ಸಾಗರಕ್ಕೆ ಬಂತು ರೈಲು

7

ಸಾಗರಕ್ಕೆ ಬಂತು ರೈಲು

Published:
Updated:
ಸಾಗರಕ್ಕೆ ಬಂತು ರೈಲು

ಅಂದು ಸಾಗರದ ರೈಲ್ವೆ ನಿಲ್ದಾಣದಲ್ಲಿ ಜನ ಸಾಗರ. ಎಂದೂ ರೈಲನ್ನೇ ನೋಡದವರ ಹಾಗೆ ಕಣ್ಣು ಬಿಟ್ಟುಕೊಂಡು ಊರಿಗೆ ಬಂದ ರೈಲನ್ನು ನೋಡುತ್ತಿದ್ದರು. ಎಲ್ಲಾ ಬೋಗಿಗಳಲ್ಲೂ ಜನವೋ ಜನ. ಜನ ತಾಳಗುಪ್ಪದವರೆಗೆ ಅದೇ ರೈಲಿನಲ್ಲಿ ಹೋಗಿ ಬಂದರು.ಕಳೆದ ತಿಂಗಳ ಎರಡನೇ ವಾರ ಸಾಗರಕ್ಕೆ ಹದಿನೇಳು ವರ್ಷಗಳ ನಂತರ ಮತ್ತೆ ಬ್ರಾಡ್‌ಗೇಜ್ ರೈಲು ಬಂತು. ಹದಿನೇಳು ವರ್ಷಗಳ ಹಿಂದೆ ಮೀಟರ್ ಗೇಜಿನ ರೈಲು ಕಂಬಿಗಳನ್ನು ಇಲಾಖೆ ಕೀಳಲು ಮುಂದಾದಾಗ ಇನ್ನು ಊರಿಗೆ ರೈಲು ಬರುವುದೇ ಇಲ್ಲ ಎಂದು ಜನ ನಿರಾಶರಾಗಿದ್ದರು. ಈಗ ಮತ್ತೆ ರೈಲು ನೋಡಿ ಅವರಿಗೆ ಅಚ್ಚರಿಯಾಗಿತ್ತು.ಸಾಗರಕ್ಕೆ ಮೊದಲು ರೈಲು ಬಂದದ್ದು ಬ್ರಿಟಿಷರ ಕಾಲದಲ್ಲಿ. 1931ರಲ್ಲಿ ಅರಸಾಳು ಗ್ರಾಮದವರೆಗೆ ಬಂದ ರೈಲು 1934ರಲ್ಲಿ ಆನಂದಪುರಂಗೆ ಬಂತು. 1938ರಲ್ಲಿ ಸಾಗರಕ್ಕೂ, 1940ರಲ್ಲಿ ತಾಳಗುಪ್ಪಕ್ಕೂ ಬಂತು. 1939ರಲ್ಲಿ ಮೈಸೂರು ರಾಜ್ಯದ ದಿವಾನರಾದ ಮಿರ್ಜಾ ಇಸ್ಮಾಯಿಲ್ ಸಾಹೇಬರು ಸಾಗರದ ಜಂಬಗಾರು ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ಕಾರಿನಲ್ಲಿ ಜೋಗಕ್ಕೆ ಪ್ರಯಾಣಿಸಿದ್ದರು. 1949ರಲ್ಲಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಅವರು ವಿಶೇಷ ರೈಲಿನಲ್ಲಿ ಕುಟುಂಬ ಸಮೇತ ಬಂದು ಸಾಗರದ ರೈಲ್ವೆ ನಿಲ್ದಾಣದಲ್ಲಿ ಇಳಿದು ಜೋಗಕ್ಕೆ ತೆರಳ್ದ್ದಿದರು. ಆಗ ಬಂದ ಹಳದಿ ಬಣ್ಣದ ರೈಲನ್ನು ನೋಡಲು ಸಾರ್ವಜನಿಕರು ತಂಡೋಪತಂಡದಲ್ಲಿ ಬಂದಿದ್ದರಂತೆ.ಜೋಗದ ಶರಾವತಿ ವಿದ್ಯುತ್ ಯೋಜನೆ ಕಾಮಗಾರಿಗೆ ಸಂಬಂಧಪಟ್ಟ ಸಾಮಗ್ರಿಗಳು, ಜನರೇಟರ್ ಸೇರಿದಂತೆ ವಿವಿಧ ಯಂತ್ರಗಳನ್ನು ರೈಲಿನಲ್ಲಿ ತಾಳಗುಪ್ಪದವರೆಗೆ ತಂದು ಅಲ್ಲಿಂದ ಜೋಗಕ್ಕೆ ಸಾಗಿಸಲಾಗಿತ್ತು. ಈ ಕಾರಣಕ್ಕೇನೆ ಸಾಗರದಿಂದ ತಾಳಗುಪ್ಪದವರೆಗಿನ ರೈಲ್ವೆ ಮಾರ್ಗ ನಿರ್ಮಿಸಲಾಯಿತು. ಅದಕ್ಕೆ ತಗುಲಿದ ವೆಚ್ಚದ ಪೈಕಿ ಶೇ.50ರಷ್ಟನ್ನು (3.28ಲಕ್ಷ ರೂ.) ಮೈಸೂರು ಎಲೆಕ್ಟ್ರಿಸಿಟಿ ಡಿಪಾರ್ಟ್‌ಮೆಂಟ್ ರೈಲ್ವೆ ಇಲಾಖೆಗೆ ಪಾವತಿಸಿತ್ತು.1940 ಹಾಗೂ 50ರ ದಶಕದಲ್ಲಿ ಎಲ್ಲಾ ವೃತ್ತ ಪತ್ರಿಕೆಗಳು ಸಾಗರಕ್ಕೆ ಬರುತ್ತಿದ್ದುದು ರೈಲಿನ ಮೂಲಕ. ಆಗ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿತ್ತು. ಫಲಿತಾಂಶ ಪ್ರಕಟವಾಗುವ ದಿನ ರೈಲು ನಿಲ್ದಾಣದಲ್ಲಿ ಇಡೀ ತಾಲ್ಲೂಕಿನ ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ರೈಲು ಬರುವುದನ್ನೇ ಕಾಯುತ್ತಿದ್ದರಂತೆ. ಸಾಗರದ ರೈಲ್ವೆ ನಿಲ್ದಾಣದಲ್ಲಿ ವಿಶ್ರಾಂತಿ ಗೃಹ ಕಲಾತ್ಮಕ ಕುಸುರಿ ಕೆತ್ತನೆಯ ಪೀಠೋಪಕರಣಗಳಿಂದ ಅಲಂಕೃತಗೊಂಡಿತ್ತು. ಅಲ್ಲಿ ಖ್ಯಾತ ಚಿತ್ರ ನಟರಾದ ರಾಜ್‌ಕಪೂರ್, ದಿಲೀಪ್‌ಕುಮಾರ್, ನಟಿಯರಾದ ಪದ್ಮಿನಿ, ರಾಗಿಣಿ, ಲಲಿತಾ ಮತ್ತಿತರರು  ತಂಗಿದ್ದ ಬಗ್ಗೆ ದಾಖಲೆಗಳಿವೆ!ಸಾಗರ ಹಾಗೂ ಆನಂದಪುರಂ ರೈಲು ನಿಲ್ದಾಣದಲ್ಲಿ ಡಾ. ರಾಜ್‌ಕುಮಾರ್ ಅಭಿನಯದ `ಆಕಸ್ಮಿಕ~, ಲೋಕೇಶ್ ಅಭಿನಯದ `ದೇವರ ಕಣ್ಣು~ ಸಿನಿಮಾಗಳ ಚಿತ್ರೀಕರಣ ನಡೆದಿತ್ತು. ಡಾ. ರಾಮಮನೋಹರ ಲೋಹಿಯಾ ಅವರನ್ನು ಸಾಗರದ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. 1951ರಲ್ಲಿ ಕಾಗೋಡು ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಲು ಅವರು ಬಂದಿದ್ದರು. ಇಂತಹ ಹಲವು ಮಹತ್ವದ ಘಟನೆಗಳಿಗೆ ಸಾಗರ ನಿಲ್ದಾಣ ಸಾಕ್ಷಿಯಾಗಿದೆ.ಆರಂಭದಲ್ಲಿ ಶಿವಮೊಗ್ಗದಿಂದ ದಿನಕ್ಕೆ ಮೂರು ಸಲ ಸಾಗರಕ್ಕೆ ರೈಲು ಬರುತ್ತಿತ್ತು. ಈ ಮಾರ್ಗದಲ್ಲಿ ಗೂಡ್ಸ್ ರೈಲುಗಳು ಓಡಾಡುತ್ತಿದ್ದವು. ಬೆಂಗಳೂರು, ಮೈಸೂರು, ಹುಬ್ಬಳ್ಳಿಗಳಿಗೆ ಶಿವಮೊಗ್ಗ-ಬೀರೂರು ಮೂಲಕ ಸಂಪರ್ಕವಿತ್ತು. ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಕೂಲಿಕಾರರು, ಸೈನಿಕರು ಸೇರಿದಂತೆ ಸಮಾಜದ ಎಲ್ಲಾ ವರ್ಗಗಳ ಜನರು ರೈಲಿನಲ್ಲೇ ಪ್ರಯಾಣ ಮಾಡುತ್ತಿದ್ದರು. ರೈಲು ಬರುವ ಸಮಯದಲ್ಲಿ ನಿಲ್ದಾಣದ ಮುಂದೆ ಜೋಗ, ಸೊರಬ, ಶಿರಾಳಕೊಪ್ಪ, ಹೊಸನಗರಗಳಿಗೆ ಹೋಗುವ ಬಸ್‌ಗಳು ಕಾದಿರುತ್ತಿದ್ದವು. 1995ರ ಮೇ ತಿಂಗಳಲ್ಲಿ ಇದ್ದಕ್ಕಿದಂತೆ ಈ ಮಾರ್ಗದ ಮೀಟರ್‌ಗೇಜ್ ರೈಲು ಸಂಚಾರ ಸ್ಥಗಿತಗೊಂಡಿತ್ತು.ರೈಲು ಸಂಚಾರ ನಿಲ್ಲಿಸಿದ್ದನ್ನು ಜನರು ಪ್ರತಿಭಟಿಸಿದ್ದರು. ಆಗ ಇಲಾಖೆ `ನಷ್ಟ~ದ ಸಬೂಬು ಹೇಳಿತ್ತು. ಜನರ ಕಣ್ಣೊರೆಸಲು ಕೇವಲ ಎರಡೇ ಬೋಗಿಗಳ ಬಸ್ಸಿನಂತಹ ಎಡಬಿಡಂಗಿ ರೈಲು ಈ ಮಾರ್ಗದಲ್ಲಿ ಓಡಾಡುತ್ತಿತ್ತು. ಅದರಲ್ಲಿ ಶೌಚಾಲಯದ ವ್ಯವಸ್ಥೆ ಇರಲಿಲ್ಲ. ಈ ರೈಲು ಸಾಗರದಿಂದ ಶಿವಮೊಗ್ಗ ತಲುಪಲು 3 ಗಂಟೆ ತೆಗೆದುಕೊಳ್ಳುತ್ತಿತ್ತು. 2003ರಲ್ಲಿ ಈ ರೈಲ್‌ಬಸ್ ಸಂಚಾರ ನಿಲ್ಲಿಸಲಾಯಿತು.ಇದರಿಂದ ಬೇಸತ್ತ ಜನರು `ಶಿವಮೊಗ್ಗ-ತಾಳಗುಪ್ಪ ರೈಲ್ವೆ ಬ್ರಾಡ್‌ಗೇಜ್ ಹೋರಾಟ ಸಮಿತಿ~ ರಚಿಸಿಕೊಂಡು ರೈಲಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಈ ಸಮಿತಿ ಒಮ್ಮೆಯೂ ಚಳವಳಿ ಮಾಡಲಿಲ್ಲ. ಸಾಗರಕ್ಕೆ ಬಂದ ಜನ ಪ್ರತಿನಿಧಿ ಮತ್ತು ರೈಲ್ವೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಕೊಟ್ಟರು. ಕರ ಪತ್ರಗಳ ಮೂಲಕ ರೈಲಿನ ಅಗತ್ಯವನ್ನು ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವರಿಕೆ ಮಾಡಿಕೊಟ್ಟರು. ಬೆಂಗಳೂರಿನ ರೈಲ್ವೆ ವಲಯ ಕಚೇರಿಗೆ ಹೋಗಿ ರೈಲಿಗಾಗಿ ಒತ್ತಾಯಿಸಿದರು.ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸದೆ ಸ್ವಂತ ಖರ್ಚಿನಲ್ಲಿ ಸಮಿತಿ ಸತತವಾಗಿ ಜನಾಭಿಪ್ರಾಯವನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿತು. ಹೀಗಾಗಿ ರೈಲು ಮಾರ್ಗ ಪರಿವರ್ತನೆ ಕಾಮಗಾರಿ ಚುರುಕಾಗಿ ನಡೆಯುವ ಅನಿವಾರ್ಯವಾಯಿತು. ಅದರ ಪರಿಣಾಮವಾಗಿ ಕಳೆದ ತಿಂಗಳು ಸಾಗರ ಹಾಗೂ ತಾಳಗುಪ್ಪಕ್ಕೆ ಕೊನೆಗೂ ರೈಲು ಬಂತು!ಸ್ವಾತಂತ್ರ್ಯಪೂರ್ವದಲ್ಲೇ ಆರಂಭ!

ಎರಡನೇ ಮಹಾಯುದ್ಧ ನಡೆಯದೆ ಇದ್ದರೆ ಸ್ವಾತಂತ್ರ್ಯಪೂರ್ವದಲ್ಲೇ ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಮುಂಬೈಗೆ ರೈಲು ಸಂಚಾರ ಆರಂಭವಾಗುತ್ತಿತ್ತು ಎನ್ನುತ್ತವೆ ರೈಲ್ವೆ ಇಲಾಖೆಯ ಮೂಲಗಳು.ಬೆಂಗಳೂರಿನಿಂದ ಶಿವಮೊಗ್ಗ ಸಮೀಪದ ನಿದಿಗೆ ಗ್ರಾಮದವರೆಗೆ 1890ರಲ್ಲಿ ರೈಲು ಮಾರ್ಗ ಕಾಮಗಾರಿ ಮುಗಿದಿತ್ತು. 1920ರಲ್ಲಿ ಮೈಸೂರು ಎಂಜಿನಿಯರ್ ಅಸೋಸಿಯೇಷನ್‌ನ ಬುಲೆಟಿನ್‌ನಲ್ಲಿ  ಚೀಫ್ ಎಂಜಿನಿಯರ್ ಪ್ರಕಟಿಸಿದ ಪ್ರಬಂಧದಲ್ಲಿ ಬೆಂಗಳೂರಿನಿಂದ ಭಟ್ಕಳಕ್ಕೆ ರೈಲು ಮಾರ್ಗ ಆರಂಭವಾದರೆ ಜೋಗದಲ್ಲಿ ವಿದ್ಯುತ್ ಉತ್ಪಾದನೆ ಯೋಜನೆ ಕಾಮಗಾರಿಗೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.1939ರಲ್ಲಿ ನಿದಿಗೆಯಿಂದ ಸಾಗರದವರೆಗೆ ರೈಲು ಸಂಚಾರ ಆರಂಭವಾಯಿತು. ಅಂದಿನ ಮೈಸೂರು ಮಹಾರಾಜರು ಶಿವಮೊಗ್ಗದಿಂದ ಭಟ್ಕಳದವರೆಗೆ ರೈಲು ಮಾರ್ಗವನ್ನು ವಿಸ್ತರಿಸಲು ಉತ್ಸುಕರಾಗಿದ್ದರು. ಆದರೆ ಎರಡನೇ ಮಹಾಯುದ್ಧ ಅವರ ಈ ಉತ್ಸಾಹ ಕಡಿಮೆ ಮಾಡಿತು.ಇಂಗ್ಲೆಂಡ್ ಸರ್ಕಾರ ಮೈಸೂರು ರಾಜ್ಯಕ್ಕೆ ಯುದ್ಧದ ವೆಚ್ಚ 50ಲಕ್ಷ ರೂ. ತುಂಬುವಂತೆ ಕೇಳಿದ್ದರಿಂದ ರಾಜ್ಯದ ಆರ್ಥಿಕ ಸ್ಥಿತಿಗೆ ಹಿನ್ನಡೆಯಾಯಿತು. ಹೀಗಾಗಿ ತಾಳಗುಪ್ಪದವರೆಗೆ ಮಾತ್ರ ರೈಲು ಮಾರ್ಗ ನಿರ್ಮಾಣಕ್ಕೆ ಮಹಾರಾಜರು ನಿರ್ಧರಿಸಿದರು.ಈಗ ತಾಳಗುಪ್ಪದಿಂದ ಕೊಂಕಣ ರೈಲ್ವೆಗೆ ಈ ಮಾರ್ಗದ ಸಂಪರ್ಕಕ್ಕೆ ಒತ್ತಾಯ ಕೇಳಿಬರುತ್ತಿದೆ. ಇದರಿಂದ ಶರಾವತಿ ಕಣಿವೆಯಲ್ಲಿನ ಅರಣ್ಯ ನಾಶವಾಗುತ್ತದೆ ಎಂಬ ವಾದವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸುರಂಗ ನಿರ್ಮಿಸಿದರೆ  ಅರಣ್ಯ ನಾಶ ತಪ್ಪಿಸಬಹುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ. ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ರೈಲು ಮಾರ್ಗ ಯೋಜನೆಗೆ ಮತ್ತೊಂದು ಹೋರಾಟ ಮಾಡಬೇಕೇನೋ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry