ಸಾಂಕ್ರಾಮಿಕ ರೋಗ ತಡೆಗೆ ಸೂಚನೆ

7

ಸಾಂಕ್ರಾಮಿಕ ರೋಗ ತಡೆಗೆ ಸೂಚನೆ

Published:
Updated:

ಬಳ್ಳಾರಿ: ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ  ಮುಂಜಾಗ್ರತೆ ವಹಿಸಬೇಕು ಎಂದು ಜಿ.ಪಂ ಅಧ್ಯಕ್ಷೆ ಬೆಂಡಿಗೇರಿ ಶೋಭಾ ಸೂಚಿಸಿದರು.ಜಿ.ಪಂ. ಸಭಾಂಗಣದಲ್ಲಿ ಸೋಮ­ವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಮಳೆಯಾಗಿದ್ದು, ಸ್ಚಚ್ಛತಾ ಕಾರ್ಯ ಕೂಡಲೇ ಕೈಗೊಳ್ಳಬೇಕು. ಫಾಗಿಂಗ್, ಬ್ಲೀಚಿಂಗ್ ಪೌಡರ್ ಸಿಂಪರಣೆಗೆ ಸೂಚಿಸಬೇಕು. ವೈದ್ಯರು ಕೇಂದ್ರ ಸ್ಥಾನದಲ್ಲಿದ್ದು, ತಪಾಸಣೆ ಮತ್ತು ಚಿಕಿತ್ಸೆಗೆ ಆದ್ಯತೆ ನೀಡಬೇಕು. ಡೆಂಗೆ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸುವಂತೆ ಆದೇಶಿಸಿದರು.ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೂ  ಸೌಲಭ್ಯ ಒದಗಿಸ­ಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಜವಾಬ್ದಾರಿಯುತ ಕಾರ್ಯ ನಿರ್ವ­ಹಿಸಬೇಕಿದ್ದು, ಅಕ್ಟೋಬರ್ ಅಂತ್ಯ­ದೊಳಗೆ ಶಾಲಾ ಕಟ್ಟಡ, ಕಾಂಪೌಂಡ್‌ ನಿರ್ಮಾಣ ಕಾಮಗಾರಿ ಪೂರ್ಣ­ಗೊಳಿಸ­ಬೇಕು ಎಂದು ಅವರು ಹೇಳಿದರು.ವಿವಿಧ ಗ್ರಾಮಗಳಲ್ಲಿ ವಸತಿ ಯೋಜನೆ ಅಡಿ ಪೂರ್ಣಗೊಂಡಿರುವ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಬೇಕು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ಕುರಿತ ಮಾಹಿತಿ ಒದಗಿಸಬೇಕು ಎಂದು ಸಿಇಒ ಮಂಜುನಾಥ ನಾಯ್ಕ ತಿಳಿಸಿದರು.ಬಿಸಿಯೂಟ ಬಡಿಸುವ ಸಂದರ್ಭ ಶಿಸ್ತು ಕಾಯ್ದುಕೊಳ್ಳಬೇಕು. ನಿತ್ಯವೂ ಒಂದೇ ರೀತಿಯ ಊಟ ನೀಡದೆ ವಿವಿಧ ಬಗೆಯ ಬಿಸಿಯೂಟ ನೀಡಬೇಕು ಎಂದು ಅವರು ಅಕ್ಷರ ದಾಸೋಹ ಅಧಿಕಾರಿಗಳಿಗೆ ಅವರು ಸೂಚಿಸಿದರು.ಅಂಗವಿಕಲರಿಗೆ ನೀಡಲಾಗುವ ಶೇ 3ರಷ್ಟು ಅನುದಾನವನ್ನು ಎಲ್ಲಾ ಇಲಾಖೆಗಳು ಕಡ್ಡಾಯವಾಗಿ ನೀಡಬೇಕು. ಯೋಜನೆ, ಫಲಾನುಭವಿಗಳ ಆಯ್ಕೆ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಿ ಆಯಾ ತಿಂಗಳೇ ಅನುಷ್ಠಾನಗೊಳಿಸಬೇಕು ಎಂದರು.ಉಪಾಧ್ಯಕ್ಷೆ ಮಮತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾವಿತ್ರಮ್ಮ, ಶಶಿಧರ್, ಮುಖ್ಯಯೋಜನಾಧಿಕಾರಿ ಚಂದ್ರಶೇಖರ ಗುಡಿ, ಮುಖ್ಯ ಲೆಕ್ಕಾಧಿಕಾರಿ ಚೆನ್ನಪ್ಪ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry