ಗುರುವಾರ , ನವೆಂಬರ್ 14, 2019
18 °C

ಸಾಣೂರು: ಚುನಾವಣಾ ಬಹಿಷ್ಕಾರ ಫಲಕ ತೆರವು

Published:
Updated:

ಕಾರ್ಕಳ: ತಾಲ್ಲೂಕಿನ ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡ್ಡಾಯಿಗುಡ್ಡೆ, ಮುದ್ದಣ್ಣ ನಗರ, ದೇಂದಬೆಟ್ಟು ಪರಿಸರದ ಗ್ರಾಮಸ್ಥರು ರಸ್ತೆ ಡಾಂಬರೀಕರಣ ಮತ್ತು ಚರಂಡಿ ವ್ಯವಸ್ಥೆ ಒದಗಿಸದ ಕಾರಣಕ್ಕೆ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸಾಣೂರು ಶಾಲೆಯ ಎದುರಿನ ಮುಖ್ಯ ರಸ್ತೆಯಲ್ಲಿ ಅಳವಡಿಸಿದ್ದ ಫಲಕವನ್ನು ಬುಧವಾರ ದತೆರವುಗೊಳಿಸಲಾಗಿದೆ.ಚುನಾವಣೆ ಬಹಿಷ್ಕಾರದ ಫಲಕ ಅಳವಡಿಸಿದ ವಿಷಯ ತಿಳಿದ ನೀಡಿದ ಮಾಜಿ ಶಾಸಕ ಸುನಿಲ್ ಕುಮಾರ್ ಸಾಣೂರಿನ ರಿಕ್ಷಾ ಚಾಲಕರನ್ನು ಮತ್ತು ಸ್ಥಳೀಯರನ್ನು ಭೇಟಿ ಮಾಡಿ ಚುನಾವಣಾ ಬಹಿಷ್ಕಾರಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಸಮಾಲೋಚನೆ ನಡೆಸಿದರು.

ಸುಮಾರು 4 ಕಿ.ಮೀ. ವ್ಯಾಪ್ತಿಯ ಸಾಣೂರಿನ ಪ್ರಮುಖ ಸಂಪರ್ಕ ರಸ್ತೆಯನ್ನು ಮರುಡಾಂಬರೀಕರಣ ಮಾಡಿ, ಸುವ್ಯವಸ್ಥಿತವಾದ ಚರಂಡಿ ವ್ಯವಸ್ಥೆಯನ್ನು ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಚುನಾವಣಾ ನೀತಿ ಸಹಿಂತೆ ಮುಕ್ತಾಯಗೊಂಡ ಕೂಡಲೇ ಸರ್ಕಾರದ ಅನುದಾನ ದೊರಕಿಸಲು ಆದ್ಯತೆಯ ಮೇರೆಗೆ ಶ್ರಮಿಸಲಾಗುವುದು ಎಂದೂ ಚುನಾವಣೆಯನ್ನು ಬಹಿಷ್ಕರಿಸದಿರಲು ವಿನಂತಿಸಿದರು. ಮನವೊಲಿಕೆ ಬಳಿಕ ಸ್ಥಳೀಯರು ಚಂದ್ರಶೇಖರ್ ನೇತೃತ್ವದಲ್ಲಿ ಚುನಾವಣಾ ಬಹಿಷ್ಕಾರದ ಫಲಕವನ್ನು ತೆರವುಗೊಳಿಸಿದರು.ಈ ಸಂದರ್ಭದಲ್ಲಿ ಮಿಯಾರು ಜಿಲ್ಲಾ ಪಂಚಾಯಿತಿ ಸದಸ್ಯ ಉದಯ ಎಸ್. ಕೋಟ್ಯಾನ್, ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಕೋಟ್ಯಾನ್‌ಮಾಜಿ ಅಧ್ಯಕ್ಷ ನರಸಿಂಹ ಕಾಮತ್, ಪಂಚಾಯಿತಿ ಸದಸ್ಯ ಯುವರಾಜ್ ಜೈನ್, ದತ್ತಾತ್ರೇಯ ರಾವ್, ಏರ್ನಡ್ಕ ವಿಶ್ವನಾಥ ಶೆಟ್ಟಿ, ಕಾರ್ಕಳ ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್, ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ರಾಜೇಂದ್ರ ಬೇಕಲ್, ಸಾಣೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಶೆಣೈ ಇದ್ದರು.

ಪ್ರತಿಕ್ರಿಯಿಸಿ (+)