ಸಾಧನೆಗಳು ಸಾವಿರ; ಸೌಕರ್ಯಗಳಿಗೆ ಬರ!

7

ಸಾಧನೆಗಳು ಸಾವಿರ; ಸೌಕರ್ಯಗಳಿಗೆ ಬರ!

Published:
Updated:

ಮೈಸೂರು: ಗಾಳಿ, ಬೆಳಕಿಗೆ ಮುಕ್ತ ಅವಕಾಶವೇ ಇಲ್ಲದ ಮಧ್ಯಮಗಾತ್ರದ ಒಂದೇ ಕೋಣೆಯಲ್ಲಿ 17 ಹುಡುಗಿಯರ ವಾಸ. ಅಲ್ಲಿಯೇ ಅವರ ಓದು, ಹರಟೆ, ಬಟ್ಟೆ ಬರೆ, ಪುಸ್ತಕಗಳ ರಾಶಿ!

ಅಂತರರಾಷ್ಟ್ರೀಯ ಮಟ್ಟದ ಮಹಿಳಾ ಅಥ್ಲೀಟ್‌ಗಳನ್ನು ನಾಡಿಗೆ ಕೊಡುಗೆಯಾಗಿ ಕೊಟ್ಟ ಮೈಸೂರಿನ ಚಾಮುಂಡಿ ವಿಹಾರದಲ್ಲಿರುವ ಅಥ್ಲೀಟ್‌ಗಳ ಕ್ರೀಡಾ ವಸತಿ ನಿಲಯದ ಪರಿಸ್ಥಿತಿ ಇದು. ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಈ ವಸತಿನಿಲಯದಲ್ಲಿ ಇರುವ 72 ಅಥ್ಲೀಟ್‌ಗಳು ಮೂಲ ಸೌಲಭ್ಯಗಳ ಕೊರತೆಯ ನಡುವೆಯೇ ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.1989ರಲ್ಲಿ ಆರಂಭವಾದ ಈ ವಸತಿ ನಿಲಯದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್, ಹಾಕಿ ಕ್ರೀಡೆಗಳ ತರಬೇತಿಯನ್ನು ನೀಡಲಾಗುತ್ತಿದೆ.  ಸೀನಿಯರ್ ಮಹಿಳಾ ಅಥ್ಲೀಟ್‌ಗಳಿಗಾಗಿ ಇರುವ ಈ ವಸತಿ ನಿಲಯದ ಪಕ್ಕದಲ್ಲಿಯೇ ಜೂನಿಯರ್ ವಸತಿ ನಿಲಯವೂ ಇದೆ. ಪಕ್ಕದಲ್ಲಿಯೇ ಇಲಾಖೆಯ ಸಹಾಯಕ ನಿರ್ದೇಶಕರ ಆಡಳಿತ ಕಚೇರಿ, ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣಗಳು ಇವೆ. ಆದರೆ ಸೌಕರ್ಯಗಳು ಮಾತ್ರ ಇಲ್ಲ.ಅಥ್ಲೆಟಿಕ್ಸ್ ವಿಭಾಗದ 17 ಹುಡುಗಿಯರು ಮಧ್ಯಮಗಾತ್ರದ ಒಂದೇ ಕೊಠಡಿಯಲ್ಲಿ ಇದ್ದಾರೆ. ಬ್ಯಾಸ್ಕೆಟ್‌ಬಾಲ್ 16  ಮತ್ತು ವಾಲಿಬಾಲ್‌ನ 16 ಆಟಗಾರ್ತಿಯರಿಗೆ ಒಂದೊಂದು ಕೋಣೆ ನೀಡಲಾಗಿದೆ. 24 ಹಾಕಿ ಆಟಗಾರ್ತಿಯರಿಗೆ ಸೇರಿ ಎರಡು ಕೋಣೆ ನೀಡಲಾಗಿದೆ. ಅವರ ಬಟ್ಟೆಬರೆಗಳು, ಪುಸ್ತಕ ಮತ್ತಿತರ ಸಲಕರಣೆಗಳೂ ಇಲ್ಲಿಯೇ ಇವೆ. ಶೌಚಾಲಯಗಳೂ ಸುಸ್ಥಿತಿಯಲ್ಲಿ ಇಲ್ಲ. ಬೆಳಗಿನ ಜಾವ ಎಲ್ಲರೂ ಅಭ್ಯಾಸಕ್ಕಾಗಿ ಒಂದೇ ಬಾರಿ ತೆರಳುವ ಅನಿವಾರ‌್ಯತೆ ಇರುವುದರಿಂದ ಶೌಚಾಲಯದ ಕೊರತೆಯಿಂದ ವಿಳಂಬವಾಗುತ್ತಿದೆ.ಶುಕ್ರವಾರ ಕಿಟ್ ವಿತರಣೆ ವಿಳಂಬಕ್ಕಾಗಿ ಇಲ್ಲಿಯ ಅಥ್ಲೀಟ್‌ಗಳು ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಮೈಸೂರು ಉಪವಿಭಾಗಾಧಿಕಾರಿ ಭಾರತಿ  ಮತ್ತು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಜೆ.ಎಂ. ಅಪ್ಪಚ್ಚು ಅವರಿಗೆ ಅಥ್ಲೀಟ್‌ಗಳು ವಸತಿನಿಲಯದ ದುಸ್ಥಿತಿಯನ್ನು ತೋರಿಸಿದ್ದರು.ಒಲಿಂಪಿಯನ್ ಜೆ.ಜೆ. ಶೋಭಾ, ಪ್ರಮೀಳಾ ಅಯ್ಯಪ್ಪ ಅವರೂ ಇಲ್ಲಿಯೇ ಬೆಳೆದವರು. ಸದ್ಯ ಭಾರತ ಮಹಿಳಾ ಬ್ಯಾಸ್ಕೆಟ್‌ಬಾಲ್ ತಂಡದ ತರಬೇತಿ ಶಿಬಿರದಲ್ಲಿರುವ ನವನೀತಾ, ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ ಮಾಧುರಿ, ವಿಕ್ಟೋರಿಯಾ, ಅಥ್ಲೆಟಿಕ್ಸ್ ನಲ್ಲಿ ಭರವಸೆಯ ಅಥ್ಲೀಟ್‌ಗಳಾದ  ರೀನಾ ಜಾರ್ಜ್, ಬಿಬಿ ಸುಮಯಾ, ಶ್ರದ್ಧಾರಾಣಿ ದೇಸಾಯಿ, ತಿಪ್ಪವ್ವ ಸಣ್ಣಕ್ಕಿ, ಹಾಕಿ  ಆಟಗಾರ್ತಿ ಮುತ್ತಮ್ಮ ಇಲ್ಲಿಯ ಪ್ರತಿಭೆಗಳು. ಆದರೆ ಅವರ ಸಾಧನೆಗೆ ತಕ್ಕ ಸೌಕರ್ಯಗಳು ಮಾತ್ರ ಸಿಗುತ್ತಿಲ್ಲ ಎನ್ನುವ ಕೊರಗು ಅವರದ್ದು.`ಮೂರು ವರ್ಷಗಳಿಂದ ಕಿಟ್ ಕೊಟ್ಟಿಲ್ಲ. ಸ್ವಂತ ದುಡ್ಡಿನಿಂದ ಬೂಟುಗಳನ್ನು ಖರೀದಿಸುತ್ತೇವೆ. ನಮಗೆ ಮಂಜೂರಾದ ಬೂಟು, ಟ್ರ್ಯಾಕ್‌ಸೂಟುಗಳು ಎಲ್ಲಿ ಹೋದವು~ ಎಂದು ಪ್ರಶ್ನಿಸುವ ಅಥ್ಲೀಟ್‌ಗಳು, `ಅವರು ಕೊಟ್ಟ ಕಿಟ್‌ನ ಪರಿಕರಣಗಳ ಗುಣಮಟ್ಟವೂ ಚೆನ್ನಾಗಿರುವುದಿಲ್ಲ. ದಿನವೊಂದಕ್ಕೆ 150 ರೂಪಾಯಿ ಭತ್ಯೆ ಸಾಕಾಗುವುದಿಲ್ಲ. ಉತ್ತಮ ಆಹಾರಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕು. ಭತ್ಯೆಯನ್ನೂ ಹೆಚ್ಚಿಸುತ್ತಿಲ್ಲ~ ಎಂದು ದೂರುತ್ತಾರೆ.ವಸತಿ ನಿಲಯದ ಹೊರಗೆ: ಹಾಸ್ಟೆಲ್ ಒಳಗೆ ಒಂದು ರೀತಿಯಾದರೆ ಅದರ ಹೊರಗೆ ಮತ್ತೊಂದು ರೀತಿಯ ಸಮಸ್ಯೆಗಳನ್ನು ಅಥ್ಲೀಟ್‌ಗಳು ಎದುರಿಸುತ್ತಿದ್ದಾರೆ. ಹಲವು ವರ್ಷಗಳಿಂದ ಸಿಂಥೆಟಿಕ್ ಟ್ರ್ಯಾಕ್ ಬೇಕು ಎಂಬ ಬೇಡಿಕೆ ಈಡೇರಿಯೇ ಇಲ್ಲ. ಹಾಕಿ ಅಂಗಳಕ್ಕೆ ಆಸ್ಟ್ರೋಟರ್ಫ್, ಬ್ಯಾಡ್ಮಿಂಟನ್ ಅಂಗಳಕ್ಕೆ ಹೊಸ ಫ್ಲೋರ್ ಮತ್ತು ಈಜುಗೊಳ ಬೇಡಿಕೆಗಳೂ ನೆನೆಗುದಿಗೆ ಬಿದ್ದಿವೆ.ಕಳೆದ ವರ್ಷ ಸಿಂಥೆಟಿಕ್ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರೂ ಕೆಲಸ ಮಾತ್ರ ಇನ್ನೂ ಆರಂಭವಾಗಿಲ್ಲ. ಒಟ್ಟು 11.60 ಕೋಟಿ ರೂಪಾಯಿಗಳ ಯೋಜನೆ ತಯಾರಾಗಿ ಮೂರು ವರ್ಷ  ಕಳೆದಿವೆ. ಬೆಳಿಗ್ಗೆ ಮತ್ತು ಸಂಜೆ ಈ ಮೈದಾನಕ್ಕೆ ಸಾರ್ವಜನಿಕರು ವಾಯುವಿಹಾರಕ್ಕೆ ಬರುತ್ತಿರುವುದರಿಂದ ಅಥ್ಲೀಟ್‌ಗಳು ಜಾವೆಲಿನ್, ಷಾಟ್‌ಪಟ್, ಹ್ಯಾಮರ್ ಥ್ರೋ ಮಾಡುವಾಗ ಬಹಳಷ್ಟು ಜಾಗರೂಕತೆ ವಹಿಸಬೇಕಾಗುತ್ತಿದೆ ಎಂದು ಇಲ್ಲಿಯ ತರಬೇತುದಾರರು ಹೇಳುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry