ಸಾಧನೆಗೆ ಬೇಕಿರುವುದು ಬುದ್ಧಿಬಲ

7

ಸಾಧನೆಗೆ ಬೇಕಿರುವುದು ಬುದ್ಧಿಬಲ

Published:
Updated:

ವಿಜಯಪುರ: ಅಂಗವಿಕಲರು ಯಾರ ಮೇಲೂ ಅವಲಂಬಿತರಾಗಬೇಕಿಲ್ಲ. ಅವರ ಸಮಗ್ರ ವಿಕಾಸಕ್ಕಾಗಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ರೂಪಿಸಿರುವ ತರಬೇತಿ ಶಿಬಿರಗಳು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು 3ರಿಂದ 25 ಲಕ್ಷದವರೆಗೆ ಸಾಲ ಸೌಲಭ್ಯ ನೀಡುತ್ತಿವೆ ಎಂದು ಹಾರೋಹಳ್ಳಿ ಗ್ರಾ.ಪಂ. ಅಧ್ಯಕ್ಷ ಚಂದ್ರಪ್ಪ ತಿಳಿಸಿದರು.ಸಮೀಪದ ಹಾರೋಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಸರ್ಕಾರ ಮತ್ತು ಸ್ಫೂರ್ತಿ ಸ್ವಸಹಾಯ ಗುಂಪುಗಳ ವತಿಯಿಂದ ಆಯೋಜಿಸಲಾಗಿದ್ದ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪಂಚಾಯ್ತಿ ಅನುದಾನದಲ್ಲಿ ಅಂಗವಿಕಲರಿಗೆ ಶೇ.3ರಷ್ಟು  ಪಾಲಿದೆ ಎಂದರು.ತಾಲ್ಲೂಕಿನಲ್ಲಿಯೇ ಪ್ರಥಮ ಬಾರಿಗೆ ಈ ಶಿಬಿರವನ್ನು ಹಾರೋಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದೆ. ಸಾಧಕರಿಗೆ ಬುದ್ಧಿಬಲದ ಅಗತ್ಯವಿದೆಯೇ ಹೊರತು ತೋಳ್ಬಲದ ಅಗತ್ಯವಿಲ್ಲ. ಇದನ್ನು ವಿಕಲಚೇತನರು ಸರಿಯಾಗಿ ಅರಿತುಕೊಳ್ಳಬೇಕು. ತಮ್ಮ ಸಾಮರ್ಥ್ಯವನ್ನು ಎಲ್ಲರಿಗೂ ಸಾಧಿಸಿ ತೋರಿಸಬೇಕು ಎಂದರು.

ಸಂಘದ ಪ್ರೇರಕ ಕ್ಯಾತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, `ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ.7 ದಿನ ನಡೆಯುವ ಈ ಶಿಬಿರದಲ್ಲಿ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಂಗವಿಕಲರು ಭಾಗವಹಿಸಬಹುದು. ತರಬೇತಿಯೊಂದಿಗೆ ಅಂಗವಿಕಲರು ಸ್ವಯಂ ಉದ್ಯೋಗ ಮಾಡಲು ಸಾಲ ಸೌಲಭ್ಯದ ಜೊತೆಗೆ ಸಬ್ಸಿಡಿ ನೀಡಲಾಗುವುದು. ಆದ್ದರಿಂದ ಅಂಗವಿಕಲರು ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಸಮಾಜದಲ್ಲಿ ಎಲ್ಲರಂತೆ ಸರಿಸಮಾನವಾಗಿ ಬದುಕುವ ಪ್ರಯತ್ನ ನಡೆಸಬೇಕೆಂದು ತಿಳಿಸಿದರು.

ಎಂಪಿಸಿಎಸ್ ಕಾರ್ಯದರ್ಶಿ ಮುನೇಗೌಡ ಮಾತನಾಡಿದರು.ಕ್ಯಾತಪ್ಪ ನಿರೂಪಿಸಿ, ಸ್ವಾಗತಿಸಿದರು. ಸಮಾಜ ಸೇವಕ ಬೈರೇಗೌಡ, ಹಾರೋಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶಪ್ಪ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry