ಭಾನುವಾರ, ಡಿಸೆಂಬರ್ 8, 2019
21 °C

ಸಾಧನೆ ಕುಂಠಿತ: ಸಿ.ಎಂ ಸಿಡಿಮಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಧನೆ ಕುಂಠಿತ: ಸಿ.ಎಂ ಸಿಡಿಮಿಡಿ

ಬೆಂಗಳೂರು: ಐದು ತಿಂಗಳ ಹಿಂದೆ (ಆ.5) ಕಾರ್ಯದರ್ಶಿಗಳ ಸಭೆ ನಡೆದಾಗ ಆಗಷ್ಟೇ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು ಸಂತಸದಿಂದಲೇ ಅಧಿಕಾರಿಗಳ ಸಹಕಾರ ಕೋರಿದ್ದರು. ಶ್ರದ್ಧೆಯಿಂದ ಕೆಲಸ ಮಾಡಿ ಎಂದೂ ಹಿತವಚನ ಬೋಧಿಸಿದ್ದರು. ಆದರೆ, ಐದು ತಿಂಗಳ ನಂತರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಗರಂ ಆಗಿದ್ದರು. ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ಕಾಲಕಾಲಕ್ಕೆ ಭೇಟಿ ನೀಡುತ್ತಿಲ್ಲ, ಯೋಜನೆಗಳ ಅನುಷ್ಠಾನ ಸರಿಯಾಗಿ ಆಗುತ್ತಿಲ್ಲ... ಹೀಗೆ ವೈಫಲ್ಯಗಳ ಪಟ್ಟಿ ಮಾಡಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳ ಸಭೆಯಲ್ಲಿ ಮುಖ್ಯಮಂತ್ರಿ ಮಾತನಾಡಿದರು.`ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವ ಇಲಾಖೆಯೂ ಶೇ 70ರಷ್ಟು ಪ್ರಗತಿ ಸಾಧಿಸಿಲ್ಲ. ಬಹುತೇಕ ಇಲಾಖೆಗಳು ಶೇ 50ರಿಂದ 60ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು, ಇದು ಬೇಸರದ ಸಂಗತಿ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

`ನನ್ನ ಪ್ರಕಾರ ಕನಿಷ್ಠ ಶೇ 75ರಷ್ಟು ಸಾಧನೆ ಮಾಡದಿದ್ದರೆ ಅದು ಶೂನ್ಯ ಎಂದೇ ಪರಿಗಣಿಸಬೇಕಾಗುತ್ತದೆ. ಆರ್ಥಿಕ ವರ್ಷ ಪೂರ್ಣಗೊಳ್ಳಲು ಇನ್ನು ಬರಿ ಎರಡೂವರೆ ತಿಂಗಳಿದೆ. ಈ ಅವಧಿಯಲ್ಲಿ ಉಳಿದ ಕಾರ್ಯಕ್ರಮಗಳ ಅನುಷ್ಠಾನ ಆಗುತ್ತದೆಯೇ? ಇದನ್ನು ಅಧಿಕಾರಿಗಳು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು~ ಎಂದು ತರಾಟೆಗೆ ತೆಗೆದುಕೊಂಡರು.`ಮಾರ್ಚ್ ಅಂತ್ಯದೊಳಗೆ ಶೇ 90ರಿಂದ 95ರಷ್ಟು ಪ್ರಗತಿ ಸಾಧಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕು~ ಎಂದರು.`ಗ್ರಾಮೀಣ ಕುಡಿಯುವ ನೀರು ಸಲುವಾಗಿ ಈ ಸಾಲಿನಲ್ಲಿ ರೂ 1500 ಕೋಟಿ ಅನುದಾನ ಮೀಸಲಿಡಲಾಗಿತ್ತು. ಇದರಲ್ಲಿ ರೂ 920 ಕೋಟಿ ಬಿಡುಗಡೆಯೂ ಆಗಿದೆ. ಆದರೆ, ಖರ್ಚಾಗಿದ್ದು ಕೇವಲ ರೂ 250 ಕೋಟಿ ! ಏಕೆ ಹೀಗಾಯಿತು? ಅನುದಾನ ಲಭ್ಯ ಇದ್ದರೂ ಖರ್ಚು ಮಾಡಿ, ಜನರಿಗೆ ಕುಡಿಯುವ ನೀರು ಒದಗಿಸಲು ಆಗದಿದ್ದರೆ ಹೇಗೆ? ಇದೊಂದು ವಿಷಾದನೀಯ ಸಂಗತಿ. ಈ ರೀತಿ ಕೆಲಸ ಮಾಡಿದರೆ, ಕೇಂದ್ರದ ಅನುದಾನವನ್ನು ಹೆಚ್ಚು ಹೆಚ್ಚು ಪಡೆಯಲು ಹೇಗೆ ಸಾಧ್ಯವಾಗುತ್ತದೆ~ ಎಂದೂ ಅಧಿಕಾರಿಗಳನ್ನು ಪ್ರಶ್ನಿಸಿದರು.`ಕುಡಿಯುವ ನೀರು ಮತ್ತು ನೈರ್ಮಲ್ಯದ ವಿಷಯದಲ್ಲಿ ಅಧಿಕಾರಿಗಳು ಶ್ರದ್ಧೆವಹಿಸಿ ಕೆಲಸ ಮಾಡಬೇಕು. ಸರ್ಕಾರದ ಆದ್ಯತೆ ಈ ಕ್ಷೇತ್ರಗಳಾಗಿರುವ ಕಾರಣಕ್ಕೆ ಶೇ 100ರಷ್ಟು ಪ್ರಗತಿ ತೋರಿಸಬೇಕು. ಬಾಕಿ ಇರುವ ಅವಧಿಯಲ್ಲಿ ಇದನ್ನು ಮಾಡಿ ತೋರಿಸಬೇಕು~ ಎಂದು ಸೂಚಿಸಿದರು.`ಕುಡಿಯುವ ನೀರಿನ ಯೋಜನೆಗಳ ಹಣ ಬಳಕೆ ಪ್ರಮಾಣ ಪತ್ರವನ್ನು ಡಿಸೆಂಬರ್ 10ರೊಳಗೆ ಸಲ್ಲಿಸಬೇಕೆಂದು ಸೂಚಿಸಲಾಗಿತ್ತು. ಅದು ಕೂಡ ಇನ್ನೂ ಅನೇಕ ಕಡೆ ಆಗಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬಹಳ ಹಿಂದೆ: `ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುಷ್ಠಾನದಲ್ಲಿ ನಿರೀಕ್ಷೆಗಿಂತ ಹಿಂದೆ ಇದ್ದೇವೆ. ರಾಜೀವ್ ಗಾಂಧಿ ವಿದ್ಯುದೀಕರಣ ಯೋಜನೆ, ಇಂದಿರಾ ಆವಾಸ್, ನೈರ್ಮಲ್ಯ... ಹೀಗೆ ಎಲ್ಲವೂ ಅನುಷ್ಠಾನದಲ್ಲಿ ಹಿಂದೆ ಇವೆ. ಯೋಜನೆಗಳ ಅನುಷ್ಠಾನದಲ್ಲಿ ಪ್ರಗತಿ ತೋರಿಸದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ~ ಎಂದೂ ಅವರು ಸಲಹೆ ಮಾಡಿದರು.ಜಿಲ್ಲೆಗೆ ಕಡ್ಡಾಯ ಭೇಟಿ: `ಉಸ್ತುವಾರಿ ಕಾರ್ಯದರ್ಶಿಗಳು ಕಡ್ಡಾಯವಾಗಿ ತಮಗೆ ಸೂಚಿಸಿದ ಜಿಲ್ಲೆಗಳಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ಮಾಡಬೇಕು. 15 ದಿನ ಅಥವಾ ತಿಂಗಳಿಗೆ ಒಮ್ಮೆಯಾದರೂ ಜಿಲ್ಲೆಗಳಿಗೆ ಭೇಟಿ ನೀಡಲು ಕಳೆದ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ, ಬಹುತೇಕ ಅಧಿಕಾರಿಗಳು ಒಮ್ಮೆಯೂ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ಇದು ಕೂಡ ನನಗೆ ಅಸಮಾಧಾನ ತಂದಿದೆ. ಮೇಲಿಂದ ಮೇಲೆ ಜಿಲ್ಲೆಗಳಿಗೆ ಹೋಗಿ ಪ್ರಗತಿ ಪರಿಶೀಲನೆ ಮಾಡದಿದ್ದರೆ ಯೋಜನೆಗಳ ಅನುಷ್ಠಾನ ಸರಿಯಾಗಿ ಆಗುವುದಿಲ್ಲ. ಇನ್ನು ಮುಂದಿನ ದಿನಗಳಲ್ಲಾದರೂ ಕನಿಷ್ಠ 15 ದಿನಕ್ಕೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಬೇಕು~ ಎಂದು ಹೇಳಿದರು.ರಸ್ತೆ ಗುಂಡಿ: ರಸ್ತೆಗಳಲ್ಲಿ ಗುಂಡಿ ಮುಚ್ಚಲು ಡಿಸೆಂಬರ್ ಗಡುವು ನೀಡಲಾಗಿತ್ತು. ಆದರೆ, ಅದು ಇನ್ನೂ ಪೂರ್ಣಗೊಂಡಿಲ್ಲ. ಗಡುವನ್ನು ವಿಸ್ತರಿಸಿದ್ದು, ಜನವರಿ 15ರೊಳಗೆ ಎಲ್ಲ ಕಡೆಯೂ ಗುಂಡಿ ಮುಚ್ಚಬೇಕು. ಇದಕ್ಕೆ ಬೇಕಾದ ಹಣ ಬಿಡುಗಡೆ ಮಾಡುವುದಾಗಿಯೂ ವಿವರಿಸಿದರು.ಮಳೆಗಾಲ ಆರಂಭಕ್ಕೂ ಮುನ್ನ ರಸ್ತೆಗೆ ಡಾಂಬರು ಹಾಕುವ ಕಾಮಗಾರಿ ಪೂರ್ಣಗೊಳಿಸಬೇಕು. ವಿಶೇಷವಾಗಿ ಮಲೆನಾಡಿನಲ್ಲಿ ಈ ಬಗ್ಗೆ ಎಚ್ಚರ ವಹಿಸಬೇಕು. ಆದಷ್ಟು ಬೇಗ ಡಾಂಬರು ಹಾಕುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.ಸ್ಪಷ್ಟನೆ ನೀಡಿ: `ಮಾಧ್ಯಮಗಳಲ್ಲಿ ಬರುವ ವರದಿಗಳು ತಪ್ಪಿದ್ದಲ್ಲಿ ತಕ್ಷಣ ಆ ಕುರಿತು ಸಂಬಂಧಪಟ್ಟ ಇಲಾಖೆ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಬೇಕು. ಈ ಕೆಲಸ ಮಾಡಲು ಅಧಿಕಾರ ವಹಿಸಿಕೊಂಡ ತಕ್ಷಣವೇ ಸೂಚಿಸಿದ್ದರೂ ಇವತ್ತಿಗೂ ಅದು ಜಾರಿಯಾಗಿಲ್ಲ. ಇನ್ನು ಮುಂದೆ ಈ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ನಿಮಗೆ ಸಾಧ್ಯವಾಗದಿದ್ದರೆ ಸ್ಪಷ್ಟೀಕರಣವನ್ನು ನನ್ನ ಮಾಧ್ಯಮ ಸಲಹೆಗಾರರ ಕಚೇರಿಗೆ ಕಳುಹಿಸಿ. ಅವರು ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಿದ್ದಾರೆ~ ಎಂದು ಸೂಚಿಸಿದರು.`ಹದಿನೈದು ದಿನಗಳಲ್ಲಿ ಕಡತ ವಿಲೇವಾರಿ ಆಗಬೇಕು~ ಎಂದು ಹೇಳಿದ್ದನ್ನು ಕೆಲವರು ಗಂಭೀರವಾಗಿ ಪರಿಗಣಿಸಿಲ್ಲ. ಕೆಲವು ಜಿಲ್ಲೆಗಳಲ್ಲಿ ಈ ಕೆಲಸ ಸರಾಗವಾಗಿ ನಡೆಯುತ್ತಿದ್ದು, ಉಳಿದ ಕಡೆಯೂ ಅದು ಅನುಷ್ಠಾನವಾಗಬೇಕು~ ಎಂದು ಹೇಳಿದರು.ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಕೆ.ಜೈರಾಜ್, ಸುಬೀರ್ ಹರಿಸಿಂಗ್, ಶಮೀಮ್ ಬಾನು ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)