ಶನಿವಾರ, ನವೆಂಬರ್ 23, 2019
17 °C
ಪ್ರಜಾವಾಣಿ ವಿಶೇಷ ವರದಿ

ಸಾಗರದಿಂದ ಕಣಕ್ಕಿಳಿಯಲು ಬಾಲರಾಜ್ ಆಸಕ್ತಿ

Published:
Updated:

ಶಿವಮೊಗ್ಗ: ಚಿತ್ರನಟ ಬಾಲರಾಜ್ ಸಾಗರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಆಸಕ್ತಿ ವಹಿಸಿದ್ದಾರೆ. ಡಾ.ರಾಜ್‌ಕುಮಾರ್ ಸಹೋದರಿ ಮಗ ಬಾಲರಾಜ್ ಈಗ ಧಾರಾವಾಹಿಯಲ್ಲಿ ಬ್ಯುಸಿ ನಟ. ಬಿಜೆಪಿಗೆ 2002ರಲ್ಲೇ ಸೇರ್ಪಡೆಯಾಗಿದ್ದ ಬಾಲರಾಜ್, ಈಗ ಸಾಗರದಿಂದ ತಮ್ಮ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಮುಂದಾಗಿದ್ದಾರೆ.ತಮಗೇ ಟಿಕೆಟ್ ನೀಡುವಂತೆ ಈಗಾಗಲೇ ಪಕ್ಷದ ಅಧ್ಯಕ್ಷ ಪ್ರಹ್ಲಾದ್ ಜೋಷಿ, ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಮಾಡಿರುವ ಬಾಲರಾಜ್, ಭಾನುವಾರ ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ಅವರಿಗೂ ತಮ್ಮ ಅಹವಾಲು ಸಲ್ಲಿಸಿದ್ದಾರೆ.ಈಗಾಗಲೇ ಸಾಗರದ ಕ್ಷೇತ್ರದಲ್ಲಿ ಸುತ್ತಾಡಿ ಸಮೀಕ್ಷೆ ನಡೆಸಿದ್ದು, ಸ್ಪರ್ಧೆಗೆ ಪೂರಕವಾದ ವಾತಾವರಣವಿದೆ. ಕಣಕ್ಕೆ ಇಳಿಯಲು ಇನ್ನಷ್ಟು ಸ್ಪೂರ್ತಿ ತುಂಬಿದೆ. ಘಟನಾಘಟಿಗಳ ನಡುವೆ ಸ್ಪರ್ಧೆಗೆ ತಾನು ಸಿದ್ಧ ಎಂಬ ವಿಶ್ವಾಸವನ್ನು ಬಾಲರಾಜ್ ವ್ಯಕ್ತಪಡಿಸಿದ್ದಾರೆ.2002ರಲ್ಲಿ ಮೈಸೂರು ಸುತ್ತೂರು ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯ್ತಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ರಜತ್ ಎಂಬ ಸ್ನೇಹಿತನ ಪರವಾಗಿ ಚುನಾವಣಾ ಪ್ರಚಾರ ಮಾಡುವ ಮೂಲಕ  ಬಾಲರಾಜ್  ರಾಜಕೀಯದ  ಮೆಟ್ಟಿಲು  ಏರಿದ್ದರು.  2008ರಲ್ಲಿ  ಚಾಮರಾಜ  ನಗರದ ಹನೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ, ಕೊನೆಗಳಿಗೆಯಲ್ಲಿ ಆಗಿನ ಸಚಿವ ಶ್ರೀರಾಮಲು ಒತ್ತಾಯದಿಂದ ಮೇರೆಗೆ ಈ ಪ್ರಯತ್ನದಿಂದ ಹಿಂದಕ್ಕೆ ಸರಿದಿದ್ದರು. ಈಗ ಸಾಗರದ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.50 ವರ್ಷದ ಬಾಲರಾಜ್ ಪಿಯು ಅರ್ಧಕ್ಕೆ ಮುಗಿಸಿದ್ದು, ಮುಂದೆ ಸೌಂಡ್ ರೆಕಾರ್ಡಿಂಗ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಲೆಕ್ಕದಲ್ಲಿ ಬಾಲರಾಜ್ ಶಿವಮೊಗ್ಗ ಜಿಲ್ಲೆಗೆ ಸೇರಿದವರು. ಅವರ 1ರಿಂದ 4ನೇ ತರಗತಿ ವಿದ್ಯಾಭ್ಯಾಸ ಭದ್ರಾವತಿಯಲ್ಲೇ ನಡೆದಿದೆ. ಅವರ ತಂದೆ ಬಾಲಕೃಷ್ಣ ಅವರು ಸಿಂಡಿಕೇಟ್ ಬ್ಯಾಂಕ್‌ನಲ್ಲಿರುವುದರಿಂದ ಭದ್ರಾವತಿಯಲ್ಲೇ ಬಾಲ್ಯದ ದಿನಗಳನ್ನು ಕಳೆದಿದ್ದಾರೆ. ಸಾಗರದಲ್ಲೂ ಅವರಿಗೆ ಬಹಳಷ್ಟು ಜನ ಸ್ನೇಹಿತರಿದ್ದಾರೆ. ಸಿನಿಮಾ ಶೂಟಿಂಗ್‌ಗಾಗಿ ಬಹಳಷ್ಟು ಸಲ ಬಂದು ಹೋಗಿದ್ದರಿಂದ ಸಾಗರ ಅವರಿಗೆ ಚಿರಪರಿಚಿತವಂತೆ.`ಹಿಂದಿನವರು ಕ್ಷೇತ್ರದಲ್ಲಿ ಕೆಲಸ ಮಾಡಲಿಲ್ಲ. ಬೆಂಗಳೂರಿನಲ್ಲಿ ಮನೆ ಮಾಡಿ, ಸಾಗರಕ್ಕೆ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡುವ ರೀತಿ ಬರುತ್ತಿದ್ದರು. ಹಾಗಾಗಿ, ನಮಗೆ ಇಲ್ಲೇ ಇದ್ದು, ನಮ್ಮ ಕೆಲಸ ಮಾಡಿಕೊಡುವ ಅಭ್ಯರ್ಥಿ ಬೇಕು ಎಂದು ಜನ ಅಭಿಪ್ರಾಯಪಡುತ್ತಿದ್ದಾರೆ. ಅವರ ಆಶಯದಂತೆ ಕೆಲಸ ಮಾಡಲು ನಾನು ಸಿದ್ಧ' ಎನ್ನುತ್ತಾರೆ ಬಾಲರಾಜ್.ಈಡಿಗ ಜನಾಂಗ ಸಾಗರ ಕ್ಷೇತ್ರದಲ್ಲಿ ಸುಮಾರು 49 ಸಾವಿರ ಜನಸಂಖ್ಯೆ ಇದೆ. ನನ್ನ ಜನಾಂಗದ ಮುಖಂಡರು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ತಮಗೆ ಇಲ್ಲೇ ಟಿಕೆಟ್ ನೀಡಿದರೆ ಅನುಕೂಲ ಎಂದು ಈಶ್ವರಪ್ಪ ಅವರಿಗೆ ವಿಶೇಷ ಮನವಿ ಮಾಡಿದ್ದೇನೆ ಎನ್ನುತ್ತಾರೆ ಬಾಲರಾಜ್.ಟಿಕೆಟ್‌ಗೆ ಮನವಿ

`ಬಾಲರಾಜ್ ಅವರು ಭಾನುವಾರ ಬೆಳಿಗ್ಗೆ 11.30ಕ್ಕೆ ಕಚೇರಿಗೆ ಬಂದು ಟಿಕೆಟ್‌ಗೆ ಮನವಿ ಸಲ್ಲಿಸಿದ್ದಾರೆ. ಇದುವರೆಗೂ ಅವರ ಸ್ಪರ್ಧಾ ಆಕಾಂಕ್ಷೆಯ ಬಗ್ಗೆ ತಮಗೆ ಮಾಹಿತಿ ಇರಲಿಲ್ಲ. ಜಿಲ್ಲಾಮಟ್ಟದಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮಾಡಿ ಈಗಾಗಲೇ ರಾಜ್ಯ ಚುನಾವಣಾ ಸಮಿತಿಗೆ ಕಳುಹಿಸಿಕೊಡಲಾಗಿದೆ. ಈ ಮಧ್ಯೆ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿ ಮಾಡಿ, ಟಿಕೆಟ್‌ಗಾಗಿ ಮನವಿ ಮಾಡಿದ್ದಾರೆ' ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)