ಸಾಣೇಹಳ್ಳಿ: 3ರಿಂದ ರಾಷ್ಟ್ರೀಯ ನಾಟಕೋತ್ಸವ

7

ಸಾಣೇಹಳ್ಳಿ: 3ರಿಂದ ರಾಷ್ಟ್ರೀಯ ನಾಟಕೋತ್ಸವ

Published:
Updated:

ಚಿತ್ರದುರ್ಗ: ಹೊಸದುರ್ಗ ತಾಲ್ಲೂಕು ಸಾಣೇಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ನ. 3ರಿಂದ 9ರವರೆಗೆ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ.3ರಂದು ಸಂಜೆ 4.30ಕ್ಕೆ ಶಿವಕುಮಾರ ಸ್ವಾಮೀಜಿ ವಿದ್ಯಾರ್ಥಿನಿಲಯದ ಉದ್ಘಾಟನೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ.ಅದೇದಿನ ಸಂಜೆ 6ಕ್ಕೆ ನಾಟಕೋತ್ಸವದ ಉದ್ಘಾಟನೆ ಹಾಗೂ `ಶಿವಕುಮಾರ ಪ್ರಶಸ್ತಿ~ ಪ್ರದಾನ ಸಮಾರಂಭ ನಡೆಯಲಿದೆ.ರಾಜ್ಯೋತ್ಸವದ ಉದ್ಘಾಟನೆಯನ್ನು `ನೃಪತುಂಗ~ ಪ್ರಶಸ್ತಿ ಪುರಸ್ಕೃತ ಧಾರವಾಡದ ಡಾ.ಎಂ.ಎಂ. ಕಲ್ಬುರ್ಗಿ ನೆರವೇರಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು ಬಳಿಗಾರ್ ನಾಟಕೋತ್ಸವ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ, ಸಣ್ಣ ನೀರಾವರಿ ಸಚಿವ ಗೋವಿಂದ ಎಂ. ಕಾರಜೋಳ ಶಿವಸಂಚಾರ ನಾಟಕಗಳ ಉದ್ಘಾಟನೆ ನೆರವೇರಿಸಲಿದ್ದಾರೆ.ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅವರಿಗೆ `ಶಿವಕುಮಾರ ಪ್ರಶಸ್ತಿ~ ಪ್ರದಾನ ಮಾಡಲಾಗುವುದು. ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.

ಮನು ಬಳಿಗಾರ್ ರಚನೆಯ, ಮಾಲತೇಶ್ ಬಡಿಗೇರ್ ನಿರ್ದೇಶನದ `ಮೈಲಾರ ಮಹಾದೇವ~ ನಾಟಕ ಪ್ರದರ್ಶನ ನಡೆಯಲಿದೆ. ಶಿವಸಂಚಾರ 11ರ ತಂಡ ಅಭಿನಯಿಸಲಿದೆ.4ರಂದು ಸಂಜೆ 6ಕ್ಕೆ `ಮಾಧ್ಯಮಗಳ ಹೊಣೆಗಾರಿಕೆ~ ಕುರಿತು ಚಿಂತಕಿ ಬಿ.ಟಿ. ಲಲಿತಾ ನಾಯಕ್, ಖಾಸಗಿ ವಾಹಿನಿ ಕಾರ್ಯನಿರ್ವಾಹಕ ನಿರ್ದೇಶಕ ಟಿ.ಆರ್. ಶಿವಪ್ರಸಾದ್ ಮಾತನಾಡಲಿದ್ದಾರೆ. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯು.ಎಸ್. ರಾಮಣ್ಣ ಅವರನ್ನು ಅಭಿನಂದಿಸಲಾಗುವುದು. ತುಮಕೂರು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.ಪಿ.ಬಿ. ಧುತ್ತರಗಿ ರಚನೆಯ, ನಟರಾಜ್ ಹೊನ್ನವಳ್ಳಿ ನಿರ್ದೇಶನದ `ಮುದುಕನ ಮದುವೆ~ ನಾಟಕ ಪ್ರದರ್ಶನವಿದ್ದು, ಶಿವಸಂಚಾರ 11ರ ತಂಡ ಅಭಿನಯಿಸಲಿದೆ.5ರಂದು ಸಂಜೆ 6ಕ್ಕೆ `ಸಾಮಾಜಿಕ ಶುದ್ಧಿಗೆ ಪಂಚಾಚಾರಗಳ ಅನುಷ್ಠಾನ~ ಕುರಿತು ಗುಲ್ಬರ್ಗ ವಿವಿಯ ಪ್ರಾಧ್ಯಾಪಕ ಡಾ.ಬಸವರಾಜ ಸಬರದ ಹಾಗೂ `ರಂಗಭೂಮಿ ಮತ್ತು ದೃಶ್ಯ ಮಾಧ್ಯಮಗಳು~ ಕುರಿತು ನಟ ಶ್ರೀನಿವಾಸಪ್ರಭು ಮಾತನಾಡಲಿದ್ದಾರೆ. ಸಾವಯವ ಕೃಷಿಕ ವೀರಣ್ಣ ಅವರನ್ನು ಅಭಿನಂದಿಸಲಾಗುವುದು. ನಿಡಸೋಸಿ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠದ ಶಿವಲಿಂಗೇಶ್ವರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.ಆರ್. ನಾಗೇಂದ್ರರಾವ್ (ಬಾಬ್ಜಿ) ನಿರ್ದೇಶನದ `ಮಾಯಾ ಬಜಾರ್~ (ತೆಲುಗು) ನಾಟಕ ಪ್ರದರ್ಶವಿದ್ದು, ಹೈದರಾಬಾದ್‌ನ ವೆಂಕಟೇಶ್ವರ ನಾಟ್ಯಮಂಡಳಿ ಕಲಾವಿದರು ಅಭಿನಯಿಸಲಿದ್ದಾರೆ.6ರಂದು ಬೆಳಿಗ್ಗೆ 11ಕ್ಕೆ `ಬರಗಾಲ- ಬದುಕಿನ ವಿಧಾನ~ ಕುರಿತ ವಿಚಾರ ಸಂಕಿರಣ ನಡೆಯಲಿದೆ. `ಬರಪರಿಹಾರ ಯೋಜನೆಗಳು~ ಕುರಿತು ತುಮಕೂರು ಜಿಲ್ಲಾಧಿಕಾರಿ ಡಾ.ಸಿ. ಸೋಮಶೇಖರ್, `ಬದುಕಲು ಹೋರಾಟ~ ಕುರಿತು ಪರಿಸರ ಚಿಂತಕ ಡಾ.ಚಂದ್ರಶೇಖರ ನಂಗಲಿ, `ಬೀಜ ಮತ್ತು ಬದುಕು~ ಕುರಿತು ರೈತಪರ ಚಿಂತಕ ಕೃಷ್ಣಪ್ರಸಾದ್, `ಗಾಂಧೀಜಿ ಹಿಂದ್ ಸ್ವರಾಜ್~ ಕುರಿತು ಸಮಾಜವಾದಿ ಚಿಂತಕ ಡಿ.ಎಸ್. ನಾಗಭೂಷಣ್ ಮಾತನಾಡಲಿದ್ದಾರೆ.ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.  ಸಂಜೆ 6ಕ್ಕೆ `ಕನ್ನಡ ಶಾಲೆಗಳ ಅಳಿವು ಉಳಿವು~ ಕುರಿತು ಚಾಮರಾಜನಗರದ ಜಿ.ಎಸ್. ಜಯದೇವ, ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಬಸವರಾಜ ನೆಲ್ಲಿಸರ ಮಾತನಾಡಲಿದ್ದಾರೆ. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಡಾ.ರಾಜಪ್ಪ ದಳವಾಯಿ ಅವರನ್ನು ಅಭಿನಂದಿಸಲಾಗುವುದು. ಗದಗ ಶಿವಾನಂದ ಮಠದ ಅಭಿನವ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.ಪ್ರಸನ್ನ ಅವರ ನಿರ್ದೇಶನ, ರೂಪಾಂತರದ ಹಾಗೂ ಮೋಲಿಯರ್‌ನ ತಾರ್ತೂಫ್ ಮೂಲದ `ಆಚಾರ್ಯ ಪ್ರಹಸನ~ ನಾಟಕ ಪ್ರದರ್ಶನ ನಡೆಯಲಿದೆ. ಹೆಗ್ಗೋಡಿನ ಚರಕ ತಂಡ ಅಭಿನಯಿಸಲಿದೆ.7ರಂದು ಸಂಜೆ 6ಕ್ಕೆ `ರಾಜಕೀಯದಲ್ಲೊಂದು ಮಾಧ್ಯಮ ಮಾರ್ಗ~ ಕುರಿತು ಚಿಂತಕ ಬಿ.ಎಲ್. ಶಂಕರ್ ಮಾತನಾಡಲಿದ್ದಾರೆ. ನಾಟಕ ಅಕಾಡೆಮಿ ಪುರಸ್ಕೃತರಾದ ಎ.ಸಿ. ಚಂದ್ರಣ್ಣ, ಬಿ. ಕಮಲಮ್ಮ ಅವರನ್ನು ಅಭಿನಂದಿಸಲಾಗುವುದು. ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.ಪ್ರಮೋದ್ ಶಿಗ್ಗಾಂವ್ ನಿರ್ದೇಶನದ `ಮಿತ್ತಬೈಲ್ ಯಮುನಕ್ಕ~ ನಾಟಕ ಪ್ರದರ್ಶನ ನಡೆಯಲಿದೆ. ಡಿ.ಕೆ. ಚೌಟ ಮೂಲವಿದ್ದು,  ಮೊಹಮ್ಮದ್ ಕುಳಾಯಿ ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಬಸವರಾಜ ಸೂಳೇರಿಪಾಳ್ಯ ರಂಗರೂಪ ನೀಡಿದ್ದು, ಬೆಂಗಳೂರಿನ ರಂಗನಿರಂತರ ತಂಡ ಅಭಿನಯಿಸಲಿದೆ.8ರಂದು ಸಂಜೆ 6ಕ್ಕೆ `ಶರಣ ಸಂಕುಲ~ ಕುರಿತು ಚಿಂತಕ ರಂಜಾನ್ ದರ್ಗಾ, ವಿಜಯನಗರ ಕೃಷ್ಣದೇವರಾಯ ವಿವಿಯ ಡಾ.ಮಲ್ಲಿಕಾ ಘಂಟಿ ಮಾತನಾಡಲಿದ್ದಾರೆ. `ಪಂಪ~ ಪ್ರಶಸ್ತಿ ಪುರಸ್ಕೃತ ಪ್ರೊ.ಚಂದ್ರಶೇಖರ್ ಪಾಟೀಲ್ ಅವರನ್ನು ಅಭಿನಂದಿಸಲಾಗುವುದು. ಜಮಖಂಡಿ ಓಲೆಮಠದ ಡಾ.ಚನ್ನಬಸವ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ.

ಡಾ.ರಾಜಶೇಖರ ಹನುಮಲಿ ರಚನೆಯ, ಗುರುಶಾಂತಯ್ಯ ಸಿರಿಗೆರೆ ಮತ್ತು ಸಂತೋಷ್ ನಿರ್ದೇಶನದ `ಮಹಾಬೆಳಗು~ ನಾಟಕ ಪ್ರದರ್ಶನ ನಡೆಯಲಿದೆ. ಶಿವಕುಮಾರ ಕಲಾ ಸಂಘದವರು ಅಭಿನಯಿಸಲಿದ್ದಾರೆ.9ರಂದು ಸಂಜೆ 6ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಶಿವಮೊಗ್ಗ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ  ಇತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಚಂದ್ರಶೇಖರ ಕಂಬಾರ ರಚನೆಯ, ಮಹದೇವ ಹಡಪದ ನಿರ್ದೇಶನದ `ಶಿವರಾತ್ರಿ~ ನಾಟಕ ಪ್ರದರ್ಶನ ನಡೆಯಲಿದೆ. ಶಿವಸಂಚಾರ 11 ತಂಡ ಅಭಿನಯಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry