ಶುಕ್ರವಾರ, ಮೇ 14, 2021
31 °C
ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಯು.ಟಿ.ಖಾದರ್

`ಸಾಂಕ್ರಾಮಿಕ ರೋಗ ತಡೆಗೆ ಸ್ಥಳೀಯ ಸಂಸ್ಥೆ ಸಹಕಾರ ಅಗತ್ಯ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸ್ಥಳೀಯ ಸಂಸ್ಥೆಗಳ ಸಹಕಾರ ಪಡೆಯಬೇಕು. ಆರೋಗ್ಯ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಜನಪ್ರತಿನಿಧಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸ್ವಚ್ಛತೆ ಕೊರತೆಯಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಗ್ರಾಮ ಪಂಚಾಯಿತಿ ಮಟ್ಟದಿಂದ ಸ್ಥಳೀಯ ಸಂಸ್ಥೆವರೆಗೆ ಸ್ಥಳೀಯ ಜನಪ್ರತಿನಿಧಿಗಳನ್ನು ತಮ್ಮಂದಿಗೆ ತೊಡಗಿಸಿಕೊಂಡು ಜನರಲ್ಲಿ ಅರಿವು ಮೂಡಿಸುವ ಮತ್ತು ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.ಡೆಂಗೆ, ಮಲೇರಿಯಾ ಯಾವುದೇ ರೀತಿಯ ಜ್ವರ ಪ್ರಕರಣ ಕಂಡುಬಂದರೆ ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ತಕ್ಷಣವೇ ಅಂತಹ ಮನೆಗಳಿಗೆ ಭೇಟಿ ನೀಡಿ, ಸುತ್ತಮುತ್ತಲಿನ ನೈರ್ಮಲ್ಯ ಪರಿಶೀಲನೆ ನಡೆಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.ಜಿಲ್ಲೆಯಲ್ಲಿ 170 ಶಂಕಿತ ಡೆಂಗೆ ಪ್ರಕರಣ ದಾಖಲಾಗಿದ್ದು, ಇದರಲ್ಲಿ 41 ಪ್ರಕರಣಗಳು ದೃಢಪಟ್ಟಿವೆ. ಎರಡು ಸಾವು ಸಂಭವಿಸಿವೆ. ಡೆಂಗೆ ಜ್ವರ ಕಾಣಿಸಿಕೊಂಡಿರುವ ಹಳ್ಳಿಗಳಲ್ಲಿ ಧೂಮೀಕರಣ ಮತ್ತು ಘನತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಕುಮಾರ್ ಸಚಿವರಿಗೆ ವಿವರಿಸಿದರು.ಜಿಲ್ಲೆಯಲ್ಲಿ ಡೆಂಗೆ ಹಾಗೂ ಇನ್ನಿತರ ಸಾಂಕ್ರಾಮಿಕ ರೋಗ ತಡೆಗಟ್ಟಲು ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ಡೆಂಗೆಯಿಂದ ಮೃತಪಟ್ಟಿರುವುದನ್ನು ಡಿಎಚ್‌ಒ ನೇತೃತ್ವದ ಸಮಿತಿ ದೃಢಪಡಿಸಿದರೆ ಮೃತರ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಿದೆ ಎಂದರು.ಶಾಲೆಗಳಲ್ಲಿ ಮಕ್ಕಳಿಗೆ ಜ್ವರ ಕಾಣಿಸಿಕೊಂಡರೆ ಅಂತಹ ಮಕ್ಕಳನ್ನು ಮನೆಗಳಿಗೆ ಕಳುಹಿಸದೆ, ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯಕ್ಕೆ ಕೇಂದ್ರಕ್ಕೆ ದಾಖಲಿಸುವಂತೆ ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ನಿದೇರ್ಶನ ಕೊಡಿಸುವಂತೆ ಆದೇಶ ನೀಡಿದರು.ಈ ವರ್ಷದ ಕಹಿ ಅನುಭವಗಳು ಮುಂದಿನ ವರ್ಷ ಮರುಕಳಿಸಬಾರದು. ಈ ವರ್ಷದಿಂದಲೇ ಪೂರ್ವ ಸಿದ್ಧತೆ ಮಾಡಿಕೊಂಡು ಬರುವ ವರ್ಷ ಜನವರಿ, ಫೆಬ್ರುವರಿಯಿಂದಲೇ ಸಾಂಕ್ರಾಮಿಕ ರೋಗ ತಡೆಗಟ್ಟಲು ಇಲಾಖೆ ಸನ್ನದ್ಧವಿರಬೇಕು. ಡಿ ಗ್ರೂಪ್ ನೌಕರರಿಂದಿಡಿದು ಮೇಲ್ಪಟ್ಟವರೆಗೆ ಎಲ್ಲರೂ ಅಚ್ಚುಕಟ್ಟಾಗಿ ಒಂದು ಕುಟುಂಬದ ರೀತಿ ಕೆಲಸ ಮಾಡಿದರೆ ಮಾತ್ರ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಕಾಣಬಹುದು. ರಾಜ್ಯದ 6 ಕೋಟಿ ಜನರಿಗೂ ಸ್ಪಂದಿಸುವಂತಹ ಏಕೈಕ ಇಲಾಖೆ ನಮ್ಮದು. ಸಣ್ಣ ಮಕ್ಕಳಿಂದಿಡಿದು ವೃದ್ಧರವರೆಗೂ ಎಲ್ಲರಿಗೂ ಆರೋಗ್ಯ ಸೇವೆ ಸಲ್ಲಿಸುವಲ್ಲಿ ಇಲಾಖೆಗೆ ಬಹಳಷ್ಟು ಜವಾಬ್ದಾರಿ ಇದೆ ಎಂದರು.ಕನಿಷ್ಠ ಮೂಲಸೌಕರ್ಯ ಇರುವಕಡೆಯೂ ಪ್ರಾಮಾಣಿಕ ಮತ್ತು ಮಾನವೀಯತೆಯಿಂದ ಸೇವೆ ಸಲ್ಲಿಸುವ ಮೂಲಕ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಇಲಾಖೆಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಾರೆ. ಆದರೆ, ಕೆಲವು ಕಡೆ ಇದಕ್ಕೆ ವಿರುದ್ಧ ಪರಿಸ್ಥಿತಿ ಇದೆ. ಆರೋಗ್ಯ ಸೌಲಭ್ಯ ಉತ್ತಮಪಡಿಸುವ ಜತೆಗೆ ವೈದ್ಯರು ಮತ್ತು ಸಿಬ್ಬಂದಿಯ ಕುಂದುಕೊರತೆಗಳನ್ನು ಬಗೆಹರಿಸಲು ಸರ್ಕಾರ ಸಿದ್ಧವಿದೆ. ಜನರಿಗೆ ಒಳ್ಳೆಯ ಆರೋಗ್ಯ ಸೇವೆ ಲಭ್ಯವಾಗಬೇಕು. ಇಲಾಖೆ ಸಿಬ್ಬಂದಿ ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡಬೇಕು. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜನಸ್ನೇಹಿಯಾಗಿರಬೇಕು. ಆರೋಗ್ಯ ಕೇಂದ್ರದ ಸುತ್ತ ಸ್ವಚ್ಛತೆಗೆ ಪ್ರಥಮ ಆದ್ಯತೆ ಇರಬೇಕು. ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಳ್ಳುವುದು ಜಿಲ್ಲಾ ಮತ್ತು ಆಯಾ ತಾಲ್ಲೂಕು ಆರೋಗ್ಯಾಧಿಕಾರಿಗಳ ಕರ್ತವ್ಯ ಎಂದು ಸೂಚಿಸಿದರು.ಮೂಡಿಗೆರೆ, ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ಮತ್ತು ಜಿಲ್ಲೆಯ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲದಿರುವ ಬಗ್ಗೆ ಶಾಸಕರಾದ ಸಿ.ಟಿ.ರವಿ, ಬಿ.ಬಿ.ನಿಂಗಯ್ಯ, ಗಾಯತ್ರಿ ಶಾಂತೇಗೌಡ ಅವರು ಸಚಿವರ ಗಮನ ಸೆಳೆದರು.ಮೂಡಿಗೆರೆ ಮತ್ತು ಕಳಸ ಆಸ್ಪತ್ರೆಗಳಿಗೆ ನಾಲ್ವರು ತಜ್ಞ ವೈದ್ಯರನ್ನು ನೇಮಿಸಿರುವುದಾಗಿ ತಿಳಿಸಿದ ಸಚಿವರು, ವೈದ್ಯ ಹುದ್ದೆ ಖಾಲಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜಿಲ್ಲೆಯಲ್ಲಿರುವ ಎಂಬಿಬಿಎಸ್ ವೈದ್ಯರನ್ನು ಹುಡುಕಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.ಆರೋಗ್ಯ ಇಲಾಖೆಯ ಅಂಕಿ ಅಂಶ ನೀಡಲು ಡಿಎಚ್‌ಒ ಮುಂದಾದಾಗ, ಸಚಿವರು, ಲೆಕ್ಕಪತ್ರ ಮಂಡಿಸುವುದರಲ್ಲಿ ನಾವು ಮುಂದಿದ್ದೇವೆ. ಆದರೆ, ಸಾಧನೆಯಲ್ಲಿ ಹಿಂದುಳಿದಿದ್ದೇವೆ. ನಮಗೆ ವಾಸ್ತವ ಫಲಿತಾಂಶ ಬೇಕು ಎಂದು ತಾಕೀತು ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಖಾಸಗಿ ಔಷಧಾಲಯಗಳಿಂದ ಖರೀದಿಸುತ್ತಿರುವ ಔಷಧದ ಬಗ್ಗೆ ತಪಾಸಣೆ ನಡೆಸಬೇಕು. ಅವಧಿ ಮೀರಿದ ಔಷಧ ಎಲ್ಲಿಯೂ ಸಿಗುವಂತಿರಬಾರದು. ತಪಾಸಣೆ ನಡೆಸುವಾಗ ಸಿಕ್ಕಿಬಿದ್ದರೆ ಅನವಶ್ಯಕ ತೊಂದರೆಗೆ ಸಿಲುಕಬೇಕಾಗುತ್ತದೆ ಎಂದು ಎಚ್ಚರಿಸಿದರು.ಕಡಿಮೆ ವೇತನ ಪಡೆಯುತ್ತಿರುವ ವೈದ್ಯರು, ಸೇವೆ ಕಾಯಂ ಆಗದೆ ಪರದಾಡುತ್ತಿರುವ ನರ್ಸ್‌ಗಳು ಸಚಿವರ ಎದುರು ತಮ್ಮ ಅಳಲು ತೋಡಿಕೊಂಡರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.ಶಾಸಕರಾದ ಸಿ.ಟಿ.ರವಿ, ಬಿ.ಬಿ.ನಿಂಗಯ್ಯ, ಜಿ.ಎಚ್.ಶ್ರೀನಿವಾಸ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್‌ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕನ್ನಯ್ಯ, ಆರೋಗ್ಯ ಇಲಾಖೆ ಯೋಜನಾಧಿಕಾರಿ ಶ್ರೀನಿವಾಸ ಹಾಗೂ ಇಲಾಖೆ ಅಧಿಕಾರಿಗಳು ಇದ್ದರು.

ಇದೇ ಸಂದರ್ಭ ಸಚಿವರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.`ಜೆನರಿಕ್ ಔಷಧ ಮಳಿಕೆ ಆರಂಭ ಬಜೆಟ್‌ಗೆ ಸೇರ್ಪಡೆ'

ಚಿಕ್ಕಮಗಳೂರು: ಜೆನೆರಿಕ್ ಔಷಧ ಮಾರಾಟ ಮಳಿಗೆಗಳನ್ನು ತಾಲ್ಲೂಕು ಮಟ್ಟದಲ್ಲಿಯೂ ಆರಂಭಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಾರಿಯ ಬಜೆಟ್‌ಗೆ ಈ ಯೋಜನೆ ಸೇರಿಸುವ ಉದ್ದೇಶವಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.ನಗರದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಪ್ರಮುಖ ಮೂರ್ನಾಲ್ಕು ಯೋಜನೆಗಳನ್ನು ಅನುಷ್ಠಾನಗೊಳಿಸುವ ಪ್ರಸ್ತಾವನೆ ಇಲಾಖೆಯ ಮುಂದಿದ್ದು, ಈ ಬಾರಿಯ ಬಜೆಟ್‌ನಲ್ಲಿ ಅವಕಾಶ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇವೆ ಎಂದರು.ಗಿರಿಜನ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಒದಗಿಸುವ ಸಂಚಾರ ಚಿಕಿತ್ಸಾ ಸೇವೆಯನ್ನು ಮುಂದುವರಿಸಲಾಗುವುದು. ಅಲ್ಲದೆ ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ವೈದ್ಯ, ಸಿಬ್ಬಂದಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.