ಗುರುವಾರ , ಏಪ್ರಿಲ್ 22, 2021
22 °C

ಸಾಂಸ್ಕೃತಿಕ ಭವನ ನಿರ್ಮಾಣ ಶೀಘ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಆದರೆ, ಅದಕ್ಕೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಕಾಮಗಾರಿ ವಿಳಂಬವಾಗಿದೆ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಹೇಳಿದರು.ಭಾನುವಾರ ನಗರದಲ್ಲಿ ದಾನೇಶ್ವರಿ ದೇವಸ್ಥಾನ ಟ್ರಸ್ಟ್ ನಿರ್ಮಿಸಿರುವ ಶ್ರೀದಾನೇಶ್ವರಿ ಕಲಾ ಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ತಡೆಯಾಜ್ಞೆ ತೆರವುಗೊಂಡ ಕೂಡಲೇ ಸಾಂಸ್ಕೃತಿಕ ಭವನದ ಕಾಮಗಾರಿ ನಡೆಸಿ ಉತ್ತಮ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಲಾಗುತ್ತದೆ ಎಂದ ಅವರು, ಇನ್ನು ಮುಂದೆ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗದಂತೆ ಜನ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.ಪ್ರತಿಭಾ ಪ್ರದರ್ಶನಕ್ಕೆ ದಾನೇಶ್ವರಿ ಕಲಾ ಮಂದಿರ ಸೂಕ್ತ ವೇದಿಕೆಯಾಗಿ ಹೊರ ಹೊಮ್ಮಲಿದೆ. ಈ ಕಲಾ ಮಂದಿರವನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

35 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಟಾಟಾ ಮೆಟಾಲಿಕ್ ಸ್ಟೀಲ್ ಕಂಪೆನಿ ಜಿಲ್ಲೆಯಲ್ಲಿ ಸ್ಥಾಪನೆಯಾದರೆ ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದಲ್ಲದೇ, ಹಾವೇರಿ ಸಮಗ್ರ ಅಭಿವೃದ್ಧಿ ಹೊಂದುತ್ತದೆ ಎಂದರು.ದಾನಮ್ಮದೇವಿ ಟ್ರಸ್ಟ್ ಅಧ್ಯಕ್ಷೆ ಶೋಭಾತಾಯಿ ಮಾಗಾವಿ ಅಧ್ಯಕ್ಷತೆ ವಹಿಸಿದ್ದರು. ಶಿರಹಟ್ಟಿಯ ಫಕ್ಕೀರ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಹುಕ್ಕೇರಿ ಮಠದ ಸದಾಶಿವ ಶ್ರೀಗಳು, ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಹರಸೂರ ಬಣ್ಣದಮಠದ ರುದ್ರಚನ್ನಮಲ್ಲಿಕಾರ್ಜುನ ಶ್ರೀಗಳು ಹಾಗೂ ದಾವಣಗೆರೆ  ಜನಾಬ್ ಮೌಲಾನಾ ಮಹ್ಮದ್ ಇಬ್ರಾಹಿಂ ಸಖಾಫಿ ನೇತೃತ್ವ ವಹಿಸಿದ್ದರು.ಶಾಸಕ ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ, ನಗರಸಭೆ ಸದಸ್ಯ ಪೀರ್‌ಸಾಬ್ ಚೋಪದಾರ, ರಾಜಶೇಖರ ಮಾಗಾವಿ ಸೇರಿದಂತೆ ನಗರದ ಅನೇಕ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.