ಸೋಮವಾರ, ಮಾರ್ಚ್ 1, 2021
29 °C
ಉದ್ಯೋಗಖಾತ್ರಿ ಯೋಜನೆ: ಕೂಲಿ ಹಣ ಇಲಾಖೆಯಿಂದ ಪೂರೈಕೆ

ಸಾಮಗ್ರಿ ವೆಚ್ಚ ಇಲಾಖೆಗಳ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮಗ್ರಿ ವೆಚ್ಚ ಇಲಾಖೆಗಳ ಹೊಣೆ

ಕೋಲಾರ: ಉದ್ಯೋಗಖಾತ್ರಿ ಯೋಜನೆ­ಯಡಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳು ಇನ್ನು ಮುಂದೆ ಸಾಮಗ್ರಿ ವೆಚ್ಚ ಭರಿಸಬೇಕು. ಮುಂದಿನ ಆರ್ಥಿಕ ವರ್ಷದ ಕ್ರಿಯಾ ಯೋಜನೆಯಲ್ಲಿ ಈ ಅಂಶವನ್ನು ವಿಶೇಷವಾಗಿ ಪರಿಗಣಿಸ­ಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್‌.ವಿನುತ್ ಪ್ರಿಯಾ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣ­ದಲ್ಲಿ ಮಂಗಳವಾರ ನಡೆದ ಯೋಜನೆ ಜಾರಿ ಮಾಡುವ ಇಲಾಖೆ­ಗಳ ಅಧಿಕಾರಿಗಳ ಸಭೆಯಲ್ಲಿ ಮಾತ­ನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆ ನೇರವಾಗಿ ಅನುಷ್ಠಾನ ಮಾಡುವ ಕಾಮಗಾರಿಗಳ ಸಾಮಗ್ರಿ ವೆಚ್ಚವನ್ನು ತಾನೇ ಭರಿಸಲಿದೆ. ಆದರೆ ಯೋಜನೆ­ಯನ್ನು ಒಗ್ಗೂಡಿಸುವಿಕೆ ಆಧಾರದಲ್ಲಿ (ಕನ್ವರ್ಜನ್ಸ್) ಅನುಷ್ಠಾನಗೊಳಿಸುವ ಎಲ್ಲ ಇಲಾಖೆಗಳು ಒಟ್ಟು ಖರ್ಚಿನಲ್ಲಿ ಶೇ 40ರಷ್ಟು ಸಾಮಗ್ರಿ ವೆಚ್ಚವನ್ನು ಭರಿಸಬೇಕು ಎಂದು ಸೂಚಿಸಿದರು.ಸಾಮಾಜಿಕ ಅರಣ್ಯ ಮತ್ತು ತೋಟ­ಗಾರಿಕೆ ಇಲಾಖೆ ಉಪನಿರ್ದೇಶಕರಾದ ಅಶ್ವಥನಾರಾಯಣ ಮತ್ತು ಎಂ.ಆರ್‌.­ಚಂದ್ರಶೇಖರ್‌, ಅದಕ್ಕೆ ಇಲಾಖೆಯಲ್ಲಿ ಅವಕಾಶ ಇಲ್ಲ ಎಂದು ಮುಖ್ಯ ಕಾರ್ಯ­ನಿರ್ವಹಣಾಧಿಕಾರಿಗಳ ಗಮನ ಸೆಳೆ­ದರು. ತಾವು ಕಾಮಗಾರಿಗಳಿಗೆ ಗಿಡ­ಗಳನ್ನು ಪೂರೈಸಬಲ್ಲೆವಷ್ಟೆ. ಸಾಮಗ್ರಿ ವೆಚ್ಚವನ್ನು ನೀಡಲು ಅವಕಾಶ ಇರು­ವುದಿಲ್ಲ ಎಂದು ಸ್ಪಷ್ಟಪಡಿಸಿದರು.ಇಲಾಖೆಗಳ ಒಗ್ಗೂಡುವಿಕೆ ಮೂಲಕ ಉದ್ಯೋಗಖಾತ್ರಿ ಯೋಜನೆ ಜಾರಿ­ಯಾಗಲಿರುವ ಕುರಿತು ತಮ್ಮ ಇಲಾಖೆ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದು ಪ್ರತ್ಯೇಕ ಅನುದಾನ ನೀಡುವಂತೆ ಮನವಿ ಮಾಡಿ. ಕ್ರಿಯಾ ಯೋಜನೆಯಲ್ಲಿ ಈ ಅಂಶ­ವನ್ನು ಉಲ್ಲೇಖಿಸಿ. ಒಟ್ಟಾರೆ ಕ್ರಿಯಾ ಯೋಜನೆಯಲ್ಲಿ ಸಾಮಗ್ರಿ ವೆಚ್ಚದ ವಿವರವೂ ಇರುವಂತೆ ರೂಪಿಸಿ ಎಂದು ವಿನುತ್ ಪ್ರಿಯಾ ವಿವರಿಸಿದರು.ನಿಯಂತ್ರಣ ಸಾಧಿಸಿ: ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿ ಜಿಲ್ಲೆಯ ಪ್ರಗತಿ ಕುರಿತು ರಾಜ್ಯ ಮಟ್ಟದಲ್ಲಿ ತೀವ್ರ ಕುತೂ­ಹಲವಿದೆ. ಆದರೆ ಇಲಾಖೆಗಳ ಮೂಲಕ ಅನುಷ್ಠಾನಗೊಳ್ಳುವ ಉದ್ಯೋಗಖಾತ್ರಿ ಯೋಜನೆ ಕಾಮಗಾರಿಗಳ ಪ್ರಗತಿಯು ತೃಪ್ತಿಕರವಾಗಿಲ್ಲ. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಾಗಲಿ, ತಾಲ್ಲೂಕು ಮಟ್ಟದ ಅಧಿಕಾರಿಗಳಾಗಲಿ ಅಗತ್ಯ ಗಮನ ಹರಿಸುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಉಪಕಾರ್ಯ­ದರ್ಶಿ ಜಿ.ಎಫ್.ಬದನೂರು ಅಸಮಾಧಾನ ವ್ಯಕ್ತಪಡಿಸಿದರು.ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅವರಿಂದ ಕೆಲಸ ಮಾಡಿಸುತ್ತಿರುವುದರ ಪರಿಣಾಮವಾಗಿ ಖಾತ್ರಿ ಯೋಜನೆ ಪ್ರಗತಿ ಸಮಾಧಾನಕರ ಸ್ಥಿತಿಯಲ್ಲಿದೆ. ಆದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕು ಮಟ್ಟದ ಅಧಿಕಾರಿಗಳ ಮೇಲೆ ನಿಯಂತ್ರಣ ಸಾಧಿ­ಸಿದರೆ ಮಾತ್ರ ಯೋಜನೆ ಪ್ರಗತಿ ಹೆಚ್ಚಾ­ಗುತ್ತದೆ ಎಂದು ಅವರು ಹೇಳಿ­ದರು.

ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಕಾರ್ಯ­ನಿರ್ವ­ಹಣಾ­ಧಿಕಾರಿಗಳ ನಡುವೆ ಉತ್ತಮ ಸಂಪರ್ಕ ಮತ್ತು ಸಂವಹನ ಏರ್ಪಟ್ಟರೆ ಮಾತ್ರ ಯೋಜನೆ ಸರಿ­ಯಾಗಿ ಅನು­ಷ್ಠಾನ­ಗೊಳ್ಳುತ್ತದೆ. ಇಲ್ಲ­ವಾದರೆ ತೆವಳು­ತ್ತಲೇ ಇರುತ್ತದೆ ಎಂದು ಅವರು ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.