ಬುಧವಾರ, ಮೇ 25, 2022
30 °C

ಸಾಧನೆಗಳ ಶ್ರೀರಕ್ಷೆಯೇ ಗೆಲುವಿಗೆ ಸೋಪಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪ್ರತಿ ಹಳ್ಳಿಯ ಪ್ರತಿ ಮನೆಯಲ್ಲೂ ಸರ್ಕಾರದ ಫಲಾನುಭವಿಗಳಿದ್ದಾರೆ. ಪ್ರತಿಯೊಂದು ಕುಟುಂಬವೂ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರಿ ಯೋಜನೆಗಳ ಅನುಕೂಲ ಪಡೆದಿದೆ. ಹೀಗಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯ ಜಯ ತಡೆಯಲು ಯಾರಿಂದಲೂ ಸಾಧ್ಯ ಇಲ್ಲ’-

-ಹೀಗೆ ವಿಶ್ವಾಸದ ಮಾತುಗಳನ್ನಾಡಿದ್ದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ.ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಒಮ್ಮೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿ ರಾಜಧಾನಿಗೆ ವಾಪಸಾಗಿದ್ದ ಅವರು ‘ಪ್ರಜಾವಾಣಿ’ ಜತೆ ಮಾತನಾಡಿದರು.‘ಒಂದು ಸುತ್ತಿನ ಪ್ರವಾಸ ಮುಗಿದಿದೆ. ಮುಂದಿನ ದಿನಗಳಲ್ಲಿ ಮೂರು ತಂಡಗಳಲ್ಲಿ ಎರಡನೇ ಸುತ್ತಿನ ಪ್ರವಾಸ ಹೋಗುತ್ತೇವೆ. ಹೋದ ಎಲ್ಲ ಕಡೆಗಳಲ್ಲೂ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ ಗೆಲ್ಲಲು ಪಕ್ಷಕ್ಕೆ ಯಾವುದೇ ಅಡ್ಡಿ-ಆತಂಕ ಇಲ್ಲ’ ಎಂದು ಸಂತಸದಿಂದ ಬೀಗುತ್ತಾರೆ.‘ಗ್ರಾಮೀಣ ಜನ ಇವತ್ತು ಹಗರಣಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ರಾಜ್ಯ ಸರ್ಕಾರ ಅಭಿವೃದ್ಧಿ ವಿಚಾರದಲ್ಲಿ ಯಾವ ನಿಟ್ಟಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ಲೋಕಸಭೆ, ಬಿಬಿಎಂಪಿ ಸೇರಿದಂತೆ ವಿಧಾನಸಭೆಗೆ ನಡೆದ ಎಲ್ಲ ಉಪ ಚುನಾವಣೆಗಳಲ್ಲಿ ಉತ್ತರ ನೀಡಿದ್ದಾರೆ. ಅದೇ ರೀತಿಯ ಫಲಿತಾಂಶ ಈ ಚುನಾವಣೆಯಲ್ಲೂ ಸಿಗಲಿದೆ’ ಎಂದು ಭವಿಷ್ಯ ನುಡಿದರು.ಸಂದರ್ಶನದ ಆಯ್ದ ಭಾಗ-

* ಸರ್ಕಾರದ ಸುತ್ತ ಹಗರಣಗಳೇ ಸುತ್ತಿಕೊಂಡಿವೆ. ಇಂಥ ಸನ್ನಿವೇಶದಲ್ಲಿ ಚುನಾವಣೆ ಕಷ್ಟ ಅನಿಸುತ್ತಿಲ್ಲವೇ?

ಹಾಗೇನೂ ಇಲ್ಲ. ಇವರು (ಪ್ರತಿಪಕ್ಷದವರು) ಹೇಳಿದ ತಕ್ಷಣ ಎಲ್ಲವೂ ಹಗರಣ ಆಗುತ್ತದೆಯೇ. ಆರೋಪಗಳ ಬಗ್ಗೆ ಲೋಕಾಯುಕ್ತರು ತನಿಖೆ ಮಾಡುತ್ತಿದ್ದಾರೆ. ನ್ಯಾಯಾಂಗ ತನಿಖೆಗೂ ಆದೇಶಿಸಲಾಗಿದೆ.  ಎಲ್ಲ ವರದಿಗಳು ಬರಲಿ. ತಪ್ಪಿದ್ದರೆ ಕ್ರಮ ಆಗುತ್ತದೆ. ಅದು ಬಿಟ್ಟು ಹಗರಣ, ಹಗರಣಅಂದ್ರೆ ಕೇಳೋರು ಯಾರೂ ಇಲ್ಲ.* ಇವು ಚುನಾವಣೆ ಮೇಲೆ  ಪರಿಣಾಮ ಬೀರುವುದಿಲ್ಲವೇ?

ಖಂಡಿತ ಇಲ್ಲ. ಸರ್ಕಾರ ಸರಿಯಾಗಿ ಕೆಲಸ ಮಾಡಲು ಪ್ರತಿಪಕ್ಷಗಳೇ ಬಿಡುತ್ತಿಲ್ಲ ಎನ್ನುವ ಭಾವನೆ ಎಲ್ಲೆಡೆ ಇದೆ. ಹೀಗಾಗಿ ಇವರ ಆರೋಪಗಳನ್ನು ಜನ ನಂಬುವ ಸ್ಥಿತಿಯಲ್ಲಿ ಇಲ್ಲ. ಈ ವಿಷಯದಲ್ಲಿ ಪ್ರತಿಪಕ್ಷಗಳು ವಿಫಲವಾಗುವುದು ಖಚಿತ.*ಸರ್ಕಾರದ ಯಾವ ಸಾಧನೆ ಇಟ್ಟುಕೊಂಡು ಓಟ್ ಕೇಳುತ್ತೀರಾ?

ಒಂದಲ್ಲ, ಅನೇಕ ಸಾಧನೆಗಳು ನಮ್ಮ ಮುಂದಿವೆ. 60 ವರ್ಷಗಳಲ್ಲಿ ಆಗದ ಅಭಿವೃದ್ಧಿ ಎರಡೂವರೆ ವರ್ಷಗಳಲ್ಲಿ ಆಗಿದೆ. ಶಾಲಾ ಮಕ್ಕಳಿಗೆ ಸೈಕಲ್ ವಿತರಿಸಿದ್ದು, ಬಡವರ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್, ಪ್ರತಿ ಲೀಟರ್ ಹಾಲಿಗೆ ರೂ 2 ಪ್ರೋತ್ಸಾಹ ಧನ, ಸಾಲ ಮನ್ನಾ.... ಹೀಗೆ ಸಾಧನೆಗಳ ಪಟ್ಟಿ ದೊಡ್ಡದಿದೆ. ಇವುಗಳಲ್ಲಿ ಒಂದಲ್ಲ ಒಂದರ ಲಾಭವನ್ನು ಹಳ್ಳಿಯ ಜನ ಪಡೆದಿದ್ದಾರೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಹೀಗಾಗಿ ಓಟ್ ಕೇಳಲು ಯಾವುದೇ ಸಂಕೋಚ ಇಲ್ಲ.* ಹೋಗಲಿ ಈ ಚುನಾವಣೆಗಾಗಿ ಏನು ಭರವಸೆಗಳು ನೀಡುತ್ತೀರಾ?

ಮುಂದಿನ ವರ್ಷದಿಂದ ಶೇ ಒಂದರ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವ ಪ್ರಮುಖ ಭರವಸೆ ನೀಡುತ್ತಿದ್ದೇವೆ. ಇದಕ್ಕೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದನ್ನು ಖಂಡಿತ ಈಡೇರಿಸಿ, ಇಡೀ ರಾಷ್ಟ್ರದಲ್ಲೇ ಮಾದರಿ ಸರ್ಕಾರ      ಆಗಲಿದೆ.*ರಾಜ್ಯಪಾಲರ ವಿರುದ್ಧ ಗರಂ ಏಕೆ?

ಇದಕ್ಕೆ ಕಾರಣವೂ ಇದೆ. ರಾಜ್ಯಪಾಲರು ತಮ್ಮ ಕೆಲಸ ಬಿಟ್ಟು ಪ್ರತಿಪಕ್ಷ ನಾಯಕನ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಮೋಟಮ್ಮ ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂತ ಅವರ ಕೆಲಸವನ್ನು ರಾಜ್ಯಪಾಲರೇ ಮಾಡುತ್ತಿದ್ದಾರೆ. ವಿನಾಕಾರಣ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪದೇ ಪದೇ ಪತ್ರಗಳನ್ನು ಬರೆಯುವುದು, ಸಾರ್ವಜನಿಕವಾಗಿ ಸರ್ಕಾರದ ವಿರುದ್ಧ ಹೇಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ. ಇವೆಲ್ಲವನ್ನೂ ನೋಡಿಕೊಂಡು ಪಕ್ಷದ ಅಧ್ಯಕ್ಷನಾಗಿ ಸುಮ್ಮನೆ ಕೂರುವುದು ಹೇಗೆ?* ಪ್ರತಿಪಕ್ಷಗಳ ಮುಖಂಡರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಂದ್ರೆ ಏನರ್ಥ?

ಒಂದೇ ಒಂದು ದಿನ ನೈಜ ಪ್ರತಿಪಕ್ಷವಾಗಿ ಕಾಂಗ್ರೆಸ್, ಜೆಡಿಎಸ್‌ನವರು ನಡೆದುಕೊಂಡಿಲ್ಲ. ವಿಧಾನಸಭೆಯಲ್ಲೂ ಯಾವುದೇ ಚರ್ಚೆಯಲ್ಲೂ ಭಾಗವಹಿಸಲಿಲ್ಲ. ಕೇವಲ ಗದ್ದಲ ಎಬ್ಬಿಸಿ ಸದನ ಮುಂದೂಡುವಂತೆ ಮಾಡುವುದೇ ಅವರ ಕೆಲಸವಾಗಿಬಿಟ್ಟಿದೆ. ಸದನದ ಹೊರಗೂ ನ್ಯಾಯವಾದ ಹೋರಾಟ ಮಾಡಲಿಲ್ಲ. ಇಂತಹವರನ್ನು ತಮ್ಮ ಕೆಲಸ ನೀಟಾಗಿ ಮಾಡುತ್ತಿದ್ದಾರೆ ಎಂದು ಹೇಗೆ ಕರೆಯುವುದು.* ಎಷ್ಟು ಕಡೆ ಗೆಲ್ಲುವ ವಿಶ್ವಾಸ ಇದೆ?

ನನ್ನ ಪ್ರಕಾರ 20ರಿಂದ 22 ಜಿಲ್ಲಾ ಪಂಚಾಯಿತಿ ಮತ್ತು 100ಕ್ಕೂ ಹೆಚ್ಚು ತಾಲ್ಲೂಕು ಪಂಚಾಯಿತಿಗಳಲ್ಲಿ  ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸ ಇದೆ.*  ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಟ್ಟಿಲ್ಲ ಎನ್ನುವ ಅಸಮಾಧಾನ ಇದೆಯಲ್ಲ?

ಇಷ್ಟು ದಿನ ನೆರೆ ಬಂದಾಗ ಸಂಕಷ್ಟದಲ್ಲಿ ಇದ್ದವರಿಗೆ 100-200 ರೂಪಾಯಿ ಕೊಟ್ಟು ಕಾಂಗ್ರೆಸ್-ಜೆಡಿಎಸ್‌ನವರು ನಾಪತ್ತೆಯಾಗುತ್ತಿದ್ದರು. ಆದರೆ, ನಮ್ಮ ಸರ್ಕಾರ ಶಾಶ್ವತವಾಗಿ ನೆಲೆ ಕಲ್ಪಿಸಬೇಕೆಂದು ತಗ್ಗು ಪ್ರದೇಶಗಳಲ್ಲಿನ ಗ್ರಾಮಗಳನ್ನೇ ಸ್ಥಳಾಂತರ ಮಾಡುವ ಕೆಲಸಕ್ಕೆ ಕೈಹಾಕಿದೆ. ಇದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ವಿಳಂಬವಾದರೂ ಶಾಶ್ವತವಾದ ಸೂರು ಕಲ್ಪಿಸುತ್ತಾರೆ ಎನ್ನುವ ವಿಶ್ವಾಸ ಜನರಲ್ಲಿದೆ. ಹೀಗಾಗಿ ನಮ್ಮ ಪಕ್ಷಕ್ಕೇ ಹೆಚ್ಚು ಲಾಭ.*ಮೀಸಲಾತಿ ಗೊಂದಲದಿಂದ ಹಿಂದುಳಿದ ವರ್ಗಗಳಿಗೆ ಆಗಿದ್ದ ಅನ್ಯಾಯ ಸರಿಪಡಿಸುವ ಭರವಸೆ ಎಷ್ಟರಮಟ್ಟಿಗೆ ಈಡೇರಿದೆ?

ಸಾಮಾನ್ಯ ಕ್ಷೇತ್ರಗಳಲ್ಲಿ ಹಿಂದುಳಿದವರಿಗೆ ಟಿಕೆಟ್ ನೀಡಲು ಸೂಚನೆ ನೀಡಿದ್ದೆವು. ಆದರೆ, ಎಷ್ಟು ಮಂದಿಗೆ ಈ  ರೀತಿ ಟಿಕೆಟ್ ನೀಡಲಾಗಿದೆ ಎಂಬುದರ ಸ್ಪಷ್ಟ ಚಿತ್ರಣ ಇಲ್ಲ. ನನ್ನ ಪ್ರಕಾರ ಹಿಂದುಳಿದವರಿಗೆ ಅನುಕೂಲವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.