ಸಾಕುನಾಯಿಗಳಲ್ಲೂ ಡಯಾಬಿಟೀಸ್!

7

ಸಾಕುನಾಯಿಗಳಲ್ಲೂ ಡಯಾಬಿಟೀಸ್!

Published:
Updated:

ಮಧುಮೇಹ ನಿರ್ನಾಳ ಗ್ರಂಥಿಯ ಸಮಸ್ಯೆ. ಆದ್ದರಿಂದ ಅದು ಮನುಷ್ಯರಂತೆ ನಾಯಿಗಳನ್ನೂ ಬಾಧಿಸುತ್ತದೆ. ಮಧುಮೇಹ ಪೀಡಿತ ನಾಯಿಗಳಿಗೆ ಹೆಚ್ಚಿನ ಶುಶ್ರೂಷೆ ಮತ್ತು ಬೆಂಬಲಬೇಕು. ಇದೊಂದು ಮಾರಣಾಂತಿಕ ಕಾಯಿಲೆಯಾಗಿದ್ದು, ನಾಯಿ ಸಾಕುವ ಪ್ರತಿಯೊಬ್ಬರೂ ಈ ಕುರಿತು ಎಚ್ಚರ ವಹಿಸಿ ಸೂಕ್ತ ಆರೋಗ್ಯ ಕ್ರಮ ಕೈಗೊಳ್ಳುವುದು ಉತ್ತಮ ಎಂದು ಹೇಳುತ್ತಾರೆ ಪಶು ಆರೋಗ್ಯ ತಜ್ಞರು.ಆನುವಂಶೀಯತೆ, ಬೊಜ್ಜು ಮತ್ತು ಕೆಲ ಅತಿಯಾದ ವೈದ್ಯಕೀಯ ಚಿಕಿತ್ಸೆ ನಾಯಿಗಳಲ್ಲಿ ಮಧುಮೇಹ ಹರಡುವಿಕೆಗೆ ಕಾರಣ. ಅದು ಯಾವುದೇ ವಯಸ್ಸಿನ, ತಳಿಯ ಮತ್ತು ಲಿಂಗದ ನಾಯಿಯನ್ನು ಆವರಿಸಬಹುದು. ಮುಂಜಾಗ್ರತೆ ಮತ್ತು ಸಮರ್ಪಕ ಚಿಕಿತ್ಸೆ ಬಹಳ ಮುಖ್ಯ. ಇದರಿಂದ ಕಾಯಿಲೆ ಗುಣಪಡಿಸಲು ಸಾಧ್ಯ.ನಾಯಿಯಲ್ಲಿ ಮಧುಮೇಹ ಪತ್ತೆ ಹಚ್ಚಲು ರಕ್ತ- ಸಕ್ಕರೆ ಪರೀಕ್ಷೆ ಅವಶ್ಯ. ಪಶುವೈದ್ಯರು ಇದನ್ನು ಮಾಡಬಲ್ಲರು. ಹೀಗಾಗಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಒಂದು ಸಲ ನಿಮ್ಮ ನಾಯಿಯ ಮಧುಮೇಹ ಪರೀಕ್ಷಿಸಿದರೆ, ನಂತರದ ನಿರಂತರ ಚಿಕಿತ್ಸಾ ಕ್ರಮಗಳು ಅದನ್ನು ಆರೋಗ್ಯವಾಗಿ ಇಡಬಲ್ಲವು.ಮಧುಮೇಹದಲ್ಲಿ ಡಯಾಬಿಟಿಸ್ ಇನ್ಸಿಪಿಡಸ್ ಮತ್ತು ಡಯಾಬಿಟಿಸ್ ಮೆಲ್ಲಿಟಸ್ ಎಂದು 2 ಬಗೆ. ಸರಿಯಾಗಿ ಆರೈಕೆ ಮಾಡದಿದ್ದರೆ ನಾಯಿಗಳಲ್ಲಿ ಈ ಎರಡೂ ಬಗೆ ಕಾಣಿಸಿಕೊಳ್ಳಬಲ್ಲದು.ವಸೊಪ್ರೆಸಿನ್ ಕೊರತೆಯಿಂದ ಡಯಾಬಿಟಿಸ್ ಇನ್ಸಿಪಿಡಸ್ ಉಂಟಾಗುತ್ತದೆ. ವಸೊಪ್ರೆಸಿನ್, ಆ್ಯಂಟಿ ಡೈಯುಟ್ರಿಕ್ ಹಾರ್ಮೋನ್. ಇದು ಮೂತ್ರಪಿಂಡದಲ್ಲಿ ನೀರಿನ ಹೀರುವಿಕೆಯನ್ನು ನಿಯಂತ್ರಿಸುತ್ತದೆ.ಡಯಾಬಿಟಿಸ್ ಮೆಲ್ಲಿಟಸ್‌ನ್ನು ಸಕ್ಕರೆ ಮಧುಮೇಹ ಅಂತಲೂ ಕರೆಯುತ್ತಾರೆ. ಇದು ಇನ್ಸುಲಿನ್ ಕೊರತೆಯಿಂದ ಉಂಟಾಗುತ್ತದೆ. ಇದರಲ್ಲಿ ನಾಯಿಗಳು ಸಕ್ಕರೆಯನ್ನು ಜೀರ್ಣಿಸಿಕೊಳ್ಳಲಾರವು. ಇದು ಹೆಚ್ಚು ಅಪಾಯಕಾರಿ ಮತ್ತು ಸಾಮಾನ್ಯ ಕಾಯಿಲೆ. ಸರಾಸರಿ 500 ನಾಯಿಗಳಲ್ಲಿ ಒಂದಕ್ಕೆ ಕಾಣಿಸಿಕೊಳ್ಳುತ್ತದೆ.ಡಯಾಬಿಟಿಸ್ ಮೆಲ್ಲಿಟಸ್‌ನಲ್ಲಿ ಟೈಪ್ 1 ಮತ್ತು 2 ಎಂದು ಮತ್ತೆ ಎರಡು ವಿಧ. ಇವು ಮನುಷ್ಯರಲ್ಲಿ ಬೀರುವ ಪರಿಣಾಮದಷ್ಟೇ ಸಾಮ್ಯತೆ ಹೊಂದಿವೆ.ಟೈಪ್ 1: ಇನ್ಸುಲಿನ್ ಆಧಾರಿತ ಮಧುಮೇಹ. ನಾಯಿಗಳಿಗೆ ಬಾಲ್ಯಾವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಚಿಕ್ಕ ವಯಸ್ಸಿನ ನಾಯಿಯ ಮಧುಮೇಹ ಎಂದು ಕರೆಯಲಾಗುತ್ತದೆ.ಟೈಪ್ 2: ಇದು ಇನ್ಸುಲಿನ್ ಆಧಾರಿತ ಅಲ್ಲದ ಮಧುಮೇಹ. ಸಾಮಾನ್ಯವಾಗಿ ವಯಸ್ಸಾದ ನಾಯಿಗಳ ಮಧ್ಯಾವಧಿ ಆಯುಷ್ಯದಲ್ಲಿ ಕಾಣಿಸಿಕೊಳ್ಳುತ್ತದೆ. ಬೆಕ್ಕುಗಳಲ್ಲೂ ಸಾಮಾನ್ಯ. ನಾಯಿಗಳಲ್ಲಿ ಮಧುಮೇಹ ಆನುವಂಶೀಯ. ಚಿಕ್ಕ ವಯಸ್ಸಿನ ನಾಯಿಗಳಿಗಿಂತ ವಯಸ್ಸಾದ, ದೊಡ್ಡ ನಾಯಿಗಳಲ್ಲಿ ಹೆಚ್ಚು. ಹೆಣ್ಣು ನಾಯಿಗಳಲ್ಲೂ ಅಧಿಕ. ದೇಹದಲ್ಲಿ ಉತ್ಪತ್ತಿಯಾಗುವ ಗ್ಲೂಕೋಸ್‌ಗಳನ್ನು ಅರಗಿಸಿಕೊಳ್ಳಲು ಅಗತ್ಯವಿರುವ ಇನ್ಸುಲಿನ್ ಕೊರತೆಯಾದಾಗ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಲಕ್ಷಣರಕ್ತದಲ್ಲಿ ಹೆಚ್ಚುವ ಸಕ್ಕರೆ ಪ್ರಮಾಣ ಈ ಕಾಯಿಲೆಯ ಪ್ರಮುಖ ಲಕ್ಷಣ. ಪ್ರಾಣಿಗಳ ದೇಹ ಇದನ್ನು ಎದುರಿಸುವ ಶಕ್ತಿ ಹೊಂದಿಲ್ಲ. ಹೀಗಾಗಿ ಇದರಿಂದ ಮೂತ್ರದಲ್ಲಿ ಸಕ್ಕರೆ ಅಂಶ ಏರುತ್ತದೆ. ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಇದನ್ನು ನಿವಾರಿಸಿಕೊಳ್ಳಲು ನಾಯಿಗೆ ಹೆಚ್ಚು ನೀರು ಕುಡಿಸಬೇಕು. ತೂಕ ಕಳೆದುಕೊಳ್ಳುವಿಕೆ ಮೆಲ್ಲಿಟಸ್‌ನಿಂದ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ.ಇದಲ್ಲದೆ ನಾಯಿಗಳಿಗೆ ಅಶಕ್ತ ಚರ್ಮ, ಕೂದಲು ಉದುರುವಿಕೆ, ಪಿತ್ತನಾಳ, ವಾಂತಿ, ಕಾಲುಗಳಲ್ಲಿ ನಿಶಕ್ತಿ, ಬ್ಯಾಕ್ಟಿರೀಯಾ ಸೋಂಕು, ಡಿಹೈಡ್ರೇಷನ್ ಮೊದಲಾದ ಸಮಸ್ಯೆಗಳೂ ಕಾಡುತ್ತವೆ. ಕುರುಡತನ, ಮೂತ್ರಪಿಂಡ ಸಮಸ್ಯೆ ಕಾಣಿಸಿಕೊಂಡ ನಂತರ ನಾಯಿಯ ಮಧುಮೇಹ ನಿಯಂತ್ರಣ ಅಸಾಧ್ಯ.ನಿರಂತರ ರಕ್ತ ಪರೀಕ್ಷೆ ಮತ್ತು ಮೂತ್ರ ಪರೀಕ್ಷೆಯ ಮೂಲಕ ಮಧುಮೇಹಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಪಶುವೈದ್ಯರು ಇದನ್ನು ಪರೀಕ್ಷಿಸುತ್ತಾರೆ. ನಾಯಿಗಳ ರಕ್ತದಲ್ಲಿ 70-150 ಎಂಜಿ/ ಡಿಎಲ್ ಸಕ್ಕರೆ ಪ್ರಮಾಣ ಸಾಮಾನ್ಯ. ಮಧುಮೇಹಿ ನಾಯಿಯಲ್ಲಿ ಇದು 200ಎಂಜಿ/ ಡಿಎಲ್‌ವರೆಗೆ ಇರುತ್ತದೆ. ಗ್ಲೂಕೋಸ್‌ಗಾಗಿ ಮೂತ್ರ ಪರೀಕ್ಷೆ ನಡೆಸುತ್ತಾರೆ. ಚಿಕಿತ್ಸೆಗೆ ಈ ಪರೀಕ್ಷೆಗಳು ಅತ್ಯವಶ್ಯ.ಚಿಕಿತ್ಸೆ ಆರಂಭಿಸಿದ ನಂತರ ಮಾಲೀಕರಲ್ಲಿ ಗಂಭೀರ ಬದ್ಧತೆ ಅವಶ್ಯ. ಮನುಷ್ಯರಿಗೆ ನೀಡುವ ಚಿಕಿತ್ಸೆಯಂತೆ ನಾಯಿಗೂ ನೀಡಲಾಗುತ್ತದೆ. ಆಹಾರ ಪದ್ಧತಿ ಬದಲಾವಣೆ, ಇನ್ಸುಲಿನ್ ಥೆರಪಿಗಳಿರುತ್ತವೆ.ಆಹಾರ ಪದ್ಧತಿ ಬದಲಾವಣೆ ಗ್ಲೂಕೋಸ್ ಪ್ರಮಾಣ ತಗ್ಗಿಸಲು ಸಹಕಾರಿ. ಇಂಜಕ್ಷನ್ ನೀಡುವ ಮೂಲಕ ಇನ್ಸುಲಿನ್ ಥೆರಪಿ ನೀಡಲಾಗುತ್ತದೆ. ಒಂದು ಸಲ ಚಿಕಿತ್ಸೆ ಆರಂಭಿಸಿದ ನಂತರ ವಿಶೇಷ ಸೂಚನೆಗಳೊಂದಿಗೆ ಮನೆಗೆ ಕಳುಹಿಸಿಕೊಡಲಾಗುತ್ತದೆ. ಆಹಾರ ಪದ್ಧತಿ ಬದಲಾವಣೆ ಬೊಜ್ಜು ಇಳಿಸಲು ಸಹಕಾರಿ. ಅದೇ ರೀತಿ ವೈದ್ಯರು ನಿರಂತರ ತಪಾಸಣೆ ಸೂಚಿಸಬಹುದು.ನಗರದಲ್ಲಿ ಅಧಿಕ

ನಗರ ಪ್ರದೇಶದ ನಾಯಿಗಳಲ್ಲಿ ಮಧುಮೇಹದ ಸಂಭವ ಜಾಸ್ತಿ. ಏಕೆಂದರೆ ಮೂರು ಹೊತ್ತೂ ಮನೆಯಲ್ಲೇ ಕಟ್ಟಿ ಹಾಕುವುದರಿಂದ ಓಡಾಟ ಕಡಿಮೆಯಾಗುತ್ತದೆ. ಬಹುಮಹಡಿ ಕಟ್ಟಡಗಳ ಮೇಲಿನ ಅಂತಸ್ತಿನಲ್ಲಿ ಇರುವವರು ನಾಯಿಗಳನ್ನು ಕೆಳಗೆ ತಂದು ಸುತ್ತಾಡಿಸುವುದೂ ಕಮ್ಮಿ. ಹೀಗಾಗಿ ಅವಕ್ಕೆ ಶಾರೀರಿಕ ಶ್ರಮ ಕಡಿಮೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry