ಸಾಂಬಾರು ಪ್ರಿಯ ಕೂಪರ್

7

ಸಾಂಬಾರು ಪ್ರಿಯ ಕೂಪರ್

Published:
Updated:
ಸಾಂಬಾರು ಪ್ರಿಯ ಕೂಪರ್

‘ಅತಿಥಿ ದೇವೋಭವ’ ಎಂಬ ಧ್ಯೇಯವಾಕ್ಯವನ್ನು ನಿತ್ಯ ಪಠಿಸುವ ವೈಟ್‌ಫೀಲ್ಡ್‌ನ ಮೇರಿಯೆಟ್ ಹೋಟೆಲ್‌ನ ಪ್ರಧಾನ ವ್ಯವಸ್ಥಾಪಕ ಮ್ಯಾಥ್ಯೂ ಕೂಪರ್ ಓರ್ವ ಸಮರ್ಥ ಆಡಳಿತಗಾರ. ಆತಿಥ್ಯವನ್ನೇ ಉಸಿರಾಗಿಸಿಕೊಂಡಿರುವ ಹೋಟೆಲ್ ಉದ್ಯಮದಲ್ಲಿ ಅವರಿಗೆ ಸುಮಾರು 20 ವರ್ಷಗಳ ಅನುಭವವಿದೆ.ನಗರದ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬೌರಿಂಗ್ ಕ್ಲಬ್‌ನಲ್ಲಿ ವಸ್ತ್ರ ವಿನ್ಯಾಸಕ ಪ್ರಸಾದ್ ಬಿದಪ್ಪ ಇತ್ತೀಚೆಗೆ ಪ್ರಸ್ತುತಪಡಿಸಿದ ‘ಮೆಗಾಮಾರ್ಟ್ ಮೆಗಾ ಮಾಡೆಲ್ ಹಂಟ್13’ ಫ್ಯಾಶನ್ ಶೋಗೆ ನಿರ್ಣಾಯಕರಾಗಿ ಆಗಮಿಸಿದ ಮ್ಯಾಥ್ಯೂ ‘ಮೆಟ್ರೊ’ದೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ನಿಮ್ಮ ಕುಟುಂಬದ ಹಿನ್ನೆಲೆ, ಶಿಕ್ಷಣ?

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಾನು ಹುಟ್ಟಿದ್ದು. ಬ್ರಿಸ್ಬೇನ್‌ನ ಕ್ರೈಗ್ಸಿಲಾ ಸ್ಟೇಟ್ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ. ನಾರ್ತ್ ಪಾಯಿಂಟ್ ಇನ್‌ಸ್ಟಿಟ್ಯೂಟ್ ಆಫ್ ಟಾಫೆಯಿಂದ ‘ಅಸೋಸಿಯೆಟ್ ಡಿಪ್ಲೊಮಾ ಆಫ್ ಬಿಸಿನೆಸ್’ (ಹಾಸ್ಪಿಟಾಲಿಟಿ ಅಂಡ್ ಕೇಟರಿಂಗ್) ಪದವಿ ಪಡೆದೆ.ಪದವಿಯ ನಂತರ ಬ್ರಿಸ್ಬೇನ್‌ನ ಕ್ವೀನ್ಸ್ ಐಲೆಂಡ್‌ನಲ್ಲಿರುವ ಕೂಕಬುರ್ರ ಕ್ವೀನ್ ಪೆಡಲ್ ವಿಲ್ಲರ್ಸ್‌ನಲ್ಲಿ ವೃತ್ತಿ ಜೀವನ ಪ್ರಾರಂಭಿಸಿದೆ. 2006ರಲ್ಲಿ ಭಾರತಕ್ಕೆ ಬಂದ ನಾನು ಹೈದರಾಬಾದ್‌ನಲ್ಲಿರುವ ಮೇರಿಯೆಟ್ ಹೋಟೆಲ್‌ನಲ್ಲಿ ಆಹಾರ ಮತ್ತು ಪಾನೀಯ ವಿಭಾಗದ ನಿರ್ದೇಶಕ ಹುದ್ದೆ ನಿರ್ವಹಿಸಿದೆ. ಕಳೆದ 15 ವರ್ಷಗಳಿಂದ ಮೇರಿಯೆಟ್ ಬಳಗದ ಸದಸ್ಯನಾಗಿರುವ ನಾನು ಸದ್ಯ ವೈಟ್‌ಫೀಲ್ಡ್‌ನಲ್ಲಿರುವ ಹೋಟೆಲ್‌ನಲ್ಲಿ ಪ್ರಧಾನ ವ್ಯವಸ್ಥಾಪಕನಾಗಿ ಮ್ಯಾನೇಜ್‌ಮೆಂಟ್ ತಂಡವನ್ನು ಮುನ್ನಡೆಸುತ್ತಿದ್ದೇನೆ.ನಿಮ್ಮ ಅನುಭವದಿಂದ ‘ಅತಿಥಿ ಸತ್ಕಾರ’ (ಹಾಸ್ಪಿಟಾಲಿಟಿ)ವನ್ನು ವ್ಯಾಖ್ಯಾನಿಸಿ?

ನನ್ನ ವೈಯಕ್ತಿಕ ಅನುಭವದಿಂದ ‘ಅತಿಥಿ ಸತ್ಕಾರ’ವನ್ನು ವ್ಯಾಖ್ಯಾನಿಸುವುದಾದರೆ, ಬಾಗಿಲಿಗೆ ಬಂದ ಅತಿಥಿಯನ್ನು ಸ್ನೇಹಪೂರ್ಣ ಮುಗುಳ್ನಗೆಯಿಂದ ಸ್ವಾಗತಿಸುವ ಜತೆಗೆ ವಾಸ್ತವ್ಯದ ಅವಧಿಯು ಅತಿಥಿಗೆ ಸಂತೋಷಕರವಾಗಿ ಹಾಗೂ ಸ್ಮರಣೀಯವಾಗಿ ಉಳಿಯುವಂತೆ ಮಾಡುವ ಕಲೆ ಅದು.ನಿಮ್ಮ ಗಮನಕ್ಕೆ ಬಂದಂತೆ ಹೋಟೆಲ್ ಉದ್ಯಮದಲ್ಲಾಗುತ್ತಿರುವ ಬದಲಾವಣೆಗಳೇನು?

ಕಳೆದ ಏಳು ವರ್ಷಗಳಿಂದ ಭಾರತದಲ್ಲಿರುವ ನಾನು ಗಮನಿಸಿದಂತೆ ಜನರ ಅಗತ್ಯಗಳು, ಆಶಯಗಳಿಗೆ ಸ್ಪಂದಿಸಬೇಕಾದ ಆತಿಥ್ಯ ಕ್ಷೇತ್ರವು ಉದ್ಯಮ ಸ್ವರೂಪ ಪಡೆಯುತ್ತಿದೆ. ಜಾಗತಿಕ ಹೋಟೆಲ್ ಉದ್ಯಮದಲ್ಲಿ ಭಾರತವು ಪ್ರಮುಖ ಪಾತ್ರ ವಹಿಸುವ ನಿಟ್ಟಿನಲ್ಲಿ ಮುಂದುವರಿಯುತ್ತಿದೆ.ಭಾರತೀಯ ಆಹಾರ ಮತ್ತು ಪಾನೀಯ ಉದ್ಯಮವು 90ರ ದಶಕದಿಂದ ತುಂಬಾ ಕ್ರೀಯಾಶೀಲವಾಗಿದೆ. ಈ ಕ್ಷೇತ್ರದಲ್ಲಿ ಹೊಸ ಹೊಸ ಕಲ್ಪನೆಗಳು ಹಾಗೂ ನೂತನ ಆವಿಷ್ಕಾರಗಳು ಕಂಡುಬರುತ್ತಿರುವುದನ್ನು ನಾವು ನಿರಂತರವಾಗಿ ಕಾಣುತ್ತಿದ್ದೇವೆ.ಇತ್ತೀಚೆಗೆ ಉಪಖಂಡದಲ್ಲಿ ‘ಮಿತ ಆಹಾರದ ಸಂಸ್ಕೃತಿ’ ಕಂಡುಬರುತ್ತಿದೆ. ಹೀಗೆ ನಿತ್ಯ ವಿಕಾಸಗೊಳ್ಳುತ್ತಿರುವ ಗ್ರಾಹಕರ ಅಭಿರುಚಿ ಹಾಗೂ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಮಹತ್ವವಾದ ಮಾನದಂಡಗಳ ಆಧಾರದ ಮೇಲೆ ಆಹಾರ ಮತ್ತು ಪಾನೀಯ ಕುರಿತ ಯೋಜನೆಗಳ ತಂತ್ರಗಳನ್ನು ಕಾರ್ಯಗತಗೊಳಿಸಬೇಕಾಗುತ್ತದೆ.ಆಹಾರದಲ್ಲಿ ತರಕಾರಿ ಕೂಡ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ನಾವು ತಾಜಾ ತರಕಾರಿಗಳಿಗಾಗಿ ಬೆಂಗಳೂರು ಸುತ್ತಮುತ್ತಲಿನ ಸ್ಥಳೀಯ ಬೆಳೆಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ.ಬೆಂಗಳೂರು ಹೋಟೆಲ್ ಉದ್ಯಮದ ಕುರಿತು?

ಇನ್ನೂ ಅಭಿವೃದ್ಧಿ ಹೊಂದಬೇಕೆಂಬ ಕೂಗಿನ ನಡುವೆಯೂ ಉತ್ತಮ ಮೂಲಸೌಕರ್ಯ, ಬೆಳವಣಿಗೆ ಹೊಂದುತ್ತಿರುವ ಟೆಕ್ ಪಾರ್ಕ್‌ಗಳು, ಬದಲಾಗುತ್ತಿರುವ ನಗರ ಸ್ವರೂಪ ಇವುಗಳಿಂದಾಗಿ ಇಂದು ಬೆಂಗಳೂರು ಭಾರತದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಅತಿದೊಡ್ಡ ಮೆಟ್ರೊಪಾಲಿಟನ್ ನಗರಗಳಲ್ಲಿ ಎರಡನೆಯ ಸ್ಥಾನ ಪಡೆದಿದೆ.ನಗರದ ವ್ಯಾವಹಾರಿಕ ಪ್ರವಾಸೋದ್ಯಮದಲ್ಲಿ ಕಳೆದ ಐದು ವರ್ಷದಲ್ಲಿ ಭಾರಿ ಪ್ರಮಾಣದ ಬೆಳವಣಿಗೆ ಕಂಡುಬರುತ್ತಿದೆ. ಜತೆಗೆ ದಿನೇದಿನೇ ಉದ್ಯಮ ಸಂಬಂಧಿ ಸಭೆಗಳು ಹಾಗೂ ಕಾರ್ಯಕ್ರಮಗಳ ಪ್ರಮಾಣ ಹೆಚ್ಚುತ್ತಿದೆ.ಬಂಡವಾಳ ಹೂಡಿಕೆದಾರರು ಹಾಗೂ ವಿಭಿನ್ನ ಅಭಿರುಚಿಯ ವಿದೇಶಿ ಗ್ರಾಹಕರು ಮೆಚ್ಚುವ ನಗರಗಳಲ್ಲಿ ಬೆಂಗಳೂರು ಮುಖ್ಯವಾದದ್ದು. ಇಲ್ಲಿನ ಪ್ರತಿ ಹೋಟೆಲ್‌ ಗ್ರಾಹಕರನ್ನು ಸೆಳೆಯುವ ಸ್ಪರ್ಧೆಯಲ್ಲಿದ್ದು, ಈ ನಿಟ್ಟಿನಲ್ಲಿ ವಿಶಿಷ್ಟ ಯೋಜನೆಗಳನ್ನು, ಪರಿಕಲ್ಪನೆಗಳನ್ನು ಕಾಲಕಾಲಕ್ಕೆ ಜಾರಿಗೊಳಿಸುವುದನ್ನು ಕಾಣಬಹುದು.ಈ ಕ್ಷೇತ್ರ ಪ್ರವೇಶಿಸಲು ತುಡಿಯುವವರಿಗೆ ನಿಮ್ಮ ಕಿವಿಮಾತು?

ಇತರೆ ಉದ್ಯಮಗಳಿಗಿಂತ ಇದು ತುಂಬಾ ವಿಭಿನ್ನವಾದದ್ದು. ಹೊರನೋಟಕ್ಕೆ ಕಂಡಷ್ಟು ಆಕರ್ಷಕವಾಗಲಿ ಸುಲಭವಾಗಲಿ ಅಲ್ಲ ಇದು. ಇಲ್ಲಿ ಹಲವಾರು ವಿಭಾಗಗಳಿಂದ ವಿನಮ್ರವಾಗಿ ಕಲಿಯುವುದು ತುಂಬಾ ಇರುತ್ತದೆ. ನೀವು ಒಂದು ಬಾರಿ ಒಂದು ತಂಡದೊಂದಿಗೆ ಕಾರ್ಯ ಪ್ರಾರಂಭಿಸಿದರೆ ಅದನ್ನು ಎರಡನೆಯ ಕುಟುಂಬವೆಂದೇ ಭಾವಿಸಬೇಕು.ಕೆಲವೊಮ್ಮೆ ದೀರ್ಘಕಾಲದ ಕೆಲಸದ ಒತ್ತಡದಿಂದಾಗಿ ಹತಾಶೆ ಕಾಡಬಹುದು. ಕಠಿಣ ಕೆಲಸಗಳಿಗೆ ಅಥವಾ ಸಮಸ್ಯೆಗಳಿಗೆ ಎದೆಗುಂದಬಾರದು. ವ್ಯವಹಾರದ ತಂತ್ರಗಳನ್ನು ಅರಿತಿರಬೇಕು.ಬೆಂಗಳೂರು ಕುರಿತು ನಿಮ್ಮ ಅಭಿಪ್ರಾಯ?

ಭಾರತದ ಇತರ ನಗರಗಳಿಗೆ ಹೋಲಿಸಿದಾಗ ನಾನು ಬೆಂಗಳೂರನ್ನು ತುಂಬಾ ಇಷ್ಟಪಡುತ್ತೇನೆ. ಜತೆಗೆ ನನ್ನ ಮಕ್ಕಳು ಇಲ್ಲಿರುವ ವಿವಿಧ ಸಮುದಾಯಗಳೊಂದಿಗೆ ಬೆರೆಯುವುದನ್ನು ಕಂಡಾಗ ತುಂಬಾ ಸಂತಸವಾಗುತ್ತದೆ. ರಜೆ ಕಳೆಯಲು ಇಲ್ಲಿ ತುಂಬಾ ಸ್ಥಳಗಳಿವೆ. ಇಲ್ಲಿನ ಆಹಾರ ಸಂಸ್ಕೃತಿ ನನ್ನನ್ನು ಮೋಡಿ ಮಾಡಿದೆ. ದೋಸೆ, ಉಪ್ಪಿಟ್ಟು ಜತೆಗೆ ಉಡುಪಿ ಸಾಂಬಾರು ಎಂದರೆ ನನಗೆ ಪಂಚಪ್ರಾಣ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry