ಸಾಗವಾನಿ ತುಂಡುಗಳ ಅಕ್ರಮ ಸಂಗ್ರಹ

7

ಸಾಗವಾನಿ ತುಂಡುಗಳ ಅಕ್ರಮ ಸಂಗ್ರಹ

Published:
Updated:

ಮುಂಡಗೋಡ: ಅಕ್ರಮವಾಗಿ ಸಾಗವಾನಿ ಮರಗಳನ್ನು ಕಡಿದು ಮನೆಯ ಹಿತ್ತಲಿನ ಚರಂಡಿಯಲ್ಲಿ ಹುದುಗಿಸಿಟ್ಟಿದ್ದ ಕಟ್ಟಿಗೆಯನ್ನು ಕಾತೂರ ಅರಣ್ಯ ಇಲಾಖೆಯವರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ತಾಲ್ಲೂಕಿನ ಪಾಳಾ ಕ್ರಾಸ್‌ನಲ್ಲಿ ಶನಿವಾರ ಸಂಜೆ ಜರುಗಿದೆ.ಸುಮಾರು 2.5ಲಕ್ಷ ರೂಪಾಯಿ ಮೌಲ್ಯದ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯವರು ತಿಳಿಸಿದ್ದಾರೆ.ಕಳೆದ ಕೆಲ ದಿನಗಳ ಹಿಂದೆ ತಾಲ್ಲೂಕಿನ ಭದ್ರಾಪುರ ಅರಣ್ಯವ್ಯಾಪ್ತಿಯಲ್ಲಿ ಸಾಗವಾನಿ ಮರಗಳನ್ನು ಕಡಿಯಲಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರಲ್ಲದೇ ಮರಗಳ್ಳರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದರು.ಇದರಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಅಧಿಕಾರಿಗಳು ಶನಿವಾರ ಸಂಜೆ ಪಾಳಾ ಕ್ರಾಸ್‌ನಲ್ಲಿರುವ ಮದ್ದೂರ ಹೋಟೆಲ್ ಮಾಲೀಕ ಸುರೇಶ ಕೊಟ್ಯಾನ್ ಮನೆಯ ಹಿತ್ತಲಿನಲ್ಲಿ ತಪಾಸಣೆ ನಡೆಸಿದಾಗ ಚರಂಡಿ ನೀರು ಸಂಗ್ರಹಗೊಂಡಿರುವ ತಗ್ಗಿನಲ್ಲಿ ಅಕ್ರಮವಾಗಿ ಮರದ ತುಂಡುಗಳನ್ನು ಹುದುಗಿಸಿಟ್ಟಿರುವುದು ಪತ್ತೆಯಾಯಿತು. ಕೂಡಲೇ ಪಟ್ಟಣ ಪಂಚಾಯ್ತಿಯ ಸಕ್ಕಿಂಗ್ ಯಂತ್ರದ ಸಹಾಯದಿಂದ ಚರಂಡಿ ನೀರನ್ನು ಹೊರತೆಗೆದು ಬಚ್ಚಿಟ್ಟಿದ್ದ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಯಿತು. ಅಲ್ಲದೇ ಸನಿಹದ ಗದ್ದೆಯಲ್ಲಿ ಬಚ್ಚಿಡಲಾಗಿದ್ದ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಳ್ಳಲಾಯಿತು.ಅಕ್ರಮವಾಗಿ ಸಾಗವಾನಿ ಕಟ್ಟಿಗೆಯನ್ನು ಮನೆಯ ಹಿತ್ತಲಿನಲ್ಲಿ ಬಚ್ಚಿಟ್ಟಿರುವುದನ್ನು ತಿಳಿದು ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ. ಕಾತೂರ ಆರ್‌ಎಫ್‌ಒ ಪಿ.ಸಿ.ಶಿಡೆನೂರ ನೇತೃತ್ವದಲ್ಲಿ ಸುಮಾರು 15ಕ್ಕೂ ಹೆಚ್ಚು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರೂ ಸಹ ಆರೋಪಿಗಳು ಪರಾರಿಯಾಗಿದ್ದಾರೆ.ಎಸಿಎಫ್ ಹೇಳಿಕೆ: ಕಾತೂರ ಅರಣ್ಯ ವ್ಯಾಪ್ತಿಯ ಭದ್ರಾಪುರ ಅರಣ್ಯದಲ್ಲಿ ಅಕ್ರಮವಾಗಿ ಸಾಗವಾನಿ ಮರಗಳನ್ನು ಕಡಿದು ಬಚ್ಚಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ ಕೊಟ್ಯಾನ್ ಹಾಗೂ ಪ್ರಭು ಕೊಟ್ಯಾನ್ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಗಳು ಪರಾರಿಯಾಗಿದ್ದು ಇವರ ಪತ್ತೆಗಾಗಿ ತಂಡಗಳನ್ನು ರಚಿಸಲಾಗಿದೆ ಎಂದು ಎಸಿಎಫ್ ವಿ.ಆರ್.ಬಸನಗೌಡರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry