ಶುಕ್ರವಾರ, ನವೆಂಬರ್ 15, 2019
22 °C

ಸಾಕಿನ್ನು ಈ ಹಿಂಸೆ

Published:
Updated:

ಹೆಣ್ಣುಮಕ್ಕಳ ವಿರುದ್ಧ ಭಾರತದಲ್ಲಿ ನಿರಂತರವಾಗಿ ವರದಿಯಾಗುತ್ತಿರುವ ಲೈಂಗಿಕ ಹಿಂಸೆಯ ಪ್ರಕರಣಗಳನ್ನು ಗಮನಿಸಿದಲ್ಲಿ ಮಹಿಳೆ ವಿರುದ್ಧ ಭಾರತ ದೊಡ್ಡದೊಂದು ಸಮರ ಸಾರಿದೆಯೇ ಎಂಬ ಭಾವನೆ ಬಂದರೆ ಅಚ್ಚರಿ ಇಲ್ಲ. ದೆಹಲಿಯಲ್ಲಿ ಐದು ವರ್ಷದ ಪುಟ್ಟ ಬಾಲಕಿಯ ಮೇಲೆ ನಡೆದಿರುವ ಬರ್ಬರ ಅತ್ಯಾಚಾರ, ಈ ಸರಣಿ ಪ್ರಕರಣಗಳಲ್ಲಿ ಇತ್ತೀಚಿನದು. ಮೇಣದ ಬತ್ತಿ, ಕೇಶತೈಲದ ಶೀಷೆಗಳು ಈ ದೌರ್ಜನ್ಯ ಪ್ರಕರಣದಲ್ಲಿ ಬಳಕೆಯಾಗಿರುವುದು ಈ ಅತ್ಯಾಚಾರದ ಭೀಕರತೆಗೆ ಸಾಕ್ಷಿ.ಈ ಪ್ರಕರಣವೂ ಸೇರಿದಂತೆ ದೆಹಲಿಯಲ್ಲಿ ಈ ತಿಂಗಳೊಂದರಲ್ಲೇ ಬಾಲಕಿಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ಐದು ಎಂಬುದು ಗಂಭೀರವಾಗಿ ಪರಿಗಣಿಸಬೇಕಾದ ವಿಷಯ. ಅಲ್ಲದೆ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ ವರದಿ ಪ್ರಕಾರ, 2011ರಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಶೇ 30ರಷ್ಟು ಏರಿಕೆಯಾಗಿವೆ. ಹೀಗಿದ್ದೂ ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರ ಸಂವೇದನಾಶೂನ್ಯತೆ ಮುಂದುವರಿದಿರುವುದು ಅಕ್ಷಮ್ಯ. ಪ್ರಕರಣ ದಾಖಲಿಸದೆ ಸುಮ್ಮನಿರಬೇಕೆಂದು ಬಾಲಕಿಯ ತಂದೆಗೆ ಪೊಲೀಸರು ಹಣದ ಆಮಿಷ ಒಡ್ಡಿದರೆನ್ನಲಾದ ಆರೋಪ, ಪೊಲೀಸರ ನಡವಳಿಕೆಯಲ್ಲಿ ಆಗಬೇಕಿರುವ ಸುಧಾರಣೆಗಳಿಗೆ ದ್ಯೋತಕ.ಹಾಗೆಯೇ, ಈ ಅತ್ಯಾಚಾರದ ವಿರುದ್ಧ ಪ್ರತಿಭಟಿಸುತ್ತಿದ್ದ ಕಾರ್ಯಕರ್ತೆಯ ಕಪಾಳಕ್ಕೆ, ಪೊಲೀಸ್ ಅಧಿಕಾರಿಯೊಬ್ಬರು ಹೊಡೆದಿರುವ ಘಟನೆಯಂತೂ ಅನೇಕ ಪ್ರಶ್ನೆಗಳಿಗೆ ಕಾರಣವಾಗಿದೆ. ಇನ್ನಾದರೂ ಮಹಿಳೆಯ ಸುರಕ್ಷತೆ, ಸಮಾಜದಲ್ಲಿನ ಆಕೆಯ ಸ್ಥಾನಮಾನಗಳ ಸುಧಾರಣೆ ಕುರಿತಂತೆ ತೀವ್ರ  ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಭಾರತದ ಪ್ರತಿಷ್ಠೆಗೆ ಮುಕ್ಕಾಗುವುದು ಮಾತ್ರ ನಿಜ. ಹೆಣ್ಣುಮಕ್ಕಳಿಗೆ ಭಾರತ ಸುರಕ್ಷಿತ ನಾಡಲ್ಲ ಎಂಬುದು ಅನೇಕ ಅಂತರರಾಷ್ಟ್ರೀಯ ಸಮೀಕ್ಷೆಗಳಲ್ಲಿ ಈಗಾಗಲೇ ವ್ಯಕ್ತವಾಗಿರುವುದು ನಮ್ಮ ಗಮನದಲ್ಲಿರಬೇಕು.  ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ಬರ್ಬರ ಸಾಮೂಹಿಕ ಅತ್ಯಾಚಾರ ಪ್ರಕರಣ ರಾಷ್ಟ್ರದ ಪ್ರಜ್ಞೆಯನ್ನೇ ಅಲುಗಾಡಿಸಿತ್ತು. ಆಗ ನಡೆದ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಆಕ್ರೋಶಕ್ಕೆ ಕೇಂದ್ರ ಸರ್ಕಾರ ಮಣಿಯಬೇಕಾಯಿತು. ಹೀಗಾಗಿ, ಲೈಂಗಿಕ ಅಪರಾಧಗಳ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಿದ್ದಲ್ಲದೆ, ಕಾನೂನುಗಳ ಪುನರ್ವಿಮರ್ಶೆಗೆ ನ್ಯಾಯಮೂರ್ತಿ ಜೆ.ಎಸ್.ವರ್ಮಾ ಸಮಿತಿಯನ್ನು ನೇಮಕ ಮಾಡಲಾಯಿತು.ನಂತರ, ಈ ಸಮಿತಿಯ ಪ್ರಮುಖ ಶಿಫಾರಸುಗಳನ್ನು ಅಳವಡಿಸಿಕೊಂಡಿರುವ ಅಪರಾಧ ಕಾನೂನು ತಿದ್ದುಪಡಿ ಕಾಯಿದೆ 2013, ಸಂಸತ್ತಿನಲ್ಲಿ ಅನುಮೋದನೆಗೊಂಡು ಇದೇ ತಿಂಗಳಿನಿಂದ ರಾಷ್ಟ್ರದಲ್ಲಿ  ಜಾರಿಯಲ್ಲಿದೆ. ಮಹಿಳೆಯ ದೇಹದೊಳಗೆ ವಸ್ತುಗಳನ್ನು ತೂರಿಸುವುದೂ ಅತ್ಯಾಚಾರ ವಿವರಣೆಯ ಪರಿಧಿಗೆ ಒಳಪಟ್ಟಿರುವುದು ಈ ಕಾನೂನಿನ ಮಹತ್ವದ ಅಂಶ.ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ 2012ರಂತಹ ಕಟ್ಟುನಿಟ್ಟಿನ ಕಾಯಿದೆಗಳೂ ಇವೆ. ಹೀಗಿದ್ದೂ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ವಿಪರ್ಯಾಸ. ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರದಿದ್ದಲ್ಲಿ ಕಾನೂನುಗಳಿದ್ದೂ ಉಪಯೋಗವಿಲ್ಲ ಎಂಬುದು ಈ ಪ್ರಕರಣದಲ್ಲಿ ಪೊಲೀಸರು ವರ್ತಿಸಿದ ರೀತಿಯಲ್ಲೇ ವೇದ್ಯ.ಲೈಂಗಿಕ ಅಪರಾಧಗಳಿಗೆ `ಆಡಳಿತ ವೈಫಲ್ಯ'ವೇ ಮೂಲ ಕಾರಣ ಎಂಬುದನ್ನು ನ್ಯಾಯಮೂರ್ತಿ ವರ್ಮಾ ಸಮಿತಿ ಗುರುತಿಸಿದೆ. ಸರ್ಕಾರ, ಪೊಲೀಸರು ಹಾಗೂ ಸಾರ್ವಜನಿಕ ನಿರ್ಲಕ್ಷ್ಯವನ್ನು ಈ ಸಮಿತಿ ಕಟುವಾಗಿ ಟೀಕಿಸಿದ್ದರೂ ನಾವಿನ್ನೂ  ಎಚ್ಚೆತ್ತುಕೊಂಡಿಲ್ಲದಿರುವುದು ದುರದೃಷ್ಟಕರ. ಇನ್ನಾದರೂ  ಕಾನೂನು ಜಾರಿ ವ್ಯವಸ್ಥೆಗಳು ಚುರುಕಾಗಬೇಕು. ಜೊತೆಗೆ ಹೆಣ್ಣುಮಗುವಿನ ಕುರಿತಾದ ದೃಷ್ಟಿ ಸಮಾಜದಲ್ಲಿ ಬದಲಾಗಬೇಕು.

ಪ್ರತಿಕ್ರಿಯಿಸಿ (+)