ಮಂಗಳವಾರ, ನವೆಂಬರ್ 12, 2019
28 °C

ಸಾಕು ನಾಯಿಯ ಹೊಟ್ಟೆಯನ್ನೇ ಬಗೆದ!

Published:
Updated:

ಲಾಸ್ ಏಂಜಲೀಸ್ (ಪಿಟಿಐ): ಬಾಲಕನ ಕಿರು ಬೆರಳನ್ನು ತುಂಡರಿಸಿ, ಅದನ್ನು ನುಂಗಿದ ಸಾಕು ನಾಯಿಯನ್ನು ಗುಂಡಿಟ್ಟು ಕೊಂದು ಬಳಿಕ ಅದರ ಹೊಟ್ಟೆ ಬಗೆದು ಬೆರಳನ್ನು ಹೊರತೆಗೆದ ವಿಲಕ್ಷಣ ಘಟನೆ ಅಮೆರಿಕದಲ್ಲಿ ನಡೆದಿದೆ.ಫ್ಲಾರಿಡಾ ಬ್ರ್ಯಾಡೆನ್‌ಟನ್ ನಿವಾಸಿ 41 ವರ್ಷದ ಲೂಯಿಸ್ ಬ್ರಿಗ್‌ನೋನಿ ಈ ಘೋರ ಕೃತ್ಯ ಎಸಗಿದವರು. `ಘಟನೆಯ ಸುದ್ದಿ ತಿಳಿಯುತ್ತಲೇ ಮನೆಯ ಹಿತ್ತಲಿಗೆ ಧಾವಿಸಿ ಶ್ವಾನವನ್ನು ಸಾಯಿಸಿದೆ. ನಂತರ ಅದರ ಹೊಟ್ಟೆ ಬಗೆದು ಬೆರಳನ್ನು ತೆಗೆದೆ. ಗಾಯಗೊಂಡಿದ್ದ ನನ್ನ 11 ವರ್ಷದ ಮಗ ಫರ್ನಾಂಡೋನನ್ನು ಕೂಡಲೇ ಹೆಲಿಕಾಪ್ಟರ್‌ನಲ್ಲಿ ಸೇಂಟ್ ಪೀಟರ್ಸ್‌ಬರ್ಗ್ ಆಸ್ಪತ್ರೆಗೆ ಕೊಂಡೊಯ್ದೆ. ಬಳಿಕ ಆತನನ್ನು ತಂಪಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಬೆರಳನ್ನು ಮರುಜೋಡಿಸಲು ನಡೆಸಿದ ಶಸ್ತ್ರಚಿಕಿತ್ಸೆ ಫಲಪ್ರದವಾಗಿಲ್ಲ. ಆದರೆ, ನನ್ನ ಪುತ್ರ ಚೇತರಿಸಿಕೊಳ್ಳುತ್ತಿದ್ದಾನೆ' ಎಂದು ಬ್ರಿಗ್‌ನೋನಿ ತಿಳಿಸಿದ್ದಾರೆ.`ನರಿ ಜಾತಿಗೆ ಸೇರಿದ `ಸಸ್ಸಿ' ಹೆಸರಿನ ಗೂಡಿನಲ್ಲಿದ್ದ  ಸಾಕು ನಾಯಿಗೆ ನನ್ನ ಮಗ ಮುದ್ದಿಸಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ' ಎಂದು ಹಲವು ವರ್ಷಗಳಿಂದ `ಶಿಕಾರಿ' ಮಾಡುತ್ತಿರುವ ಬ್ರಿಗ್‌ನೋನಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)