ಸಾಗರ ತಾ.ಪಂ.ಗೆ ಆಪರೇಷನ್ ಕಮಲ?

ಬುಧವಾರ, ಜೂಲೈ 24, 2019
28 °C

ಸಾಗರ ತಾ.ಪಂ.ಗೆ ಆಪರೇಷನ್ ಕಮಲ?

Published:
Updated:

ಸಾಗರ: ಇಲ್ಲಿನ ತಾಲ್ಲೂಕು ಪಂಚಾಯ್ತಿಯಲ್ಲಿ ಬಹುಮತ ಹೊಂದಿರುವ ಕಾಂಗ್ರೆಸ್ ಆಡಳಿತದಿಂದ ದೂರ ಮಾಡುವ ನಿಟ್ಟಿನಲ್ಲಿ ತೆರೆಮರೆಯಲ್ಲಿ `ಆಪರೇಷನ್ ಕಮಲ~ ನಡೆಯುತ್ತಿದೆ ಎಂಬ ಸುದ್ದಿ ತಾಲ್ಲೂಕಿನ ರಾಜಕಾರಣದಲ್ಲಿ ದಟ್ಟವಾಗಿ ಹಬ್ಬಿದೆ.ತಾಲ್ಲೂಕು ಪಂಚಾಯ್ತಿಯಲ್ಲಿ ಒಟ್ಟು 14 ಸ್ಥಾನಗಳಿದ್ದು, ಕಳೆದ ಚುನಾವಣೆಯಲ್ಲಿ 12 ಸ್ಥಾನವನ್ನು ಕಾಂಗ್ರೆಸ್  ಗೆದ್ದಿದ್ದರೆ 2 ಕ್ಷೇತ್ರಗಳಲ್ಲಿ ಪಕ್ಷೇತರರು ಜಯಶಾಲಿಯಾಗಿದ್ದಾರೆ. ಹಾಲಿ ಇಬ್ಬರು ಪಕ್ಷೇತರ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ.ಇಬ್ಬರು ಪಕ್ಷೇತರ ಸದಸ್ಯರ ಜತೆಗೆ ಆರು ಕಾಂಗ್ರೆಸ್ ಸದಸ್ಯರನ್ನು ತಮ್ಮ ಬುಟ್ಟಿಗೆ ಸೆಳೆದು ಇದೇ ಪ್ರಥಮ ಬಾರಿಗೆ ತಾಲ್ಲೂಕು ಪಂಚಾಯ್ತಿ ಆಡಳಿತ ತಮ್ಮದಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ ಎಂದು ತಿಳಿದು ಬಂದಿದೆ.ತಾಲ್ಲೂಕು ಪಂಚಾಯ್ತಿಯನ್ನು ಬಿಜೆಪಿ ವಶಕ್ಕೆ ಪಡೆಯಲು ಹೆಚ್ಚಿನ ಆಸಕ್ತಿ ವಹಿಸಿರುವುದು ಶಾಸಕ ಗೋಪಾಲಕೃಷ್ಣ ಬೇಳೂರು ಎನ್ನುವುದರಲ್ಲಿ ಅನುಮಾನವಿಲ್ಲ. ಕಳೆದ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಅನರ್ಹ ಶಾಸಕರಾಗಿದ್ದ ಬೇಳೂರು ಕಾಂಗ್ರೆಸ್ ಬೆಂಬಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದಾಗಿ ಬೇಳೂರು ಶಾಸಕ ಸ್ಥಾನವನ್ನು ಮರಳಿ ಪಡೆದಿದ್ದರೂ ಮೂಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಬೇಳೂರು ಅವರನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ.ಬೇಳೂರು ಅವರ ಶಾಸಕ ಸ್ಥಾನದ ಅನರ್ಹತೆ ರದ್ದಾದ ನಂತರ ಇಲ್ಲಿ ನಡೆಸಿದ ವಿಜಯೋತ್ಸವ ಮೆರವಣಿಗೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಪಾಲ್ಗೊಂಡಿರಲಿಲ್ಲ. ತದನಂತರ ರಾಮ್‌ದೇವ್‌ಗೆ ಬೆಂಬಲಿಸಿ ಬಿಜೆಪಿ ನಡೆಸಿದ ರಸ್ತೆತಡೆ, ಅಹೋರಾತ್ರಿ ಧರಣಿ ಇವೆ ಮೊದಲಾದ ಕಾರ್ಯಕ್ರಮಗಳಿಗೆ ಬೇಳೂರು ಅವರನ್ನು ದೂರ ಇಟ್ಟೆ ಆಯೋಜಿಸಲಾಗಿತ್ತು.ಇಂತಹ ಸನ್ನಿವೇಶದಲ್ಲಿ ಶಾಸಕ ಬೇಳೂರು ಸ್ಥಳೀಯವಾಗಿ ಹಾಗೂ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪಕ್ಷದ ವಲಯದಲ್ಲಿ ತಮ್ಮ ವರ್ಚಸ್ಸನ್ನು ಮರಳಿ ಪಡೆಯಲು  ತಾಲ್ಲೂಕು ಪಂಚಾಯ್ತಿಯಲ್ಲಿ `ಆಪರೇಷನ್ ಕಮಲ~ ನಡೆಸುವುದೇ ಪರಿಣಾಮಕಾರಿ ಮಾರ್ಗ ಎನ್ನುವ ದಾರಿ ಹಿಡಿದಿದ್ದಾರೆ ಎನ್ನಲಾಗಿದೆ.ಕೆಲವು ತಾಲ್ಲೂಕು ಪಂಚಾಯ್ತಿ ಸದಸ್ಯರು ಕಳೆದ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ `ನೆರವು~ ಪಡೆದಿರುವುದರಿಂದ ಸುಲಭವಾಗಿ  `ಆಪರೇಷನ್ ಕಮಲ~ಕ್ಕೆ ಬಾಗುತ್ತಾರೆ ಎಂಬ ನಿರೀಕ್ಷೆ ಬೇಳೂರು ಅವರದ್ದಾಗಿದೆ.ಕಾಂಗ್ರೆಸ್‌ನ ತಾ.ಪಂ. ಸದಸ್ಯರ ಪೈಕಿ ಹಾಲಿ ಅಧ್ಯಕ್ಷ ಪ್ರಕಾಶ್ ಲ್ಯಾವಿಗೆರೆ, ಸದಸ್ಯರುಗಳಾದ ಮಹಾಬಲೇಶ್ವರ ಕುಗ್ವೆ, ಜ್ಯೋತಿ ಮುರಳೀಧರ್, ಶ್ವೇತಾ ಕಾಗೋಡು, ಷಣ್ಮುಖ ಇವರುಗಳು ಮಾತ್ರ ಯಾವುದೇ ಕಾರಣಕ್ಕೂ ಕಾಂಗ್ರೆಸ್  ತೊರೆಯುವುದಿಲ್ಲ ಎಂದು ತಮ್ಮನ್ನು ಸಂಪರ್ಕಿಸಿದ  `ಆಪರೇಷನ್ ಕಮಲ~ದ ರೂವಾರಿಗಳಿಗೆ ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ. ಉಳಿದ ಸದಸ್ಯರು ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎನ್ನುವುದರ ಮೇಲೆ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಕಾಂಗ್ರೆಸ್ ಈ ಪರಿಸ್ಥಿತಿಯನ್ನು ಹೇಗೆ ಎದುರಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಎಂ. ರಾಘವೇಂದ್ರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry