ಸಾಧಾರಣ ಮಳೆ: ಕುಸಿದ ಮನೆಮಾಡು

ಗುರುವಾರ , ಜೂಲೈ 18, 2019
24 °C

ಸಾಧಾರಣ ಮಳೆ: ಕುಸಿದ ಮನೆಮಾಡು

Published:
Updated:

ಕಾರವಾರ: ಜಿಲ್ಲೆಯಾದ್ಯಂತ ಸೋಮವಾರ ಮಳೆ ಕ್ಷೀಣಗೊಂಡಿದ್ದು, ಕರಾವಳಿ, ಮಲೆನಾಡು ಹಾಗೂ ಅರೆಬಯಲುಸೀಮೆಯ ಕೆಲ ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.ಕರಾವಳಿ ಪ್ರದೇಶಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರದಲ್ಲಿ ಬೆಳಿಗ್ಗೆ ಸ್ವಲ್ಪ ಕಾಲ ಸಾಧಾರಣ ಮಳೆ ಸುರಿಯಿತು. ಅರೆಬಯಲುಸೀಮೆಯ ಹಳಿಯಾಳ, ದಾಂಡೇಲಿ, ಮುಂಡಗೋಡದಲ್ಲಿ ಮಳೆ ಕ್ಷೀಣಗೊಂಡಿತ್ತು. ಮಲೆನಾಡು ಪ್ರದೇಶಗಳಾದ ಯಲ್ಲಾಪುರ, ಶಿರಸಿ ಮತ್ತು ಸಿದ್ದಾಪುರದಲ್ಲಿ ಮಳೆ ಕಡಿಮೆಯಿತ್ತು.ಕದ್ರಾ ಮತ್ತು ಕೊಡಸಳ್ಳಿ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿತ್ತು. ಕದ್ರಾ 30.44 ಮೀ ಹಾಗೂ ಕೊಡಸಳ್ಳಿ ಜಲಾಶಯದ ಮಟ್ಟ 71.80 ಮೀಟರ್ ಆಗಿದೆ.ಜಿಲ್ಲೆಯಲ್ಲಿ  14.5 ಮಿ.ಮೀ. ಮಳೆ: ಜುಲೈ 15 ರಂದು ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 14.5 ಮಿ.ಮೀ ಮಳೆಯಾಗಿದೆ.ಅಂಕೋಲಾ 14.6 ಮಿ.ಮೀ, ಭಟ್ಕಳ 22.4 ಮಿ.ಮೀ, ಹಳಿಯಾಳ 3.3 ಮಿ.ಮೀ, ಹೊನ್ನಾವರ 22.9 ಮಿ.ಮೀ, ಕಾರವಾರ 26.5 ಮಿ.ಮೀ, ಕುಮಟಾ 23.4 ಮಿ.ಮೀ, ಮುಂಡಗೋಡ 4.2 ಮಿ.ಮೀ, ಸಿದ್ದಾಪುರ 14ಮಿ.ಮೀ, ಶಿರಸಿ 12ಮಿ.ಮೀ, ಜೋಯಿಡಾ 6ಮಿ.ಮೀ, ಯಲ್ಲಾಪುರ 10ಮಿ.ಮೀ ಮಳೆಯಾಗಿದೆ. ಜುಲೈ 1 ರಿಂದ ಇಂದಿನವರೆಗೆ 584.3ಮಿ.ಮೀ ಮಳೆಯಾಗಿದೆ.ಜನಜೀವನ ಚುರುಕು

ಕುಮಟಾ
:  ತಾಲ್ಲೂಕಿನಲ್ಲಿ  ಭಾನುವಾರದಿಂದ ಮಳೆ ಕ್ಷೀಣವಾದ ಹಿನ್ನೆಲೆಯಲ್ಲಿ ಜನಜೀವನ ಚುರುಕುಗೊಂಡಿದೆ.

ಬೆಳಿಗ್ಗೆ ಹಾಗೂ ಸಂಜೆ ಹೊತ್ತು ಕೊಂಚ ಬಿಸಿಲಿನಿಂದ ಕೂಡಿದ ವಾತಾವರಣ ನಿರ್ಮಾಣವಾಗಿದ್ದು, ಮಧ್ಯಾಹ್ನ ಮಾತ್ರ ಒಂದು ಮಳೆ ಬಿದ್ದಿದೆ.

ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಅಘನಾಶಿನಿ ನದಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಕೂಡ ಕಡಿಮೆಯಾಗಿದ್ದರಿಂದ ಭಾನುವಾರದಿಂದಲೇ ಮೀನುಗಾರರು ನೀರಿಗಿಳಿದು ಬಂಗಡೆ, ಬೆಳ್ಳಂಜಿ ಮೀನು ಹಿಡಿದು ತಂದಿದ್ದಾರೆ.ಭತ್ತದ ನಾಟಿ ಇನ್ನೂ ಮುಗಿಯದಿದ್ದ ಕಡೆಗಳಲ್ಲಿ ಕೃಷಿ ಚಟುವಟಿಕೆ ಚುರುಕಾಗಿದೆ. ಅಡಿಕೆ ಮರಗಳಿಗೆ ಕೊಳೆ ರೋಗದ ಮದ್ದು ಹೊಡೆಯಲು ಕೂಲಿಯಾಳು ದೊರೆಯದೆ ಹಾಗೂ ಮಳೆ ಬಿಡುವಾಗದೆ ಪರದಾಡುತ್ತಿದ್ದ ರೈತರು ಭಾನುವಾರ ಹಾಗೂ ಸೋಮವಾರ ಮಳೆಯಿಲ್ಲದ ಸಂದರ್ಭವನ್ನು ಬಳಸಿಕೊಂಡಿದ್ದಾರೆ.ಸೋಮವಾರ ಕುಮಟಾದಲ್ಲಿ 23.4 ಮಿಲಿ ಮೀಟರ್, ಗೋಕರ್ಣದಲ್ಲಿ 37 ಮಿಲಿ ಮೀಟರ್ ಹಾಗೂ ಕತಗಾಲದಲ್ಲಿ 13.80 ಮಿಲಿ ಮೀಟರ್ ಮಳೆ ಬಿದ್ದಿದೆ. ಮಳೆಯಿಲ್ಲದ ಕಾರಣ ಪೇಟೆಯಲ್ಲಿ ಜನರ ಓಡಾಟ ಕೂಡ ಹೆಚ್ಚಾಗಿದ್ದು ಕಂಡುಬಂದಿತು.ಕುಸಿದ ಮಾಡು: ಹಾನಿ

ಸಿದ್ದಾಪುರ:
ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿದು, ಸುಮಾರು ರೂ 33 ಸಾವಿರ  ನಷ್ಟ ಸಂಭವಿಸಿದ ಘಟನೆ ಪಟ್ಟಣದ ರವೀಂದ್ರನಗರದಲ್ಲಿ ಭಾನುವಾರ ರಾತ್ರಿ  ನಡೆದಿದೆ.ಈಶ್ವರಿ ಕೃಷ್ಣ ಅಂಬಿಗ ಎಂಬವರ ಮನೆಯ ಹೆಂಚಿನ ಮಾಡು ಕುಸಿದಿದ್ದರಿಂದ ಸಾವಿರಾರು ಹೆಂಚುಗಳು ಪುಡಿಪುಡಿಯಾಗಿವೆ. ಗ್ರಾಮ ಲೆಕ್ಕಾಧಿಕಾರಿ ಶ್ಯಾಮಸುಂದರ್ ಮತ್ತು ಪಂಚಾಯ್ತಿ ರಾಜ್ ಎಂಜಿನಿಯರಿಂಗ್ ವಿಭಾಗದ ಎಂಜಿನಿಯರ್ ಉಮಾ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ, ಹಾನಿಯ ಅಂದಾಜು ಮಾಡಿದ್ದಾರೆ ಎಂದು ಕಂದಾಯ ಇಲಾಖೆಯ ಮೂಲ ತಿಳಿಸಿದೆ.ತಾಲ್ಲೂಕಿನಲ್ಲಿ ಕಳೆಡೆರಡು ದಿನಗಳಿಂದ ಕ್ಷೀಣಗೊಂಡಿದ್ದ ಮಳೆ, ಸೋಮವಾರ ಮಧ್ಯಾಹ್ನದ ನಂತರ ಕೊಂಚಮಟ್ಟಿಗೆ ಬಿರುಸುಗೊಂಡಿತು. ಸೋಮವಾರ ಬೆಳಿಗ್ಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ 14.2 ಮಿ.ಮೀ. ಮಳೆ ದಾಖಲಾಗಿದ್ದು, ಇದುವರೆಗೆ ಒಟ್ಟು 1505.6 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 652.8 ಮಿ.ಮೀ.ಮಳೆ ದಾಖಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry