ಸೋಮವಾರ, ಮಾರ್ಚ್ 8, 2021
19 °C
ರಂಗರಾವ್‌ ಸ್ಮಾರಕ ಅಂಧ ಹೆಣ್ಣುಮಕ್ಕಳ ವಸತಿ ಶಾಲೆ ಹಾಗೂ ಸಾಯಿರಂಗ ಕಿವುಡು ಶಾಲೆ

ಸಾಧನೆಗೆ ತೊಡಕಾಗದ ದೈಹಿಕ ನ್ಯೂನತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಧನೆಗೆ ತೊಡಕಾಗದ ದೈಹಿಕ ನ್ಯೂನತೆ

ಮೈಸೂರು: ಮೇಟಗಳ್ಳಿಯ ರಂಗರಾವ್‌ ಸ್ಮಾರಕ ಅಂಧ ಹೆಣ್ಣುಮಕ್ಕಳ ವಸತಿ ಶಾಲೆ ಮತ್ತು ಬನ್ನಿಮಂಟಪದ ಸಾಯಿರಂಗ ಕಿವುಡು ಗಂಡುಮಕ್ಕಳ ಶಾಲೆಯ ಮಕ್ಕಳು, ಬೆರಗಿನಿಂದ ನೋಡುವಂತ ಸಾಧನೆ ಮಾಡಿದ್ದಾರೆ. ತಮ್ಮ ಕಲಿಕೆಯ ತೊಡಕುಗಳನ್ನು ಮೀರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ತೇರ್ಗಡೆ ಹೊಂದಿರುವುದಲ್ಲದೆ, ಶಾಲೆಗೆ ನೂರಕ್ಕೆ ನೂರು ಫಲಿತಾಂಶ ನೀಡಿದ್ದಾರೆ.ರಂಗರಾವ್‌ ಸ್ಮಾರಕ ಅಂಧ ಹೆಣ್ಣುಮಕ್ಕಳ ವಸತಿ ಶಾಲೆ

ಸಾಮಾನ್ಯ ಶಾಲೆಗಳಲ್ಲಿ ಮಕ್ಕಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದುವುದು ಸಾಮಾನ್ಯ. ಆದರೆ, ಇಬ್ಬರು ಅಂಧ ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, ಒಂಬತ್ತು ವಿದ್ಯಾರ್ಥಿನಿಯರು ಪ್ರಥಮದರ್ಜೆಯಲ್ಲಿ, ಒಬ್ಬ ವಿದ್ಯಾರ್ಥಿನಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿ ಶಾಲೆಗೆ ಶೇ ನೂರಕ್ಕೆ ನೂರು ಫಲಿತಾಂಶವನ್ನು ತಂದುಕೊಟ್ಟಿದ್ದಾರೆ.ಮೇಟಗಳ್ಳಿಯ ರಂಗರಾವ್‌ ಸ್ಮಾರಕ ಅಂಧ ಹೆಣ್ಣುಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಕೆ.ಎಂ. ಮಣಿ                      (ಶೇ 88.32), ಪಿ. ಗಾಯತ್ರಿ (ಶೇ 87.84) ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದರೆ, ಎಚ್‌.ಟಿ. ನೇತ್ರಾವತಿ                         (ಶೇ 84.8), ಜಿ. ಮಮತಾ (84.48), ಹಸೀನಾತಾಜ್‌ (83.04), ಎ. ಲಲಿತಾ (ಶೇ 74.56), ಎನ್‌.ಎಸ್‌. ಶಿಲ್ಪಾ (ಶೇ 72), ಪೂರ್ಣಿಮಾ (66.56), ಎಂ. ದೇವಿಕಾ (66.88) ಸಿ. ಸಣ್ಣಮ್ಮ (66.5), ಎಸ್‌. ಲಿಖಿತಾ (66) ಪ್ರಥಮದರ್ಜೆಯಲ್ಲಿ ಮತ್ತು ಎಂ. ರಾಧಾ (59.68) ದ್ವಿತೀಯದರ್ಜೆಯಲ್ಲಿ ಪಾಸಾಗಿದ್ದಾರೆ.ಸಾಮಾನ್ಯ ಮಕ್ಕಳಿಗೆ ಶಿಕ್ಷಣ ನೀಡುವಂತೆ ನೀಡಲಾಗಿದೆ. ಆದರೆ, ವಿದ್ಯಾರ್ಥಿನಿಯರಿಗೆ ಬ್ರೈಲ್‌ ಕಲಿಕೆ ಮತ್ತು ಅಂತರ್ಜಾಲದ ಮೂಲಕ ಶಿಕ್ಷಣವನ್ನು ವಿಶೇಷವಾಗಿ ನೀಡಲಾಗಿದೆ. ಅಲ್ಲದೆ, ಶಾಲೆಯ ಮೊದಲ ಬ್ಯಾಚ್‌್ ಇದಾಗಿದ್ದು, ವಿದ್ಯಾರ್ಥಿಗಳ ಈ ಸಾಧನೆ ಅತೀವ ಖುಷಿ ತಂದಿದೆ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕಿ ಮೀರಾ.

ಸಾಯಿರಂಗ ವಿದ್ಯಾಸಂಸ್ಥೆ

ನಗರದ ಎಲ್ಲ ಶಾಲೆಗಳಲ್ಲೂ ‘ನಮ್ಮ ಮಕ್ಕಳು 600ಕ್ಕಿಂತಲೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ’ ಎನ್ನುತ್ತಾ ಖುಷಿಯಿಂದ ಸಂಭ್ರಮಿಸುತ್ತಿದ್ದರೆ, ಬನ್ನಿಮಂಟಪದಲ್ಲಿರುವ ‘ಸಾಯಿರಂಗ ವಿದ್ಯಾಸಂಸ್ಥೆ– ಕಿವುಡು ಗಂಡು ಮಕ್ಕಳ ವಸತಿಯುತ ವಿದ್ಯಾಕೇಂದ್ರ’ದ ಮಕ್ಕಳು ಮೌನದಲ್ಲಿಯೇ ಅಂದುಕೊಂಡಿದ್ದನ್ನು ಸಾಧಿಸಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಮುಗುಳ್ನಗೆ ಬೀರಿದ್ದಾರೆ.ತುಮಕೂರಿನ ಎಂ. ಮಹಮ್ಮದ್‌ ಇಬ್ರಾಹಿಂ                          (ಶೇ 70.12), ಕೆ.ಪಿ. ಸುನೀಲ್ (ಶೇ 66.35),                  ಸಿ.ಎಸ್‌. ನವೀನ್‌ಕುಮಾರ್‌ (ಶೇ 66.35), ಕಾರ್ತೀಕಕುಮಾರ್‌  (ಶೇ 64.71),                             ಕೆ.ಎಸ್‌. ಕಿರಣ್‌ಕುಮಾರ್‌ (ಶೇ 61.41),                        ಎಸ್‌. ಮಲ್ಲಿಕಾರ್ಜುನ  (59.76), ಪಿ.ಸಿ. ಮಾರುತಿ ಪ್ರಸಾದ್‌ (ಶೇ 58.35), ವಿ.ಎಸ್‌. ರವಿ (ಶೇ 51.29), ಎಚ್‌.ಆರ್‌. ಸಂದೇಶ (ಶೇ 44.71) ಅವರು ಶಾಲೆಯ                  ಶೇ ನೂರರ ಫಲಿತಾಂಶಕ್ಕೆ ಕಾರಣರಾಗಿದ್ದಾರೆ.

ಸಂತಸವನ್ನು ಹಂಚಿಕೊಂಡ ಶಾಲೆಯ ಮುಖ್ಯ ಶಿಕ್ಷಕ ರಘುನಾಥಗೌಡ, ಇಪ್ಪತ್ತು ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ರಾಜ್ಯದ ಹಲವು ಭಾಗಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದು, ಉಚಿತ ವಸತಿ ಶಿಕ್ಷಣವನ್ನು ನೀಡಲಾಗುತ್ತಿದೆ. ಇದು ಶಾಲೆಯ ನಾಲ್ಕನೆ ಬ್ಯಾಚ್‌. ಇವರ ಸಾಧನೆಯಿಂದ ಇನ್ನು ಚೆನ್ನಾಗಿ ಕಲಿಸುವ ಮನಸಾಗುತ್ತದೆ. ಮುಂದಿನ ಶಿಕ್ಷಣಕ್ಕೆ ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎಂಬುದೇ ಬೇಸರ. ಎಲ್ಲೆ ಇದ್ದರೂ ಇವರು ಮುಂದೆ ಬರುತ್ತಾರೆ ಎಂದು ಆಶಿಸಿದರು.ಜೈಲು ಶಾಲೆಯಲ್ಲಿ ಓದಿ ಪಾಸಾದ ವಿದ್ಯಾರ್ಥಿನಿಯರು

ಕಲಿಕೆಗೆ ಅವಶ್ಯ ಸೌಲಭ್ಯಗಳು ಇದ್ದೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಅನೇಕ. ಏನೂ ಇಲ್ಲದೆ ಇರುವ ಸೌಲಭ್ಯಗಳಲ್ಲೇ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ ವಿದ್ಯಾರ್ಥಿಗಳು ನಮ್ಮ ಮಧ್ಯದಲ್ಲೇ ಇದ್ದಾರೆ.

ನಗರದ ಲಲಿತಮಹಲ್‌ ರಸ್ತೆಯ ಬಾಲಾಪರಾಧಿ ಬಾಲಕಿಯರ ಬಾಲಮಂದಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಎಲ್ಲರ ಬೆಳಕಾಗಿದ್ದಾರೆ.ಬಾಲಕಿಯರ ಬಾಲಮಂದಿರದ ಎಂಟು ವಿದ್ಯಾರ್ಥಿನಿಯರಲ್ಲಿ ಏಳು ವಿದ್ಯಾರ್ಥಿನಿಯರು ಮೊದಲ ಅವಕಾಶದಲ್ಲಿಯೇ ತೇರ್ಗಡೆ ಹೊಂದಿದ್ದಾರೆ. ಚೌಡಮ್ಮ, ಬಿ. ಹೇಮಾ, ಚುಬ್ಬಕ್ಕಿ, ಮಲ್ಲಿಗೆ, ಕಾವ್ಯಾ, ಡಿ. ಪವಿತ್ರಾ ಮತ್ತು ಸಹನಾ ಜೈಲು ಶಾಲೆಯಲ್ಲಿಯೇ ಓದಿ ಪಾಸಾಗಿದ್ದಾರೆ.ನಾನು ಮನೆಯಲ್ಲಿ ಇದ್ದಿದ್ದರೆ ಶಿಕ್ಷಣವನ್ನು ಪಡೆಯಲು ಆಗುತ್ತಿರಲಿಲ್ಲ. ರಾತ್ರಿ 11ರವರೆಗೆ ಮತ್ತು ನಸುಕಿನ 5 ಗಂಟೆಯಿಂದ ಅಧ್ಯಯನ ಮಾಡುತ್ತಿದ್ದೆ. ಎಲ್ಲ ಶಿಕ್ಷಕರು ನನಗೆ ಉತ್ತಮವಾಗಿ ಕಲಿಕೆಯಲ್ಲಿ ಸಹಕರಿಸಿದ್ದರಿಂದ ಒಳ್ಳೆಯ ಅಂಕಗಳೊಂದಿಗೆ ಪಾಸಾಗಿದ್ದೇನೆ. ಮುಂದೆ ಬಿ.ಇಡಿ ಮಾಡಿ ಶಿಕ್ಷಕಿಯಾಗುವ ಆಸೆ ಹೊಂದಿದ್ದೇನೆ ಎಂದು  ಪ್ರಥಮದರ್ಜೆಯಲ್ಲಿ ಪಾಸಾದ ಚೌಡಮ್ಮ ಖುಷಿಯಿಂದ ಹೇಳಿದಳು. ಇವಳಿಗೆ ತಂದೆ ಇಲ್ಲ. ತಾಯಿ ಕೂಲಿ ಕೆಲಸ ಮಾಡುತ್ತಾರೆ.ದ್ವಿತೀಯದರ್ಜೆಯಲ್ಲಿ ಪಾಸಾದ ಚುಬ್ಬಕ್ಕಿಗೆ ವೈದ್ಯೆಯಾಗಿವ ಅಭಿಲಾಷೆ ಇದೆ. ಆದರೆ, ವಿಜ್ಞಾನ ನನಗೆ ಕಷ್ಟದ ವಿಷಯ ಎಂದು ನಗೆ ಬೀರುತ್ತಾಳೆ. ಇವಳಿಗೆ ತಾಯಿ ಇಲ್ಲ. ತಂದೆ ಗಾರೆ ಕೆಲಸ ಮಾಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.