ಸಾಂಸ್ಕೃತಿಕ ಬದುಕು ಶ್ರೀಮಂತಗೊಳಿಸಿ

7

ಸಾಂಸ್ಕೃತಿಕ ಬದುಕು ಶ್ರೀಮಂತಗೊಳಿಸಿ

Published:
Updated:

ನಾಡಿನ ಸಾಂಸ್ಕೃತಿಕ ಬದುಕಿಗೆ ಒಂದು ಬಗೆಯ ಗರ ಬಡಿದಿದೆ ಎಂಬಂತಹ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿಸೋಜ ಅವರ ನೋವಿನ ನುಡಿ, ನಾಡಿನ ಸಮ­ಕಾಲೀನ ಸನ್ನಿವೇಶಕ್ಕೆ ಕನ್ನಡಿ ಹಿಡಿದಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದು ಅನೇಕ ತಿಂಗಳುಗಳಾಗಿದ್ದರೂ ಅಕಾಡೆಮಿಗಳು ಅಸ್ತಿತ್ವಕ್ಕೆ ಬಂದಿಲ್ಲ. ‘ನೈತಿಕ ಪೊಲೀಸ್’ ಅನ್ನುವ ಪರ್ಯಾಯ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ‘ಸರ್ವ ರಿಗೆ ಸಮಪಾಲು, ಸರ್ವರಿಗೆ ಸಮಬಾಳು’ ಎಂಬ ಸಾಹಿತ್ಯದ ಉದ್ದೇಶ ನಾಡಿನ ಎಲ್ಲರ ವಿಷಯದಲ್ಲಿ ನಿಜವಾಗಲು ಸರ್ಕಾರ ಸೇರಿದಂತೆ ಎಲ್ಲರೂ ಶ್ರಮಿಸಬೇಕೆಂದು ಮಡಿಕೇರಿಯಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಅವರು ವ್ಯಕ್ತಪಡಿಸಿರುವ ಆಶಯ ಸದುದ್ದೇಶದ್ದು.ಅಭಿವೃದ್ಧಿ ತರುವ ತಲ್ಲಣ­ಗಳನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿರುವ ನಾ. ಡಿಸೋಜ, ಅಭಿವೃದ್ಧಿಗಾಗಿ ಪಶ್ಚಿಮ ಘಟ್ಟವನ್ನು ದೋಚುವ ಕೆಲಸ ಆಗಬೇಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕಾಗಿ ಒಂದು ಮಧ್ಯದ ದಾರಿಯನ್ನು ಕಂಡು­ಕೊಳ್ಳ­ಬೇಕು  ಎಂಬಂತಹ ಅವರ ಸಲಹೆ ಸಕಾಲಿಕ.ಅಣೆಕಟ್ಟೆಗಳು, ಕಾರ್ಖಾನೆ­ಗಳು, ರಸ್ತೆಗಳು  ಅಭಿವೃದ್ಧಿ ಕತೆಗಳ ಜೊತೆಗೇ ರೈತರ ದುರವಸ್ಥೆಯನ್ನೂ ಹೇಳು­ತ್ತವೆ ಎಂಬುದು ಸರ್ಕಾರದ ಕಣ್ಣಿಗೆ ಬೀಳದೆ? ಎಂದು ಅವರು ಪ್ರಶ್ನಿಸಿ­ರುವುದು ಸರಿಯಾಗಿದೆ. ರಾಜಕೀಯ ಆಡಳಿತವೆಂಬುದು ಅಧೋ­ಗತಿ­ಗಿಳಿ­ಯುತ್ತಾ ಸರ್ಕಾರಗಳನ್ನೇ ಗಣಿ ಲಾಬಿ ಆಳತೊಡಗಿದ ವಿದ್ಯಮಾನವನ್ನು ಸಮ್ಮೇ­ಳನಾ­ಧ್ಯಕ್ಷರು ಕಟುಮಾತುಗಳಲ್ಲಿ ಟೀಕಿಸಿದ್ದಾರೆ.  ಹಾಗೆಯೇ  ಸೈಕಲ್, ಅನ್ನ­ಭಾಗ್ಯ, ಶಾದಿಭಾಗ್ಯಗಳಂತಹ ಕಾರ್ಯಕ್ರಮಗಳು ಹೇಗೆ ಆತ್ಮಾ­ಭಿಮಾನ­ವನ್ನು ಕಸಿಯುವಂತದ್ದಾಗಬಹುದು ಎಂಬುದನ್ನು ದೃಷ್ಟಾಂತ ಕತೆಗಳಿಂದ ನಿರೂಪಿಸಿ ಈ ಕಾರ್ಯಕ್ರಮಗಳ ಪೊಳ್ಳುತನವನ್ನು ಮನದಟ್ಟು ಮಾಡಿ­­ಸಲು ಯತ್ನಿಸಿದ್ದಾರೆ. ಪ್ರತ್ಯೇಕತೆಯ ಕೂಗು ಏಳದ ಹಾಗೆ ಆಡಳಿತ ನೀಡುವ ಹೊಣೆ­ಯನ್ನೂ ಅವರು ಸರ್ಕಾರಕ್ಕೆ ನೆನಪಿಸಿರುವುದು ಪ್ರಸ್ತುತವಾದದ್ದು.ಕೊಂಕಣಿ ಮಾತಾಡುತ್ತಲೇ ಕನ್ನಡವನ್ನು ಶ್ರೀಮಂತಗೊಳಿಸಿದ ನಾಡಿನ ಸಾಹಿತಿಗಳ ಪರಂಪರೆಗೆ ಸೇರಿದವರು ಡಿಸೋಜ. ಹಾಗೆಯೇ ಕವಿರಾಜ­ಮಾರ್ಗ­ದ ಕವಿ ಪ್ರಸ್ತಾಪಿಸುವ ‘ಕನ್ನಡಂಗಳ್’ ಈಗಲೂ ವಾಸ್ತವವೇ. ವಿವಿಧ ಪ್ರದೇಶ­ಗಳಲ್ಲಿ ಬಳಕೆಯಲ್ಲಿರುವ ಕನ್ನಡದ ವೈವಿಧ್ಯ ಭಾಷಾ ಶ್ರೀಮಂತಿಕೆಗೆ ಸಾಕ್ಷಿ. ಇಂತಹ ಭಾಷೆಯ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳದಿರುವ  ಸರ್ಕಾರ­ಗಳನ್ನು ತರಾಟೆಗೆ ತೆಗೆದುಕೊಂಡಿರುವುದು ಸಹಜವಾದುದೆ. ತಮಿಳು­ನಾಡಿನಲ್ಲಿ ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣವನ್ನು ತಮಿಳಿನಲ್ಲಿ ನೀಡು­ವಾಗ ನಾವು ಪ್ರಾಥಮಿಕ ತರಗತಿಯಲ್ಲಿ ಇಂಗ್ಲಿಷ್ ಶಿಕ್ಷಣ ನೀಡಲು ಮುಂದಾ­­­ಗಿರುವ ವೈಪರೀತ್ಯವನ್ನು ಸಮ್ಮೇಳನಾಧ್ಯಕ್ಷರು ಪ್ರಶ್ನಿಸಿರುವುದು ಚಿಂತನಾರ್ಹ.ಕನ್ನಡದ ಬೆಳವಣಿಗೆಗೆ ಆತಂಕ ಒಡ್ಡುವ ಅಧಿಕಾರಿಗಳ ಕಿವಿ ಹಿಂಡು­­ವುದಷ್ಟೇ ಅಲ್ಲ, ಜನರೂ ಆಂಗ್ಲಮೋಹ ಬಿಡಬೇಕು ಎಂಬ ಬುದ್ಧಿ ಮಾತನ್ನು ಜನಸಾಮಾನ್ಯರು ಕೇಳಿಸಿಕೊಳ್ಳುವರೆ ಎಂಬುದೇ ಸದ್ಯದ ಪ್ರಶ್ನೆ. ಮಾಹಿತಿ ತಂತ್ರಜ್ಞಾನದ ಇಂದಿನ ದಿನಗಳಲ್ಲಿ ಜ್ಞಾನವಂತರಾದರಷ್ಟೇ ಸಾಲದು ವಿವೇಕಶಾಲಿಗಳಾಗಿಯೂ ಪರಿವರ್ತನೆಗೊಳ್ಳಬೇಕೆಂಬ ಸಲಹೆ ವರ್ತ­ಮಾನದ ತುರ್ತು.ಯಂತ್ರದ ಅವಸರಕ್ಕೆ ಹೊಂದಿಕೊಳ್ಳುವ ಭರದಲ್ಲಿ ಭಾಷೆ­ಯನ್ನು ಮೊಟಕುಗೊಳಿಸುವ, ಹೃಸ್ವಗೊಳಿಸುವ ಪ್ರಯತ್ನಗಳ ಕುರಿತಾಗಿ ಸಮ್ಮೇಳನಾಧ್ಯಕ್ಷರು ಮಾಡಿರುವ ಟೀಕೆಗಳ ಬಗ್ಗೆ ಎಲ್ಲರಲ್ಲಿ ಆತ್ಮಾವಲೋಕನ ಅಗತ್ಯ ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಏರಬೇಕಾದ ಮಟ್ಟ ಏರಿಲ್ಲ. ಹಿಂದೆ ಎಲ್ಲ ಹಿರಿಯ ಲೇಖಕರೂ ಮಕ್ಕಳಿಗಾಗಿ ಬರೆಯುವುದನ್ನು ಪವಿತ್ರ ಕೆಲಸ ಎಂದು ಭಾವಿಸಿದ್ದರು ಎಂಬ ಮಾತು ಭವಿಷ್ಯದ ಲೇಖಕರಿಗೆ ದಿಕ್ಸೂಚಿ­ಯಾಗ­ಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry