ಸಾಕ್ಷ್ಯಾಧಾರ ಕೊರತೆ

7

ಸಾಕ್ಷ್ಯಾಧಾರ ಕೊರತೆ

Published:
Updated:

ನವದೆಹಲಿ: ಪ್ರಧಾನಿ ಅಧಿಕೃತ ನಿವಾಸದ ಬಳಿ ಸೋಮವಾರ ಸಂಭವಿಸಿದ ಇಸ್ರೇಲ್ ರಾಯಭಾರ ಕಚೇರಿ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ಕಡೆಗೂ ಬೆಟ್ಟು ಮಾಡಲು ಸದ್ಯಕ್ಕೆ ತನ್ನ ಬಳಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.ಬುಧವಾರ ಸಂಜೆ ತಮ್ಮನ್ನು ಭೇಟಿ ಮಾಡಿದ ಭಾರತದಲ್ಲಿನ ಇಸ್ರೇಲ್ ರಾಯಭಾರಿ ಆಲನ್ ಉಶ್ಪೀಜ್ ಅವರಿಗೆ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಸ್ಫೋಟದ ಹಿಂದೆ ಇಂಥ ವ್ಯಕ್ತಿ, ಸಂಘಟನೆ ಅಥವಾ ದೇಶದ ಕೈವಾಡವಿದೆ ಎಂದು ಖಚಿತವಾಗಿ ಹೇಳಲು ತಮ್ಮ ಬಳಿ ಯಾವುದೇ ಸಾಕ್ಷ್ಯಾಧಾರಗಳೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ಸ್ಫೋಟ ಘಟನೆ ಕುರಿತು ತನಿಖೆ ನಡೆಯುತ್ತಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ಭಾರತ ನೀಡಿದೆ. ಸ್ಫೋಟದ ಬಳಿಕ ಭಾರತದ ಜನ ನೀಡಿರುವ ಬೆಂಬಲದಿಂದ ಹೃದಯ ತುಂಬಿ ಬಂದಿದೆ. ಭಾರತದ ಜತೆಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.ಇಸ್ರೇಲ್ ರಾಯಭಾರ ಕಚೇರಿ, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹೆಚ್ಚಿನ ಭದ್ರತೆ ಒದಗಿಸಬೇಕೆಂಬ ಮನವಿ ಬಂದಿದೆ. ಈ ಸಂಬಂಧ ಗೃಹ ಸಚಿವಾಲಯದ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಭದ್ರತಾ ವ್ಯವಸ್ಥೆ ಕುರಿತಂತೆ ಇಸ್ರೇಲ್ ರಾಯಭಾರ ಕಚೇರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.ಇಸ್ರೇಲ್ ರಾಯಭಾರಿ ವಿದೇಶಾಂಗ ಸಚಿವರನ್ನು ಭೇಟಿ ಮಾಡುವ ಮೊದಲು, ವಿದೇಶಾಂಗ ಸಚಿವಾಲಯದ ಮೂಲಗಳು ಘಟನೆಗೆ ಯಾವ ದೇಶವನ್ನೂ ದೂರಲು ತಮ್ಮ ಬಳಿ ಸಾಕ್ಷ್ಯಾಧಾರಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry