ಮಂಗಳವಾರ, ಮೇ 18, 2021
24 °C

ಸಾಕ್ಷಿಗೆ ಒತ್ತಡ: ಎಂಜಿನಿಯರ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಾಕ್ಷಿಯ ಮೇಲೆ ಒತ್ತಡ ಹೇರಿದ ಆರೋಪದ ಮೇಲೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ರಾಮಲಿಂಗಯ್ಯ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ರಾಮಲಿಂಗಯ್ಯ ಸೇರಿದಂತೆ ಐವರು ಅಧಿಕಾರಿಗಳ ಮೇಲೆ 2011ರ ಸೆಪ್ಟೆಂಬರ್ 30ರಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಆಗ, 50 ಲಕ್ಷ ರೂಪಾಯಿ ಹೂಡಿಕೆಗೆ ಸಂಬಂಧಿಸಿದ ಕೆಲ ರಶೀದಿಗಳು ತನಿಖಾ ತಂಡಕ್ಕೆ ದೊರೆತಿದ್ದವು. ಬೆಂಗಳೂರಿನ ಉದಯ ಡೆವಲಪರ್ಸ್‌ನಲ್ಲಿ ರಾಮಲಿಂಗಯ್ಯ ಹೂಡಿಕೆ ಮಾಡಿರುವ ಸುಳಿವು ರಶೀದಿಗಳಲ್ಲಿತ್ತು.ಈ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ಉದಯ ಡೆವಲಪರ್ಸ್, ಬಿಬಿಎಂಪಿಯ ನಿವೃತ್ತ ಅಧಿಕಾರಿ ಪುಟ್ಟನರಸಯ್ಯ ಒಡೆತನದ ಸಂಸ್ಥೆ ಎಂಬುದು ಗೊತ್ತಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಲು ಲೋಕಾಯುಕ್ತ ಪೊಲೀಸರು ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ, ಪುಟ್ಟನರಸಯ್ಯ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದರು.ಕೆಲ ದಿನಗಳ ಹಿಂದೆ ಪುಟ್ಟನರಸಯ್ಯ ಅವರನ್ನು ಕರೆತಂದು ವಿಚಾರಣೆ ನಡೆಸಿದಾಗ, `ತನಿಖಾ ತಂಡದ ಎದುರು ಹಾಜರಾಗದಂತೆ ರಾಮಲಿಂಗಯ್ಯ ಒತ್ತಡ ಹೇರುತ್ತಿದ್ದರು. ಬೆದರಿಕೆಯನ್ನೂ ಒಡ್ಡಿದ್ದರು~ ಎಂಬ ಹೇಳಿಕೆ ನೀಡಿದ್ದಾರೆ.`ರಾಮಲಿಂಗಯ್ಯ ನಮ್ಮ ಸಂಸ್ಥೆಯಲ್ಲಿ 50 ಲಕ್ಷ ರೂಪಾಯಿ ಹೂಡಿಕೆ ಮಾಡಿರುವುದು ನಿಜ. ಅವರ ಪತ್ನಿ ಶಕುಂತಳಾ ನನಗೆ ಹಣ ನೀಡಿದ್ದರು~ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.`ಶುಕ್ರವಾರ ಸಂಜೆ ರಾಮಲಿಂಗಯ್ಯ ಅವರನ್ನು ಕರೆತಂದು, ಕೆಲಕಾಲ ವಿಚಾರಣೆ ನಡೆಸಿ ರಾತ್ರಿ ಬಂಧಿಸಲಾಯಿತು. ಸಾಕ್ಷ್ಯನಾಶಕ್ಕೆ ಪ್ರಯತ್ನ, ಸಾಕ್ಷಿಗಳಿಗೆ ಒತ್ತಡ ಹೇರುವುದು ಮತ್ತು ಬೆದರಿಕೆ ಹಾಕಿರುವ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.ಶನಿವಾರ ಮಧ್ಯಾಹ್ನ ಆರೋಪಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ರಾಮಲಿಂಗಯ್ಯನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಆದೇಶ ಹೊರಡಿಸಿದರು~ ಎಂದು ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಪಿ.ಕೆ.ಶಿವಶಂಕರ್  `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.