ಸಹೋದರಿಯ ಚಿಕಿತ್ಸೆಗೆ ನೆರವು ಕೋರಿಕೆ

7

ಸಹೋದರಿಯ ಚಿಕಿತ್ಸೆಗೆ ನೆರವು ಕೋರಿಕೆ

Published:
Updated:

ಹುಬ್ಬಳ್ಳಿ:  ಕಿಮ್ಸನ ತುರ್ತು ನಿಗಾ ಘಟಕದಲ್ಲಿ ಕಳೆದೊಂದು ತಿಂಗಳಿನಿಂದ ಯುವತಿಯೊಬ್ಬಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಆಕೆಯ ಚಿಕಿತ್ಸೆಗಾಗಿ ಪೋಷಕರು ನೆರವಿನ ನಿರೀಕ್ಷೆಯಲ್ಲಿದ್ದಾರೆ.ಮೂಲತಃ ನವಲಗುಂದ ಪಟ್ಟಣದ ನಿವಾಸಿಯಾದ ಆ ಯುವತಿಯ ಹೆಸರು ಗೀತಾ. ಕಳೆದ ತಿಂಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಅವರನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಕಿಮ್ಸಗೆ ವರ್ಗಾಯಿಸಲಾಗಿತ್ತು. ಇಲ್ಲಿ ಆಕೆಗೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸದ್ಯ ಔಷಧೋಪಚಾರ ನಡೆದಿದೆ. ಆದರೆ ಚಿಕಿತ್ಸೆಗೆ ನಿತ್ಯ ಸಾವಿರಾರು ರೂಪಾಯಿ ಖರ್ಚಾಗುತ್ತಿದ್ದು, ದುಡಿಮೆಯನ್ನೇ ನಂಬಿಕೊಂಡಿರುವ ಕುಟುಂಬಕ್ಕೆ ಇದನ್ನು ಭರಿಸುವುದು ಹೊರೆಯಾಗುತ್ತಿದೆ.ಸಾರಿಗೆ ಸಂಸ್ಥೆ ಉದ್ಯೋಗಿ: ಗೀತಾ ಕಳೆದ ಮೂರು ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಯಾದಗಿರಿ ಡಿಪೊ ವಿಭಾಗದಲ್ಲಿ ಬಸ್ ಕಂಡಕ್ಟರ್ ಆಗಿದ್ದವರು. ವರ್ಷಗಳ ಕಾಲ ಅಲ್ಲಿ ಸೇವೆಯಲ್ಲಿದ್ದರು. ಈ ಸಂದರ್ಭ ಕೆಲವರ ಕಿರುಕುಳದಿಂದ ಮಾನಸಿಕವಾಗಿ ನೊಂದುಕೊಂಡರು. ಇದೇ ಕಾರಣದಿಂದ ಅನಿವಾರ್ಯವಾಗಿ ನೌಕರಿ ಬಿಟ್ಟರು. ಇದರಿಂದ ಮಾನಸಿಕ ಆಘಾತಕ್ಕೂ ಒಳಗಾಗಿ ಧಾರವಾಡದ ಡಿಮಾನ್ಸ್‌ನಲ್ಲಿ ಕಳೆದ ಎಂಟು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದರು.ಯಾದಗಿರಿಯಲ್ಲಿನ ಘಟನೆಯಿಂದ ನೊಂದ ಕುಟುಂಬ, ಅಲ್ಲಿಂದ ಗದಗ ಜಿಲ್ಲೆಯ ಹೊಂಬಳಕ್ಕೆ ಬಂದು ನೆಲೆಸಿತು.ಗೀತಾ ನೌಕರಿ ಬಿಟ್ಟು ಹಾಸಿಗೆ ಹಿಡಿದ ಮೇಲೆ ಆಕೆಯ ತಾಯಿ ಮತ್ತು ತಂಗಿ ಸಂಗೀತಾ ದುಡಿಮೆ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಇದೀಗ ಬಂದು ಎರಗಿರುವ ಸಂಕಷ್ಟದಿಂದ ಇಡೀ ಕುಟುಂಬವೇ ಆಘಾತಕ್ಕೆ ಒಳಗಾಗಿದ್ದು, ದಿಕ್ಕು ತೋಚದ ಸ್ಥಿತಿಯಲ್ಲಿದೆ.`ನಾವು ಬಹಳ ಚಿಕ್ಕವರಿರುವಾಗಲೇ ತಂದೆ ತೀರಿಕೊಂಡರು. ನವಲಗುಂದದಲ್ಲಿ ಪುಟ್ಟದೊಂದು ಮನೆ, ಒಂದಿಷ್ಟು ಜಮೀನು ಇತ್ತು. ಆದರೆ ಚಿಕ್ಕಪ್ಪ ಅದನ್ನೂ ನೀಡಲಿಲ್ಲ. ಹೇಗೋ ಗೀತಾಳಿಗೊಂದು ಕೆಲಸ ಸಿಕ್ಕಿತು. ಎಲ್ಲ ಸರಿಹೋಗುತ್ತದೆ ಎಂದು ನಂಬಿರುವಾಗಲೇ ಮತ್ತೊಂದು ಆಘಾತ ಎದುರಾಯಿತು. ಸದ್ಯ ನಾನು ಹುಬ್ಬಳ್ಳಿಯಲ್ಲಿ ಸಣ್ಣದೊಂದು ಉದ್ಯೋಗದಲ್ಲಿದ್ದೇನೆ. ಆದರೆ ಅಕ್ಕ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಆಕೆಯ ಚಿಕಿತ್ಸೆಗೆ ಹಣ ಹೊಂದಿಸಲಾಗುತ್ತಿಲ್ಲ' ಎನ್ನುತ್ತಾರೆ ಸಂಗೀತಾ.ನೆರವು ನೀಡಲು ಇಚ್ಛಿಸುವವರು ಸಂಗೀತಾ ಅವರ ಮೊಬೈಲ್ 8970998067 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry