ಭಾನುವಾರ, ಜೂನ್ 13, 2021
21 °C

ಸಾಕ್ಷರತೆ, ಸಬಲೀಕರಣಕ್ಕೊಂದು ನಾಟಕ

ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ರಂಗದ ಮೇಲೆ ವೈಭವವಾಗಿ ಮೆರೆಯುವ ಕಲಾವಿದೆಯರು ವಯಸ್ಸಾದ ಮೇಲೆ ಮನೆಯಲ್ಲಿ ಮೂಲೆ ಹಿಡಿದು ಕೂಡುತ್ತಾರೆ. ಆದರೆ ಹಾಗೆ ಸುಮ್ಮನೆ ಕೂಡದ ಕಲಾವಿದೆಯರೂ ಇದ್ದಾರೆ. ಇಂಥವರಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದ ಕಲಾವಿದೆ ಕೆ. ನಾಗರತ್ನಮ್ಮ ಒಬ್ಬರು. ಮಹಿಳಾ ವೃತ್ತಿರಂಗ ಕಲಾವಿದರ ಸಂಘವನ್ನು ಕಟ್ಟಿಕೊಂಡ ಅವರು ಅಸಂಖ್ಯ ನಾಟಕಗಳನ್ನು ಪ್ರದರ್ಶಿಸಿದ್ದಾರೆ.ಜೊತೆಗೆ ಬೀದಿನಾಟಕಗಳನ್ನು ಪ್ರದರ್ಶಿಸುವುದರಲ್ಲಿ ಅವರಿಗೆ ಹಿಂಜರಿಕೆ ಇಲ್ಲ. ಅವರ ನೇತೃತ್ವದಲ್ಲಿ ಸಾಕ್ಷರತೆ ಹಾಗೂ ಮಹಿಳಾ ಸಬಲೀಕರಣ ಕುರಿತ `ಆಕಾಶಬುಟ್ಟಿ~ ಎಂಬ ಬೀದಿನಾಟಕ ಧಾರವಾಡ ಜಿಲ್ಲೆಯಲ್ಲಿ ಪ್ರದರ್ಶನ ಗೊಳ್ಳುತ್ತಿದೆ. ಬುಡಕಟ್ಟು ಕಲಾವಿದರ ಸಾಂಸ್ಕೃತಿಕ ಕಾರ್ಯಕ್ರಮಗಳ ಸಪ್ತಾ ಹದ ಅಂಗವಾಗಿ ಈಗಾಗಲೇ ಧಾರ ವಾಡ ತಾಲ್ಲೂಕಿನ ಅಮ್ಮಿನಭಾವಿ, ಯಾದವಾಡದಲ್ಲಿ ಮತ್ತು ನವಲಗುಂದ ತಾಲ್ಲೂಕಿನ ಮೊರಬದಲ್ಲಿ ಬೀದಿನಾಟಕ ಪ್ರದರ್ಶನಗೊಂಡಿದೆ.`18ರಂದು ಕಲಘಟಗಿ ತಾಲ್ಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ, 20ರಂದು ಕುಂದಗೋಳ ತಾಲ್ಲೂಕಿನ ಹರ್ಲಾಪುರ ಗ್ರಾಮದಲ್ಲಿ ಹಾಗೂ 21ರಂದು ಹುಬ್ಬಳ್ಳಿಯ ಇಂದಿರಾ ಗಾಜಿಮನೆಯಲ್ಲಿ ಸಂಜೆ ಬೀದಿನಾಟಕವನ್ನು ಪ್ರಸ್ತುತಪಡಿಸಲಾಗುತ್ತಿದೆ. ಗ್ರಾಮಗಳಲ್ಲಿ ಗಂಡುಮಕ್ಕಳಿಗೆ ಪ್ರಾಧಾನ್ಯತೆ ಕೊಟ್ಟು ಅವರನ್ನು ಮಾತ್ರ ಶಾಲೆಗೆ ಕಳಿಸುತ್ತಾರೆ. ಆದರೆ ಹೆಣ್ಣುಮಕ್ಕಳನ್ನು ಮನೆಗೆಲಸಗಳಿಗಾಗಿ ಶಾಲೆ ಬಿಡಿ ಸುತ್ತಾರೆ. ಹೆಣ್ಣುಮಕ್ಕಳು ಕಲಿತರೆ ಕುಟುಂಬವೊಂದು ಜಾಗೃತಗೊಂಡಂತೆ. ಇದನ್ನು ಮನಗಾಣಿಸಲು ಬೀದಿನಾಟಕ ಆಡುತ್ತಿದ್ದೇವೆ~ ಎಂದು ಕೆ. ನಾಗರತ್ನಮ್ಮ `ಪ್ರಜಾವಾಣಿ~ಗೆ ತಿಳಿಸಿದರು.ನಾಟಕದ ಅಜ್ಜಿ ಪಾತ್ರದಲ್ಲಿ ಕೆ. ನಾಗರತ್ನಮ್ಮ, ತಂದೆಯಾಗಿ ಮಲ್ಲಪ್ಪ, ತಾಯಿಯಾಗಿ ಸರ್ವಮಂಗಳಾ, ಮಕ್ಕಳಾಗಿ ಎ. ರೇಣುಕಾ, ಮಂಜುಳಾ, ಮಂಜುನಾಥ, ಗಂಗಮ್ಮ, ವೀರೇಶ, ಲವಲವಿಕೆಯಿಂದ ಅಭಿನಯಿಸುತ್ತಾರೆ. ಹಾರ್ಮೋನಿಯಂ ವಾದಕರಾಗಿ ಹಾಗೂ ಹಾಡುಗಾರರಾಗಿ ನರಸಪ್ಪ ಗಮನ ಸೆಳೆಯುತ್ತಾರೆ. `ಪುರುಷ ಪಾತ್ರ ಸೇರಿದಂತೆ ಎಲ್ಲ ಪಾತ್ರಗಳನ್ನು ನಮ್ಮ ತಂಡದ ಕಲಾವಿದೆಯರೇ ಅಭಿನಯಿಸುತ್ತಾರೆ. ಆದರೆ ಬೀದಿನಾಟಕಗಳನ್ನು ಮಾತ್ರ ಕೆಲ ಪುರುಷರೊಂದಿಗೆ ಪ್ರಯೋಗಿಸುತ್ತಿದ್ದೇವೆ.ಈಗಾಗಲೇ ಶಕುಂತಲಾ, ಪ್ರಮೀಳಾರಾಜ್ಯ, ಹೇಮರಡ್ಡಿ ಮಲ್ಲಮ್ಮ, ರಕ್ತರಾತ್ರಿ, ಹಸಿರು ಬಳೆ, ಮಂಗಳಾ ನನ್ನ ಅತ್ತಿಗೆ ಮೊದಲಾದವುಗಳನ್ನು ಅಭಿನಯಿ ಸುತ್ತಿದ್ದೇವೆ~ ಎಂದು ಅವರು ಹೆಮ್ಮೆಯಿಂದ ಹೇಳಿದರು.

ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡ ಅವರು, ಉಡುಪಿ ರಂಗಭೂಮಿ ಸಂಸ್ಥೆ ಏರ್ಪಡಿಸಿದ್ದ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ  4 ಬಾರಿ ಹಾಗೂ 35ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದಿದ್ದಾರೆ.ಶೀಲಾವತಿ ನಾಟಕದ ಮೂಲಕ ಪ್ರಸಿದ್ಧರಾದ ಅವರು ಮರಿಯಮ್ಮನಹಳ್ಳಿಯ ಲಲಿತ ಕಲಾರಂಗದ ಸ್ಥಾಪಕ ಸದಸ್ಯರಾಗಿ, ಒಂದು ಬಾರಿ ಅದರ ಅಧ್ಯಕ್ಷರಾಗಿ ದುಡಿದಿದ್ದಾರೆ. ಈ ಹಿಂದೆ ಅಸ್ತಿತ್ವದಲ್ಲಿದ್ದ ಕಲಾವಿದೆಯರ ನಾಟಕ ತಂಡವನ್ನು ಮತ್ತೆ ಕಟ್ಟಿದ ಅವರು, ಅನೇಕ ಕಲಾವಿದೆಯರಿಗೆ ನಾಟಕಗಳ ಮೂಲಕ ಅವಕಾಶಗಳನ್ನು ನೀಡಿದ್ದಾರೆ. ಬಳ್ಳಾರಿಯ ಸುಭದ್ರಮ್ಮ ಮನ್ಸೂರ ಅವರೊಂದಿಗೆ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುವ ಕೆಲವೇ ಕಲಾವಿದೆ ಯರಲ್ಲಿ ಇವರೂ ಒಬ್ಬರು.ಕಲಾವಿದೆಯಾಗಿ ಪ್ರಸಿದ್ಧರಾದ ಅವರು, ಮರಿಯಮ್ಮನಹಳ್ಳಿಯ ಗ್ರಾ. ಪಂ. ಸದಸ್ಯೆಯಾಗಿ, ಹೊಸಪೇಟೆ ತಾ. ಪಂ.ಸದಸ್ಯೆಯಾಗಿ ನಂತರ ಉಪಾ ಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೂ ಅವರ ಆದ್ಯತೆ ಮತ್ತು ಬದ್ಧತೆ ರಂಗ ಭೂಮಿಗಾಗಿ. ಕಾಲುನೋವಿನಿಂದ ನರಳುತ್ತಿದ್ದರೂ ನಾಟಕಗಳಿಗಾಗಿ ಅವರು ಊರೂರು ಸುತ್ತುತ್ತಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.