ಸಾನಿಯಾ– ಜೆಂಗ್‌ ಜೋಡಿಗೆ ಸೋಲು

7

ಸಾನಿಯಾ– ಜೆಂಗ್‌ ಜೋಡಿಗೆ ಸೋಲು

Published:
Updated:

ನ್ಯೂಯಾರ್ಕ್‌ (ಪಿಟಿಐ): ಸಾನಿಯಾ ಮಿರ್ಜಾ ಮತ್ತು ಜೀ ಜೆಂಗ್‌ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆ­ಯರ ಡಬಲ್ಸ್‌ ವಿಭಾಗದ ಸೆಮಿ­ಫೈನಲ್‌ನಲ್ಲಿ ಸೋಲು ಅನುಭವಿಸಿದರು.ಗುರುವಾರ ನಡೆದ ಪಂದ್ಯದಲ್ಲಿ ಭಾರತ– ಚೀನಾ ಜೋಡಿ 2–6, 2–6 ರಲ್ಲಿ ಆಸ್ಟ್ರೇಲಿಯಾದ ಆಶ್ಲೆ ಬಾರ್ಟಿ ಮತ್ತು ಕ್ಯಾಸೆ ಡೆಲಾಕ್ವ ಕೈಯಲ್ಲಿ ಪರಾಭವಗೊಂಡಿತು. ಎಂಟನೇ ಶ್ರೇಯಾಂಕದ ಜೋಡಿ ಒಂದು ಗಂಟೆ ಐದು ನಿಮಿಷಗಳ ಹೋರಾಟದ ಬಳಿಕ ಜಯ ಸಾಧಿಸಿತು.ಹತ್ತನೇ ಶ್ರೇಯಾಂಕ ಹೊಂದಿದ್ದ ಸಾನಿಯಾ ಮತ್ತು ಜೆಂಗ್‌ ಪಂದ್ಯದಲ್ಲಿ ತಮ್ಮ ಸರ್ವ್‌ ಕಾಪಾಡಿಕೊಳ್ಳಲು ವಿಫಲರಾದರು. ಎರಡೂ ಸೆಟ್‌ಗಳಲ್ಲಿ ಆರು ಸಲ ಸರ್ವ್‌ ಕಳೆದುಕೊಂಡು ಸೋಲು ಅನುಭವಿಸಿದರು. ಇದರೊಂ­ದಿಗೆ ಟೂರ್ನಿಯಲ್ಲಿ ಸಾನಿಯಾ ಸವಾಲು ಕೊನೆಗೊಂಡಿತು. ಹೈದರಾಬಾದ್‌ನ ಆಟಗಾರ್ತಿ ಮಿಶ್ರ ಡಬಲ್ಸ್‌ ವಿಭಾಗದಲ್ಲಿ  ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದರು.ಪೇಸ್‌ ಭರವಸೆ: ಇದೀಗ ಋತುವಿನ ಕೊನೆಯ ಗ್ರ್ಯಾಂಡ್‌ ಸ್ಲಾಮ್‌ ಟೂನಿರ್ಯಲ್ಲಿ ಲಿಯಾಂಡರ್‌ ಪೇಸ್‌ ಮಾತ್ರ ಭಾರತದ ಭರವಸೆ ಎನಿಸಿ­ಕೊಂಡಿ­ದ್ದಾರೆ. ಪೇಸ್‌ ಮತ್ತು ಜೆಕ್‌ ಗಣರಾಜ್ಯದ ರಾಡೆಕ್‌ ಸ್ಟೆಪನೆಕ್‌ ಜೋಡಿ ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ ಪ್ರವೇಶಿಸಿದೆ.ಸೆಮಿಫೈನಲ್‌ನಲ್ಲಿ ಪೇಸ್‌– ಸ್ಟೆಪನೆಕ್‌ ಅಗ್ರಶ್ರೇಯಾಂಕದ ಆಟಗಾರರಾದ ಅಮೆರಿಕದ ಬಾಬ್‌– ಮೈಕ್‌ ಬ್ರಯನ್‌ ಸಹೋದರರಿಗೆ ಆಘಾತ ನೀಡಿದ್ದರು. ಫೈನಲ್‌ನಲ್ಲಿ ಭಾರತ– ಜೆಕ್‌ ಜೋಡಿ ಆಸ್ಟ್ರಿಯದ ಅಲೆಕ್ಸಾಂಡರ್‌ ಪೆಯಾ ಮತ್ತು ಬ್ರೆಜಿಲ್‌ನ ಬ್ರೂನೊ  ಸೊರೇಜ್‌ ಅವರ ಸವಾಲನ್ನು ಎದುರಿಸಲಿದೆ.ನಾಲ್ಕರಘಟ್ಟಕ್ಕೆ ವಿಲಿಯಮ್ಸ್‌ ಸಹೋದರಿಯರು: ಅಮೆರಿಕದ ವೀನಸ್‌ ಹಾಗೂ ಸೆರೆನಾ ವಿಲಿಯಮ್ಸ್‌ ಸಹೋದರಿಯರು ಮಹಿಳೆಯರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದರು.ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೆರೆನಾ– ವೀನಸ್‌ 6–3, 6–1 ರಲ್ಲಿ ಇಟಲಿಯ ಸಾರಾ ಎರಾನಿ ಮತ್ತು ರಾಬರ್ಟಾ ವಿನ್ಸಿ ಅವರನ್ನು ಮಣಿಸಿದರು. ಇಟಲಿಯ ಜೋಡಿ ಇಲ್ಲಿ ಅಗ್ರಶ್ರೇಯಾಂಕ ಪಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry