ಭಾನುವಾರ, ಅಕ್ಟೋಬರ್ 20, 2019
27 °C

ಸಾಂಸ್ಕೃತಿಕ ಹಿನ್ನೋಟ: ರಂಗದ ಮೇಲೆ ರೋಮಾಂಚನ

Published:
Updated:
ಸಾಂಸ್ಕೃತಿಕ ಹಿನ್ನೋಟ: ರಂಗದ ಮೇಲೆ ರೋಮಾಂಚನ

3 ಡಿ, 4 ಡಿ, ಹಾರರ್ ಸಿನಿಮಾಗಳನ್ನು ನೋಡಿದ್ದೇವೆ. ಕತ್ತಲೆಯಲ್ಲಿ ಬಿಳಿ ತೆರೆ ಮೇಲೆ ಆ ಅನುಭವ ಕಟ್ಟಿಕೊಡುವುದು ಸುಲಭ. ಜೀವಂತ ಪಾತ್ರಗಳಿರುವ ನಾಟಕದಲ್ಲಿ ಅಂತಹ ಪ್ರಯೋಗ ಕಷ್ಟ. ಆದರೆ ಈ ದಿಸೆಯಲ್ಲಿ ಒಂದು ಸಾರ್ಥಕ ಪ್ರಯತ್ನ ಮಾಡಿದೆ ಪ್ರದರ್ಶನ ಕಲಾ ಸಂಸ್ಥೆ.ಅದು ಕೆ. ಎಚ್ ಕಲಾಸೌಧದಲ್ಲಿ ಪ್ರದರ್ಶಿಸಿದ `13 ಮಾರ್ಗೋಸ ಮಹಲ್~ ಎಂಬ ನಾಟಕ ಪ್ರೇಕ್ಷಕರನ್ನು ಸ್ವಲ್ಪ ಮಟ್ಟಿಗಾದರೂ ತುದಿಗಾಲ ಮೇಲೆ ನಿಲ್ಲಿಸುವಲ್ಲಿ ಸಫಲವಾಗಿದೆ.ಇದಕ್ಕಾಗಿ ನಿರ್ದೇಶಕ ಪಿ.ಡಿ. ಸತೀಶ್‌ಚಂದ್ರ ಸಾಕಷ್ಟು ಶ್ರಮ ಪಟ್ಟಿದ್ದಾರೆ. ರಘು ದೀಕ್ಷಿತ್ ಅವರ ಸಂಗೀತ ಸಂಯೋಜನೆ ನಾಟಕದ ರೋಮಾಂಚನ ಹೆಚ್ಚಿಸಿದೆ. ಇದು ಒಂದು ಹಾರರ್ ನಾಟಕ. ಹಾರರ್ ಎಂದ ಕೂಡಲೆ ದೃಶ್ಯ ಹಾಗೂ ಸಂಗೀತದ ಮೂಲಕ ಪ್ರೇಕ್ಷಕರ ಹೃದಯ ಬಡಿತ ಹೆಚ್ಚಿಸುವುದು ಎಂಬುದು ಎಲ್ಲರ ಮನಸ್ಸಿಗೆ ಬರುವ ಯೋಚನೆ. ಆದರೆ ಇಲ್ಲಿ ಇದ್ದದ್ದು ಹೊಸ ಪ್ರದರ್ಶನ ಶೈಲಿ.ರಂಗದ ಮೇಲೆ ಬರುವ ಪಾತ್ರಧಾರಿಗಳಿಗೆ ಚಳಿಯಾದಾಗ ಪ್ರೇಕ್ಷಕರಿಗೂ ಚಳಿ, ಪಾತ್ರಧಾರಿಗಳು ಕಾಡು ದಾರಿಯಲ್ಲಿ ಹೋಗುವಾಗ ಅವರ ಮೇಲೆ ಬೀಳುವ ಒಣಗಿದ ಎಲೆಗಳು ಪ್ರೇಕ್ಷಕರ ಮೇಲೂ ಬಿದ್ದ ಅನುಭವವಂತೂ ಹೊಸತು.ಮೂವರು ಐಟಿ ಉದ್ಯೋಗಿಗಳು ತಮಗೆ ಸಿಗುವ ಪ್ರವಾಸ ಭತ್ಯೆ ಉಳಿಸಲು ಚಿಕ್ಕ ಹಿಲ್ ಸ್ಟೇಷನ್ ಒಂದಕ್ಕೆ ಹೋದಾಗ ನಡೆಯುವ ವಿಚಿತ್ರ ಘಟನೆಗಳ ಸುತ್ತ ಹೆಣೆಯಲಾದ ಈ ಕಥೆಯಲ್ಲಿ ರೊಮಾಂಚನಗೊಳಿಸುವ ಹಲವು ಸನ್ನಿವೇಶಗಳಿವೆ. ಹಾಗೆಯೆ ನೋಡುಗರ ಭಯ ತಗ್ಗಿಸಲು ಹದವಾದ ಹಾಸ್ಯ ಸನ್ನಿವೇಶಗಳು ಹಾಗು ಸಂಭಾಷಣೆಯಿದೆ.ಬೆಳಕು ಮತ್ತು ರಂಗಸಜ್ಜಿಕೆಗೆ ಅತೀ ಹೆಚ್ಚು ಪ್ರಾಮುಖ್ಯತೆಯಿರುವ ಈ ನಾಟಕದ ಬೆಳಕು ನಿರ್ವಹಣೆಯನ್ನು ವಿನಯ್ ಶೇಷಾದ್ರಿ ಚಾಕಚಕ್ಯತೆಯಿಂದ ನಿರ್ವಹಣೆ ಮಾಡಿದ್ದಾರೆ.ನಿರಂಜನ್, ಮೊನೀಶ್, ಪಲ್ಲವಿ, ಪಾರ್ಥ, ವಸಿಷ್ಠ, ಹೇಮಂತ ಚುರುಕು ಅಭಿನಯ ನಾಟಕದ ಹೈಲೈಟ್.

Post Comments (+)