಕೂಡಲೇ ನಿವೃತ್ತಿ ಪ್ರಕಟಿಸಬೇಕಾದ ಅನಿವಾರ್ಯತೆ ಎದುರಾಗಬಹುದು.ಕ್ರೀಡೆಯಲ್ಲಿ ಪೈಪೋಟಿ ಇದ್ದರೇ ಸೊಗಸು. ಸಮಬಲದ ಹೋರಾಟವಿಲ್ಲದೆ ಮಜಾ ಇರುವುದಿಲ್ಲ. ಈ ಸರಣಿಯಲ್ಲಿ ಆಸ್ಟ್ರೇಲಿಯ ಗೆದ್ದಿರುವ ರೀತಿ ತೀರ ಏಕಪಕ್ಷೀಯ. ಭಾರತದ ಬ್ಯಾಟಿಂಗ್ ಬಲಶಾಲಿ ಎಂಬ ಪಂಡಿತರ ನಂಬಿಕೆ ಹುಸಿಹೋಗಿದೆ.

 

ಇಂಗ್ಲೆಂಡ್‌ನಲ್ಲಿ ಉಳಿದವರೆಲ್ಲ ಪಟಪಟನೆ ಬಿದ್ದಾಗ ಗಟ್ಟಿಯಾಗಿ ನಿಂತು ಆಡಿದ್ದ ರಾಹುಲ್ ಅವರ ತಾಂತ್ರಿಕ ಕೌಶಲ ದಿಢೀರನೇ ಮಾಯವಾದಂತಿದೆ. ಸಚಿನ್ ಗುರಿ ನೂರರ ಮೇಲಿದ್ದರೂ ಅದರ ಹತ್ತಿರ ಬಂದು ವಿಫಲರಾಗುತ್ತಿದ್ದಾರೆ. ಲಕ್ಷ್ಮಣ್ ಅವರಂತೂ ಸಂಪೂರ್ಣ ನಿರಾಶೆಗೊಳಿಸಿದ್ದಾರೆ.ಭಾರತ ತಂಡಕ್ಕೆ ಈಗ ಖಂಡಿತವಾಗಿಯೂ ಹೊಸ ರಕ್ತ ಬೇಕಿದೆ. ಕೆಲವು ವರ್ಷಗಳಿಂದ ಭರವಸೆ ಮೂಡಿಸಿರುವ ಆಟಗಾರರಿಗೆ ಈ `ಹಿರಿಯ~ ಆಟಗಾರರಿಂದಾಗಿ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ.ಆದರೆ ಈ ಯುವ ಆಟಗಾರರೂ ಒಂದು ದಿನದ ಆಟಕ್ಕಿಂತ ಟೆಸ್ಟ್ ಕ್ರಿಕೆಟ್ ಭಿನ್ನ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಟೆಸ್ಟ್‌ನಲ್ಲಿ ಗಟ್ಟಿಯಾಗಿ ನಿಂತರೆ ಎಲ್ಲ ಮಾದರಿಯ ಆಟದಲ್ಲೂ ಮಿಂಚಬಹುದು ಎಂಬುದು ಒಳಗುಟ್ಟು. ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ ಭಾರತದ ಮಧ್ಯಮ ಕ್ರಮಾಂಕದ ಜವಾಬ್ದಾರಿ ಹೊರಬೇಕಿದೆ.ಭಾರತದ ಪ್ರೇಕ್ಷಕ ತನ್ನ ತಂಡ ಅವಮಾನಕರ ರೀತಿಯಲ್ಲಿ ಸೋಲುವುದನ್ನು ಸಹಿಸುವುದಿಲ್ಲ ಎಂಬುದು ದೋನಿಗೆ ಗೊತ್ತಿಲ್ಲದ ವಿಷಯವೇನಲ್ಲ. ಟೆಸ್ಟ್ ನಂತರ ನಡೆಯುವ ತ್ರಿಕೋನ ಸರಣಿಯಲ್ಲಾದರೂ ಉತ್ತಮ ಆಟವಾಡಿದಲ್ಲಿ ಮುಖ ಮುಚ್ಚಿಕೊಂಡು ವಾಪಸಾಗುವುದು ತಪ್ಪುತ್ತದೆ.

 

ಪ್ರತಿಕ್ರಿಯಿಸಿ (+)