ಸಾಂಸ್ಕೃತಿಕ ಲೋಕದ ಬಡಿಗೆ ಕೋಲು ಕಣ್ಮರೆ

ಬುಧವಾರ, ಜೂಲೈ 17, 2019
28 °C

ಸಾಂಸ್ಕೃತಿಕ ಲೋಕದ ಬಡಿಗೆ ಕೋಲು ಕಣ್ಮರೆ

Published:
Updated:

ತುಮಕೂರು: ಕನ್ನಡೇತರರಿಗೆ ಇಂಗ್ಲಿಷ್ ಮೂಲಕ ಕನ್ನಡ ಕಲಿಸುವ ಕ್ರಾಂತಿಕಾರಿ ಚಿಂತನೆ ಪ್ರಸ್ತುತ ಪಡಿಸಿದ ಲಿಂಗದೇವರು ಹಳೆಮನೆ ಚಿಂತನೆ ಎಂದೆಂದಿಗೂ ಪ್ರಸ್ತುತ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ಅಖಿಲ ಭಾರತ ಯುವಜನ ಫೆಡರೇಷನ್ ವತಿಯಿಂದ ನಗರದಲ್ಲಿ ಗುರುವಾರ ನಡೆದ `ಪ್ರೊ.ಲಿಂಗದೇವರು ಹಳೆಮನೆ ಸ್ಮರಣೆ~ ಕಾರ್ಯಕ್ರಮದಲ್ಲಿ ಮಾತನಾಡಿದರು.ಸೊನ್ನೆಯ ಮೂಲಕ ಕನ್ನಡ ವರ್ಣಮಾಲೆಯನ್ನು ಕಲಿಸಲು ಸಾಧ್ಯವಿದೆ ಎಂಬುದನ್ನು ಸಾಧಿಸಿ ತೋರಿಸಿದ್ದರು. ಯಾವುದೇ ವಿಚಾರವನ್ನು ಜನಮುಖಿಯಾಗಿ ಸಾಮಾನ್ಯರಿಗೆ ತಲುಪಿಸುತ್ತಿದ್ದರು. ಸಾಂಸ್ಕೃತಿಕ ಜಗತ್ತಿನಲ್ಲಿ ಒಬ್ಬೊಬ್ಬರಾಗಿ ಚಿಂತಕರು ಕಣ್ಮರೆಯಾಗುತ್ತಿದ್ದಾರೆ. ಸಾಂಸ್ಕೃತಿಕ ಎಚ್ಚರಿಕೆಯ ಬಡಿಗೆ ಕೋಲು ಇಲ್ಲದ ವಾತಾವರಣದಲ್ಲಿ ಢೋಂಗಿ ಸಮಾಜವಾದಿಗಳ ಕಪಟ ನಾಟಕ ವಿಜೃಂಭಿಸುತ್ತಿದೆ ಎಂದು ಹೇಳಿದರು.ಜನ ಮಾನಸದಲ್ಲಿ ನೆನಪಾಗಿ ಉಳಿದುಕೊಂಡಿದ್ದ ಘಟನೆಗಳನ್ನು ಶೋಧಿಸಿ ಜನಮುಖಿ ಕೃತಿಗಳನ್ನು ಹಳಮನೆ ನೀಡಿದರು. ಅನುವಾದಿತ ಕೃತಿಗಳಲ್ಲೂ ಇಂಥ ಜನಮುಖಿ ಚಿಂತನೆ ಎದ್ದು ಕಾಣುತ್ತದೆ. ಸಾಂಸ್ಕೃತಿಕ ಪಲ್ಲಟಗಳನ್ನು ಕೃತಿಗಳು ಹಿಡಿದುಕೊಡುತ್ತವೆ ಎಂದು ನುಡಿದರು.ಪತ್ರಿಕಾ ಅಂಕಣಕಾರರಾಗಿ ಹಳೆಮನೆ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಗಿರೀಶ್ ಕಾಸರವಳ್ಳಿ ನಿರ್ದೇಶನದ `ಒಂದಾನೊಂದು ಕಾಲದಲ್ಲಿ~ ಚಲನಚಿತ್ರದಲ್ಲಿ ಚೀನಿ ಚಲನಚಿತ್ರ ನಿರ್ದೇಶಕ ಅಕಿರಾ ಕುರಸೋವನ ಛಾಯೆಯನ್ನು ಎತ್ತಿ ತೋರಿಸಿದವರು ಲಿಂಗದೇವರು ಎಂದು ಸ್ಮರಿಸಿದರು.ಟಿಪ್ಪು ದ್ವಿ-ಶತಮಾನೋತ್ಸವ ಆಚರಣೆ ವಿಚಾರದಲ್ಲಿ ಇಡಿ ರಾಜ್ಯ ಇಬ್ಭಾಗವಾಗಿದ್ದ ಸಂದರ್ಭದಲ್ಲಿ. ಜನಪದ ಲಾವಣಿ, ಅಪ್ರಕಟಿತ ಕೃತಿಗಳು ಮತ್ತು ಹೇಳಿಕೆಗಳನ್ನು ಪ್ರಸ್ತಾಪಿಸಿ ಲಿಂಗದೇವರು ನೀಡಿದ ಬರಹ ಹೊಸ ದಿಕ್ಕನ್ನು ತೋರಿಸಿತು. ಈ ವಿಚಾರದಲ್ಲಿ ತೀವ್ರ ಟೀಕೆ ವ್ಯಕ್ತವಾದರೂ, ತಮ್ಮ ಹೇಳಿಕೆಯಿಂದ ಹಿಂದೆ ಸರಿಯಲಿಲ್ಲ ಎಂದರು.`ಪ್ರಚಾರ ಪ್ರಿಯರಾಗಿರುವ ಕೆಲವು ವಿದ್ವಾಂಸರು ಇತ್ತೀಚೆಗೆ ಬೌದ್ಧಿಕತೆಯನ್ನು ಅಡವಿಟ್ಟಂತೆ ವರ್ತಿಸುತ್ತಿದ್ದಾರೆ. ವಿಮರ್ಶೆಯ ತಾಳಿಗುಣ ಕಳೆದುಕೊಂಡಿರುವ ಇಂಥವರು ನೀಡಿದ್ದ ಹೇಳಿಕೆಯನ್ನು ಏಕಾಏಕಿ ಹಿಂಪಡೆದು ದ್ವಂದ್ವ ನಿಲುವು ತೋರುತ್ತಿದ್ದಾರೆ. ಆಡಿದ ಮಾತಿಗೆ ನಿಷ್ಠರಾಗಿರಬೇಕು. ತಪ್ಪಾಗಿದ್ದರೆ ತಿದ್ದಿಕೊಳ್ಳಲು ಸಿದ್ಧರಿರಬೇಕು ಎಂದು ಲಿಂಗದೇವರು ಆಗಾಗ ಹೇಳುತ್ತಿದ್ದರು~ ಎಂದು ಸಿದ್ದರಾಮಯ್ಯ ನೆನಪಿಸಿಕೊಂಡರು.ಭಾಷಾಶಾಸ್ತ್ರವನ್ನೂ ಮಾರ್ಕ್ಸ್‌ವಾದಿ ದೃಷ್ಟಿಕೋನದಿಂದ ನೋಡಿದ ಲಿಂಗದೇವರು, ಬಹುಮುಖಿ ವ್ಯಕ್ತಿತ್ವ ಎಂದು ಬಣ್ಣಿಸಿದ ಸಿಪಿಐ ರಾಜ್ಯ ಕಾರ್ಯದರ್ಶಿ ಡಾ.ಸಿದ್ದನಗೌಡ ಪಾಟೀಲ, ಸಾಕ್ಷರತಾ ಆಂದೋಲನದ ಪಠ್ಯ ರಚನಾ ವಿಚಾರದಲ್ಲಿ ಮತೀಯ ಭಾವನೆ ವ್ಯಕ್ತವಾಗದಂತೆ ಕಾಳಜಿ ವಹಿಸಿ ಮಾದರಿಯಾದರು ಎಂದರು.ಅಕ್ಷರದ ಮೂಲಕ ಶಾಶ್ವತ ಮೌಲ್ಯಗಳನ್ನು ಎತ್ತಿ ಹಿಡಿದ ಲಿಂಗದೇವರು `ಅರಿವಿನ ಕುರುಹು~ ನೀಡುವ ಯತ್ನ ಮಾಡಿದರು. ಚಿಂತಕರ ಸಾವು ಚಿಂತನೆಗೆ ಸ್ಥಗಿತತೆ ನೀಡಬಾರದು. ಅವರ ಚಿಂತನೆಯನ್ನು ಮುಂದುವರಿಸೋಣ ಎಂದು ಪ್ರಗತಿಪರ ಚಿಂತಕ ದೊರೈರಾಜ್ ಹೇಳಿದರು.ಸ್ವಾತಂತ್ರ್ಯ ಹೋರಾಟಗಾರ ರೇವಣ್ಣ ಮಾತನಾಡಿ, ಗಾಂಧಿವಾದಿಗಳೊಂದಿಗೆ ಎಡಪಕ್ಷಗಳು ಒಗ್ಗೂಡಿ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸ ಬೇಕೆಂದರು. ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಬಸವಯ್ಯ ಇತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry