ಸಾಧನೆಯ ಹಾದಿಗೆ ಮುಳ್ಳಾದ ಅನಾರೋಗ್ಯ

7

ಸಾಧನೆಯ ಹಾದಿಗೆ ಮುಳ್ಳಾದ ಅನಾರೋಗ್ಯ

Published:
Updated:
ಸಾಧನೆಯ ಹಾದಿಗೆ ಮುಳ್ಳಾದ ಅನಾರೋಗ್ಯ

ವಿಜಯಪುರ:  ಕಣ್ಣುಗಳ ದೃಷ್ಟಿ ಮಂಜು-ಮಂಜು, ಕಿವಿಗಳೂ ಮಂದ, ಎರಡೂ ಕಿಡ್ನಿಗಳು ವಿಫಲ, ಎದ್ದು ನಿಲ್ಲಲ್ಲೂ ಆಗದಂತಹ ಅಶಕ್ತ ಪರಿಸ್ಥಿತಿ...

ಇಷ್ಟೆಲ್ಲಾ ಅಸಾಧ್ಯ ದೈಹಿಕ ತೊಂದರೆಗಳ ನಡುವೆಯೂ ವಿಚಲಿತನಾಗದೆ ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಶೇಕಡ 71ರಷ್ಟು ಅಂಕಗಳನ್ನು ಗಳಿಸಿರುವ ವಿಜಯಪುರದ ತರುಣ ತನುಶ್‌ನ ಬದುಕುವ ಹಂಬಲ ಮತ್ತು ಸಾಧನೆಯ ಹುರುಪು ಎಂಥವರನ್ನೂ ದಂಗುಬಡಿಸುತ್ತದೆ.

ತನುಶ್‌ಗೆ ವೈದ್ಯನಾಗಬೇಕೆಂಬ ಹಂಬಲ. ಅದಕ್ಕಾಗಿ ಸಿಇಟಿ ಪರೀಕ್ಷೆಯನ್ನೂ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾನೆ. ಆದರೆ ಮುದ್ದುಕಂದನ ಸಾಧನೆಗೆ ತಾವೇನೂ ಮಾಡಲಾಗುತ್ತಿಲ್ಲವಲ್ಲ ಎಂಬ ದೊಡ್ಡ ಕೊರಗು ತಂದೆ ತಾಯಿಗಳದ್ದು.

ಪಟ್ಟಣದ ಗುರಪ್ಪನ ಮಠದ ವಾಸಿ ರಾಮಪ್ಪ ಮತ್ತು ನಾಗರತ್ನಮ್ಮ ದಂಪತಿಗೆ ಇಬ್ಬರು ಗಂಡು ಮಕ್ಕಳು. ಇವರಲ್ಲಿ ಹಿರಿಯ ಮಗನೇ ತನುಶ್. ಈತ ಸಮೀಪದ ಮಳ್ಳೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ. ಪರೀಕ್ಷೆ ಸಮೀಪಿಸುತ್ತಿದೆ ಎಂಬ ಸಮಯದಲ್ಲಿಯೇ ಈತನ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ನಡೆದಾಡಲೂ ಆಗದಂತಹ ಸ್ಥಿತಿಯಲ್ಲಿ ಹಾಸಿಗೆ ಹಿಡಿದ ಮಗನನ್ನು ವೈದ್ಯರ ಬಳಿ ಕರೆದುಕೊಂಡ ಹೋದ ತಂದೆ ತಾಯಿಗೆ ವೈದ್ಯರು ಹೇಳಿದ್ದು `ತನುಶ್‌ನ ಎರಡೂ ಕಿಡ್ನಿ ವಿಫಲವಾಗಿವೆ~ ಎಂದು.  ರಾಮಪ್ಪನದೋ ಎತ್ತಿನ ಬಂಡಿಯಲ್ಲಿ ನೀರು ಮಾರುವ ಕಾಯಕ. ಅವಕಾಶ ಸಿಕ್ಕರೆ ಅಲ್ಲಿ ಇಲ್ಲಿ ಕೂಲಿ ಅರಸಿಕೊಂಡು ಹೋಗುವ ದಿನಚರಿ. ತಾಯಿ ನಾಗರತ್ನಮ್ಮನಿಗೆ ಮನೆಯಲ್ಲಿ ಕಟ್ಟಿಕೊಂಡಿರುವ ಒಂದು ಎಮ್ಮೆಯೇ ಪುಡಿಗಾಸಿನ ಆಧಾರ. ಇವಿಷ್ಟರಲ್ಲೇ ಜೀವನದ ಬಂಡಿ ಸಾಗಬೇಕು. ಇಂತಹ ಬಡತನದ ನಡುವೆಯೇ ಪ್ರತಿಭಾವಂತ ತನುಶ್ ತನಗೊದಗಿ ಬಂದಿರುವ ದುಃಸ್ಥಿತಿಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ. ಎದೆಗುಂದದೆ ಅದೇ ಸ್ಥಿತಿಯಲ್ಲಿ ತನ್ನ ಸಮಸ್ಯೆಗಳ ವಿರುದ್ಧ ಸೆಣಸಾಟ ನಡೆಸಿದ್ದಾನೆ. ಹಾಸಿಗೆಯಲ್ಲೇ ಹಗಲೂ ರಾತ್ರಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ನಿತ್ರಾಣ ಸ್ಥಿತಿಯಲ್ಲೇ ಹೋಗಿ ಪರೀಕ್ಷೆ ಎದುರಿಸಿ ಬಂದಿದ್ದಾನೆ. ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿರುವ ತನುಶ್‌ಗೆ ಕನ್ನಡ ವಿಷಯದಲ್ಲಿ 86, ಇಂಗ್ಲಿಷ್‌ನಲ್ಲಿ 75, ಭೌತಶಾಸ್ತ್ರ 82, ರಸಾಯನ ಶಾಸ್ತ್ರ 71, ಗಣಿತ 30 ಹಾಗೂ ಜೀವಶಾಸ್ತ್ರದಲ್ಲಿ 83 ಅಂಕಗಳು ಬಂದಿವೆ. ಇವನ ಮುಂದಿನ ಗುರಿ ವೈದ್ಯನಾಗಬೇಕೆಂಬ ಏಕೈಕ ಮಹದಾಸೆ. ಈ ಸ್ಥಿತಿಯಲ್ಲೂ ಅವನ ಓದುವ ಆಸೆ ಒಂಚೂರೂ ಕಡಿಮೆಯಾಗಿಲ್ಲ.

ಐದಾರು ವರ್ಷಗಳ ಹಿಂದೆ ತನುಶ್‌ಗೆ ಮೊದಲ ಬಾರಿಗೆ ಕಣ್ಣಿನ ತೊಂದರೆ ಕಾಣಿಸಿಕೊಂಡಾಗ ರಾಮಪ್ಪ ದಂಪತಿ ತಮ್ಮ ಬಳಿ ಇದ್ದಬದ್ದ ಹಣವನ್ನೆಲ್ಲಾ ಹೊಂದಿಸಿ ಅವನಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಆದರೆ, ನಂತರ ಅವನ ಕಿವಿಯೇ ಕೇಳಿಸದಂತಾಯ್ತು. ಕಿವಿಗೆ ಅಳವಡಿಸುವ ಶ್ರವಣ ಸಾಧನಕ್ಕೆ ಸಾವಿರಾರು ರೂಪಾಯಿ ಬೇಕಾಗುತ್ತದೆ ಎಂದು ತಿಳಿದು ಬಂದಾಗ ಅವರು ಅದನ್ನು ಕೊಂಡುಕೊಳ್ಳುವ ಯೋಚನೆಯನ್ನೇ ಕೈ ಬಿಟ್ಟರು! ಈಗ್ಗೆ ನಾಲ್ಕು ತಿಂಗಳ ಹಿಂದೆ ಇದ್ದಕ್ಕಿದ್ದಂತೆ ತನುಶ್‌ನ ಮಾತೂ ಬಹುತೇಕ ನಿಂತು ಹೋಯಿತು. ಆಸ್ಪತ್ರೆಗೆ ಕರೆದುಕೊಂಡು ಹೋದ ಅವರಿಗೆ ವೈದ್ಯರು ಹೇಳಿದ್ದು `ಇವನ ಎರಡೂ ಕಿಡ್ನಿ ವಿಫಲವಾಗಿವೆ. ಇದರ ಅಡ್ಡ ಪರಿಣಾಮವೇ ಅವನಿಗೆ ಕಣ್ಣು ಮಂಜಾಗಿ, ಕಿವಿ ಕೇಳಿಸದಂತಾಗಿರಲು ಕಾರಣವಾಗಿದೆ~ ಎಂಬ ಆಘಾತಕಾರಿ ಸಂಗತಿಯನ್ನು.

ಅಂದಿನಿಂದಲೂ ದಿನಕ್ಕೆ ಕೇವಲ ಒಂದು ಲೀಟರ್‌ನಷ್ಟು ದ್ರವ ರೂಪದ ಪದಾರ್ಥವೇ ತನುಶ್‌ನ ಆಹಾರವಾಗಿದೆ. ಒಂದಿಷ್ಟು ಕಿವುಚಿದ ಅನ್ನ, ರಸವನ್ನು ಮಾತ್ರವೇ ಸೇವಿಸಬೇಕೆಂಬ ವೈದ್ಯರ ಕಟ್ಟಪ್ಪಣೆಯಿದೆ. ಮಿಕ್ಕಂತೆ ಬೇರೆ ಏನನ್ನೂ ಸೇವಿಸಬಾರದು ಎನ್ನುವ ಎಚ್ಚರಿಕೆ. ಹೀಗಾಗಿ ಅವನ ಆಹಾರ ಕ್ರಮ, ಕುಸಿಯುತ್ತಿರುವ ದೇಹಸ್ಥಿತಿ, ಸೂಕ್ತ ಚಿಕಿತ್ಸೆ ಕೊಡಿಸಲು ಪರದಾಡುತ್ತಿರುವ ತಂದೆ ತಾಯಿಗಳ ಪಡಿಪಾಟಲು ಇವೆಲ್ಲವೂ ಇಡೀ ಕುಟುಂಬವನ್ನೇ ಕಷ್ಟಗಳ ಹೆಡೆಮುರಿಯಲ್ಲಿ ಕಟ್ಟಿಹಾಕಿವೆ.

ತನುಶ್‌ಗೆ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಸಲಾಗುತ್ತಿದೆ. ಅದಲ್ಲದೇ ಅವನಿಗೆ ನಿತ್ಯವೂ ಹತ್ತಾರು ಔಷಧಗಳನ್ನು ಬೇರೆ ನೀಡಬೇಕು. ರಾಮಣ್ಣ ತನ್ನ ಪಾಲಿನದ್ದು ಎಂಬಂತಿದ್ದ ವಿಜಯಪುರದಲ್ಲಿನ ಒಂದು ಮನೆಯನ್ನು 80 ಸಾವಿರಕ್ಕೆ ಮಾರಿ ಮಗನ ಚಿಕಿತ್ಸೆಗೆ ಈಗಾಗಲೇ ಬಳಸಿದ್ದಾರೆ. ಆದರೆ, ಅದು ಯಾತಕ್ಕೂ ಸಾಲದಂತಾಗಿದೆ. ಸಂಬಂಧಿಗಳು, ಹತ್ತಿರದವರು ಹೀಗೆ ಆಪ್ತರ ಬಳಿಯಲ್ಲೆಲ್ಲಾ ತಮ್ಮ ಗೋಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಅವರು 5-6 ಲಕ್ಷ ರೂಪಾಯಿಗಳ ಸಾಲದಲ್ಲಿಯೇ ಮಗನ ಸಾಧನೆ ಕಂಡು ಮಂದಹಾಸ ಬೀರುತ್ತಿದ್ದಾರೆ. ತನುಶ್‌ನ ಚಿಕಿತ್ಸೆಗೆ ಇನ್ನಷ್ಟು ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದ್ದು ದಾನಿಗಳು ಸಹಾಯ ಮಾಡಬಹುದಾಗಿದೆ. 

ವಿವರಗಳಿಗಾಗಿ, ಮೊಬೈಲ್ ಸಂಖ್ಯೆ 8277678140 ಅಥವಾ 9845083290 ಗೆ ಸಂಪರ್ಕಿಸಬಹುದಾಗಿದೆ. ಇಲ್ಲವೇ ತನುಶ್‌ನ ವಿಜಯಪುರದ ಎಸ್‌ಬಿಎಂ ಖಾತೆ ಸಂಖ್ಯೆ 64096866142 (ಐಎಫ್‌ಎಸ್‌ಸಿ ಖಆ ್ಗ 0040732) ಇಲ್ಲಿಗೆ ಹಣ  ಜಮಾ ಮಾಡಬಹುದಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry