`ಸಾಂಸ್ಕೃತಿಕ ಬಹುತ್ವದ ಸೊಗಸು ಅಪಮೌಲ್ಯ'

7

`ಸಾಂಸ್ಕೃತಿಕ ಬಹುತ್ವದ ಸೊಗಸು ಅಪಮೌಲ್ಯ'

Published:
Updated:
`ಸಾಂಸ್ಕೃತಿಕ ಬಹುತ್ವದ ಸೊಗಸು ಅಪಮೌಲ್ಯ'

ಮುಂಬೈ: ನಮ್ಮ ಸಾಂಸ್ಕೃತಿಕ ಬಹುತ್ವದ ಸೊಗಸು ಮತ್ತು ಸೊಗಡು ಅಪಮೌಲ್ಯಗೊಂಡಿದೆ. ಅದರೊಡನೆ ನಮ್ಮ ಚರಿತ್ರೆ ಕೇವಲ ಉಳ್ಳವರ ಚರಿತ್ರೆಯಾಗಿ ಮಾತ್ರ ವೈಭವೀಕರಿಸಲ್ಪಟ್ಟಿದೆ. ಇನ್ನು ಶಿಕ್ಷಣವಂತೂ ಮಾರುಕಟ್ಟೆಯ ವಸ್ತುವಾಗಿ ಬಡವರನ್ನು ಕಂಗೆಡಿಸಿದೆ.ಇದರಲ್ಲಿ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳ ಕೈವಾಡವೂ ಇದೆ ಎಂದು ಖ್ಯಾತ ಕವಿ ಪ್ರೊ. ಎಸ್. ಜಿ. ಸಿದ್ಧರಾಮಯ್ಯ ಹೇಳಿದರು.ಅವರು ಶೈಲಜಾ ಅಂಚನ್ ಫೌಂಡೇಶನ್ ಮತ್ತು ಸಿರಿವರ ಕಲ್ಚರಲ್ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ `ಸಂಸ್ಕೃತಿ-ಚರಿತ್ರೆ-ಶಿಕ್ಷಣ : ಆಧುನಿಕ ಕರ್ನಾಟಕದ ಜಿಜ್ಞಾಸೆಗಳು' ಎಂಬ ವಿಚಾರಗೋಷ್ಠಿಯಲ್ಲಿ ಪೇತ್ರಿ ವಿಶ್ವನಾಥ್ ಶೆಟ್ಟಿ ಅವರ `ನೆಲಗಂಪು' ಕವನ ಸಂಕಲನವನ್ನು ಬಿಡುಗಡೆಗೊಳಿಸಿದ ಅನಂತರ `ಬಿಜ್ಜಡಿ-ನಾಲ್ವಡಿ-ಅರಸ್ : ಕರ್ನಾಟಕದ ಬದುಕು' ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಕರ್ನಾಟಕದ ಚರಿತ್ರೆಯಲ್ಲಿ  ಉದಾರವಾದಿ ಧೋರಣೆಯನ್ನು ತಳೆದ ಮಡಿವಾಳ ಮೂಲದ ಬಿಜ್ಜಳ, ಗೊಲ್ಲರ ಮೂಲದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಮತ್ತು ಆಧುನಿಕ ಕರ್ನಾಟಕದ ದೇವರಾಜ್ ಅರಸ್ ಸ್ಮರಣಾರ್ಹರು ಎಂದರು.`ನಾವು ಮಣ್ಣನ್ನು ಪವಿತ್ರೀಕರಿಸುವ ಭ್ರಮೆಯಲ್ಲಿ  ಜಾತಿ ಪದ್ಧತಿಯನ್ನೇ ಬಲಪಡಿಸಲು ಹೆಣಗಾಡುತ್ತಿದ್ದೆೀವೆ. ಅದಕ್ಕಾಗಿ ಕರಾವಳಿಯ ಮಣ್ಣಿನಲ್ಲಿ ಬೇರುಬಿಟ್ಟಿರುವ ಸಮಾನತೆಯ ಎಲ್ಲ ಆಶಯಗಳನ್ನೂ ಧಿಕ್ಕರಿಸುತ್ತಾ ನಮ್ಮ ಸಂಸ್ಕೃತಿಯನ್ನು ವಿರೂಪಗೊಳಿಸುತ್ತಿದ್ದೆೀವೆ. ಇದು ಕೂಡದು' ಎಂದು ತುಮಕೂರು ವಿಶ್ವವಿದ್ಯಾಲಯದ  ನಿತ್ಯಾನಂದ ಬಿ. ಶೆಟ್ಟಿ `ಮಣ್ಣಿನ ಪವಿತ್ರೀಕರಣ - ಕರಾವಳಿಯ ಏಕೀಕರಣ' ಎಂಬ ವಿಷಯದ ತನ್ನ ಉಪನ್ಯಾಸದಲ್ಲಿ ತಿಳಿಸಿದರು.ಕರ್ನಾಟಕದಲ್ಲಿ ಶಿಕ್ಷಣ ಎನ್ನುವುದು ವ್ಯವಹಾರವಾಗಿದೆ. ಅದು ಕೇವಲ ಉಳ್ಳವರ ಮರ್ಜಿಗೆ ಕುಣಿಯುತ್ತಿರುವುದರಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ; ಖಾಸಗಿ ಶಾಲೆಗಳು ನಾಯಿ ಕೊಡೆಯಂತೆ ತಲೆಯೆತ್ತುತ್ತಾ ವ್ಯವಹಾರ ನಡೆಸುತ್ತಿವೆ ಎಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಕವಯಿತ್ರಿ ರೂಪಾ ಹಾಸನ ಹೇಳಿದರು.ಪ್ರಾಧ್ಯಾಪಕಿ, ನ್ಯಾಯವಾದಿ ಶೈಲಜಾ ಅಂಚನ್ ಅವರ ಸಂಸ್ಮರಣೆಯಲ್ಲಿ ನಡೆದ ಈ ವಿಚಾರಗೋಷ್ಠಿ ಮತ್ತು ಕೃತಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಡಾ. ಸವಿತಾ ವಿನು ಕೃತಿ ಪರಿಚಯ ಮಾಡಿದರು. ಅಕ್ಷರಿ ಅಂಚನ್ ಮಾತನಾಡಿದರು. ಸಂಘಟಕಿ ಶಕುಂತಲಾ ಆರ್. ಪ್ರಭು ದಿವಂಗತ ಶೈಲಜಾ ಅಂಚನ್ ಅವರ ಬದುಕಿನ ಮೈಲುಗಲ್ಲುಗಳನ್ನು ಸ್ಮರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry