ಮಂಗಳವಾರ, ಏಪ್ರಿಲ್ 20, 2021
29 °C

ಸಾಗರ ಜಿಲ್ಲಾ ಕೇಂದ್ರ ಸ್ಥಾನಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಸಾಗರ ತಾಲ್ಲೂಕನ್ನು ಜಿಲ್ಲಾ ಕೇಂದ್ರ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಸಾಗರ ಸಮೂಹ ಜನಜಾಗೃತ ವೇದಿಕೆ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಉಪ ವಿಭಾಗಾಧಿಕಾರಿ ಕಚೇರಿ ಎದುರು ಆರಂಭಿಸಿತು.

ಧರಣಿ ವೇಳೆ ನಡೆದ ಬಹಿರಂಗ ಸಭೆಯಲ್ಲಿ ಸಾಹಿತಿ ಡಾ.ನಾ.ಡಿಸೋಜ ಮಾತನಾಡಿ, ಸರ್ಕಾರ ನೂತನ ಜ್ಲ್ಲಿಲೆ ರಚನೆಯ ವಿಷಯದಲ್ಲಿ ಜನರನ್ನು ಗೊಂದಲಕ್ಕೆ ತಳ್ಳಬಾರದು. ಹಲವಾರು ಗಂಭೀರ ಸಮಸ್ಯೆ ಸರ್ಕಾರದ ಎದುರು ಇರುವಾಗ ನೂತನ ಜಿಲ್ಲೆ ರಚನೆ ಪ್ರಸ್ತಾಪವನ್ನು ಜನರ ಮುಂದಿಡುವುದು ಸರಿಯಲ್ಲ ಎಂದರು.

ಶಿವಮೊಗ್ಗ ಜಿಲ್ಲೆಯನ್ನು ವಿಭಜಿಸುವ ಯಾವುದೇ ತುರ್ತು ಈಗ ನಿರ್ಮಾಣವಾಗಿಲ್ಲ. ಒಂದು ವೇಳೆ ವಿಭಜಿಸುವುದೇ ಆದರೆ, ಸಾಗರಕ್ಕೆ ಜಿಲ್ಲಾ ಕೇಂದ್ರ ಆಗುವ ಎಲ್ಲಾ ಅರ್ಹತೆಗಳಿದ್ದು, ಸಾಗರಕ್ಕೆ ಮೊದಲ ಆದ್ಯತೆ ದೊರಕಬೇಕು. ಈ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿರಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ ಮಾತನಾಡಿ, ಸಾಗರವನ್ನು ನೂತನ ಜಿಲ್ಲಾ ಕೇಂದ್ರ ಮಾಡುವುದಾದರೆ ಹೊಸನಗರ ಭಾಗದ ಜನರ ಸಂಪೂರ್ಣ ಬೆಂಬಲವಿದೆ ಎಂದರು.

ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಸಾಗರ ಉಪ ವಿಭಾಗೀಯ ಕೇಂದ್ರವಾಗಿದ್ದು, ಜಿಲ್ಲೆ ಆಗಲು ಸಮರ್ಥವಾಗಿರುವ ಸ್ಥಳವಾಗಿದೆ. ಹೀಗಾಗಿ, ರಾಜ್ಯ ಸರ್ಕಾರ ಸಾಗರ ತಾಲ್ಲೂಕನ್ನು ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚಂದ್ರಕಲಾ ಮಾತನಾಡಿ, ಸರ್ಕಾರ ಮೊದಲು ಬರಗಾಲದಂತಹ ಪ್ರಮುಖ ಸಮಸ್ಯೆ ಬಗ್ಗೆ ಯೋಚಿಸಿ ನಂತರ ನೂತನ ಜಿಲ್ಲೆಯ ರಚನೆ ಬಗ್ಗೆ ಮಾತನಾಡಲಿ ಎಂದು ಅಭಿಪ್ರಾಯಪಟ್ಟರು.

ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ ಬೇಂಗ್ರೆ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊಳಿಯಪ್ಪ, ಈಳಿ ನಾರಾಯಣಪ್ಪ, ಲಲಿತಮ್ಮ, ತೀ.ನಾ.ಶ್ರೀನಿವಾಸ್, ಜೆಡಿಎಸ್‌ನ ಕೆ.ಎಸ್. ಪ್ರಭಾಕರ್, ಎಸ್.ಎಲ್. ಮಂಜುನಾಥ್, ಬಿಜೆಪಿ ನಗರ ಘಟಕದ ಅಧ್ಯಕ್ಷ ವಿ. ಮಹೇಶ್, ವರ್ತಕರ ಸಂಘದ ಅಧ್ಯಕ್ಷ ಯು.ಜೆ. ಮಲ್ಲಿಕಾರ್ಜುನ, ಡಿಎಸ್‌ಎಸ್‌ನ ಲಿಂಗರಾಜು, ಪರಮೇಶ್ವರ ದೂಗೂರು, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸುಮಂಗಲಾ ರಾಮಕೃಷ್ಣ, ಹೊನಗೋಡು ರತ್ನಾಕರ್, ಪದ್ಮಾವತಿ ಚಂದ್ರಕುಮಾರ್, ಲೇಖಕ ವಿಲಿಯಂ, ಈಶ್ವರನಾಯ್ಕ ಕುಗ್ವೆ, ರಾಜಶೇಖರ ಗಾಳಿಪುರ ಇದ್ದರು.

ಮಾರಿಕಾಂಬಾ ಸೇವಾ ಸಮಿತಿಗೆ ಆಯ್ಕೆ

ಶಿವಮೊಗ್ಗ: ಕೋಟೆ ಮಾರಿಕಾಂಬಾ ಸೇವಾ ಸಮಿತಿಯು ಭಾನುವಾರ ನಡೆಸಿದ ಸಭೆಯಲ್ಲಿ ಎಸ್.ವಿ. ತಿಮ್ಮಯ್ಯ ಅಧ್ಯಕ್ಷ, ಎನ್. ಮಂಜುನಾಥ್ ಪ್ರಧಾನ ಕಾರ್ಯದರ್ಶಿ ಹಾಗೂ ಎಚ್.ವಿ. ತಿಮ್ಮಪ್ಪ ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.