ಸಾಕು ತಂದೆಯ ವಿರುದ್ಧ ಅತ್ಯಾಚಾರ ದೂರು: ತನಿಖೆಗೆ ಹೈಕೋರ್ಟ್ ಆದೇಶ
ಬೆಂಗಳೂರು: ಆರು ವರ್ಷದ ಬಾಲಕಿಯೊಬ್ಬಳನ್ನು ಸಾಕುವುದಾಗಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಆರೋಪ ಹೊತ್ತ `ಸಾಕು ತಂದೆ~ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ಮಂಗಳವಾರ ಪೊಲೀಸರಿಗೆ ನಿರ್ದೇಶಿಸಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಬಾಲಕಿಗೆ ಶಿಕ್ಷಣ ಕೊಡಿಸುವುದಾಗಿ ನಂಬಿಸಿ ಆಕೆಯನ್ನು ಬೆಂಗಳೂರಿನ ಉತ್ತರಹಳ್ಳಿ ನಿವಾಸಿಗಳಾದ ಬಿ.ವಿ.ಸತ್ಯವತಿ ಹಾಗೂ ಅವರ ಪುತ್ರ ಬಿ.ಆರ್.ವಿಜಯಕುಮಾರ್ 2003ರಲ್ಲಿ ಕರೆದುಕೊಂಡು ಹೋಗಿದ್ದರು. ಆದರೆ ಮನೆ ಕೆಲಸಕ್ಕೆ ಆಕೆಯನ್ನು ಬಳಸಿಕೊಂಡಿರುವುದು ಮಾತ್ರವಲ್ಲದೇ ಸತ್ಯವತಿಯ ಎರಡನೆಯ ಪತಿ ರಾಮಚಂದ್ರ ಬಾಲಕಿ ಮೇಲೆ ಸತತ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ.
ತಮ್ಮ ಮಗಳನ್ನು ವಾಪಸು ಕಳುಹಿಸಿಕೊಡುವಂತೆ ಈ ದಂಪತಿಯನ್ನು ಕೋರಿಕೊಂಡರೂ ಅದಕ್ಕೆ ಅವರು ಒಪ್ಪಲಿಲ್ಲ ಎನ್ನುವುದು ಬಾಲಕಿಯ ಪೋಷಕರ ಆರೋಪ. `ಈ ಹಿಂದೆ ಕಷ್ಟಪಟ್ಟು ಮಗಳನ್ನು ನಾವು ಕರೆದು ತಂದಿದ್ದೆವು. ಆದರೆ, ನಾವು ಮನೆಯಲ್ಲಿ ಇಲ್ಲದ ಸಮಯದಲ್ಲಿ ಆಕೆಯನ್ನು ಅಪಹರಿಸಿಕೊಂಡು ಹೋಗಲಾಗಿದೆ.
ಪೊಲೀಸರಲ್ಲಿ ದೂರು ದಾಖಲು ಮಾಡಿದರೂ ಪ್ರಯೋಜನ ಆಗಲಿಲ್ಲ~ ಎಂದಿರುವ ಪೋಷಕರು, ಬಾಲಕಿಯನ್ನು (ಈಗ 16 ವರ್ಷ) ಹಾಜರುಪಡಿಸಲು ಆದೇಶಿಸುವಂತೆ ಕೋರಿ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಸಾಕು ತಂದೆ ಎಂದು ಹೇಳಿಕೊಳ್ಳುತ್ತಿದ್ದ ರಾಮಚಂದ್ರ ಅವರು, ಪತ್ನಿ ಸತ್ಯವತಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದರು ಎಂಬ ಮಾಹಿತಿಯನ್ನು ಬಾಲಕಿ ಬಹಿರಂಗಗೊಳಿಸಿದ್ದಾಳೆ.
ಈ ಹಿನ್ನೆಲೆಯಲ್ಲಿ, ತನಿಖೆ ನಡೆಸುವಂತೆ ನ್ಯಾಯಮೂರ್ತಿ ದಿಲೀಪ್ ರಾವ್ ಬೋಸ್ಲೆ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ. ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡಲಾಗಿದೆ.
ನಿತ್ಯಾನಂದ ಪ್ರಕರಣ: ತಮ್ಮ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್ಐಆರ್) ರದ್ದತಿಗೆ ಕೋರಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ. ಕಳೆದ ತಿಂಗಳು ವರದಿಗಾರರ ಮೇಲೆ ಹಲ್ಲೆ ನಡೆಸಿರುವ ಆರೋಪ ಇವರು ಎದುರಿಸುತ್ತಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.