ಭಾನುವಾರ, ನವೆಂಬರ್ 17, 2019
29 °C

ಸಾಧಕಿಯರು ಇವರು ದೇಶ ಕಟ್ಟಿದವರು

Published:
Updated:

ಭಾರತದ ಸಂಸತ್ತಿಗೆ ಈಗ ಭರ್ತಿ 60 ವಸಂತ. ಪ್ರಜಾಪ್ರಭುತ್ವದ ಹಾದಿಯಲ್ಲಿ ದೇಶಕ್ಕೀಗ ಪ್ರೌಢ ವಯಸ್ಸು.ಪ್ರಜಾಪ್ರಭುತ್ವದ ಗರ್ಭಗುಡಿಯಂತಿರುವ ಸಂಸತ್ತಿನಲ್ಲಿ ಈ 60 ವರ್ಷಗಳಲ್ಲಿ ಹಲವು ಸಂಸದೀಯ ಪಟುಗಳು ಆಗಿಹೋಗಿದ್ದಾರೆ. ಪುರುಷ ದನಿಗಳ ಅಬ್ಬರದ ನಡುವೆಯೇ ಪ್ರಜಾಪ್ರಭುತ್ವಕ್ಕೆ ಪುಷ್ಟಿ ತುಂಬಲು, ದೇಶವನ್ನು ಕಟ್ಟಲು ಕೆಲ ಅಸಾಮಾನ್ಯ ಮಹಿಳೆಯರೂ ಕೆಲಸ ಮಾಡಿದ್ದಾರೆ.ದೇಶದ ಮೊದಲ ಮಹಿಳಾ ಸಚಿವೆ ರಾಜಕುಮಾರಿ ಅಮೃತ್ ಕೌರ್ ಅವರಿಂದ ಹಿಡಿದು, ದೇಶದ ಇತಿಹಾಸದಲ್ಲೇ ಅತ್ಯಂತ ಕಿರಿಯ ಸಚಿವೆ ಎಂಬ ಹೆಗ್ಗಳಿಕೆ ಹೊತ್ತಿರುವ ಅಗಾಥಾ ಸಂಗ್ಮಾ ತನಕ ಸಂಸತ್ತಿನಲ್ಲಿ ಈ ಮಹಿಳಾ ಸಚಿವರು, ಸದಸ್ಯೆಯರು ಮೂಡಿಸಿದ ಹೆಜ್ಜೆ ಗುರುತುಗಳು ಕಾಣುತ್ತವೆ. ಈ ಹೆಜ್ಜೆ ಗುರುತುಗಳ ಜಾಡು ಹಿಡಿದಾಗ ಮಹಿಳಾ ದನಿಗಳ ನಡುವಿನಿಂದ ಅಪರೂಪಕ್ಕೆ ಅಬ್ಬರದ ಘರ್ಜನೆಗಳೂ ಕೇಳಿಬಂದಿವೆ. ತಮ್ಮ ಪಕ್ಷದ ನಾಯಕರಿಗೆ ಇರುಸುಮುರುಸಾಗದಂತೆ ನಡೆದುಕೊಂಡಿರುವ ಮೇಲುದನಿಯ ಸಂಸದೆಯರು, ಸಚಿವೆಯರ ಸಂಖ್ಯೆಯೇ ಹೆಚ್ಚಾಗಿರುವುದೂ ಬೇಸರ ಹುಟ್ಟಿಸುವ ಸಂಗತಿಯೇ.

 
ಮರೆಯಲಾಗದ ಆಡಳಿತ

15 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಇಂದಿರಾ ಪ್ರಿಯದರ್ಶಿನಿ ಅವರನ್ನು ಇತಿಹಾಸ ಎಂದೂ ಮರೆಯದು. ತುರ್ತು ಪರಿಸ್ಥಿತಿಯ ಕರಾಳ ನೆನಪು, ಅವರ ಸರ್ವಾಧಿಕಾರಿ ಧೋರಣೆ ಬದಿಗಿಟ್ಟು ನೋಡಿದಾಗ ಅವರೊಬ್ಬ ದೂರದೃಷ್ಟಿ ಉಳ್ಳ, ಆಧುನಿಕ ಚಿಂತನೆಯ ಆಡಳಿತಗಾರ್ತಿಯಾಗಿದ್ದರು ಎಂಬುದು ಸ್ಪಷ್ಟವಾಗುತ್ತದೆ.ಭಾರತದ ಬಾಹ್ಯಾಕಾಶ ಯೋಜನೆಗಳಿಗೆ, ಕ್ಷಿಪಣಿ ಕಾರ್ಯಕ್ರಮಗಳಿಗೆ ಭದ್ರ ಅಡಿಪಾಯ ಹಾಕಿದ ಅವರನ್ನು ಬಾಹ್ಯಾಕಾಶ ವಿಜ್ಞಾನಿಗಳು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಅಮೆರಿಕದ ಒತ್ತಡಕ್ಕೆ ಮಣಿಯದೇ ಭಾರತ ಪರಮಾಣು ಶಕ್ತ ರಾಷ್ಟ್ರವಾಗುವಂತೆ ನೋಡಿಕೊಂಡಿದ್ದು ಸಹ ಅವರೇ. ಬ್ಯಾಂಕ್ ರಾಷ್ಟ್ರೀಕರಣ, ಬಾಂಗ್ಲಾ ವಿಮೋಚನೆ ಇತ್ಯಾದಿ ಇಂದಿರಾ ಸಾಧನೆಯ ಮುಕುಟಗಳು.ಮಾದರಿ ಸಚಿವೆ: ದೇಶದ ಮೊದಲ ಮಹಿಳಾ ಸಚಿವೆ ಎಂಬ ಹೆಗ್ಗಳಿಕೆ ಹೊತ್ತ ರಾಜಕುಮಾರಿ ಅಮೃತ್ ಕೌರ್ ಇಂದಿಗೂ ಮಹಿಳಾ ಸಚಿವರು, ಸಂಸದೆಯರಿಗೆ ಅತ್ಯುದ್ಭುತ ಮಾದರಿ. ವಿದೇಶದಲ್ಲಿ ಓದಿದ್ದ, ಮಹಾತ್ಮ ಗಾಂಧಿ ಅವರ ಕಟ್ಟಾ ಅನುಯಾಯಿಯಾಗಿದ್ದ, ಕಳೆದ ಶತಮಾನದ ಆರಂಭದಲ್ಲಿಯೇ ಆಧುನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಅಮೃತ್ ಕೌರ್ ಅವರಿಗೆ ಜವಾಹರಲಾಲ್ ನೆಹರು ಅವರೇ ಖುದ್ದಾಗಿ ಆಹ್ವಾನ ನೀಡಿ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದರು.ಪ್ರಥಮ ಆರೋಗ್ಯ ಸಚಿವೆಯಾಗಿದ್ದ ಕೌರ್, ಅತ್ಯುತ್ತಮ ಸಂಸದೀಯ ಪಟುವೂ ಆಗಿದ್ದರು. ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಅವರು ದೆಹಲಿಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಿ ಆರೋಗ್ಯ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದರು. (ಅದೀಗ ಏಷ್ಯಾದಲ್ಲೇ ಪ್ರತಿಷ್ಠಿತವಾದ ಸಂಸ್ಥೆ) ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತಂದ ಅವರು ವರದಕ್ಷಿಣೆ, ಬಾಲ್ಯ ವಿವಾಹ ತಡೆ ಕಾಯ್ದೆಗಳನ್ನು ರೂಪಿಸುವಲ್ಲಿಯೂ ಮಹತ್ವದ ಪಾತ್ರ ನಿಭಾಯಿಸಿದ್ದರು.ವರ್ಣರಂಜಿತ ರಾಜಕಾರಣಿ: ಕ್ವಿಟ್ ಇಂಡಿಯಾ ಚಳವಳಿಯಿಂದ ರಾಜಕೀಯ ಕ್ಷೇತ್ರಕ್ಕೆ ಬಂದಿದ್ದ ಬಿಹಾರದ ತಾರಕೇಶ್ವರಿ ಸಿನ್ಹಾ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ಪಟ್ನಾ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದರು. ಆಗ ಅವರ ವಯಸ್ಸು ಬರೀ 26. 1957 ರಿಂದ 67ರ ತನಕ ಲೋಕಸಭೆಗೆ ಸತತವಾಗಿ ಆಯ್ಕೆಯಾದ ತಾರಕೇಶ್ವರಿ 1958-64ರ ಅವಧಿಯಲ್ಲಿ ನೆಹರು ಸಂಪುಟದಲ್ಲಿ ಉಪ ಹಣಕಾಸು ಸಚಿವೆಯಾಗಿದ್ದರು. ನೂರಾರು ಉರ್ದು ಶಾಯರಿಗಳನ್ನು ನೆನಪಾದಾಗಲೆಲ್ಲ ಉದ್ಧರಿಸುತ್ತಿದ್ದ ಸುಂದರಿ ತಾರಕೇಶ್ವರಿ 60ರ ದಶಕದಲ್ಲಿ ಕಾಂಗ್ರೆಸ್‌ನ `ತಾರಾ~ ಪ್ರಚಾರಕಿಯಾಗಿದ್ದರು.

 
ಮಹಿಳಾ ಮಾರ್ಷಲ್‌ಗಳು!

ಅಂದು 2008ರ ಮೇ 6. ಆಗ ಕಾನೂನು ಸಚಿವರಾಗಿದ್ದ ಹಂಸರಾಜ್ ಭಾರದ್ವಾಜ್ ಮಹಿಳಾ ಮೀಸಲು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲು ಸಿದ್ಧತೆ ನಡೆಸಿದ್ದರು. ಸಮಾಜವಾದಿ ಪಕ್ಷದ ಅಬು ಅಸೀಮ್ ಆಜ್ಮಿ ಮತ್ತಿತರರು ಭಾರದ್ವಾಜ್ ಬಳಿ ಬಂದು ಮಸೂದೆ ಪ್ರತಿ ಕಿತ್ತುಕೊಳ್ಳಲು ಯತ್ನಿಸಿದಾಗ ಅವರನ್ನು ದೈಹಿಕವಾಗಿಯೂ ಗಟ್ಟಿಯಾಗಿರುವ ಸಚಿವೆ ರೇಣುಕಾ ಚೌಧರಿ ಅಡ್ಡಗಟ್ಟಿದ್ದರು. ಈ ಅಪಾಯವನ್ನು ಮೊದಲೇ ಊಹಿಸಿದ್ದ ಭಾರದ್ವಾಜ್ ಇಬ್ಬರು ಮಹಿಳಾ ಸಚಿವೆಯರಾದ ಕುಮಾರಿ ಶೆಲ್ಜಾ ಹಾಗೂ ಅಂಬಿಕಾ ಸೋನಿ ಅವರ ಮಧ್ಯೆ ರಕ್ಷಣೆ ಪಡೆಯುವಂತೆ ಕುಳಿತಿದ್ದರು. ಎಸ್‌ಪಿ ಸದಸ್ಯರು ಸಚಿವರ ಹತ್ತಿರಕ್ಕೂ ಸುಳಿಯದಂತೆ ನೋಡಿಕೊಳ್ಳಲು ಕಾಂಗ್ರೆಸ್ ಸಂಸದೆಯರಾದ ಜಯಂತಿ ನಟರಾಜನ್ ಹಾಗೂ ಅಲ್ಕಾ ಬಲರಾಂ ಸನ್ನದ್ಧರಾಗಿ ನಿಂತಿದ್ದರು. ಮಹಿಳಾ ಮೀಸಲು ಮಸೂದೆಯಂತಹ ವಿಚಾರದಲ್ಲಿ ಈ ಮಹಿಳೆಯರು ಎಷ್ಟು ಭಾವನಾತ್ಮಕವಾಗಿ ಸ್ಪಂದಿಸಿದರು ಎಂಬುದು ಇಲ್ಲಿ ಗಮನಾರ್ಹ. 2010ರ ಮಾರ್ಚ್‌ನಲ್ಲಿ ಅಂತಿಮವಾಗಿ ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರವಾದಾಗ ಸೈದ್ಧಾಂತಿಕವಾಗಿ ವಿರುದ್ಧ ಧ್ರುವಗಳಂತಿರುವ ಬಿಜೆಪಿಯ ಸುಷ್ಮಾ ಸ್ವರಾಜ್ ಮತ್ತು ಸಿಪಿಎಂನ ಬೃಂದಾ ಕಾರಟ್ ಪರಸ್ಪರ ತಬ್ಬಿಕೊಂಡು ಸಂಭ್ರಮಿಸಿದ್ದು ಸಹ ಸಂಸತ್ತಿನ ಮರೆಯಲಾಗದ ಕ್ಷಣಗಳಲ್ಲಿ ಒಂದು.`ಬ್ಯೂಟಿ ವಿತ್ ಬ್ರೇನ್ಸ್~ ಎಂದು ಹೊಗಳಿಸಿಕೊಂಡಿದ್ದ, ವರ್ಣರಂಜಿತ ವ್ಯಕ್ತಿತ್ವದ ಆಕೆ ಕಾಂಗ್ರೆಸ್ ಹೋಳಾದಾಗ ಕೆ.ಕಾಮರಾಜ್, ಮೊರಾರ್ಜಿ ಜತೆ ಉಳಿದರು. ಇಂದಿರಾ ಜತೆಗಿನ ವಿರಸದಿಂದ 70ರ ದಶಕದಲ್ಲಿ ತೆರೆಮರೆಗೆ ಸರಿದರು. 19 ವರ್ಷಗಳ ಕಾಲ ಸಂಸತ್ ಕಲಾಪಕ್ಕೆ ಜೀವಂತಿಕೆ ತರುವಂತೆ ಮಾತನಾಡುತ್ತಿದ್ದ ತಾರಕೇಶ್ವರಿ ತಮ್ಮ  81ನೇ ವರ್ಷದಲ್ಲಿ (2007) ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದು ಮಾತ್ರ ಸುದ್ದಿಯಾಗಲೇ ಇಲ್ಲ. ಸ್ವಾತಂತ್ರ್ಯ ಸಂಗ್ರಾಮದ ಕಾವಿನಲ್ಲಿ ರಾಜಕೀಯಕ್ಕಿಳಿದ ಮತ್ತೊಬ್ಬ ಹಿರಿಯ ರಾಜಕಾರಣಿ ಸುಚೇತಾ ಕೃಪಲಾನಿ. 1952, 57ರಲ್ಲಿ ನವದೆಹಲಿ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದ ಅವರು ಸಣ್ಣ ಕೈಗಾರಿಕಾ ಇಲಾಖೆ ರಾಜ್ಯ ಸಚಿವೆಯಾಗಿದ್ದರು. ಆನಂತರ ಉತ್ತರ ಪ್ರದೇಶದ ರಾಜಕೀಯಲ್ಲಿ ತೊಡಗಿಸಿಕೊಂಡ ಅವರು 1963ರಲ್ಲಿ ಆ ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.ಸಂಸತ್ತಿನಲ್ಲಿ ತಮ್ಮ ಗುರುತು ಬಿಟ್ಟುಹೋದ ಮೊದಲ ತಲೆಮಾರಿನ ಮಹಿಳಾ ರಾಜಕಾರಣಿಗಳಲ್ಲಿ ವಯಲೆಟ್ ಆಳ್ವ ಸಹ ಒಬ್ಬರು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಜೈಲುವಾಸ ಅನುಭವಿಸಿದ್ದ ವಯಲೆಟ್ ವೃತ್ತಿಯಿಂದ ವಕೀಲರು. ಹೈಕೋರ್ಟ್‌ನಲ್ಲಿ ವಾದಿಸಿದ ದೇಶದ ಮೊದಲ ಮಹಿಳೆ ಎಂಬ ಹಿರಿಮೆ ಅವರದ್ದು. ಉಡುಪಿ ಮೂಲದ ಪತಿ ಜೋಕಿಂ ಆಳ್ವ ಜತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ವಯಲೆಟ್ 1952ರಲ್ಲಿ ಕಾಂಗ್ರೆಸ್‌ನಿಂದ ರಾಜ್ಯಸಭೆಗೆ ಆಯ್ಕೆಯಾದರು. 1962ರಲ್ಲಿ ರಾಜ್ಯಸಭೆಯ ಉಪ ಸಭಾಪತಿ. 1969ರಲ್ಲಿ ಉಪ ರಾಷ್ಟ್ರಪತಿ ಸ್ಥಾನಕ್ಕೆ ಇಂದಿರಾ ಗಾಂಧಿ ಬೆಂಬಲಿಸಲಿಲ್ಲ ಎಂಬ ಕಾರಣಕ್ಕೆ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದ ಅವರು ಒಂದೇ ವಾರದಲ್ಲಿ ಸಾವನ್ನಪ್ಪಿದರು. 70ರ ದಶಕದಲ್ಲಿ ರಾಜಕೀಯಕ್ಕೆ ಇಳಿದ ಅವರ ಸೊಸೆ ಮಾರ್ಗರೇಟ್ ಆಳ್ವ, ಗಾಂಧಿ ಕುಟುಂಬದ ಕೃಪಾಕಟಾಕ್ಷದಿಂದಲೇ ಮೇಲಕ್ಕೇರಿದ್ದು ವಿಪರ್ಯಾಸ.   60ರ ದಶಕದ ಉತ್ತರಾರ್ಧದಲ್ಲಿ ಇಂದಿರಾ ಅವರಿಗೆ ಆಪ್ತರಾಗಿ ಮಿಂಚಿದವರು ಒಡಿಶಾದ ನಂದಿನಿ ಸತ್ಪತಿ. 1962ರಲ್ಲಿ ರಾಜ್ಯಸಭೆ ಪ್ರವೇಶಿಸಿದ ಅವರು 1966ರಲ್ಲಿ ಇಂದಿರಾ ಪ್ರಧಾನಿಯಾದಾಗ ವಾರ್ತಾ ಮತ್ತು ಪ್ರಸಾರ ಸಚಿವೆಯಾದರು.1972ರಲ್ಲಿ ಬಿಜು ಪಟ್ನಾಯಕ್ ಮತ್ತಿತರರು ಕಾಂಗ್ರೆಸ್ ತೊರೆದು ಹೊರನಡೆದಾಗ ಒಡಿಶಾದ ಮುಖ್ಯಮಂತ್ರಿ ಪಟ್ಟ ಅವರಿಗೆ ಒಲಿದುಬಂತು. ತುರ್ತುಪರಿಸ್ಥಿತಿಯ ದಿನಗಳಲ್ಲಿ ಇಂದಿರಾ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದ ನಂದಿನಿ 1977ರ ನಂತರ ಇಂದಿರಾ ಸಂಗ ತೊರೆದರು. ಆಮೇಲೆ ರಾಜ್ಯ, ರಾಷ್ಟ್ರ ರಾಜಕಾರಣಕ್ಕೆ ಮರಳಲು ಅವರಿಗೆ ಸಾಧ್ಯವಾಗಲೇ ಇಲ್ಲ. 1962ರಿಂದ 71ರ ತನಕ ಲೋಕಸಭೆಯ ಸ್ವತಂತ್ರ ಸದಸ್ಯೆಯಾಗಿದ್ದ ಜೈಪುರದ ರಾಜಮಾತಾ ಗಾಯತ್ರಿ ದೇವಿ, ಇಂದಿರಾಗೆ ಸೆಡ್ಡು ಹೊಡೆದ ಮತ್ತೊಬ್ಬ ಮಹಿಳಾ ರಾಜಕಾರಣಿ. ಕೇಂದ್ರ ಬಿಂದು ಇಂದಿರಾ: ಸಂಸತ್ತಿನ ಪುಟಗಳಲ್ಲಿ ಮಹಿಳೆಯರ ಹೆಜ್ಜೆಗಳನ್ನು ಅವಲೋಕಿಸಿದರೆ `ಉಕ್ಕಿನ ಮಹಿಳೆ~ ಇಂದಿರಾ ಪ್ರಿಯದರ್ಶಿನಿ ಕೇಂದ್ರ ಬಿಂದುವಿನಂತೆ ಕಾಣುತ್ತಾರೆ. 60ರ ದಶಕದ ಉತ್ತರ ಭಾಗದಿಂದ 80ರ ದಶಕದ ಮಧ್ಯಭಾಗದವರೆಗೂ ಅವರ ಪ್ರಭಾವ ಅಲ್ಲಿ ದಟ್ಟವಾಗಿ ಕಾಣುತ್ತದೆ. ಇಂದಿರಾಗೆ ಪ್ರಿಯವಾಗಿದ್ದವರೇ, ಎದುರು ಮಾತನಾಡದವರೇ ಸಚಿವ ಸಂಪುಟದಲ್ಲಿ, ಲೋಕಸಭೆ, ರಾಜ್ಯಸಭೆಯಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ಸ್ಥಾನ ಗಳಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಕಾಂಗ್ರೆಸ್ ಮಟ್ಟಿಗೆ ಹೇಳುವುದಾದರೆ ಇವತ್ತಿಗೂ ಗಾಂಧಿ ಕುಟುಂಬಕ್ಕೆ ಹತ್ತಿರವಾದವರೇ ಪಕ್ಷದಲ್ಲಿ, ಸರ್ಕಾರದಲ್ಲಿ ಉತ್ತಮ ಸ್ಥಾನ ಗಳಿಸುತ್ತಿರುವುದು ಬಹಿರಂಗ ಸತ್ಯ.ಹಾಗೆ ರಾಜಕೀಯಕ್ಕೆ ಬಂದವರು ಈಗ ಪ್ರವಾಸೋದ್ಯಮ ಸಚಿವೆಯಾಗಿರುವ ಅಂಬಿಕಾ ಸೋನಿ. ರಾಜತಾಂತ್ರಿಕರೊಬ್ಬರ ಪತ್ನಿಯಾಗಿದ್ದ, ಅಸ್ಖಲಿತವಾಗಿ ಇಂಗ್ಲಿಷ್ ಮಾತನಾಡುವ ಅಂಬಿಕಾ ಅವರನ್ನು ಇಂದಿರಾ ಯುವ ಕಾಂಗ್ರೆಸ್‌ಗೆ ಎಳೆದುತಂದಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದಾಗ ನೇಪಥ್ಯಕ್ಕೆ ಸರಿದಿದ್ದ ಅಂಬಿಕಾ 2004ರ ಕಾಂಗ್ರೆಸ್ ಗೆಲುವಿನ ನಂತರ ಮತ್ತೆ ರಾಜಕೀಯ ರಂಗದಲ್ಲಿ ಕಾಣಿಸಿಕೊಂಡರು.ಅಂಬಿಕಾ ಸೋನಿ ಮಾದರಿಯಲ್ಲೇ ಕಾಂಗ್ರೆಸ್ ಪ್ರವೇಶಿಸಿದವರು ಮಂಗಳೂರಿನ ಮಾರ್ಗರೇಟ್ ಆಳ್ವ. ಜೋಕಿಂ ಆಳ್ವ-ವಯಲೆಟ್ ಆಳ್ವ ಅವರ ಸೊಸೆ ಮಾರ್ಗರೇಟ್ 1974ರಿಂದ ನಾಲ್ಕು ಸಲ ರಾಜ್ಯಸಭೆಗೆ ಆಯ್ಕೆಯಾದರು. ರಾಜ್ಯಸಭೆಯ ಹಲವು ಸಮಿತಿಗಳಲ್ಲಿ ಸದಸ್ಯೆಯಾಗಿದ್ದ ಅವರು ತಮ್ಮ ಪ್ರಬುದ್ಧ ಇಂಗ್ಲಿಷ್ ಹಾಗೂ ಮಾತನಾಡುವ ಕಲೆಯಿಂದಾಗಿ ವಿದೇಶಕ್ಕೆ ತೆರಳುವ ನಿಯೋಗಗಳಲ್ಲಿ ಕಾಯಂ ಸದಸ್ಯೆಯಾಗಿರುತ್ತಿದ್ದರು.1999ರಲ್ಲಿ ಕೆನರಾ ಕ್ಷೇತ್ರದಿಂದ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ ಮಾರ್ಗರೇಟ್ ನಂತರದ ಚುನಾವಣೆಗಳಲ್ಲಿ ಸೋತುಹೋದರು. 2009ರಲ್ಲಿ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು. ಪ್ರಸ್ತುತ ಅವರು ರಾಜಸ್ತಾನದ ರಾಜ್ಯಪಾಲರು.

ನಜ್ಮಾ ಹೆಫ್ತುಲ್ಲಾ: 80, 90ರ ದಶಕದಲ್ಲಿ ಕಾಂಗ್ರೆಸ್‌ನಲ್ಲಿ ಪ್ರಮುಖವಾಗಿ ಕಾಣಿಸುತ್ತಿದ್ದ ಮಹಿಳಾ ರಾಜಕಾರಣಿ ನಜ್ಮಾ ಹೆಫ್ತುಲ್ಲಾ. 1980-1990ರವರೆಗೆ ಮೇಲ್ಮನೆ ಸದಸ್ಯೆಯಾಗಿದ್ದ ಅವರು ಎರಡು ಬಾರಿ ರಾಜ್ಯಸಭೆಯ ಉಪಸಭಾಪತಿಯೂ ಆಗಿದ್ದರು.ಜಾಗತಿಕ ಮಟ್ಟದಲ್ಲಿ ಸಂಸದೀಯ ನಿಯೋಗಗಳ ನೇತೃತ್ವ ವಹಿಸುತ್ತಿದ್ದ ನಜ್ಮಾ, ಸೋನಿಯಾ ಗಾಂಧಿ ತಮ್ಮನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಅಸಮಾಧಾನದಿಂದ 2004ರಲ್ಲಿ ಬಿಜೆಪಿ ಸೇರಿದರು. ಆ ವರ್ಷ ಉಪ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಅವರಿಗೆ ಪಕ್ಷದ ಬೆಂಬಲ ದೊರೆಯಲಿಲ್ಲ. 

ಜಯಂತಿ ನಟರಾಜನ್

ಗಾಂಧಿ ಕುಟುಂಬ ಗುರುತಿಸಿ ಮೇಲೆ ತಂದ ರಾಜಕಾರಣಿಗಳಲ್ಲಿ ಹಾಲಿ ಪರಿಸರ ಖಾತೆ ಸಚಿವೆ ಜಯಂತಿ ನಟರಾಜನ್ ಸಹ ಒಬ್ಬರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಭಕ್ತವತ್ಸಲ ಅವರ ಮೊಮ್ಮಗಳಾದ ಜಯಂತಿ ಅವರ ಮಾತನಾಡುವ ಕಲೆಗೆ ಖುದ್ದು ರಾಜೀವ್ ಗಾಂಧಿ ಅವರೇ ತಲೆದೂಗಿದ್ದರು. ತಮ್ಮ ಯುವ ಬಳಗಕ್ಕೆ ಅವರನ್ನು ಸೇರಿಸಿಕೊಂಡರು. ಪಿವಿಎನ್ ಕಾಲದಲ್ಲಿ ತಮಿಳು ಮಾನಿಲಾ ಕಾಂಗ್ರೆಸ್ ಸ್ಥಾಪಿಸಿಕೊಡು ಹೊರನಡೆದಿದ್ದ ಜಯಂತಿ ದಶಕದ ಹಿಂದೆ ತವರು ಪಕ್ಷಕ್ಕೆ ಮರಳಿದರು. ಇತ್ತೀಚಿನವರೆಗೆ ಕಾಂಗ್ರೆಸ್ ವಕ್ತಾರೆಯಾಗಿದ್ದ ಅವರಿಗೆ ಈಗ ಬಹುಮಹತ್ವದ ಪರಿಸರ ಖಾತೆಯ ಹೊಣೆ ನೀಡಲಾಗಿದೆ. ಮೂರು ವಾರಗಳ ಹಿಂದೆ ಮುಕ್ತಾಯಗೊಂಡ `ರಯೊ 20~ ಶೃಂಗಸಭೆಯಲ್ಲಿ ಅಭಿವೃದ್ಧಿಶೀಲ ದೇಶಗಳಿಗೂ, ಅಭಿವೃದ್ಧಿ ಹೊಂದಿದ ದೇಶಗಳಿಗೂ ಒಂದೇ ನೀತಿ ಅನುಸರಿಸುವಂತಿಲ್ಲ ಎಂಬ ಭಾರತದ ವಾದಕ್ಕೆ ಮನ್ನಣೆ ಸಿಗುವಂತೆ ಮಾಡಿದ್ದಾರೆ.ತೆಲಗುದೇಶಂ ಮೂಲಕ ರಾಜಕೀಯ ಪ್ರವೇಶಿಸಿ ಆನಂತರ ಕಾಂಗ್ರೆಸ್‌ಗೆ ವಲಸೆ ಬಂದವರು ಆಂಧ್ರ ಪ್ರದೇಶದ ಬೆಂಕಿ ಚೆಂಡಿನಂತಹ ಹೆಣ್ಣು ಮಗಳು ರೇಣುಕಾ ಚೌಧರಿ. ಮಹಿಳಾ ಸಮಾನತೆಯ ವಿಚಾರ ಬಂದಾಗಲೆಲ್ಲ ಏರುದನಿಯಲ್ಲಿ ವಾದಿಸುವ ಅವರು, ಯುಪಿಎ ಮೊದಲ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ರಾಜಸ್ತಾನದ ಗಿರಿಜಾ ವ್ಯಾಸ್, ದಲಿತ ನಾಯಕಿಯಾಗಿರುವ ದೆಹಲಿ ಮೂಲದ ಶೆಲ್ಜಾ ಕುಮಾರಿ,  ವಿದೇಶಾಂಗ ಅಧಿಕಾರಿಯಾಗಿ ನಂತರ ರಾಜಕೀಯ ಪ್ರವೇಶಿಸಿದ ಜಗಜೀವನ್ ರಾಮ್ ಪುತ್ರಿ ಮೀರಾ ಕುಮಾರ್ ಗುರುತಿಸಬಹುದಾದ ಕಾಂಗ್ರೆಸ್ ಮುಖಗಳು. 2004ರಲ್ಲಿ ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಬಲೀಕರಣ ಸಚಿವೆಯಾಗಿದ್ದ ಮೀರಾ ಅವರನ್ನು ಲೋಕಸಭೆಯ ಮೊದಲ ಮಹಿಳಾ ಸ್ಪೀಕರ್ ಸ್ಥಾನದಲ್ಲಿ ಕೂರಿಸಿದ ಕೀರ್ತಿ ಮಾತ್ರ ಸೋನಿಯಾ ಅವರಿಗೆ ಸಲ್ಲುತ್ತದೆ.ಇವರೆಲ್ಲರ ನಾಯಕಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮಾತ್ರ ಲೋಕಸಭೆಯಲ್ಲಿ `ಗೂಂಗಿ ಗುಡಿಯಾ~ (ಮೌನ ಗೊಂಬೆ) ತರಹ ಕುಳಿತುಕೊಳ್ಳುತ್ತಾರೆ. ಆದರೆ, ತೆರೆಮರೆಯ ನಿರ್ಧಾರವೆಲ್ಲ ಅವರದ್ದೇ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಗ್ರಾಮೀಣ ಆರೋಗ್ಯ ಯೋಜನೆ ಇತ್ಯಾದಿ ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ರೂವಾರಿ ಸೋನಿಯಾ.ಪ್ರಖರ ಸಂಸದೀಯ ಪಟು: ಗಾಂಧಿ ಕುಟುಂಬದ ಮತ್ತೊಬ್ಬ ಸೊಸೆ ಮೇನಕಾ ಗಾಂಧಿ ಈಗ

ಮೇನಕಾ ಗಾಂಧಿ

ಬಿಜೆಪಿ ಸದಸ್ಯೆ. ಆರು ಸಲ ಲೋಕಸಭೆಗೆ ಆಯ್ಕೆಯಾಗಿರುವ ಆಕೆ ದೇಶದ ಹಿರಿಯ ಮತ್ತು ಪ್ರಖರ ಸಂಸದೀಯ ಪಟುಗಳಲ್ಲಿ ಒಬ್ಬರು. ಪತಿ ಸಂಜಯ್ ಗಾಂಧಿ ಮರಣದ ನಂತರ ಗಾಂಧಿ ಕುಟುಂಬದಿಂದ ದೂರವಾದ ಆಕೆ ರಾಷ್ಟ್ರೀಯ ಸಂಜಯ್ ಮಂಚ್ ಸ್ಥಾಪಿಸಿ 1984ರಲ್ಲಿ ಅಮೇಥಿಯಲ್ಲಿ ಭಾವ ರಾಜೀವ್ ವಿರುದ್ಧವೇ ಸ್ಪರ್ಧಿಸಿ ಸೋತರು. 1988ರಲ್ಲಿ ತಮ್ಮ ಪಕ್ಷವನ್ನು ಜನತಾ ದಳದಲ್ಲಿ ವಿಲೀನಗೊಳಿಸಿದರು. ವಿ.ಪಿ.ಸಿಂಗ್ ಸಂಪುಟದಲ್ಲಿ ಪರಿಸರ ಮತ್ತು ಅರಣ್ಯ ಸಚಿವೆಯಾದರು. ವಾಜಪೇಯಿ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವೆಯಾಗಿದ್ದರು.ಕರಾವಳಿ ವಲಯ ನಿಯಂತ್ರಣ ಕಾಯ್ದೆ, ಅಪಾಯಕಾರಿ ರಾಸಾಯನಿಕಗಳ ಬಾಧ್ಯತಾ ಕಾಯ್ದೆ, ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರ, ಬೀದಿ ಮಕ್ಕಳ ಸಹಾಯವಾಣಿ, ಅಂಗವಿಕಲರ ಪುನರ್ವಸತಿ ಕಾರ್ಯಕ್ರಮ ಮೇನಕಾ ಗಾಂಧಿ ದೂರದೃಷ್ಟಿಯ ಫಲ. ತಮಗೆ ಸರಿ ಎನಿಸಿದ ವಿಚಾರಗಳ ಕುರಿತು ಗಟ್ಟಿ ದನಿಯಲ್ಲಿ ಚರ್ಚಿಸುವ ಛಾತಿ ಉಳ್ಳ ಮೇನಕಾ ನಿಜವಾಗಲೂ ಜನಪರ ರಾಜಕಾರಣಿ.

 

ಇವರ ಹೊರತಾಗಿ ಕಾಂಗ್ರೆಸ್ ಎಂಬ ಬೃಹತ್ ಹಡಗಿನಲ್ಲಿ ಸೇರಿಕೊಳ್ಳದೇ ಸಂಸತ್ತಿನಲ್ಲಿ ತಮ್ಮ ಛಾಪು ಮೂಡಿಸಿದ ಹಲವು ಮಹಿಳಾ ರಾಜಕಾರಣಿಗಳೂ ನಮಗೆ ಕಾಣುತ್ತಾರೆ. ಅವರಲ್ಲಿ ಪ್ರಮುಖರು ಸುಷ್ಮಾ ಸ್ವರಾಜ್, ಮಮತಾ ಬ್ಯಾನರ್ಜಿ, ಬೃಂದಾ ಕಾರಟ್, ಮಾಯಾವತಿ, ಉಮಾ ಭಾರತಿ.  ಬಂಗಾಳದ ಹುಲಿ: ಕಾಂಗ್ರೆಸ್ ಮೂಲಕವೇ ರಾಜಕೀಯ ಪ್ರವೇಶಿಸಿ ಆ ಪಕ್ಷವನ್ನೇ ಬೆದರಿಸುವಷ್ಟು ಎತ್ತರಕ್ಕೆ ಬೆಳೆದವರು ಬಂಗಾಳದ ಹುಲಿ ಮಮತಾ ಬ್ಯಾನರ್ಜಿ. ಹಿರಿಯ ಕಮ್ಯುನಿಸ್ಟ್ ನಾಯಕ ಸೋಮನಾಥ ಚಟರ್ಜಿ ಅವರನ್ನು ಸೋಲಿಸುವ ಮೂಲಕ ಚಿಕ್ಕ ವಯಸ್ಸಿನಲ್ಲೇ 1984ರಲ್ಲಿ ಲೋಕಸಭೆ ಪ್ರವೇಶಿಸಿದ ಮಮತಾ, ಪಿವಿಎನ್ ಸಂಪುಟದಲ್ಲಿ ಕ್ರೀಡಾ ಸಚಿವೆಯಾಗಿದ್ದರು. ಕ್ರೀಡೆಗಳ ಅಭಿವೃದ್ಧಿಗೆ ಸರ್ಕಾರ ಆಸಕ್ತಿ ತೋರುತ್ತಿಲ್ಲ ಎಂದು ಮುನಿಸಿಕೊಂಡು ಸಂಪುಟದಿಂದ ಹೊರಬಿದ್ದರು. 1997ರಲ್ಲಿ ರಾಮ್ ವಿಲಾಸ್ ಪಾಸ್ವಾನ್ ರೈಲ್ವೆ ಬಜೆಟ್ ಮಂಡಿಸುವಾಗ ಪಶ್ಚಿಮ ಬಂಗಾಳಕ್ಕೆ ಅನ್ಯಾಯವಾಗಿದೆ ಎಂದು ತಮ್ಮ ಶಾಲನ್ನು ಪಾಸ್ವಾನ್ ಅವರತ್ತ ಎಸೆದಿದ್ದರು. ಅದೇ ವರ್ಷ ಕಾಂಗ್ರೆಸ್ ತೊರೆದು ತೃಣಮೂಲ ಕಾಂಗ್ರೆಸ್ ಕಟ್ಟಿದರು. 1998ರಲ್ಲಿ ಮಹಿಳಾ ಮೀಸಲು ಮಸೂದೆ ವಿರೋಧಿಸಿ ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಮಾಜವಾದಿ ಪಕ್ಷದ ದರೊಗಾ ಪ್ರಸಾದ್ ಸರೋಜ್ ಅವರನ್ನು ಕಾಲರ್ ಹಿಡಿದು ಎಳೆದು ತಂದಿದ್ದರು.1999ರಲ್ಲಿ ಎನ್‌ಡಿಎ ಒಕ್ಕೂಟ ಸೇರಿದ ಮಮತಾ ಬ್ಯಾನರ್ಜಿ ತಮ್ಮ ಇಷ್ಟದ ರೈಲ್ವೆ ಖಾತೆ ಆಯ್ದುಕೊಂಡರು. 2005ರಲ್ಲಿ ಸಿಂಗೂರು, ನಂದಿ ಗ್ರಾಮ ಭೂಸ್ವಾಧೀನ ಹೋರಾಟಗಳ ನಾಯಕತ್ವ ವಹಿಸಿದ್ದ ಮಮತಾ 2009ರ ಚುನಾವಣೆ ನಂತರ ಯುಪಿಎ ಒಕ್ಕೂಟ ಸೇರಿಕೊಂಡು ರೈಲ್ವೆ ಸಚಿವೆಯಾದರು. 2011ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಮ್ಯುನಿಸ್ಟರ 34 ವರ್ಷಗಳ ಆಡಳಿತ ಬುಡಮೇಲು ಮಾಡಿ ಮುಖ್ಯಮಂತ್ರಿಯಾದರು.ಕಾನ್ಶಿರಾಂ ಅವರ ಮಾನಸ ಪುತ್ರಿಯಾಗಿ ಬೆಳೆದ ಮಾಯಾವತಿ 1989ರಲ್ಲಿ ಲೋಕಸಭೆಗೆ ಆಯ್ಕೆಯಾದರೂ ಖ್ಯಾತಿ ಗಳಿಸಿದ್ದು ಮಾತ್ರ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ.

ಲೋಕಸಭೆಯಲ್ಲಿ ವಿರೋಧ ಪಕ್ಷದ ಮೊದಲ ಮಹಿಳಾ ನಾಯಕಿ ಎಂಬ ಕೀರ್ತಿ ಹೊತ್ತಿರುವ, ಬಿಜೆಪಿಯ ಪ್ರಭಾವಿ ನಾಯಕಿ ಸುಷ್ಮಾ ಸ್ವರಾಜ್ ದೇಶದ ಅತ್ಯುತ್ತಮ ಸಂಸದೀಯ ಪಟುಗಳಲ್ಲಿ ಒಬ್ಬರು. ದೆಹಲಿಯ ಮುಖ್ಯಮಂತ್ರಿಯೂ ಆಗಿದ್ದ ಸ್ವರಾಜ್ ತಮ್ಮ ಮಾತಿನ ಮೂಲಕ ಎಂಥವರ ಬಾಯಿಯನ್ನೂ ಮುಚ್ಚಿಸುವ ಸಾಮರ್ಥ್ಯ ಹೊಂದಿರುವ ಮಹಿಳೆ. ಸದನದಲ್ಲಿ ತಾವು ಮಂಡಿಸಬೇಕಾದ, ಚರ್ಚಿಸಬೇಕಾದ ವಿಚಾರಗಳ ಬಗ್ಗೆ ಪೂರ್ಣ ಮಾಹಿತಿ ಸಂಗ್ರಹಿಸಿ ಬಂದಿರುತ್ತಾರೆ.ಹೋರಾಟದ ಮೂಲಕವೇ ಬಿಜೆಪಿಯಲ್ಲಿ ಹಿಂದೊಮ್ಮೆ ಪ್ರಭಾವಿಯಾಗಿದ್ದ ಉಮಾ ಭಾರತಿ ಸಹ ಇಲ್ಲಿ ನೆನಪಿಗೆ ಬರುತ್ತಾರೆ. ರಾಮಜನ್ಮಭೂಮಿ ಹೋರಾಟ, ಬಾಬರಿ ಮಸೀದಿ ಧ್ವಂಸ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸನ್ಯಾಸಿನಿ ಉಮಾ ಉಗ್ರ ಹಿಂದುತ್ವವಾದಿ. 1991ರಿಂದ 1999ರವರೆಗೆ ಲೋಕಸಭೆಗೆ ಆಯ್ಕೆಯಾದ ಅವರು ತಮಗೆ ಸರಿ ಕಂಡ ವಿಚಾರಗಳನ್ನು ಗಟ್ಟಿಯಾಗಿ ಹೇಳುತ್ತಿದ್ದರು.ರಾಜಮನೆತನದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಪ್ರಭಾವಿಯಾಗಿದ್ದ ರಾಜಮಾತಾ ವಿಜಯರಾಜೇ ಸಿಂಧ್ಯಾ, ಅವರ ಪುತ್ರಿ ವಸುಂಧರಾ ರಾಜೇ ಸಿಂಧ್ಯಾ ಸಹ ಸಂಸತ್ತಿನಲ್ಲಿ ಕಾಣಿಸಿಕೊಂಡವರು. 1989ರಿಂದ ನಾಲ್ಕು ಸಲ ಲೋಕಸಭೆಗೆ ಆಯ್ಕೆಯಾಗಿದ್ದ ವಸುಂಧರಾ, ವಾಜಪೇಯಿ ಸರ್ಕಾರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದ್ದರು. ಆದರೆ, ಅವರು ಪ್ರಸಿದ್ಧರಾಗಿದ್ದು ಮಾತ್ರ ರಾಜಸ್ತಾನದ ಮುಖ್ಯಮಂತ್ರಿಯಾಗಿ.ಸಿಪಿಎಂನ ಪಾಲಿಟ್‌ಬ್ಯೂರೊ ಸದಸ್ಯೆ ಬೃಂದಾ ಕಾರಟ್ 2004ರಲ್ಲಿ ಮೇಲ್ಮನೆ ಸದಸ್ಯೆಯಾದರು. ಎಲ್ಲ ಕಮ್ಯುನಿಸ್ಟ್ ರಾಜಕಾರಣಿಗಳಂತೆ ಓದು, ಅಧ್ಯಯನದ ಹಿನ್ನೆಲೆ ಇರುವ ಬೃಂದಾ ನಿಸ್ಸಂದೇಹವಾಗಿ ಉತ್ತಮ ಸಂಸದೀಯ ಪಟು.ಇಂದಿರಾಗಾಂಧಿ ಅವರ ನಂಟಿನಿಂದಾಗಿಯೇ ಕಾಂಗ್ರೆಸ್‌ನಲ್ಲಿ ಬೇರೂರಿದ್ದ ಡಿ.ಕೆ.ತಾರಾದೇವಿ, 70, 80ರ ದಶಕದಲ್ಲಿ ಸಂಸತ್ ಸದಸ್ಯೆಯಾಗಿದ್ದ ಸರೋಜಿನಿ ಮಹಿಷಿ ಹೆಸರಿಸಬಹುದಾದ ಕರ್ನಾಟಕದ ರಾಜಕಾರಣಿಗಳು.ಮೇಲೆ ಹೇಳಿದ ಬಹುತೇಕರು ಅಪ್ಪ, ಮಾವ, ಪತಿಯ ಬೆಂಬಲದಿಂದ ರಾಜಕೀಯಕ್ಕೆ ಇಳಿದವರು. ಆ ಜನಪ್ರಿಯತೆಯ ಅಲೆಯ ಮೇಲೆ ಸಂಸತ್ತಿಗೆ ಆಯ್ಕೆಯಾದವರು.

ರಸ್ತೆ ಬದಿ ಬಿರುಬಿಸಿಲಿನಲ್ಲಿ ನಿಂತು ಘೋಷಣೆ ಕೂಗುತ್ತಾ, ಕಾಲ್ನಡಿಗೆಯಲ್ಲಿ ಸಾಗುತ್ತಾ ರಾಜಕೀಯಕ್ಕಿಳಿದ ಮಮತಾ ಬ್ಯಾನರ್ಜಿ, ಉಮಾ ಭಾರತಿ, ತಾವು ನಂಬಿಕೊಂಡ ಸಿದ್ಧಾಂತಗಳನ್ನು ಗಟ್ಟಿಯಾಗಿ ಹೇಳುವ ಮೇನಕಾ ಗಾಂಧಿ, ರೇಣುಕಾ ಚೌಧರಿ ತರಹದ ಬೆರಳೆಣಿಕೆಯ ಮಹಿಳಾ ರಾಜಕಾರಣಿಗಳು ಮಾತ್ರ ಜನಮಾನಸದಲ್ಲಿ ಇಳಿಯುವ ಜತೆಗೆ, ಸಂಸತ್ತಿನಲ್ಲಿಯೂ ವಿರೋಧದ ಧ್ವನಿ ಎತ್ತುತ್ತಾ ಸರ್ಕಾರಕ್ಕೆ ನೀರು ಕುಡಿಸಿದ್ದಾರೆ.

 
ತಾರಾ ಮೆರುಗು

60 ವರ್ಷಗಳ ಸಂಸತ್ತಿನ ಇತಿಹಾಸದಲ್ಲಿ ಮೇಲ್ಮನೆ, ಕೆಳಮನೆಗೆ ರಂಗು ತರುವಂತೆ ಕೆಲ ಅಭಿನೇತ್ರಿಯರೂ ಕಾಣಿಸಿಕೊಂಡಿದ್ದಾರೆ.

80ರ ದಶಕದ ಆರಂಭದಲ್ಲಿ ರಾಜ್ಯಸಭೆಗೆ ನಾಮಕರಣಗೊಂಡಿದ್ದ ನಟಿ ನರ್ಗೀಸ್ ದತ್, ಹೇಮಾಮಾಲಿನಿ, ಜಯಾ ಬಚ್ಚನ್, ರೇಖಾ ಅವರಲ್ಲಿ ಪ್ರಮುಖರು. ಲೋಕಸಭೆಗೆ ಆಯ್ಕೆಯಾಗಿದ್ದ ವೈಜಯಂತಿ ಮಾಲಾ ಬಾಲಿ, ಜಯಪ್ರದಾ ಸಹ ಸಂಸತ್ ಕಲಾಪದ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿಗೆ ಬೀಳುತ್ತಿದ್ದರು.ಕುಡಿಯುವ ನೀರಿಗಾಗಿ, ಹೊಟ್ಟೆತುಂಬ ಊಟಕ್ಕಾಗಿ, ಬೆಚ್ಚನೆಯ ಸೂರಿಗಾಗಿ ನಿತ್ಯ ಹೋರಾಟ ನಡೆಸುವ ಗ್ರಾಮೀಣ ಮಹಿಳಾ ಸಮುದಾಯವನ್ನು ನಿಜ ಅರ್ಥದಲ್ಲಿ ಪ್ರತಿನಿಧಿಸುವವರು ಇಂತಹ ನಾಯಕಿಯರು. 60 ಪೂರೈಸಿ ಮುನ್ನುಗ್ಗುತ್ತಿರುವ ಭಾರತದ ಸಂಸತ್ತಿಗೆ ಇಂತಹ ನಾಯಕಿಯರ ಅಗತ್ಯ ಹೆಚ್ಚಾಗಿದೆ. ಅಂಥವರ ಸಂಖ್ಯೆ ದ್ವಿಗುಣಗೊಂಡಾಗ, ತ್ರಿಗುಣಗೊಂಡಾಗ ಭಾರತದ ಪ್ರಜಾಪ್ರಭುತ್ವ ಆಲದ ಮರದಂತೆ ವ್ಯಾಪಿಸುತ್ತದೆ. ಬೇರಿನಂತಿರುವ ಅದರ ಸಂವಿಧಾನ ಮತ್ತಷ್ಟು ಗಟ್ಟಿಯಾಗುತ್ತದೆ.ಬಹುಶಃ ಮಹಿಳಾ ಮೀಸಲಾತಿ ಮಸೂದೆ ಕಾಯ್ದೆಯ ರೂಪದಲ್ಲಿ ಅನುಷ್ಠಾನಗೊಂಡಾಗ ಈ ಕನಸು ನನಸಾದೀತು...!

 

ಪ್ರತಿಕ್ರಿಯಿಸಿ (+)