ಸಹ ಶಿಕ್ಷಕರ ಪ್ರತಿಭಟನೆ

7

ಸಹ ಶಿಕ್ಷಕರ ಪ್ರತಿಭಟನೆ

Published:
Updated:

ಬೆಂಗಳೂರು: ವೇತನ ತಾರತಮ್ಯ ನಿವಾರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸದಸ್ಯರು ನಗರದ ಎಂ.ಜಿ.ರಸ್ತೆಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.ಪ್ರೌಢಶಾಲಾ ಸಹ ಶಿಕ್ಷಕರಿಗೆ ಆಗಿರುವ ವೇತನ ತಾರತಮ್ಯವನ್ನು ಬಗೆಹರಿಸಿ, ವೇತನವನ್ನು ಹೆಚ್ಚಿಸಬೇಕು.ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ವಿಶೇಷ ಬಡ್ತಿ, ವೈದ್ಯಕೀಯ ಭತ್ಯೆ ಹಾಗೂ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಅರೆಕಾಲಿಕ ಶಿಕ್ಷಕರಿಗೆ ಸೇವೆಗೆ ಸೇರಿದ ದಿನಾಂಕದಿಂದ ವಾರ್ಷಿಕ ಬಡ್ತಿ, ಪಿಂಚಣಿ, ರಜೆ ಸೌಲಭ್ಯವನ್ನು ಮಂಜೂರು ಮಾಡಬೇಕು. 1998ರ ಕೃಪಾಂಕದಡಿಯಲ್ಲಿ ನೇಮಕಗೊಂಡ ಶಿಕ್ಷಕರ ಹಿಂದಿನ ಸೇವೆಯನ್ನು ಪರಿಗಣಿಸಿ, ಎಲ್ಲ ಸೌಲಭ್ಯಗಳನ್ನು ಮುಂದುವರೆಸಬೇಕು. ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ದರ, ಪರೀಕ್ಷಾ ದರ, ದಿನ ಭತ್ಯೆಗಳನ್ನು ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ತತ್ಸಮಾನವಾಗಿ ನೀಡಬೇಕು. ಶಿಕ್ಷಣ ಸಂಯೋಜಕ ಹುದ್ದೆಗಳನ್ನು ವಿಷಯ ಪರಿವೀಕ್ಷಕರ ಹುದ್ದೆಗಳನ್ನಾಗಿ ಪರಿವರ್ತಿಸಬೇಕು ಎಂದು ಅವರು ಒತ್ತಾಯಿಸಿದರು.ಸರ್ಕಾರಿ ಆದೇಶ ಸಂಖ್ಯೆಯಂತೆ ಖಾಲಿ ಇರುವ ಎಲ್ಲ ಮುಖ್ಯೋಪಾಧ್ಯಾಯರ ಹುದ್ದೆಗಳಿಗೆ ಶೇ 75 ರ ಅನುಪಾತದಲ್ಲಿ ಕೂಡಲೇ ಪ್ರೌಢಶಾಲೆಯ ಸಹ ಶಿಕ್ಷಕರಿಗೆ ಮುಂಬಡ್ತಿ ನೀಡಬೇಕು. ಪ್ರೌಢಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸ್ನಾತಕೋತ್ತರ ಪದವೀಧರರಿಗೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಾಗಿ ಬಡ್ತಿ ನೀಡಬೇಕು.ಗುತ್ತಿಗೆ ಶಿಕ್ಷಕರ ವಾರ್ಷಿಕ ಬಡ್ತಿಹಿಂಪಡೆಯಲು ಸೂಚಿಸಿರುವ ಪ್ರಸ್ತಾವನೆಯನ್ನು ಕೂಡಲೇ ರದ್ದು ಪಡಿಸಬೇಕು ಎಂದು  ಆಗ್ರಹಿಸಿದರು.ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್, ಉಪಾಧ್ಯಕ್ಷ ಟಿ.ಯು.ನಾಗರಾಜ್, ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಪಿ.ಎಂ.ವೀರಪ್ಪ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ನಟರಾಜ್, ಉತ್ತರ ಜಿಲ್ಲಾ ಅಧ್ಯಕ್ಷ ನರಸಿಂಹಮೂರ್ತಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry