ಸಾಮರಸ್ಯಕ್ಕೆ ಕಾಂಗ್ರೆಸ್ ಬದ್ಧತೆ ಪ್ರದರ್ಶ

7

ಸಾಮರಸ್ಯಕ್ಕೆ ಕಾಂಗ್ರೆಸ್ ಬದ್ಧತೆ ಪ್ರದರ್ಶ

Published:
Updated:
ಸಾಮರಸ್ಯಕ್ಕೆ ಕಾಂಗ್ರೆಸ್ ಬದ್ಧತೆ ಪ್ರದರ್ಶ

ಉಳ್ಳಾಲ: `ಕಾಂಗ್ರೆಸ್ಸಿನೊಂದಿಗೆ ಬನ್ನಿ, ಬದಲಾವಣೆ ತನ್ನಿ' (`ಕಾಂಗ್ರೆಸ್ ನಡಿಗೆ ಸಾಮರಸ್ಯದ ಕಡೆಗೆ' ಪಾದಯಾತ್ರೆ) ಅಭಿಯಾನದ ಅಂಗವಾಗಿ ಎರಡನೇ ಹಂತದ ಪಾದಯಾತ್ರೆ ಕಡಲ ತಡಿಯ ಉಳ್ಳಾಲದಲ್ಲಿ ಮಂಗಳವಾರ ಅದ್ದೂರಿಯಾಗಿ ಆರಂಭಗೊಂಡಿತು. ಉಳ್ಳಾಲದಿಂದ ಉಡುಪಿವರೆಗಿನ 80 ಕಿ.ಮೀ. ದೂರದ ನಾಲ್ಕು ದಿನಗಳ ಈ ಯಾತ್ರೆಯು ಚುನಾವಣಾ ಪ್ರಚಾರಕ್ಕೆ ಮುನ್ನುಡಿ ಬರೆಯಿತು.ರಾಜ್ಯವನ್ನು ಕಾಡುತ್ತಿರುವ ರಾಜಕೀಯ ಅಸ್ಥಿರತೆ, ನೈಸರ್ಗಿಕ ಸಂಪನ್ಮೂಲಗಳ ಲೂಟಿ, ಗಣಿ ಮಾಫಿಯಾ, ಭ್ರಷ್ಟಾಚಾರಗಳ ವಿರುದ್ಧ ಸಮರ ಸಾರಿದ ಕಾಂಗ್ರೆಸ್ ಮುಖಂಡರು ಕರಾವಳಿ ಭಾಗದಲ್ಲಿ ಭಾವೈಕ್ಯ ಹಾಗೂ ಸಾಮಾಜಿಕ ಸಾಮರಸ್ಯ ಮೂಡಿಸಬೇಕಾದ ಅಗತ್ಯ ಒತ್ತಿ ಹೇಳಿದರು. ಪ್ರಸಕ್ತ ರಾಜಕೀಯ ಸವಾಲುಗಳನ್ನು ಎದುರಿಸುವ ಸಂಕಲ್ಪ ಮಾಡಿದರು. ಒಗ್ಗಟ್ಟು ಪ್ರದರ್ಶನದ ಪ್ರಯತ್ನವನ್ನೂ ಮಾಡಿದರು.ಉಳ್ಳಾಲದ ಅಬ್ಬಕ್ಕ ರಾಣಿ ವೃತ್ತದಲ್ಲಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ. ಜಿ.ಪರಮೇಶ್ವರ ಅವರು ಪಾದಯಾತ್ರೆಗೆ ಚಾಲನೆ ನೀಡಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಹಾಗೂ ಈ ಭಾಗದ ಹಿರಿಯ ಮುಖಂಡ ಜನಾರ್ದನ ಪೂಜಾರಿ ಮತ್ತಿತರ ಪ್ರಮುಖರೊಂದಿಗೆ ಜಂಟಿಯಾಗಿ ಪಾದಯಾತ್ರೆಯನ್ನು ಉದ್ಘಾಟಿಸಿದರು.ಬೆಳಿಗ್ಗೆ 9.30ಕ್ಕೆ ಪ್ರಾರಂಭಗೊಳ್ಳಬೇಕಿದ್ದ ಪಾದಯಾತ್ರೆ ಚಾಲನೆಗೊಂಡಾಗ 11.55 ಆಗಿತ್ತು. ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷರ ಸಹಿತ ಪ್ರಮುಖ ನಾಯಕರು ಉಳ್ಳಾಲ ಸುತ್ತಮುತ್ತಲ ಹತ್ತರಿಂದ ಹನ್ನೊಂದು ಪ್ರಾರ್ಥನಾಲಯಗಳಿಗೆ ಭೇಟಿ ಕೊಟ್ಟರು. ಸೋಮೇಶ್ವರ ದೇವಾಲಯ, ಉಳ್ಳಾಲ ದರ್ಗಾ, ಸೇಂಟ್ ಸೆಬಾಸ್ಟಿಯನ್ ಚರ್ಚ್ ಸಹಿತ ವಿವಿಧ ಧರ್ಮಗಳ ಮಂದಿರಗಳನ್ನು ಸಂದರ್ಶಿಸಿದರು. ಸ್ಥಳೀಯ ಶಾಸಕ ಯು.ಟಿ. ಖಾದರ್ ಜತೆಗಿದ್ದರು.ಪಾದಯಾತ್ರೆಯಲ್ಲಿ ಕಾಂಗ್ರೆಸ್ ನಾಯಕರ `ದಂಡು-ದೌಡು' ಜೋರಾಗಿತ್ತು. ಉದ್ಘಾಟನಾ ವೇದಿಕೆಯಲ್ಲೂ ನೂಕುನುಗ್ಗಲು ಉಂಟಾಯಿತು. ಇದರಿಂದ ಬೇಸತ್ತ ಜನಾರ್ದನ ಪೂಜಾರಿ ಅವರೇ ಕೆಳಗಿಳಿದರು. ನಂತರ ಪಕ್ಷದ ಅಧ್ಯಕ್ಷರು ಅವರನ್ನು ವೇದಿಕೆಗೆ ಕರೆಸಿಕೊಂಡರು. ಪರಮೇಶ್ವರ್, ಸಿದ್ದರಾಮಯ್ಯ ಜತೆಗೆ ಎಸ್.ಆರ್. ಪಾಟೀಲ, ವೀರಣ್ಣ ಮತ್ತಿಕಟ್ಟಿ, ಬಿ.ಎಲ್. ಶಂಕರ್, ಮೋಟಮ್ಮ, ಜನಾರ್ದನ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು, ಜಿಲ್ಲಾಧ್ಯಕ್ಷ ಬಿ.ರಮಾನಾಥ ರೈ, ಜಿಲ್ಲಾಧ್ಯಕ್ಷೆ ಮಮತಾ ಗಟ್ಟಿ, ಸಿ.ಎಂ.ಇಬ್ರಾಹಿಂ, ಬಸವರಾಜ ರಾಯರೆಡ್ಡಿ, ಕುಮಾರ್ ಬಂಗಾರಪ್ಪ, ವಿ.ಆರ್. ಸುದರ್ಶನ್, ಆರ್.ಕೃಷ್ಣಪ್ಪ, ಡಾ. ಮಾಲಕ ರೆಡ್ಡಿ, ವಿನಯಕುಮಾರ್ ಸೊರಕೆ, ಪಕ್ಷದ ಜಿಲ್ಲಾ ಉಸ್ತುವಾರಿ ವಹಿಸಿರುವ ಬಿ.ಎನ್.ನಾರಾಯಣ ರಾವ್, ಮುನಿಯಪ್ಪ, ಹಿಂದುಳಿದ ವಿಭಾಗಗಳ ಘಟಕದ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್, ಮಂಜುನಾಥ್, ಐವನ್ ಡಿ ಸೋಜಾ ಆದಿಯಾಗಿ ಹಿರಿ-ಕಿರಿಯ ಹಲವಾರು ಪ್ರಮುಖರು ಭಾಗವಹಿಸಿದ್ದರು.ತೊಕ್ಕೊಟ್ಟು ಜಂಕ್ಷನ್‌ನಲ್ಲಿ ನಡೆದ ಬಹಿರಂಗ ಸಭೆಯ ವೇಳೆಗೆ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರೂ ಸೇರಿಕೊಂಡರು. ಮಧ್ಯಾಹ್ನದ ಊಟದ ವೇಳೆಗೆ ಕೇವಲ ಮೂರೂವರೆ ಕಿ.ಮೀ. ದೂರವಷ್ಟೆ ಕ್ರಮಿಸಲಾಯಿತು.ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಪರಮೇಶ್ವರ್ ಕಾರ್ಯಕರ್ತರಿಗೆ ಉರಿಬಿಸಿಲಿನ ಶುಭಾಶಯ ಕೋರಿದರು. ರಾಜ್ಯದ ಆಡಳಿತ ವ್ಯವಸ್ಥೆ ಹಾಗೂ ಸರ್ಕಾರವನ್ನು ತೀವ್ರವಾಗಿ ಖಂಡಿಸಿದ ಅವರು, ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕರಾವಳಿಯಲ್ಲಿ ಸಾಮರಸ್ಯವನ್ನು ಹಾಳುಮಾಡಿ, ಜನಸಾಮಾನ್ಯರ ಮಧ್ಯೆ ಕಂದರ ಸೃಷ್ಟಿ ಮಾಡಿದ `ಕೀರ್ತಿ' ಈ ಸರ್ಕಾರಕ್ಕೆ ಸಲ್ಲಬೇಕು ಎಂದರು. ದೇಶದಲ್ಲಿ ಪ್ರತಿಯೊಂದು ಧರ್ಮವೂ ಶ್ರೇಷ್ಠವೇ. ಆದರೆ ಇಂದು ಸಹೋದರ ಭಾವನೆ ನುಚ್ಚುನೂರಾಗಿದೆ. ಕೋಮುವಾದದ ವಿಷಬೀಜವನ್ನು ಬಿತ್ತಿದ್ದಾರೆ. ಇದರ ವಿರುದ್ಧ ಸಹೋದರತ್ವದ ಯಾತ್ರೆ ಇದು. ಅದಕ್ಕಾಗಿ ಕಾಂಗ್ರೆಸ್ಸಿನ ಬದ್ಧತೆಯ ಪ್ರದರ್ಶನ ಇದು. ಈ ನೆಲದ ಕಾನೂನಿನ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧವಾಗಿದೆ ಎಂದು ಸಾರಿದರು.ತೊಕ್ಕೊಟ್ಟಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ವೀರಪ್ಪ ಮೊಯಿಲಿ ಮತ್ತು ಜನಾರ್ದನ ಪೂಜಾರಿ ಅವರು ದೀರ್ಘ ಕಾಲದ ಬಳಿಕ ಒಂದೇ ವೇದಿಕೆಯನ್ನು ಹಂಚಿಕೊಂಡರು. ಪರಸ್ಪರ ಗೌರವ ಸಲ್ಲಿಸಿಕೊಂಡರು. ಆದರೆ ಕರಾವಳಿಯ `ತ್ರಿಮೂರ್ತಿ' ನಾಯಕರಲ್ಲಿ ಇನ್ನೊಬ್ಬರಾದ ಆಸ್ಕರ್ ಫರ್ನಾಂಡಿಸ್ ಅವರು ಮಂಗಳವಾರದ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿಲ್ಲ.ವಿಶೇಷ ನ್ಯಾಯಾಲಯ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನ್ಯಾ. ಸಂತೋಷ್ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿರುವ ಲೋಕಾಯುಕ್ತ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವ ಸಲುವಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು. ಗಣಿ ಲೂಟಿ ಸೇರಿದಂತೆ ಅಕ್ರಮ ಎಸಗಿದವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.ಇದನ್ನು ಮೊಯಿಲಿ ಅವರು ಸಮರ್ಥಿಸಿಕೊಂಡರು. ಈ ಪಾದಯಾತ್ರೆಯು ಕಾಂಗ್ರೆಸ್ಸಿನ ವಿಜಯ ಯಾತ್ರೆ ಎಂದು ಮೊಯಿಲಿ ಬಣ್ಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry