ಶನಿವಾರ, ಮೇ 8, 2021
24 °C

ಸಾಂಝಿಗೆ ಪ್ರೋತ್ಸಾಹ ಕೊರತೆ: ರಾಜಾರಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಸಾಂಝಿ~ ದೇಶದ ವಿಶೇಷ ಕಲಾ ಪ್ರಕಾರವಾಗಿದೆ. ಪ್ರಚಾರ ಮತ್ತು ಪ್ರೋತ್ಸಾಹದ ಕೊರತೆಯಿಂದ ಈ ಕಲೆ ಸೊರಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಡಾ. ಬಿ.ವಿ.ರಾಜಾರಾಂ ಅಭಿಪ್ರಾಯಪಟ್ಟರು.ನಗರದ ಕಲಾನಿಕೇತನ ಸ್ಕೂಲ್ ಆಫ್ ಆರ್ಟ್ ಕಾಲೇಜಿನಲ್ಲಿ ಗುರುವಾರ ಆರಂಭವಾದ ಕಲಾವಿದ ಶಿವಮೂರ್ತಿ ಎಸ್. ಮಲ್ಲಿ ಅವರ ದೇವಸ್ಥಾನ ಕಲಾ ಸಾಂಝಿ ಚಿತ್ರಕಲಾ ಪ್ರದರ್ಶನ ಮತ್ತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕೆಲವೊಂದು ಕುಟುಂಬಗಳಿಗಷ್ಟೇ ಸೀಮಿತವಾಗಿದ್ದ ಕಲೆಗಳು ಆ ಸಮುದಾಯದವರು ಕಲೆಯನ್ನು ಮುಂದುವರೆಸಿಕೊಂಡು ಬಾರದೆ ಅವನತಿ ಹೊಂದಿವೆ. ಸಾಂಝಿ ಕಲೆ ತೊಗಲುಗೊಂಬೆಯಾಟ ನೆನಪಿಸು ತ್ತದೆ. ಜಾವಾ, ಸುಮಾತ್ರ, ಥಾಯ್ಲೆಂಡ್, ಇಂಡೋನೆಷ್ಯಾ ಇತ್ಯಾದಿ ದೇಶಗಳ ಜಾಹಿರಾತುಗಳ್ಲ್ಲಲೂ ಈ ರೀತಿಯ ಚಿತ್ರಕಲೆಯನ್ನು ಬಿಂಬಿಸಿಲ್ಲ. ಭಾರದ ಅದ್ಭುತ ಕಲಾ ಪ್ರಕಾರವಾಗಿರುವ ಸಾಂಝಿಯನ್ನು ಪೋಷಿಸಿ, ಮತ್ತಷ್ಟು ಜನರಿಗೆ ತಲುಪಿಸುವ ಕಾರ್ಯ ಆಗಬೇಕಿದೆ ಎಂದು ಹೇಳಿದರು.ಕಲಾವಿದರಿಗೆ ಕಲೆಯೇ ಬದುಕಾದಾಗ ಅಪರೂಪದ ಕಲಾಕೃತಿಗಳು ಸೃಷ್ಟಿಯಾಗುತ್ತವೆ. ಅಂದಿನ ಕಲಾಕಾರರ ಕಲಾ ತಪ್ಪಸ್ಸಿನ ಶ್ರದ್ಧೆಯ ಫಲವಾಗಿ ಬೇಲೂರು- ಹಳೇಬೀಡು, ಅಜಂತಾ- ಎಲ್ಲೋರಾ ದೇಗುಲಗಳಲ್ಲಿನ ಕೆತ್ತನೆಗಳು ಜನ್ಮತಾಳಿ ಇಂದಿಗೂ ಜೀವಂತಿಕೆ ಸಾರುತ್ತಿವೆ. ಕಲೆ ಒಂದು ತಪಸ್ಸು. ಚಿತ್ರಕಲಾ ವಿದ್ಯಾರ್ಥಿಗಳೂ ಕಲೆಗಾಗಿಯೇ ಜೀವನಮುಡುಪಾಗಿಟ್ಟು ಅದ್ಭುತ ಕಲಾಕೃತಿಗಳನ್ನು ರಚಿಸಿ ಕೀರ್ತಿ ತರಬೇಕು ಎಂದು ತಿಳಿಸಿದರು.ಸಾಂಝಿ ಚಿತ್ರಕಲಾವಿದ ಎಸ್.ಎಫ್. ಹುಸೇನಿ ಮಾತನಾಡಿ, ಸಾಂಝಿ ಕಲೆ 14ನೇ ಶತಮಾನದಿಂದಲೂ ಭಾರತದಲ್ಲಿ ಪ್ರಚಲಿತದಲ್ಲಿದೆ. ಈ ಕಲೆಯಲ್ಲಿ ದೇವಕಲಾ ಮತ್ತು ರಂಗೋಲಿ ಸಾಂಝಿ ಎಂದು ಎರಡು ವಿಧಗಳಿವೆ.

 

ಸ್ಟಿಕ್ಕರ್ ಕಟ್ಟಿಂಗ್‌ಗೂ ಸಾಂಝಿ ಪೇಪರ್ ಕಟ್ಟಿಂಗ್‌ಗೂ ಬಹಳಷ್ಟು ವ್ಯತ್ಯಾಸವಿದೆ. ಸಾಂಝಿ ಕಲಾವಿದರಿಗೆ ಅಪರಿಮಿತ ತಾಳ್ಮೆ ಇರಬೇಕು. ಜಪಾನ್‌ನಲ್ಲಿ ಇದೇ ಕಲೆಯನ್ನು ಕಿರಿಗಾಮಿ ಎಂದು ಕರೆಯುತ್ತಾರೆ ಎಂದು ತಿಳಿಸಿದರು.ಹಿರಿಯ ಚಿತ್ರಕಲಾವಿದ ಸೀತಾ ರಾಮು, ಅಮರ್‌ದೀಪ್ ಗ್ಯಾಸ್ ಏಜೆನ್ಸಿಯ ಮೆಹುಲ್. ಜೆ. ಪಟೇಲ್ ಮಾತನಾಡಿದರು. ಸಾಂಝಿ ಕಲಾವಿದ ಶಿವಮೂರ್ತಿ ಎಸ್. ಮಲ್ಲಿ ಇದ್ದರು. ಕಲಾನಿಕೇತನ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಕೆ.ಸಿ. ಮಹದೇವಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಚಿಕ್ಕಣ ನಿರೂಪಿಸಿದರು, ಶ್ರೀಧರ್ ವಂದಿಸಿದರು. ಪ್ರದರ್ಶನ  ಸೆ.24ರವರೆಗೆ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.