ಸೋಮವಾರ, ಏಪ್ರಿಲ್ 19, 2021
32 °C

ಸಾಫ್ಟ್ ಮನಸು ಹಾರ್ಡ್ ಕನಸು:...ಕ್ಯಾ ಯಾರೋಂ ಇಂದು ತೆರೆಗೆ

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

ಅವರು ಅಪ್ಪಟ ಸಾಫ್ಟ್‌ವೇರ್ ಎಂಜಿನಿಯರ್‌ಗಳು. ದೇಶದ ಎಲ್ಲೆಲ್ಲಿಂದಲೋ ಬಂದು ಬೆಂಗಳೂರಿನಲ್ಲಿ ನೆಲೆಯೂರಿದವರು. ತಮ್ಮ ವೃತ್ತಿ ಏಕತಾನವಾದಾಗ ಅಲ್ಲಿಂದ ಜಿಗಿದು ಸಿನಿಮಾ ಲೋಕದಲ್ಲಿ ವಿಹರಿಸತೊಡಗಿದವರು. ನಟನೆ, ನಿರ್ದೇಶನ ಹೀಗೆ ತಮ್ಮ ಅಭಿರುಚಿಯ ಕ್ಷೇತ್ರಗಳಲ್ಲಿ ದುಡಿಯಲು ಹೊರಟವರು.ಇವರ ಉತ್ಸಾಹದ, ಛಲದ ಫಲವೇ `ಸಾಫ್ಟ್‌ವೇರ್ ಹಾರ್ಡ್‌ವೇರ್ ಕ್ಯಾ ಯಾರೋಂ~ ಡಿಜಿಟಲ್ ಸಿನಿಮಾ. ಸುಮಾರು 15 ಕಲಾವಿದರು ತಂತ್ರಜ್ಞರು ಚಿತ್ರದ ಹಿಂದೆ ದುಡಿದಿದ್ದಾರೆ. 1.45 ಗಂಟೆಯ ಈ ಚಿತ್ರಕ್ಕೆ ಸ್ನೇಹಿತರೇ ಹಣ ಹೊಂದಿಸಿದ್ದಾರೆ. 20 ಲಕ್ಷ ಬಜೆಟ್‌ನಲ್ಲಿ ಬೃಹತ್ ವೆಚ್ಚದ ಸಿನಿಮಾಗಳಿಗೆ ಪೈಪೋಟಿ ಒಡ್ಡುವಂತೆ ಸಿನಿಮಾ ತಯಾರಾಗಿದೆ. ಚಿತ್ರದ ಕತೆ ಹೀಗಿದೆ. ರೂಮ್‌ಮೇಟ್‌ಗಳೂ ಆಗಿರುವ ನಾಲ್ವರು ಗೆಳೆಯರು. ಒಬ್ಬನದು ಹೈದರಾಬಾದ್, ಇನ್ನೊಬ್ಬನದು ತೆಲಂಗಾಣ, ಮತ್ತೊಬ್ಬನದು ಚೆನ್ನೈ ಮಗದೊಬ್ಬನದು ಮಿಜೋರಾಂ. ಎಲ್ಲರೂ ಒಂದೇ ಕಂಪೆನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳು.

 

ಕೆಲಸ ಮೋಜು ಮಸ್ತಿಯಲ್ಲಿ ಮಗ್ನರಾಗಿದ್ದ ಅವರಿಗೆ ಆರ್ಥಿಕ ಕುಸಿತ ಎಂಬುದು ಪೆಡಂಭೂತವಾಗಿ ಕಾಡುತ್ತದೆ. ಉದ್ಯೋಗ ಉಳಿಯುತ್ತದೆಯೋ ಇಲ್ಲವೋ ಎಂಬ ಭೀತಿ ಒಂದೆಡೆ. ಇಷ್ಟರಲ್ಲಿಯೇ ಆನ್‌ಸೈಟ್ ಕರ್ತವ್ಯದ ಮೇರೆಗೆ ಜಪಾನ್‌ಗೆ ತೆರಳುವ ಅವಕಾಶ. ಆದರೆ ಆಯ್ದ ಕೆಲವೇ ಮಂದಿಗೆ ಈ ಅದೃಷ್ಟ.ಕಷ್ಟದ ಹೊತ್ತಿನಲ್ಲಿ ವರವಾಗಿ ಬಂದ ಈ ಅವಕಾಶವನ್ನು ಯಾರು ತಾನೆ ಬಳಸಿಕೊಳ್ಳದೆ ಬಿಟ್ಟಾರು. ನಾಲ್ವರು ಗೆಳೆಯರೊಂದಿಗೆ ಕಚೇರಿಯ ಐವರು ಸಹೋದ್ಯೋಗಿಗಳೂ ಪೈಪೋಟಿಗಿಳಿಯುತ್ತಾರೆ. ಅನೇಕರು ಅನ್ಯಮಾರ್ಗಗಳನ್ನು ಹಿಡಿದು ಅವಕಾಶ ಗಿಟ್ಟಿಸಿಕೊಳ್ಳಲು ಹೆಣಗುತ್ತಾರೆ. ಮುಂದೇನಾಗುತ್ತದೆ ಎಂಬುದಕ್ಕೆ ಇದೇ ಗುರುವಾರ ನಗರದ ಚಿತ್ರಮಂದಿರಗಳಲ್ಲಿ ಉತ್ತರ ಕಂಡುಕೊಳ್ಳಬಹುದು.  ದೊಡ್ಡ ದೊಡ್ಡ ದೀಪಗಳ ನಡುವೆ ಪುಟ್ಟ ಹಣತೆ ಹಚ್ಚಲು ಹೊರಟಿದ್ದೇವೆ ಎಂದು ತಮ್ಮ ಚಿತ್ರವನ್ನು ಬಿಂಬಿಸಿಕೊಳ್ಳುತ್ತಾರೆ ಚಿತ್ರದ ನಿರ್ದೇಶಕ ರಬಿ ಕಿಸ್ಕು. ಜಾರ್ಖಂಡ್ ಹುಟ್ಟೂರು. ಪರ್ಯಾಯ ಸಿನಿಮಾಗಳಿಂದ ಪ್ರಭಾವಿತರಾಗಿದ್ದ ಅವರಿಗೆ ಕತೆ ಹೊಳೆದದ್ದು ಆರ್ಥಿಕ ಕುಸಿತ ಉಂಟಾದ ಸಂದರ್ಭದಲ್ಲಿ.ಕಮರ್ಷಿಯಲ್ ಆಗಿ ಯಶಸ್ಸು ಕಾಣುವಂತಹ ಹಾಸ್ಯಮಯ ಚಿತ್ರ ತಯಾರಿಸಬೇಕು ಎಂಬ ಅವರ ಕನಸು ಈಗ ಸಾಕಾರಗೊಂಡಿದೆ.ಕತೆಯಲ್ಲಿ ಪಾತ್ರವಹಿಸಿರುವ ಎಲ್ಲರೂ ಸಾಫ್ಟ್‌ವೇರ್ ಜಗತ್ತಿನೊಂದಿಗೆ ಒಂದಿಲ್ಲೊಂದು ರೀತಿಯ ಸಂಬಂಧ ಹೊಂದಿದವರು. ಕೆಲವರು ಈಗಲೂ ಉದ್ಯೋಗದಲ್ಲಿದ್ದರೆ, ಇನ್ನು ಕೆಲವರು ವೃತ್ತಿಗೆ ವಿದಾಯ ಹೇಳಿದ್ದಾರೆ.ಮತ್ತೆ ಕೆಲವರು ಕಂಪ್ಯೂಟರ್ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಗಳು. ನಗರದ ಕೋರಮಂಗಲ, ಎಚ್‌ಎಸ್‌ಆರ್ ಬಡಾವಣೆ, ಸರ್ಜಾಪುರ, ಕನಕಪುರ ಸೇರಿದಂತೆ ನಲವತ್ತೈದು ದಿನಗಳ ಕಾಲ ಚಿತ್ರೀಕರಣ ನಡೆದಿದ್ದು ಚಿತ್ರದಲ್ಲಿ ಒಟ್ಟು ಆರು ಹಾಡುಗಳಿವೆ. ಕೆಲವು ಪ್ರಖ್ಯಾತ ಬ್ಯಾಂಡ್‌ಗಳು, ಲಕ್ಕಿ ಅಲಿಯಂಥ ಪ್ರಸಿದ್ಧ ಹಾಡುಗಾರರು ಚಿತ್ರದ ಸಂಗೀತಕ್ಕೆ ಕೊಡುಗೆ ನೀಡಿದ್ದಾರೆ.ಅಂದಹಾಗೆ ಚಿತ್ರ ಹಲವು ಭಾಷೆಗಳ ಮಿಶ್ರಣ. ಕನ್ನಡ, ತೆಲುಗು, ಹಿಂದಿ ಸೇರಿದಂತೆ ಆರು ಭಾಷೆಗಳನ್ನು ಬಳಸಿಕೊಳ್ಳಲಾಗಿದೆ. ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆದಿದೆ. ಅದಿತಿ ಕಲ್ಕುಂಟೆ, ಶ್ವೇತಾ ದೇಸಾಯಿ, ಮೋನಿಷ್ ನಾಗರಾಜ್, ಅರವಿಂದ್ ಕಾಮತ್, ವಿಶಾಲ್ ನಾಯರ್, ರಣಬೀರ್ ಚಕ್ಮ, ಸಲೀಂ ಅಹಮದ್ ಮುಂತಾದವರ ತಾರಾಗಣ ಇದೆ. ಜತೆಗೆ ವಿದೇಶಿ ನಟರೂ ಭಾಗಿಯಾಗಿದ್ದಾರೆ. ಸಿದ್ಧಾರ್ಥ ನೂನಿ ಚಿತ್ರದ ಛಾಯಾಗ್ರಾಹಕರು.ಚಿತ್ರವನ್ನು ಬಿಡುಗಡೆ ಮಾಡಲು ಹೊರಟಾಗ ಅನೇಕ ಅಡೆತಡೆಗಳು ಚಿತ್ರತಂಡಕ್ಕೆ ಎದುರಾಯಿತಂತೆ. ಸೆನ್ಸಾರ್ ಸರ್ಟಿಫಿಕೇಟ್ ಪಡೆಯಲು ನಿರ್ಮಾಪಕರ ಸಂಘದ ಸದಸ್ಯರಾಗಬೇಕು ಎಂಬುದು ಮೊದಲ ತಕರಾರು. ಕಡೆಗೂ ಸರ್ಟಿಫಿಕೇಟ್ ದೊರೆಯಿತು. ಮುಂದೆ ಥಿಯೇಟರ್‌ಗಳ ಕೊರತೆ.

 

ಕೆಲವು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳೊಂದಿಗೆ ಮಾತುಕತೆ ಯಶಸ್ವಿಯಾದಾಗ ಇನ್ನೊಂದು ಆತಂಕ ನಿವಾರಣೆಯಾಯಿತು. ದೇಶದ ಪ್ರಮುಖ ನಗರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದು ಹಾಗೂ ಆನ್‌ಲೈನ್ ಮೂಲಕ ವಿಶ್ವದ ಚಿತ್ರರಸಿಕರಿಗೆ ಚಿತ್ರ ತಲುಪಿಸುವುದು ಚಿತ್ರತಂಡದ ಮುಂದಿನ ಗುರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.