ಸೋಮವಾರ, ಮಾರ್ಚ್ 8, 2021
24 °C
ಬದ್ಧತೆಗೆ ಒಲಿದ ಪದಕವಿದು: ಕೋಚ್‌ ಖುಷಿ

ಸಾಕ್ಷಿ ಯಶಸ್ಸಿನಲ್ಲಿ ಕನ್ನಡಿಗ ಶ್ಯಾಮ್‌

ಪ್ರಮೋದ ಜಿ.ಕೆ. Updated:

ಅಕ್ಷರ ಗಾತ್ರ : | |

ಸಾಕ್ಷಿ ಯಶಸ್ಸಿನಲ್ಲಿ ಕನ್ನಡಿಗ ಶ್ಯಾಮ್‌

ಬೆಂಗಳೂರು: ‘ಎಷ್ಟೇ ಕಷ್ಟವಾದರೂ ಒಂದೇ ಒಂದು ದಿನ ಆಕೆ ಅಭ್ಯಾಸ ತಪ್ಪಿಸಿಲ್ಲ. ಯಾವ ನೆಪವನ್ನೂ ಹೇಳಿಲ್ಲ. ಕಠಿಣ ಪರಿಶ್ರಮ ಮತ್ತು ಕುಸ್ತಿ ಬಗ್ಗೆ ಹೊಂದಿದ್ದ ಬದ್ಧತೆಯೇ ಈ ಯಶಸ್ಸಿಗೆ ಕಾರಣ...’ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಸಾಕ್ಷಿ ಮಲಿಕ್ ಅವರ ಬಗ್ಗೆ ಕೋಚ್‌ಗಳಲ್ಲಿ ಒಬ್ಬರಾದ ಕರ್ನಾಟಕದ ಶ್ಯಾಮ್ ಬುಡಕಿ ಅವರು ಹೇಳಿದ ಮೆಚ್ಚುಗೆಯ ಮಾತುಗಳಿವು.ರಿಯೊ ಒಲಿಂಪಿಕ್ಸ್‌ಗೆ ಸಜ್ಜಾಗುವ ಸಲುವಾಗಿ ರಾಷ್ಟ್ರೀಯ ಮಹಿಳಾ ಕುಸ್ತಿ ತಂಡಕ್ಕೆ ಪಟಿಯಾಲದಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಆಗ ಮೂವರು ಸದಸ್ಯರನ್ನು ಒಳಗೊಂಡ ಕೋಚ್‌ಗಳ ತಂಡ ಕುಸ್ತಿಪಟುಗಳಿಗೆ ತರಬೇತಿ ನೀಡಿತ್ತು. ಅದರಲ್ಲಿ ಕನ್ನಡಿಗ ಶ್ಯಾಮ್‌ ಕೂಡ ಒಬ್ಬರು.ರಾಷ್ಟ್ರೀಯ ಸಬ್‌ ಜೂನಿಯರ್ ಬಾಲಕಿಯರ ಕುಸ್ತಿ ತಂಡದ ತರಬೇತು ದಾರರೂ ಆಗಿರುವ ಗೋಕಾಕ್‌ನ ಶ್ಯಾಮ್‌   ಅವರು ಸಾಕ್ಷಿ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.‘ಶಿಬಿರದಲ್ಲಿದ್ದ ಎಲ್ಲಾ ಕುಸ್ತಿಪಟುಗಳು ಬೆಳಿಗ್ಗೆ ನಾಲ್ಕು ಮತ್ತು ಸಂಜೆ ಮೂರು ಗಂಟೆ ಅಭ್ಯಾಸ ಮಾಡುತ್ತಿದ್ದರು. ಪರಸ್ಪರ ಅವರವರೇ ಪಂದ್ಯಗಳನ್ನು ಆಡುತ್ತಿದ್ದರು. ಯಾವ ವಿಭಾಗದಲ್ಲಿ ದೌರ್ಬಲ್ಯವಿದೆ ಎನ್ನುವುದನ್ನು ತಿಳಿಸಿ ಆ ವಿಭಾಗದಲ್ಲಿ ಸುಧಾರಣೆ ಮಾಡಿಕೊಳ್ಳುವಂತೆ ಹೇಳುತ್ತಿ ದ್ದೆವು. ಹೇಳಿದ ಪ್ರತಿ ವಿಷಯವನ್ನೂ ಚಾಚುತಪ್ಪದೇ ಮಾಡಿದ್ದಾರೆ. ನಾವು ಹೇಳಿಕೊಟ್ಟಿದ್ದಕ್ಕಿಂತ ಹೆಚ್ಚಾಗಿ ಅವರು ಪಟ್ಟ ಪರಿಶ್ರಮ ದೊಡ್ಡದು’ ಎಂದು ಶ್ಯಾಮ್ ಹೇಳುತ್ತಾರೆ.‘ಸಾಕ್ಷಿ ತಂದೆ ಬಸ್‌ ಕಂಡಕ್ಟರ್‌. ಅವರ ತಾಯಿ ಅಂಗನವಾಡಿ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಮಗಳು ದೊಡ್ಡ ಸಾಧನೆ ಮಾಡ ಬೇಕೆಂಬುದು ಪೋಷಕರ ಆಸೆ ಯಾಗಿತ್ತು. ಇದರ ಬಗ್ಗೆಯೂ ಸಾಕ್ಷಿ ಅನೇಕ ಸಲ ನನ್ನ ಜೊತೆ ಮಾತನಾಡಿ ದ್ದಾಳೆ. ಈಗ ಆಕೆ ಕೋಟ್ಯಂತರ ಮಹಿಳೆಯರಿಗೆ ಸ್ಫೂರ್ತಿ’ ಎಂದು ಶ್ಯಾಮ್‌ ಸಂತೋಷ ಹಂಚಿಕೊಂಡಿದ್ದಾರೆ.‘ರಿಯೊ ಒಲಿಂಪಿಕ್ಸ್‌ನ ಕುಸ್ತಿ ಸ್ಪರ್ಧೆಯಲ್ಲಿ ಸಾಕ್ಷಿ ಮತ್ತು ವಿನೇಶ್‌ ಪೋಗಟ್‌ ಪದಕ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆಯಿತ್ತು. ಗಾಯಗೊಂಡ ಕಾರಣ ವಿನೇಶ್‌ಗೆ ಪದಕ ಜಯಿಸಲು ಸಾಧ್ಯವಾಗ ಲಿಲ್ಲ. ಆದರೆ, ವಿನೇಶ್‌ ಆಸೆಯನ್ನು ಸಾಕ್ಷಿ ನೆರವೇರಿಸಿದ್ದಾಳೆ. ಕೊನೆಯ ಒಂಬತ್ತು ಸೆಕೆಂಡುಗಳ ಸ್ಪರ್ಧೆಯಷ್ಟೇ ಬಾಕಿ ಯಿದ್ದಾಗ ಸಾಕ್ಷಿ ಹಿನ್ನಡೆಯಲ್ಲಿದ್ದ ಕಾರಣ ನಾವೆಲ್ಲರೂ ನಿರಾಸೆಯಲ್ಲಿದ್ದೆವು. ಆದರೆ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಇತಿಹಾಸವೇ ನಿರ್ಮಾಣವಾಗಿ ಹೋಯಿತು. ಒಲಿಂಪಿಕ್ಸ್‌ ಸ್ಪರ್ಧೆಗಳನ್ನು ನೋಡುವ ಸಲುವಾಗಿ ಲಖನೌದ ಕ್ರೀಡಾ ಪ್ರಾಧಿಕಾರದಲ್ಲಿ ದೊಡ್ಡ ಪರದೆಯನ್ನೇ ಹಾಕಲಾಗಿತ್ತು. ಒಲಿಂಪಿಕ್ಸ್‌ ಪದಕ ಗೆದ್ದ ಸಾಕ್ಷಿ ರಿಯೊದಲ್ಲಿ ಸಂಭ್ರಮಿಸುತ್ತಿದ್ದರೆ, ಪ್ರಾಧಿಕಾರದಲ್ಲಿದ್ದ ಕೋಚ್‌ಗಳು ಮತ್ತು ಕ್ರೀಡಾಪಟುಗಳು ಸಿಹಿ ಹಂಚಿ ಖುಷಿ ಪಟ್ಟೆವು’ ಎಂದೂ ಶ್ಯಾಮ್‌  ನೆನಪುಗ ಳನ್ನು ಹಂಚಿಕೊಂಡರು. ಶ್ಯಾಮ್‌ ಈಗ ಲಖನೌದಲ್ಲಿ ಕುಸ್ತಿ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.