ಮಂಗಳವಾರ, ಏಪ್ರಿಲ್ 20, 2021
32 °C

ಸಹೋದರಿಯರ ಯಶೋಗಾಥೆ ಇದು

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಸುಗಟೂರು ಗ್ರಾಮದಲ್ಲಿ ಇಬ್ಬರು ಸಹೋದರಿಯರು ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ನಾಟಿ ಕೋಳಿ ಫಾರಂ ಆರಂಭಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.ರೈತ ಕುಟುಂಬದ ಎಸ್.ಎಂ.ಮಾಲಾ ಮತ್ತು ಎಸ್.ಬೇಬಿ ಮಮತ ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು, ತಾಯಿ ರಾಜಮ್ಮ ಮತ್ತು ಚಿಕ್ಕಪ್ಪ ಶ್ರೀನಿವಾಸ್ ಅವರ ಪೋಷಣೆಯಲ್ಲಿ ಬೆಳೆದವರು. ಈಗ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಓದುತ್ತಿದ್ದಾರೆ.ಮನೆಯ ಹಿರಿಯರು ಆಗಾಗ ನಾಟಿ ಕೋಳಿಗಳನ್ನು ಗುಮ್ಮಿಗೆ ಹಾಕಿ ಮರಿ ಮಾಡಿಸುವುದನ್ನು ಗಮನಿಸಿದ ಈ ಸಹೋದರಿಯರು, ನಾಟಿ ಕೋಳಿ ಫಾರಂ ಆರಂಭಿಸಲು ಯೋಚಿಸಿದರು. ಮಕ್ಕಳ ಆಲೋಚನೆಗೆ ತಾಯಿ ಹಾಗೂ ಚಿಕ್ಕಪ್ಪನ ಬೆಂಬಲ ದೊರೆಯಿತು. ಅದರ ಪರಿಣಾಮವಾಗಿ ಮನೆಯ ಮುಂದೆ ಚಂದ್ರಿಕೆ ಇಡಲು ನಿರ್ಮಿಸಿದ್ದ ಹೆಂಚಿನ ಶೆಡ್‌ಗೆ ಜಾಲರಿ ಹಾಕಿ ಸಾಂಪ್ರದಾಯಿಕ ವಿಧಾನದಲ್ಲಿ ನಾಟಿ ಕೋಳಿ ಸಾಕತೊಡಗಿದರು. ಈಗ ಅವರ ಫಾರಂನಲ್ಲಿ ಸುಮಾರು 200 ಕೋಳಿಗಳಿವೆ.ಗ್ರಾಮೀಣ ಪ್ರದೇಶದಲ್ಲಿ ರೈತರು ಮನೆ ಬಳಕೆಗೆಂದು ನಾಟಿ ಕೋಳಿ ಸಾಕುವುದು ಹಿಂದಿನಿಂದಲೂ ನಡೆದು ಬಂದಿದೆ. ಆದರೆ ಈಚಿನ ವರ್ಷಗಳಲ್ಲಿ ನಾಟಿ ಕೋಳಿ ಸಾಕುವ ಸಂಪ್ರದಾಯಕ್ಕೆ ಹಿನ್ನಡೆ ಉಂಟಾಗಿದೆ. ಇದರಿಂದ ಅಧಿಕ ಬೇಡಿಕೆ ಇರುವ ನಾಟಿ ಕೋಳಿಗಳು ಸಿಗುವುದು ಅಪರೂಪವಾಗುತ್ತಿದೆ. ಅವುಗಳ ಬೆಲೆಯೂ ಹೆಚ್ಚಿದೆ. ಈ ಮಧ್ಯೆ ಬಾಯ್ಲರ್ ಕೋಳಿ ಫಾರಂಗಳು ಎಲ್ಲೆಂದರಲ್ಲಿ ನಾಯಿಕೊಡೆಗಳಂತೆ ಎದ್ದಿವೆ. ಆದರೆ ನಾಟಿ ಕೋಳಿ ಫಾರಂಗಳು ಇಲ್ಲವೆಂದೇ ಹೇಳಬಹುದು.ಸುಗಟೂರಿನ ನಾಟಿ ಕೋಳಿ ಫಾರಂನಲ್ಲಿ ಅಧಿಕ ಮಾಂಸದ ಇಳುವರಿ ಕೊಡುವ ಜಾಯಿ ಹಾಗೂ ಸೇಲಂ ಜಾತಿಯ ಹುಂಜಗಳನ್ನು ಸಾಕಲಾಗಿದೆ. ಅವುಗಳನ್ನು ಬಿತ್ತನೆಗೆ ಕೋಳಿಗಳನ್ನು ತುಳಿಯಲು ಬಳಸಿಕೊಳ್ಳಲಾಗುತ್ತಿದೆ. ಫಾರಂನಲ್ಲಿಯ ಕೋಳಿಗಳಿಗೆ ಅಗತ್ಯವಿದ್ದಾಗ ಪಶುವೈದ್ಯರ ಸಲಹೆ ಪಡೆದು ವೈದ್ಯೋಪಚಾರ ಮಾಡಲಾಗುತ್ತಿದೆ. ಈ ವಿದ್ಯಾವಂತ ಸಹೋದರಿಯರು ಸಣ್ಣ ಪ್ರಮಾಣದಲ್ಲಿಯಾದರೂ, ಫಾರಂನ ಆರೋಗ್ಯ ಕೆಡದಂತೆ ಅತ್ಯಂತ ಎಚ್ಚರದಿಂದ ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ.ಮನೆಯಲ್ಲಿ ಉಳಿಯುವ ತಂಗಳು, ಸುಗ್ಗಿ ಕಾಲದಲ್ಲಿ ಹಿಂದಕ್ಕೆ ಬೀಳುವ ರಾಗಿ, ಗಿರಣಿಗಳಲ್ಲಿ ಕಡಿಮೆ ಬೆಲೆಗೆ ಸಿಗುವ ತೌಡು, ಅಕ್ಕಿ, ಗೋದಿ, ಜೋಳದ ಚೂರು, ಸ್ಥಳೀಯವಾಗಿ ಸಿಗುವ ಹಸಿರು ಹುಲ್ಲು ಇತ್ಯಾದಿಗಳನ್ನು ಕೋಳಿಗಳ ಮೇವಿಗಾಗಿ ಬಳಸ ಲಾಗುತ್ತಿದೆ. ಕೋಳಿ ಸಾಕಾಣಿಕೆ ಈ ಕೃಷಿಕ ಕುಟುಂಬದ ಉಪ ಕಸುಬಾಗಿ ಪರಿಣಮಿಸಿದೆ.

ಬಾಯ್ಲರ್ ಕೋಳಿ ಬೆಲೆಯಲ್ಲಿ ಏರು ಪೇರು ಸಾಮಾನ್ಯ. ನಾಟಿ ಕೋಳಿ ಬೆಲೆ ಸಾಮಾನ್ಯವಾಗಿ ಸ್ಥಿರವಾಗಿರುತ್ತದೆ. ಬಾಯ್ಲರ್ ಕೋಳಿ ಮಾಂಸದ ಬೆಲೆಗಿಂತ ಹೆಚ್ಚೇ ಇರುವುದು ಒಂದು ವಿಶೇಷ. ಈಗ ಕೆಜಿಯೊಂದಕ್ಕೆ ರೂ.150 ರಂತೆ ಮಾರಾಟವಾಗುತ್ತಿದೆ. ಹುಂಜಗಳಿಂದ ಒಳ್ಳೆ ಹಣ ಸಿಗುತ್ತದೆ. ಕೆಲವೊಮ್ಮೆ ಒಂದು ಹುಂಜದ ಬೆಲೆ 2 ರಿಂದ 3 ಸಾವಿರ ರೂಪಾಯಿ ಇರುತ್ತದೆ.‘ಕೃಷಿ ಉಪ ಕಸುಬಾದ ಕೋಳಿ ಸಾಕಾಣಿಕೆಯನ್ನು ಕೈಗೊಂಡಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ. ಕಾಲೇಜಿಗೆ ಹೋಗುವ ಮುನ್ನ ಮತ್ತು ಕಾಲೇಜಿನಿಂದ ಬಂದ ಮೇಲೆ ಕೆಲವು ಗಂಟೆಗಳ ಕಾಲ ಫಾರಂ ಕಡೆ ಗಮನ ಕೊಡುತ್ತೇವೆ. ಮನೆ ಮಂದಿ ಸಹಕಾರ ಇದ್ದೇ ಇರುತ್ತದೆ’ ಎಂದು ಸಹೋದರಿಯರು ‘ಪ್ರಜಾವಾಣಿ’ಗೆ ತಿಳಿಸಿದರು.ಈ ಕೃಷಿಕ ಸಹೋದರಿಯರು ಕಲಿಕೆಯ ಜತೆ ಗಳಿಸುವ ಕಾಯಕಕ್ಕೆ ಕೈ ಹಾಕಿದ್ದಾರೆ. ಕೈತುಂಬ ಕೆಲಸದ ಜೊತೆಗೆ ಓದನ್ನೂ ಮುಂದುವರಿಸಿದ್ದಾರೆ. ಅವರ ಉದ್ಯಮಶೀಲ ಮನೋಭಾವ ಇತರರಿಗೆ ಸ್ಫೂರ್ತಿದಾಯಕವಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.