ಸಾಧನೆಗೆ ‘ಬೀಜಿಂಗ್‌’ ಕಾರಣ

7
ಭಾರತದ ಬ್ಯಾಡ್ಮಿಂಟನ್‌ ತಾರೆ ಸೈನಾ ಅಭಿಮತ

ಸಾಧನೆಗೆ ‘ಬೀಜಿಂಗ್‌’ ಕಾರಣ

Published:
Updated:
ಸಾಧನೆಗೆ ‘ಬೀಜಿಂಗ್‌’ ಕಾರಣ

ಬೆಂಗಳೂರು: ‘ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ಆಡಿದಾಗ ನನಗೆ 18 ವರ್ಷ. ಅದಕ್ಕೂ ಮುನ್ನ ಒಲಿಂಪಿಕ್‌ ಕ್ರೀಡಾ­ಕೂಟದ ಮಹತ್ವ ಏನೆಂಬುದು ಗೊತ್ತಿರ­ಲಿಲ್ಲ.  ಅದರ ಸನಿಹವೂ ಸುಳಿದಿರಲಿಲ್ಲ. ಇಂದು ನಾನು ಏನಾಗಿದ್ದೇನೋ ಅದಕ್ಕೆಲ್ಲಾ 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಪಡೆದ ಅನುಭವವೇ ಕಾರಣ...’–ಒಲಿಂಪಿಕ್ಸ್‌ನ ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಹೇಳಿದ ಮಾತಿದು.ಇತ್ತೀಚಿಗೆ ಮುಗಿದ ಚೊಚ್ಚಲ ಇಂಡಿ­ಯನ್‌ ಬ್ಯಾಡ್ಮಿಂಟನ್‌ ಲೀಗ್‌ (ಐಬಿಎಲ್‌) ಟೂರ್ನಿಯಲ್ಲಿ ಸೈನಾ ನೇತೃತ್ವದ ಹೈದರಾಬಾದ್‌ ಹಾಟ್‌ಷಾಟ್ಸ್‌ ಚಾಂಪಿಯನ್‌ ಆಗಿತ್ತು. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮುನ್ನ ಸ್ವಿಸ್‌ ಓಪನ್‌, ಥಾಯ್ಲೆಂಡ್‌ ಓಪನ್‌ ಮತ್ತು ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಒಲಿಂಪಿಕ್ಸ್‌ ನಂತರವೂ ಡೆನ್ಮಾರ್ಕ್‌ ಸರಣಿಯಲ್ಲೂ ಚಾಂಪಿಯನ್‌ ಆಗಿದ್ದರು.ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅದನ್ನಿಲ್ಲಿ ಪ್ರಶ್ನೋತ್ತರ ರೂಪದಲ್ಲಿ ನೀಡಲಾಗಿದೆ.* ಭಾರತದಲ್ಲಿ ಬ್ಯಾಡ್ಮಿಂಟನ್‌ ಬೆಳವಣಿಗೆಗೆ ಐಬಿಎಲ್‌ ಹೇಗೆ ಸಹಕಾರಿಯಾಗಿದೆ?

ಮೊದಲ ವರ್ಷದಲ್ಲಿಯೇ ಐಬಿಎಲ್‌ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಇದನ್ನು ಎಲ್ಲರೂ ಐಪಿಎಲ್‌ಗೆ ಹೋಲಿಕೆ ಮಾಡುತ್ತಿದ್ದಾರೆ. ಈ ಟೂರ್ನಿ ಆರಂಭ­ವಾಗಿ ಒಂದೇ ವಾರದಲ್ಲಿ ತುಂಬಾ ಜನ ಬ್ಯಾಡ್ಮಿಂಟನ್‌ನತ್ತ ಮುಖ ಮಾಡಿದ್ದಾರೆ. ಮುಂದಿನ ಋತುವಿನ ವೇಳೆಗೆ ಇದರ ಖ್ಯಾತಿ ಇನ್ನಷ್ಟು ಹೆಚ್ಚಾಗಲಿದೆ.* ಐಬಿಎಲ್‌ ವೇಳೆ ಜ್ವಾಲಾ ಗುಟ್ಟಾ ವರ್ತನೆ ವಿವಾದಕ್ಕೆ ಕಾರಣವಾಯಿತಲ್ಲ. ಅದರ ಬಗ್ಗೆ ಹೇಳಿ?

ನನ್ನ ಆಟ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಮಾತ್ರ ಪ್ರಶ್ನೆ ಕೇಳಿ. ವಿವಾದದ ಬಗ್ಗೆ ಮಾತನಾಡಲು ಇಷ್ಟವಿಲ್ಲ.* ಜಪಾನ್‌ ಓಪನ್‌ ಸೂಪರ್‌ ಸರಣಿ­ಯಿಂದ ಹಿಂದೆ ಸರಿಯಲು ಕಾರಣ?

ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌­ಷಿಪ್‌, ಐಬಿಎಲ್‌ ಹೀಗೆ ಮೇಲಿಂದ ಮೇಲೆ ಅನೇಕ ಟೂರ್ನಿಗಳನ್ನು ಆಡಿದ್ದೇನೆ. ಸ್ನಾಯುಸೆಳೆತದ ನೋವು ಕಾಡುತ್ತಿದೆ. ಒಲಿಂಪಿಕ್ಸ್‌ ನಂತರ ಗಾಯದ ಸಮಸ್ಯೆ ಹೆಚ್ಚಾಗಿದೆ. ಆದ್ದರಿಂದ ಜಪಾನ್‌ ಸರಣಿಯಲ್ಲಿ ಆಡುತ್ತಿಲ್ಲ. ವಿಶ್ರಾಂತಿ ಪಡೆಯುವಂತೆ ಕೋಚ್‌ ಗೋಪಿಚಂದ್‌ ಕೂಡಾ ಸಲಹೆ ನೀಡಿದ್ದಾರೆ.* ನಿಮ್ಮ ಜೀವನದ ಮಹತ್ವದ ತಿರುವು ಯಾವುದು?

ಬೀಜಿಂಗ್ ಒಲಿಂಪಿಕ್ಸ್‌. ಮೊದಲ ಸಲ ಒಲಿಂಪಿಕ್ಸ್‌ನಲ್ಲಿ ಆಡಿದ್ದಾಗ 18 ವರ್ಷ. ಒಲಿಂಪಿಕ್ಸ್‌ನಂತಹ ದೊಡ್ಡ ಕ್ರೀಡಾ­ಕೂಟವನ್ನು  ನೋಡಿರಲಿಲ್ಲ. ಚೀನಾಕ್ಕೆ ತೆರಳಿದ್ದಾಗ ಆರಂಭದಲ್ಲಿ ಭಯವಾಗಿತ್ತು. ಅಲ್ಲಿ ಕ್ವಾರ್ಟರ್ ಫೈನಲ್‌ವರೆಗೆ ಮುನ್ನ­ಡೆದಿದ್ದು ಬದುಕಿನ ಅತಿ ದೊಡ್ಡ ತಿರುವು. ಆ ಒಲಿಂಪಿಕ್ಸ್‌ನ ಮೂರನೇ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ವಾಂಗ್‌ ಚೇನ್‌ ಎದುರು  ಗೆಲುವು ಪಡೆದಿದ್ದೆ. ಮುಂದಿನ ಒಲಿಂಪಿಕ್ಸ್‌ ವೇಳೆಗೆ ಚೀನಾ ಆಟಗಾರ್ತಿಯರನ್ನು ಮಣಿಸಲು ಸಾಧ್ಯ ಎನ್ನುವ ವಿಶ್ವಾಸ ಮೂಡಿದ್ದೇ ಆವಾಗ.* ಪಿ.ವಿ. ಸಿಂಧು ಬಗ್ಗೆ ಹೇಳಿ?

ಸಿಂಧು ಕೂಡಾ ವಿಶ್ವ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾಳೆ. ಇದು ಸಕಾರಾತ್ಮಕ ಬೆಳವಣಿಗೆ. ಪ್ರಕಾಶ್‌ ಪಡುಕೋಣೆ ಸರ್‌ ನಂತರ ಭಾರತದ ಬ್ಯಾಡ್ಮಿಂಟನ್ ಶಕ್ತಿ ಎಲ್ಲರಿಗೂ ಗೊತ್ತಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry