ಸಾಕ್ಷಿ ಬೆನ್ನುಡಿ

7

ಸಾಕ್ಷಿ ಬೆನ್ನುಡಿ

Published:
Updated:

ಬೆನ್ನು ತೋರುವ ಬಟ್ಟೆ ತೊಟ್ಟು ಅಡ್ಡಾಡುವ ಬೆಡಗಿಯರ ಸೊಬಗು ನೋಡಲು ನೂರು ಕಣ್ಣು ಸಾಲದು. ಬಂಗಾರದಂಥ ಬೆನ್ನು ಹೆಣ್ಣಿನ ಸೌಂದರ್ಯಕ್ಕೆ ಮಾದಕ ಸ್ಪರ್ಶ ನೀಡುತ್ತದೆ. ನೋಡುಗರ ಚಿತ್ತ ಕದಿವ ಬ್ಯಾಕ್‌ಲೆಸ್‌ ಉಡುಪುಗಳು ಇಂದಿನ ಟ್ರೆಂಡ್‌.

ಸೆಲೆಬ್ರಿಟಿಗಳು ಮತ್ತು ಫ್ಯಾಷನ್‌ಪ್ರಿಯರು ಬೆನ್ನು ತೋರುವ ಬಟ್ಟೆ ತೊಟ್ಟು ಸೌಂದರ್ಯ ಸಮರ ಸಾರುತ್ತಿದ್ದಾರೆ.ಆದರೆ, ಎಲ್ಲರಿಗೂ ಬಂಗಾರದಂಥ ಬೆನ್ನು ಇರುವುದಿಲ್ಲ. ಬ್ಯಾಕ್‌ಲೆಸ್‌ ಉಡುಪು ತೊಟ್ಟು ಬೀಗಬೇಕು ಎಂದುಕೊಂಡವರಿಗೆ ಬೆನ್ನಿನ ಮೇಲಿನ ಕಲೆ, ಕೂದಲು ಇದ್ದರೆ ನಿರಾಸೆಯಾಗುತ್ತದೆ.ಬೆಂಗಳೂರಿನ ಟಾಪ್‌ ಮಾಡೆಲ್‌ ಸಾಕ್ಷಿ ಅಗರ್‌ವಾಲ್‌ ಬ್ಯಾಕ್‌ಲೆಸ್‌ ಉಡುಪುಗಳ ಮೋಹಿ. ಅವರ ಈ ಮೋಹಕ್ಕೆ ನೀರೆರೆದಿರುವುದು ಚಿನ್ನದ ಮೈಬಣ್ಣ ಹಾಗೂ ಕಡೆದಿಟ್ಟಂತಿರುವ ಬೆನ್ನು. ಸಾಕ್ಷಿ ತಮ್ಮ ಚೆಂದದ ಬೆನ್ನಿನ ಗುಟ್ಟು ಹಾಗೂ ಬ್ಯಾಕ್‌ಲೆಸ್‌ ಉಡುಪುಗಳ ಮೋಹವನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡಿದ್ದಾರೆ.‘ಬೆನ್ನು ತೋರುವ ಉಡುಪುಗಳೆಂದರೆ ನನಗೆ ಪಂಚಪ್ರಾಣ. ಹೆಣ್ಣಿನ ನೀಳ ಬೆನ್ನನ್ನು ಆಕರ್ಷಕವಾಗಿ ಬಿಂಬಿಸುವ ಗೌನ್‌, ಟಾಪ್‌, ಡ್ರೆಸ್‌ಗಳಾಗಿರಬಹುದು ಅಥವಾ ರವಿಕೆ ಆಗಿರಬಹುದು. ಇವೆಲ್ಲ ಬೆನ್ನಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ’ ಎನ್ನುತ್ತಾರೆ ಸಾಕ್ಷಿ.‘ಹೆಣ್ಣು ಮಕ್ಕಳ ಬೆನ್ನಿನ ಸೊಬಗು ಸೌಂದರ್ಯಕ್ಕೆ ಮಾದಕತೆಯ ರುಜು ಹಾಕುತ್ತದೆ. ಬ್ಯಾಕ್‌ಲೆಸ್‌ ಉಡುಪು ತುಂಬ ಕಂಫರ್ಟ್‌ ಅನಿಸುತ್ತದೆ. ಆತ್ಮವಿಶ್ವಾಸವನ್ನೂ ಇಮ್ಮಡಿಯಾಗುವಂತೆ ಮಾಡುತ್ತದೆ. ಹೆಣ್ಣನ್ನು ಅತ್ಯಂತ ಸುಂದರವಾಗಿ, ಸೆಕ್ಸಿಯಾಗಿ ಬಿಂಬಿಸುವುದರಿಂದಲೇ ಇವು ಇಷ್ಟ’ ಎನ್ನುವುದು ಅವರ ಸಮಜಾಯಿಷಿ.ಈ ಜಮಾನದ ಮಹಿಳೆ ಫ್ಯಾಷನ್‌ ಜಗತ್ತನ್ನು ಬೆರಗುಗಣ್ಣಿನಿಂದ ಗಮನಿಸುತ್ತಲೇ ಅನುಸರಿಸುವ ಪ್ರವೃತ್ತಿ ಬೆಳೆಸಿಕೊಂಡಿರುತ್ತಾಳೆ. ಇದೀಗ ತಮ್ಮ ಅಂದದ ಬೆನ್ನನ್ನು ಜಾಹೀರು ಮಾಡುವ ಬ್ಯಾಕ್‌ಲೆಸ್‌ ಉಡುಪು ತೊಡಲು ತುಂಬಾ ಇಷ್ಟಪಡುತ್ತಾರೆ. ಇದೇ ಇವತ್ತಿನ ಟ್ರೆಂಡ್‌.‘ತೆರೆದ ಬೆನ್ನಿನ ವಸ್ತ್ರಗಳಿಗೆ ಮೈಯೊಡ್ಡುವ ಮುನ್ನ ಬೆನ್ನಿನ ಬಗ್ಗೆ ಕಾಳಜಿ ವಹಿಸಬೇಕು. ಆಕರ್ಷಕವಾದ ಬೆನ್ನು ನಮ್ಮದಾದ ನಂತರವೇ ಬ್ಯಾಕ್‌ಲೆಸ್‌ ಉಡುಪು ಧರಿಸಬೇಕು. ನಮ್ಮ ದೇಹದ ಆಕಾರ ಮತ್ತು ಉಬ್ಬುತಗ್ಗುಗಳು ಗಮನದಲ್ಲಿರಬೇಕು’ ಎನ್ನುತ್ತಾರೆ ಸಾಕ್ಷಿ.‘ಮಿರಮಿರ ಮಿಂಚುವ ಬೆನ್ನು ತೋರುವ ಉಡುಪು ಹೈ ಪ್ರೊಫೈಲ್‌ ಪಾರ್ಟಿ ಹಾಗೂ ಚಲನಚಿತ್ರೋತ್ಸವಗಳಿಗೆ ಹೇಳಿ ಮಾಡಿಸಿದಂಥವು. ಸ್ನೇಹಿತರೊಂದಿಗೆ ಕೈಗೊಳ್ಳುವ ಕಿರುಪ್ರವಾಸಗಳಲ್ಲಿ ಶಾರ್ಟ್ಸ್ ಜತೆಗೆ ಇವು ನಮ್ಮನ್ನು ಚೆಂದವಾಗಿಸುತ್ತವೆ’ ಎಂದು ಮಾತು ಸೇರಿಸುತ್ತಾರೆ ಸಾಕ್ಷಿ.ಚೆಂದದ ಬೆನ್ನು ಪಡೆಯಲು ಏನೇನು ಮಾಡುತ್ತೀರ ಎಂಬ ಪ್ರಶ್ನೆಗೆ ಸಾಕ್ಷಿಯ ಉತ್ತರಗಳಿವು: ‘ಕಠಿಣವಾಗಿ ದೇಹ ದಂಡಿಸುತ್ತೇನೆ. ಪ್ರತಿದಿನ ಡಂಬಲ್ಸ್‌ ಮಾಡುತ್ತೇನೆ. ದೇಹದ ಮೇಲ್ಭಾಗವನ್ನು ಸುಂದರವಾಗಿಸುವ ರೋಯಿಂಗ್‌ ವ್ಯಾಯಾಮಕ್ಕೂ ಪ್ರಾಮುಖ್ಯ ನೀಡುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಬೆನ್ನಿಗೆ ಮಾದಕ ಸ್ಪರ್ಶ ನೀಡುವ ‘ವೈ–ಟಿ–ಐ’ (ಯಾವುದೇ ಉಪಕರಣವನ್ನು ಬಳಸದೇ ದೇಹವನ್ನು ಇಂಗ್ಲಿಷ್‌ ಅಕ್ಷರಗಳಾದ ವೈ, ಟಿ ಮತ್ತು ಐ ಆಕಾದರದಲ್ಲಿ ದಂಡಿಸುವ ಒಂದು ಸರಳ ವ್ಯಾಯಾಮ) ವ್ಯಾಯಾಮವನ್ನು ಮಾಡುತ್ತೇನೆ. ಇದು ಹೆಣ್ಣಿನ ದೇಹದ ಉಬ್ಬು ತಗ್ಗುಗಳನ್ನು ಆಕರ್ಷಕವಾಗಿಡಲು ನೆರವಾಗುತ್ತದೆ’.‘ಸೌಂದರ್ಯ ಪ್ರಸಾಧನಗಳ ಮೂಲಕ ಹೊಳಪು ಹೆಚ್ಚಿಸಿಕೊಳ್ಳುವ ಬದಲು ನೈಸರ್ಗಿಕ ಹೊಳಪು ಪಡೆಯುವತ್ತ ಹೆಚ್ಚು ಗಮನ ಹರಿಸಬೇಕು’ ಎಂದು ಟಿಪ್ಸ್ ನೀಡುತ್ತಾರೆ.ಚೆಂದದ ಬೆನ್ನು ಇರಬೇಕು ಎಂದು ಬಯಸುವವರು ಮೊದಲು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಲಿ ಎಂಬ ಕಾಳಜಿಯನ್ನೂ ಸಾಕ್ಷಿ ವ್ಯಕ್ತಪಡಿಸುತ್ತಾರೆ.

ಚೆಂದದ ಬೆನ್ನಿಗಾಗಿ...

*ಮೊಟ್ಟೆಯ ಸಿಪ್ಪೆ, ಕಡ್ಲೆಹಿಟ್ಟು ಮತ್ತು ಜೇನಿನ ಮಿಶ್ರಣವನ್ನು ಬೆನ್ನಿಗೆ ಕ್ರಮವಾಗಿ ಹಚ್ಚಿಕೊಳ್ಳಬೇಕು.* ಕ್ರಿಸ್ಟಲ್‌ ಪಾಲಿಶಿಂಗ್‌ ಮತ್ತು ಬೇಬಿ ಆಯಿಲ್‌ನಿಂದ ಆಗಾಗ ಮಸಾಜ್‌ ಮಾಡಿಕೊಳ್ಳಬಹುದು.*ಬೆನ್ನ ಮೇಲಿನ ಕೂದಲ ನಿವಾರಣೆಗೆ ವ್ಯಾಕ್ಸಿಂಗ್‌ ಮಾಡುವುದು ಬೇಡ. ವ್ಯಾಕ್ಸಿಂಗ್‌ನಿಂದ ತ್ವಚೆಯು ಮೃದುತ್ವವನ್ನು ಕಳೆದುಕೊಂಡು ಸಡಿಲಾಗುವ ಸಾಧ್ಯತೆಗಳಿರುತ್ತವೆ.*ಲೇಸರ್‌ ಹೇರ್‌ ರಿಮೂವಲ್‌ ಮೂಲಕ ಕೂದಲು ನಿವಾರಣೆ  ಚರ್ಮದ ಮೃದುತ್ವವೂ ಉಳಿಯುತ್ತದೆ. ಶಾಶ್ವತ ಪರಿಹಾರವೂ ದೊರೆಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry