ಭಾನುವಾರ, ನವೆಂಬರ್ 17, 2019
29 °C

`ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿಕೊಳ್ಳಿ'

Published:
Updated:

ಚಿತ್ರದುರ್ಗ: `ವಿದ್ಯಾರ್ಥಿಗಳು ತಮ್ಮ ಬದುಕಿನ ಸುತ್ತ ಉತ್ತಮ ಸಾಂಸ್ಕತಿಕ ವಾತಾವರಣ ಸೃಷ್ಟಿಸಿಕೊಳ್ಳಬೇಕು' ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.

ಮುರುಘಾ ಮಠದ ಪದವಿ ಪೂರ್ವ ಕಾಲೇಜು ಮಂಡಳಿ ಶುಕ್ರವಾರ ಮಠದ ಆವರಣದಲ್ಲಿ ಆಯೋಜಿಸಿದ್ದ ಕ್ರೀಡಾ, ಸಾಂಸ್ಕತಿಕ ಸಂಘದ ಉದ್ಘಾಟನೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ಸಮವಸ್ತ್ರ ಮತ್ತು ಪುಸ್ತಕ ವಿತರಣಾ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.ಯಾರು ಉತ್ತಮ ಸಾಂಸ್ಕತಿಕ ಪರಿಸರದೊಳಗೆ ಬೆಳೆಯುವುದಿಲ್ಲವೋ ಅಂತಹವರನ್ನು ಅನಾಗರಿಕ, ಅಮಾನವೀಯ ವರ್ತನೆಗಳು ಆವರಿಸಿಕೊಳ್ಳುತ್ತವೆ. ಅಂಥ ಪರಿಸರಕ್ಕಾಗಿ ವಿದ್ಯಾರ್ಥಿಗಳು ಬದುಕಿನಲ್ಲಿ ಉಪನ್ಯಾಸ, ಉಪದೇಶ, ಲಘು ಸಂಗೀತ ಕೇಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.`ನಮಗೆ ಗ್ರಹಿಸಿಕೊಳ್ಳುವ ಯೋಚನೆ ಇದ್ದಾಗ ಏಕಾಗ್ರತೆ ಮೂಡುತ್ತದೆ. ಕೆಲವರಿಗೆ ಸ್ಮರಣಶಕ್ತಿ ಕಡಿಮೆ ಇರುತ್ತದೆ. ಅವಿದ್ಯಾವಂತ ತಂದೆ-ತಾಯಿಯರಿಗೆ ಹುಟ್ಟಿದ ಮಕ್ಕಳು ಅವಿದ್ಯಾವಂತರಾಗಬೇಕೆಂದಿಲ್ಲ. ಅವರೂ ಬುದ್ಧಿವಂತರಾಗುತ್ತಿದ್ದಾರೆ' ಎಂದು ಹೇಳುತ್ತಾ, ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಂದ ವಿದ್ಯಾರ್ಥಿ ಅಶ್ವಿನಿ ಅಂಗಡಿ ಅವರನ್ನು ಉದಾಹರಿಸಿದರು.ಪ್ರಾಚಾರ್ಯ ಎಸ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪಾನೀಯ ನಿಗಮದ ವ್ಯವಸ್ಥಾಪಕ ಪ್ರಾಣೇಶ್, ಜಿಲ್ಲಾ ಆರ್ಯ ಈಡಿಗರ ವೇದಿಕೆ ಅಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿತರಿಸಲಾಯಿತು.

ಪ್ರತಿಕ್ರಿಯಿಸಿ (+)