ಗುರುವಾರ , ನವೆಂಬರ್ 21, 2019
20 °C

ಸಾಧುವಲ್ಲದ ಸಾಲ ಮನ್ನಾ ಯೋಜನೆಗಳು

Published:
Updated:

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಎರಡು ಪ್ರಾದೇಶಿಕ ಪಕ್ಷಗಳು (ಕೆಜೆಪಿ ಮತ್ತು ಜೆಡಿಎಸ್) ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸಿವೆ. ಹಳೆಯ ಮಿತ್ರರು ಮತ್ತು ಮೇಲ್ನೋಟಕ್ಕೆ ಈಗ ಶತ್ರುಗಳು ಹೆಚ್ಚು ಕಡಿಮೆ ಒಂದೇ ರೀತಿಯ ಸಾಲಮನ್ನಾ ಯೋಜನೆಯ ಸೊಲ್ಲನ್ನು ಬೇರೆ ಬೇರೆಯಾಗಿ ಹಾಡಿದ್ದಾರೆ! ಬೇರೆ ಪಕ್ಷಗಳೂ ಇದೇ ಸೊಲ್ಲನ್ನು ಹಾಡುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ.ಸ್ವಾತಂತ್ರ್ಯಾನಂತರ ಸರ್ಕಾರದ ಬೆಂಬಲದಿಂದ ಸಹಕಾರಿ ಪತ್ತಿನ ಯೋಜನೆಯ ಬೆಳವಣಿಗೆ. ರೈತರಿಗೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಪೂರೈಸಲು ಸಹಕಾರಿ ಸಂಘಗಳು, ವಾಣಿಜ್ಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನೊಳಗೊಂಡ ಬಹುಸಂಸ್ಥೆಗಳ ವ್ಯವಸ್ಥೆ 1970ರ ದಶಕದ ಕೊನೆಗೆ ಸ್ಪಷ್ಟವಾಗಿ ಮೂಡಿ ಬಂದಿತ್ತು. ರೈತರ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ವಿಫಲವಾದ ರಾಜ್ಯಸರ್ಕಾರಗಳು ಅವಧಿ ಮೀರಿದ ಸಹಕಾರಿ ಸಾಲಗಳನ್ನು ಮನ್ನಾ ಮಾಡುವ ಹವ್ಯಾಸ ಬೆಳೆಸಿಕೊಂಡವು, ಅವರ ಮತಗಳನ್ನು ಸೆಳೆಯುವ ಸಾಧನೆ (!) ಮಾಡಿದವು. ಸಾಲ ಮರುಪಾವತಿ ಮಾಡುವ ಅನೇಕ ದಶಕಗಳ ಇತಿಹಾಸವುಳ್ಳ ರೈತ ಸಮುದಾಯದ ಭವ್ಯ ಪರಂಪರೆಗೆ ಸಾಲಮನ್ನಾ ಯೋಜನೆಗಳಿಂದಾಗಿ ಸಹಜವಾಗಿ ಧಕ್ಕೆಯುಂಟಾಯಿತು.ಸಾಧುವಲ್ಲದ ಸಾಲ ಮನ್ನಾ ಯೋಜನೆಗಳನ್ನು ತಡೆಗಟ್ಟುವ ಅವಶ್ಯಕತೆಯನ್ನು ಭಾರತೀಯ ಯೋಜನಾ ಆಯೋಗ ಮನಗಂಡಿತು. ಆರನೆಯ ಪಂಚವಾರ್ಷಿಕ ಯೋಜನೆಯ (1980- 1985) ದಾಖಲೆ ಪತ್ರ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಬೇಕಾಯಿತು. ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಿ ಕಟ್ಟುಬಾಕಿದಾರರಾದ ರೈತರಿಗೆ ನೆರವಾಗುವಂತೆ ಯೋಜನಾ ಆಯೋಗದ ಕರೆ. ಬದಲಾಗಿ ಕೆಲವು ರಾಜ್ಯಗಳಲ್ಲಿ ಜಾರಿಗೆ ಬಂದ ಸಾಂಸ್ಥಿಕ ಸಾಲಗಳನ್ನು ಸಾರಾ ಸಗಟಾಗಿ ವಜಾಗೊಳಿಸುವ ಧೋರಣೆಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಇಂಥ ಧೋರಣೆಗಳಿಂದ ಸಾಲ ಮರುಪಾವತಿಯ ಪ್ರಯತ್ನಗಳಿಗೆ ದೊಡ್ಡ ಸೋಲು ಬರಬಹುದು ಎಂದು ಹೇಳಿತ್ತು. ಇದಕ್ಕೆಲ್ಲಾ ಸಾಲ ಮನ್ನಾ ರಾಜಕೀಯವನ್ನು ಅಪ್ಪಿಕೊಂಡ ಸರ್ಕಾರಗಳು ಕಿವಿಗೊಡುವ ದಡ್ಡತನ ತೋರಿಸಲಿಲ್ಲ!ಏಳನೆಯ ಪಂಚವಾರ್ಷಿಕ ಯೋಜನೆಯ (1985-1990) ದಾಖಲೆ ಪತ್ರ ಸಹ ಸಾಲಮನ್ನಾ ಮಾಡುವ ಪರಿಪಾಠ ಮುಂದುವರಿದರೆ ಕೃಷಿಸಾಲ ನೀಡುವ ಸಂಸ್ಥೆಗಳು ಸಾಲದ ಬದಲಾಗಿ ಸಾರ್ವಜನಿಕ ಹಣವನ್ನು ದಾನ ಮಾಡುವ ಏಜೆನ್ಸಿಗಳಾಗಿ ಪರಿವರ್ತನೆಗೊಳ್ಳುತ್ತವೆಂದು ಹೇಳಿದ್ದು ವ್ಯರ್ಥವಾಗಿ ಹೋಯಿತು. ಅಡೆ ತಡೆಯಿಲ್ಲದೆ ಚುನಾವಣೆಯ ಸಮಯದಲ್ಲಿ ಸಾಲ ಮನ್ನಾ ಮಾಡುವ ಘೋಷಣೆಯನ್ನು ಮೊಳಗಿಸಿದರೆ ಕೃಷಿ ಸಾಲದ ಸಾಂಸ್ಥಿಕ ವ್ಯವಸ್ಥೆಯೇ ಸತ್ವ ಹೀನವಾಗುವ ಸಾಧ್ಯತೆಯನ್ನು ಯೋಜನಾ ಆಯೋಗ ತೋರಿಸಿದ್ದು ರಾಜಕೀಯ ಪಕ್ಷಗಳಿಗೆ ಅಪಥ್ಯವಾಯಿತು. ಇಂಥ ಅಪಾಯಕಾರಿ ಘೋಷಣೆಯಿಂದ ಉದ್ದೇಶಪೂರ್ವಕವಾಗಿ ಕಟ್ಟುಬಾಕಿದಾರರಾಗುವ ರೈತರ ಸಂಖ್ಯೆ ಹೆಚ್ಚಬಹುದೆಂದು ಆಯೋಗ ಹೇಳಿದ್ದು ಹೌದು, ಸರ್ಕಾರಗಳು ಸರಾಗವಾಗಿ ಇದನ್ನು ಮರೆತದ್ದೂ ಹೌದು. ಏಳನೆಯ ಯೋಜನೆ ಮುಗಿಯುವ ವರ್ಷದಲ್ಲಿ (1990) ಕೇಂದ್ರ ಸರ್ಕಾರವೇ ಮುತುವರ್ಜಿ ವಹಿಸಿ ಕೃಷಿ ಮತ್ತು ಗ್ರಾಮೀಣ ಸಾಲ ಪರಿಹಾರ ಯೋಜನೆಯನ್ನು ಜಾರಿಗೆ ತಂದಿತು. ಆ ತನಕ ರಾಜ್ಯ ಮಟ್ಟಗಳಲ್ಲಿ ನಡೆಯುತ್ತಿದ್ದ ಪ್ರಯೋಗವನ್ನು ರಾಷ್ಟ್ರಮಟ್ಟದಲ್ಲಿ ತಂದ ಕೀರ್ತಿ (?) ಕೇಂದ್ರ ಸರ್ಕಾರದ್ದಾಯಿತು. ಒಟ್ಟಾರೆ ಆಡಳಿತ ವ್ಯವಸ್ಥೆಯ ಒಂದು ಭಾಗವೇ ಆದ ಯೋಜನಾ ಆಯೋಗದ ಎಚ್ಚರಿಕೆಗೆ ಆಡಳಿತ ನಡೆಸುವವರೇ ಕಾಸಿನ ಬೆಲೆ ಕೊಡಲಿಲ್ಲ. 1990ರ ಸಾಲಮನ್ನಾ ಯೋಜನೆಯಿಂದ ಸಾಲ ವಸೂಲಾತಿ ಪ್ರಕ್ರಿಯೆ ಸ್ಥಗಿತಗೊಂಡು ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳು ವಾತ ರೋಗಕ್ಕೆ ಗುರಿಯಾಗಿದ್ದವು. ಪ್ರಯೋಗ ಮತ್ತು ಪ್ರಮಾದ - ಇದು ಜೀವನ ಕ್ರಮವನ್ನು ರೂಪಿಸಿಕೊಳ್ಳಲು ನೆರವಾಗಬಲ್ಲ ಮತ್ತು ವಾಡಿಕೆಯಲ್ಲಿರುವ ವಿಚಾರ ಅಥವಾ ತತ್ವ. ಅಂದ ಮಾತ್ರಕ್ಕೆ ಪ್ರಮಾದಗಳನ್ನು ಮಾಡಲಿಕ್ಕಾಗಿಯೇ ಪ್ರಯೋಗಗಳನ್ನು ನಡೆಸಬೇಕೆಂದು ವಾದ ಮಾಡಿದರೆ ಖಂಡಿತ ಅದು ಒಂದು ಮೊಂಡು ವಾದವಾಗುತ್ತದೆ.  ಸೋಲೇ ಗೆಲುವಿನ ಸೋಪಾನ  ಅಂದ ಮಾತ್ರಕ್ಕೆ ಪ್ರತಿಸಲವೂ ಸೋಲುವುದೇ ಒಳಿತೆಂದು ಭಾವಿಸುವಷ್ಟು ಮುಂದೆ ಹೋಗಬೇಕಾಗಿಲ್ಲ. ನಮ್ಮ ದೇಶದಲ್ಲಿ ಗ್ರಾಮೀಣ ಸಾಲದ ವಿಷಯದಲ್ಲಿ ಈ ತನಕ ಆಗಿದ್ದು ಗೆಲುವಿನ ಸೋಪಾನವಾಗದ ಸೋಲು, ಪ್ರಯೋಗಗಳ ಪ್ರಹಸನ. 1990ರ ಗ್ರಾಮೀಣ ಸಾಲಮನ್ನಾ ಯೋಜನೆ ಕೂಡ ಹಿಂದೆ ಮಾಡಿದ ಪ್ರಮಾದಗಳನ್ನು ಮುಂದುವರಿಸುವ ಒಂದು ಪ್ರಯೋಗವಾಯಿತು.ಮುಂದಿನ ದಿನಗಳಲ್ಲೂ ರಾಜ್ಯ ಸರ್ಕಾರಗಳು ಸಹಕಾರಿ ಸಾಲಗಳನ್ನು ಮನ್ನಾ ಮಾಡುವ ಸಾಹಸ ಮಾಡಿದ್ದಕ್ಕೆ ಇರುವ ಸಾಕ್ಷ್ಯಾಧಾರಗಳು ಅನೇಕ. ಕಾರಣವಿಷ್ಟೆ, ಸಾರ್ವಜನಿಕ ಹಣಕ್ಕೆ ಈ ದೇಶದಲ್ಲಿ ತಂದೆ ತಾಯಿಗಳಿಲ್ಲ! ಅಂತರರಾಷ್ಟ್ರೀಯ ಖ್ಯಾತಿಯುಳ್ಳ ಕೃಷಿ ಅರ್ಥಶಾಸ್ತ್ರಜ್ಞ ವಿ.ಎನ್. ದಾಂಡೇಕರ್‌ರವರು 1993 ಫೆ. 26ರಂದು ಮಂಗಳೂರು ವಿವಿಯಲ್ಲಿ ಹೇಳಿದ ಕೆಲವು ವಿಚಾರಗಳು ಈಗಲೂ ಗಮನಾರ್ಹ. ಸಾಲ ಮನ್ನಾ ಉಪಕ್ರಮಗಳನ್ನು ಅವರು ಖಂಡಿಸಿದರು. ಸಣ್ಣ ಹಿಡುವಳಿಗಳು ಕೃಷಿ ರಂಗದ ದೊಡ್ಡ ಸಮಸ್ಯೆ ಎನ್ನುತ್ತಾ ದಾಂಡೇಕರ್ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿ ಮಿಗತೆಯನ್ನು (ಆಧಿಕ್ಯವನ್ನು) ಸೃಷ್ಟಿಸುವ ಉದ್ದೇಶದಿಂದ ಭೂಮಿತಿ ಶಾಸನವನ್ನು ರದ್ದುಗೊಳಿಸುವಂತೆ ಸಲಹೆ ಮಾಡಿದರು. ಕೃಷಿಗೆ ಪೂರೈಕೆಯಾಗುತ್ತಿರುವ ಸಾಲದ ಲೋಪದೋಷಗಳನ್ನು ಹೇಳುತ್ತಾ ಅವರು ಸಾಲದ ಮೊತ್ತದ ಮಿತಿಗಳನ್ನು ಚರ್ಚಿಸುವ ಬದಲು ಸಾಲದ ಮಿತಿಯನ್ನು ಚರ್ಚಿಸುವುದು ಒಳಿತು ಎಂದರು. ಕೃಷಿ ಸಾಲ ಕ್ಷೇತ್ರ ನಮ್ಮ ದೇಶದಲ್ಲಿ ಸಮಿತಿಗಳ ನಿರ್ಮಾಣಕ್ಕಾಗಿ ಮೀಸಲಾಗಿರುವ ಕ್ಷೇತ್ರವೆಂದು ಅವರು ಟೀಕಿಸಿದರು, ಹಲವು ದೃಷ್ಟಾಂತಗಳನ್ನು ನೀಡಿದ್ದರು.ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಿದರೆ ಸಾಲಮನ್ನಾದಂಥ ಅಗ್ಗದ ಯೋಜನೆ ಅಗತ್ಯವಿಲ್ಲವೆಂದು ಅವರು ಹೇಳಿದ್ದರು. ಆದರೆ ಸರ್ಕಾರ ನಡೆಸುವವರಿಗೆ ಮತ್ತು ಚುನಾವಣೆ ರಾಜಕೀಯದಲ್ಲಿ ಅಪರಿಮಿತ ವಿಶ್ವಾಸವುಳ್ಳವರಿಗೆ ಇದನ್ನೆಲ್ಲಾ ಕೇಳುವ ಕಿವಿ ಇರುವುದಿಲ್ಲ.

ಕೃಷಿಕರ ಹಿತೈಷಿಯೆಂದು ಹೆಸರು ಮಾಡಿದ್ದ ಅರ್ಥಶಾಸ್ತ್ರಜ್ಞ ಮತ್ತು ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಡಿ.ಎಂ. ನಂಜುಂಡಪ್ಪ ತಮ್ಮ ಪಾಂಡಿತ್ಯ ಪೂರ್ಣ ಲೇಖನದಲ್ಲಿ (1999) ರೈತರಿಗೆ ನೆರವಾಗಲು ಸಮಗ್ರ ಗ್ರಾಮೀಣ ಬ್ಯಾಂಕಿಂಗ್ ಬೇಕೆಂದು ವಾಸ್ತವದಲ್ಲಿ ಉಪಯುಕ್ತವಾದ ಸಲಹೆ ನೀಡಿದ್ದರು.ಕೃಷಿಯನ್ನು ಉದ್ದಿಮೆಗೆ ಸಮಾನವಾಗಿ ಪರಿಗಣಿಸಿ ಅಭಿವೃದ್ಧಿಗೆ ಬೇಕಾದ ಧೋರಣೆಗಳನ್ನು ನಿರೂಪಿಸುವುದು, ಕೃಷಿಯಲ್ಲಿ ಸರ್ಕಾರಿ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸಿ ತೀರಾ ಅವಶ್ಯವಾದ ನೀರಾವರಿಯಂಥ ಮೂಲ ಸೌಕರ್ಯಗಳನ್ನು ಸೃಷ್ಟಿಸುವುದು ಮತ್ತುಕೃಷಿ ಸಾಲ ವ್ಯವಸ್ಥೆಯನ್ನು ಪುನರ್‌ರಚಿಸಿ ಅದನ್ನು ಬಲಪಡಿಸುವುದು - ಹೀಗೆ ಮೂರು ಪರಸ್ಪರ ಪೂರಕವಾದ ಯೋಜನೆಗಳನ್ನು ಸರ್ಕಾರ ರೂಪಿಸಬೇಕೆಂದು ನಂಜುಂಡಪ್ಪ ನೀಡಿದ ಸಲಹೆಯನ್ನು ಲಕ್ಷಿಸದೆ ಸರ್ಕಾರಗಳು ಸುಲಭವಾಗಿ ಸಾಲ ಮನ್ನಾ ಮಾಡುವ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಿವೆ.    2008ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ  `ಕೃಷಿ ಸಾಲ ಮನ್ನಾ ಹಾಗೂ ಸಾಲ ಪರಿಹಾರ' ಯೋಜನೆಯನ್ವಯ ಸುಮಾರು 52,000 ಕೋಟಿ ರೂಪಾಯಿಗಳ ಸಾಲವನ್ನು ತಾತ್ವಿಕವಾಗಿ ಮನ್ನಾ ಮಾಡಲಾಯಿತು. ಕಳೆದ ಮಾರ್ಚ್ 5ರಂದು ಮಹಾಲೇಖಪಾಲರು ನೀಡಿದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಸಿಎಜಿ ವರದಿ ಪ್ರಕಾರ ಅನರ್ಹ ರೈತರು ಕೂಡ ಯೋಜನೆಯ ಲಾಭ ಪಡೆದಿದ್ದಾರೆ. ಇದೇ ವೇಳೆ ಯೋಜನೆಯ ಲಾಭ ಪಡೆಯಬೇಕಾಗಿದ್ದ ಅನೇಕ ಸಣ್ಣ ಹಾಗೂ ಅತಿ ಸಣ್ಣ ರೈತರ ಸಾಲಗಳನ್ನು ಬ್ಯಾಂಕುಗಳು ಪರಿಗಣಿಸಿಲ್ಲ. ಸಾಲ ಮನ್ನಾ ನಿಯಮಾವಳಿಗಳನ್ನು ಸಾರ್ವಜನಿಕ ಬ್ಯಾಂಕುಗಳೇ ಉಲ್ಲಂಘಿಸಿ ಸರ್ಕಾರದಿಂದ ಸಾಕಷ್ಟು ಮೊತ್ತಗಳನ್ನು ಕಬಳಿಸಿವೆ. ದೆಹಲಿಮತ್ತುಚಂಡೀಗಡದ ಸಾಲಮನ್ನಾ ಮೊತ್ತ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಒಟ್ಟು ಮೊತ್ತಕ್ಕಿಂತ ಹೆಚ್ಚಾಗಿದ್ದನ್ನು ಸಿಎಜಿ ವರದಿ ತೋರಿಸಿದೆ!ನಮ್ಮ ರೈತರು ಸ್ವಭಾವತಃ ಸ್ವಾಭಿಮಾನಿಗಳು. ಕೃಷಿಗೆ ಸಮಗ್ರವಾಗಿ ಪೂರಕವಾದ ನೀತಿ-ಧೋರಣೆಗಳ ಮೂಲಕ ಸರ್ಕಾರಗಳು ಅವರಿಗೆ ನೆರವಾದರೆ, ಅವರ ಸ್ಥಿತಿಗತಿಯನ್ನು ಸುಧಾರಿಸಿದರೆ ಸಾಲಮನ್ನಾ ಮಾಡಬೇಕೆಂಬ ಬೇಡಿಕೆಯನ್ನು ಅವರು ಖಂಡಿತ ಮಂಡಿಸಲಿಕ್ಕಿಲ್ಲ. ಇದನ್ನು ಮರೆತು ಎಲ್ಲ ರಾಜಕೀಯ ಪಕ್ಷಗಳು ಒಂದಲ್ಲ ಒಂದು ಸಂದರ್ಭದಲ್ಲಿ ಸಾಲಮನ್ನಾ ಯೋಜನೆಗಳನ್ನು ಘೋಷಿಸುವ ಸಾಧನೆ (?) ಮಾಡಿವೆ. ಗ್ರಾಮೀಣ ಜನತೆಯ ಅಭ್ಯುದಯಕ್ಕೆ ಮಾಡಬೇಕಾದದ್ದನ್ನು ಮಾಡದೆ ಸಾಲ ಮನ್ನಾದಂಥ ಯೋಜನೆಗಳನ್ನು ವಿಸ್ತೃತಗೊಳಿಸುವ ಭರವಸೆಯ ಮೂಲಕ (ನೇಕಾರರಿಗೆ, ಮೀನುಗಾರರಿಗೆ ಮತ್ತು ಕುಶಲಕರ್ಮಿಗಳಿಗೆ ಅನ್ವಯವಾಗುವಂತೆ) ಈಗ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳು ಸಮಸ್ಯೆಗಳ ಸಾಲನ್ನು ಸೃಷ್ಟಿಸುತ್ತಿವೆ!

- ಪ್ರೊ. ಜಿ.ವಿ. ಜೋಶಿ

ಜಸ್ಟೀಸ್ ಕೆ.ಎಸ್. ಹೆಗ್ಡೆ ಇನ್‌ಸ್ಟಿಟ್ಯೂಟ್ ಆಫ್ ಮ್ಯೋನೇಜ್‌ಮೆಂಟ್, ನಿಟ್ಟೆ

ಪ್ರತಿಕ್ರಿಯಿಸಿ (+)