ಭಾನುವಾರ, ಡಿಸೆಂಬರ್ 8, 2019
25 °C
ನಾದ- ನೃತ್ಯ

ಸಾಂಸ್ಕೃತಿಕ ಸಭೆ ನಾದ, ನೃತ್ಯದ ಶೋಭೆ

Published:
Updated:
ಸಾಂಸ್ಕೃತಿಕ ಸಭೆ ನಾದ, ನೃತ್ಯದ ಶೋಭೆ

ನಗರ ಬೆಳೆದಂತೆ ಅದರ ಸಾಂಸ್ಕೃತಿಕ ಅಗತ್ಯಗಳೂ ಬೆಳೆಯುತ್ತಿವೆ. ದೂರದ ಬಡಾವಣೆಗಳ ಜನ ಸಂಗೀತ-ಸಾಹಿತ್ಯ ಕಾರ್ಯಕ್ರಮಗಳಿಗಾಗಿ ನಗರ ಮಧ್ಯದ ಭಾಗಗಳಿಗೆ ಬಂದು ಹೋಗುವುದು ಕಷ್ಟಸಾಧ್ಯವೇ. ಹೀಗಾಗಿ ಉಪನಗರ ಮೊಹಲ್ಲಾಗಳಲ್ಲಿ ಸಾಂಸ್ಕೃತಿಕ ಸಂಸ್ಥೆಗಳ ಅಗತ್ಯ ಹೆಚ್ಚಾಗುತ್ತಿವೆ.ಈ ಅನಿವಾರ್ಯವನ್ನು ಮನಗಂಡು ವಸಂತಪುರದಲ್ಲಿ `ಕೃಷ್ಣ ಕಲಾ ಕೇಂದ್ರ' ಸ್ಥಾಪನೆಗೊಂಡಿದೆ. ಮೊನ್ನೆ ಭಾನುವಾರ ಪದ್ಮಭೂಷಣ ಡಾ. ಆರ್.ಕೆ. ಶ್ರಿಕಂಠನ್ ಸಂಸ್ಥೆಗೆ ಚಾಲನೆ ನೀಡಿ, ಶುಭ ಕೋರಿದರು. ಆನೂರು ದತ್ತಾತ್ರೇಯ ಶರ್ಮ ಅವರು ಸಂಸ್ಥೆಯ ಅಂತರ್ಜಾಲ ತಾಣದ ಉದ್ಘಾಟನೆ ಮಾಡಿದರು.ಸಂಸ್ಥೆಯ ಚೊಚ್ಚಲ ಕಛೇರಿ ನೀಡಿದ್ದು ವಿನಯ ಶರ್ವ ಅವರು. ಎಸ್.ಶಂಕರ್ ಅವರಲ್ಲಿ ಭದ್ರಪಾಯ ಹಾಕಿಕೊಂಡು, ಕೆಲ ಕಾಲದಿಂದ ಹಿರಿಯರಾದ ನೇದನೂರಿ ಕೃಷ್ಣಮೂರ್ತಿ ಅವರಿಂದ ಮಾರ್ಗದರ್ಶನ ಪಡೆಯುತ್ತಿರುವ ವಿನಯ್, ಸುಪರಿಚಿತ ಸರಸೂಡ ವರ್ಣವನ್ನು ಎರಡು ಕಾಲದಲ್ಲಿ ಹಾಡಿ, ಕಾರ್ಯಕ್ರಮಕ್ಕೆ ನಾಂದಿ ಹಾಕಿದರು.ನಾಟ ರಾಗವನ್ನು ಕ್ಲಿಪ್ತವಾಗಿ ಆಲಾಪಿಸಿ, ಶ್ರೀ ಮಹಾಗಣಪತೆ ಸುರಪತೆಯ ಮೂಲಕ ವಿಘ್ನರಾಜನಿಗೆ ವಂದಿಸಿ, ಚಿಟ್ಟೆಸ್ವರದಿಂದ ಬೆಳಗಿಸಿದರು. ತ್ಯಾಗರಾಜರ ಹೆಚ್ಚು ಚಾಲ್ತಿಯಲ್ಲಿಲ್ಲದ ವಲ್ಲಗಾದನಕ ಸೀತಾವಲ್ಲಭ ಕೃತಿಯನ್ನು ಕಿರು ಸ್ವರ ಪ್ರಸ್ತಾರದೊಂದಿಗೆ ಹಾಡಿ ಆಹಿರಿಯಲ್ಲಿ `ಚೆಲ್ಲರೇ ರಾಮ' ಹಾಡಿದರು. ಬಹಳ ದಿನಗಳ ನಂತರ `ಏನಾಟಿನೋಮು ಫಲಮೋ' ಕೀರ್ತನೆ ಕೇಳಿಸಿದರು. ಭೈರವಿ ಆಲಾಪನೆಯನ್ನು ವಿಸ್ತಾರವಾಗಿ ಮಾಡಿ, ಗಾಢ ಅನುಭವ ನೀಡಿದರು. ಆಲಾಪನೆಯ ಪೀಠದ ಮೇಲೆ ಕೃತಿಯನ್ನು ಭದ್ರವಾಗಿ ಸ್ಥಾಪಿಸಿದರು.ನೆರವಲ್ (ಸುಂದರೇಶ ಸುಗುಣ ಬೃಂದ ದಶರಥ) ಹಾಗೂ ಸ್ವರಗಳು ಆಹ್ಲಾದಕರವಾಗಿ ಹೊಮ್ಮಿದವು. ಎಂದೂ ಪ್ರಿಯವಾದ `ಜಗದೋದ್ಧಾರನಾ' ಹಾಡಿ ರಾಗಮಾಲಿಕೆಯಲ್ಲಿ ಶಾರದಾ ಭುಜಂಗ ಹಿನ್ನೆಲೆಯೊಂದಿಗೆ ಮುಕ್ತಾಯ ಮಾಡಿದರು. ತನ್ನ ಉತ್ತಮ ಕಂಠ ಹಾಗೂ ಚೈತನ್ಯಪೂರ್ಣ ನಿರೂಪಣೆಗಳಿಂದ ಮೆಚ್ಚುಗೆ ಗಳಿಸಿದ ವಿನಯ ಶರ್ವ, ಪ್ರೌಢ ಶಿಕ್ಷಣ ಮತ್ತು ಅನುಭವಗಳಿಂದ ಔನತ್ಯಕ್ಕೆ ಏರಬಹುದು. ಎಚ್.ಎಂ. ಸ್ಮಿತಾ ಪಿಟೀಲಿನಲ್ಲಿ ಮಿಂಚಿದರೆ ಅನುಭವೀ ಆನೂರು ಅನಂತಕೃಷ್ಣ ಶರ್ಮ ಮೃದಂಗದಲ್ಲಿ ನೀಡಿದ ಒತ್ತಾಸೆ ಗಮನಾರ್ಹ. ಯುವ ಕಲಾವಿದ ಭಾರದ್ವಾಜ ಸಾತವಳ್ಳಿ ಮೋರ್ಚಿಂಗ್‌ನಲ್ಲಿ ಉತ್ತಮ ಸಹಕಾರ ನೀಡಿದರು.ಬೆಳದಿಂಗಳಲ್ಲಿ ನಾದ ಕಿರಣ

ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನದ ಮೆಟ್ಟಲು ಇಳಿದರೆ ಸುಂದರ ಉದ್ಯಾನವನ. ಚಿಕ್ಕದಾದರೂ ಮುದ ನೀಡುವ ಉದ್ಯಾನವನ. ಬೆಳದಿಂಗಳಲ್ಲಿ ಹೊಳೆಯುವ ಹಸಿರು ನೆಲ. ಅಲಂಕೃತ ಉತ್ಸವಮೂರ್ತಿ. ವಿಶಾಲ ವೇದಿಕೆ. ವೇದಿಕೆ ಬೆಳಗುತ್ತಿದ್ದ ಗಾಯಕಿ. ರಾಗೇಶ್ರೀ ರಾಗ. ವಿಳಂಬಿತ್ ಏಕತಾಳ ಹಾಗೂ ದ್ರುತ್ ತೀನ್ ತಾಳ್. ರಾಗ ಪುಷ್ಪ ಪರಿಮಳ.ಗಾಯಕಿ ಡಾ. ವೈಶಾಲಿ ಅವರ ಗಾಯನ ನಿರಾಳ. ವೈಶಾಲಿ ಇದಕ್ಕಿಂತ ಚೆನ್ನಾಗಿ ಹಾಡಬಲ್ಲರು ಎಂದರು ಪಕ್ಕದವರು. ದಾಸರಪದ, ವಚನಗಳು ಪುಂಖಾನುಪುಂಖವಾಗಿ ಒಂದಾದ ಮೇಲೊಂದರಂತೆ ನಿರೂಪಿಸತೊಡಗಿದರು. ಮಾಡಿ ಮಾಡಿ ಕೆಟ್ಟರು, ಕಾಯದ ಕಟ್ಟಳೆಯ, ಆಡಲು ಪೋಗೋಣ ಬಾರೋ ರಂಗ, ಬಾರಯ್ಯ ರಂಗ ಬಾರಯ್ಯ ಕೃಷ್ಣ, ಪಾಲಿಸೆಮ್ಮ ಮುದ್ದು ಶಾರದೆ ಕೇಳುಗರಿಗೆ ಪ್ರಿಯವಾದುದು ಸಹಜವೇ. ಹಾರ್ಮೋನಿಯಂನಲ್ಲಿ ಪಂಚಾಕ್ಷರಿ ಹಿರೇಮಠ್ ಮತ್ತು ತಬಲಾದಲ್ಲಿ  ಹನುಮಂತಪ್ಪ ಹೂಗಾರ್ ಸಾಥ್ ನೀಡಿದರು.ಸ್ವರ್ಣ ಮಹೋತ್ಸವ

ಬೆಂಗಳೂರು ಲೇಡಿಸ್ ಅಸೋಸಿಯೇಷನ್ ಸಂಗೀತ, ನೃತ್ಯ ಕಾರ್ಯಕ್ರಮಗಳ ಮೂಲಕ ಸ್ವರ್ಣ ಮಹೋತ್ಸವವನ್ನು ಸಡಗರದಿಂದ ಆಚರಿಸಿಕೊಂಡಿತು.ಮೊದಲಿಗೆ ತ್ರಿವೇಣಿ ಮತ್ತು ಕವಿತಾ ಸರಳಾಯ ಯುಗಳ ಗಾಯನದಿಂದ ರಂಜಿಸಿದರು. ಕಛೇರಿಯ ಪೂರ್ವಾರ್ಧದಲ್ಲಿ ಬಂದ  ಅಖಿಲಾಂಡೇಶ್ವರಿ ದೇವಿ ಮೇಲಿನ ಒಂದು ಸುಂದರ ರಚನೆ. ಒಂದು ಹಸನಾದ ಕೃತಿ ರಾಮ ರಾಮ ಗುಣ ಸೀಮವನ್ನು ವಿಸ್ತರಿಸಿದರು. ಇಬ್ಬರೂ ಹಂಚಿಕೊಂಡು ರಾಗ, ನೆರವಲ್, ಸ್ವರಗಳನ್ನು ಬೆಳೆಸುತ್ತಾ ಪಸರಿಸಿದರು. ಲಯಕಾರಿಯಾದ ಹರಿ ಕುಣಿದಾ ನಮ್ಮ  ಹಾಡಿ, ದೇಶಭಕ್ತಿ ಗೀತೆ ಮೈತ್ರಿಂ ಭಜತಾ ದೊಂದಿಗೆ ಪರಿಸಮಾಪ್ತಿಗೊಳಿಸಿದರು. ಪಿಟೀಲಿನಲ್ಲಿ ಎಂ.ಎಸ್. ಗೋವಿಂದಸ್ವಾಮಿ, ಮೃದಂಗದಲ್ಲಿ  ರಾಜಗೋಪಾಲ್ ಮತ್ತು ಘಟದಲ್ಲಿ  ಎಂ.ಎ. ಕೃಷ್ಣಮೂರ್ತಿ ನೆರವಾದರು.ಬೆಡಗಿನ ಭರತನಾಟ್ಯ

ದಿನದ ಕೊನೆಯ ಕಾರ್ಯಕ್ರಮವಾಗಿ ನರ್ತಿಸಿದ ನಿರುಪಮಾ ರಾಜೇಂದ್ರ ಅವರು ಕಥಕ್ ಮತ್ತು ಭರತನಾಟ್ಯಗಳೆರಡರಲ್ಲೂ ಸಾಧಕಿ. ತಮ್ಮ ಭರತನಾಟ್ಯ ಕಾರ್ಯಕ್ರಮವನ್ನು ಗಣಪತಿ ಸ್ತುತಿಯೊಂದಿಗೆ ಪ್ರಾರಂಭಿಸಿದರು. ಲೋಕಧರ್ಮಿಯಲ್ಲಿ  ಉಲ್ಲಾಸಭರಿತರಾಗಿ ನರ್ತಿಸಿದರು.ಕುಮಾರ ಸಂಭವದಿಂದ ರೂಪಾಂತರಗೊಳಿಸಿದ ವಸಂತ ವೈಭವದಿಂದ ಪ್ರಾರಂಭಿಸಿ, ಮನ್ಮಥನ ಮೇಲೆ ಶಿವನ ಕೋಪ, ಪಾರ್ವತಿಯ ತಪಸ್ಸು; ಆತ್ಮ ಸೌಂದರ್ಯದಿಂದ ಶಿವನನ್ನು ಒಲಿಸಿಕೊಳ್ಳುವುದು   ಮುಂತಾದವುಗಳನ್ನು ಸುಂದರವಾಗಿ ಅಭಿನಯಿಸಿದರು.ಡಾ. ಪದ್ಮಾ ಸುಬ್ರಹ್ಮಣ್ಯಂ ಅವರ ಸಂಶೋಧನೆಯ ಫಲವಾಗಿ ಮೂಡಿರುವ ಕರ್ಣಗಳು ನೃತ್ಯದ ಮೌಲ್ಯವನ್ನು ವರ್ಧಿಸಿದವು. ಸರ್ವ ಜನಪ್ರಿಯ ದೇವರನಾಮ  ಜಗದೋದ್ಧಾರನಾದಲ್ಲಿ ಹೊಮ್ಮಿದ ವಾತ್ಸಲ್ಯಭಾವ ಮಧುರ! ಸ್ವಲ್ಪ ನಾಟಕೀಯತೆಯಿಂದ ಕೂಡಿ, ಭಾವಪೂರ್ಣವಾಗಿ ಅಭಿನಯಿಸಿದರು. ಕೃಷ್ಣನ ಮೇಲಿನ ಕಥನ ಕುತೂಹಲದ ತಿಲ್ಲಾನವೂ ಚೇತೋಹಾರಿ.

 

ಪ್ರತಿಕ್ರಿಯಿಸಿ (+)