ಗುರುವಾರ , ಫೆಬ್ರವರಿ 25, 2021
29 °C
ಚಿತ್ತಾಕರ್ಷಕ ಫ್ಯಾಂಟಸಿ ಪಾರ್ಕ್‌; ಆಟೋಟಗಳಲ್ಲಿ ಪಾಲ್ಗೊಂಡು ಖುಷಿಪಟ್ಟ ಮಕ್ಕಳು

ಸಾಮರಸ್ಯದ ಸಂಕೇತ ಸಿದ್ಧೇಶ್ವರ ಜಾತ್ರೆಗೆ ತೆರೆ

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಸಾಮರಸ್ಯದ ಸಂಕೇತ ಸಿದ್ಧೇಶ್ವರ ಜಾತ್ರೆಗೆ ತೆರೆ

ವಿಜಯಪುರ: ಶತಮಾನದ ಐತಿಹ್ಯ ಹೊಂದಿರುವ ನಗರದ ಆರಾಧ್ಯ ದೈವ ಸಿದ್ಧೇಶ್ವರ ಸಂಕ್ರಮಣ ಜಾತ್ರೆ ಎಲ್ಲರ ಮನದಲ್ಲೂ ಆನಂದದ ಹೊನಲು ಹರಿಸುತ್ತದೆ. ದೇಗುಲ ಸಮಿತಿ ಒಂದು ವಾರ ಜಾತ್ರೆ ಆಚರಿಸಿದರೆ, ವ್ಯಾಪಾರಿಗಳು 15 ದಿನಕ್ಕೂ ಹೆಚ್ಚು ಅವಧಿ ಜಾತ್ರೆಯಲ್ಲಿ ವಹಿವಾಟು ನಡೆಸುತ್ತಾರೆ. ಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಾಮರಸ್ಯದ ಸಂಕೇತ. ಜಾತಿ–ಧರ್ಮದ ಹಂಗಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. ಜಾತ್ರೆಯ ವ್ಯಾಪಾರ, ಸಿದ್ಧೇಶ್ವರನ ದರ್ಶನವನ್ನುಈ ಸಮಯ ಎಲ್ಲರೂ ನಡೆಸುತ್ತಾರೆ. ಇನ್ನೇನು ಜಾತ್ರೆಗೆ ತೆರೆ ಬೀಳುವ ಕ್ಷಣ ಗಳಿಗೆ ಆರಂಭಗೊಂಡಿದೆ. ಅಂತಿಮ ದಿನಗಳಲ್ಲೂ ಜಾತ್ರೆಯ ಸವಿ, ಸೊಬಗು ಆನಂದಿಸಲು ಪೋಷಕರು ಮಕ್ಕಳ ಜತೆ ಮುಸ್ಸಂಜೆ ವೇಳೆ ಜಾತ್ರಾ ಬೀದಿಗೆ ದಾಂಗುಡಿಯಿಡುತ್ತಿದ್ದಾರೆ.ಇದು ಚಿಣ್ಣರ ಮನದಲ್ಲಿ ಡಬಲ್ ಖುಷಿ ಸೃಷ್ಟಿಸಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ಮಕ್ಕಳ ಮನ ತಣಿಸುವುದಕ್ಕಾಗಿಯೇ ಆರಂಭಗೊಂಡಿದ್ದ ‘ಫ್ಯಾಂಟಸಿ ಪಾರ್ಕ್‌’ ಮಾದರಿಯ ಮನರಂಜನಾ ಲೋಕ ಮಕ್ಕಳಿಂದ ತುಂಬಿದೆ. ಮತ್ತೊಂದು ಸುತ್ತು ಈ ಮನರಂಜನಾ ಲೋಕದಲ್ಲಿ ವಿಹರಿಸಲು ಪೋಷಕರು ಮಕ್ಕಳ ಜತೆ ನಿತ್ಯ ಮುಸ್ಸಂಜೆ ಭೇಟಿ ನೀಡುತ್ತಿದ್ದಾರೆ. ಇಲ್ಲಿಗೆ ಬರುವ ಎಲ್ಲರ ಮೊಗದಲ್ಲೂ ಮಂದಹಾಸ. ರಾತ್ರಿ ಸಮಯ ಝಗಮಗಿಸುವ ನಾನಾ ಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿಸುವ ಚಿರಕಿ ಗಾಣಾದ ವೈಭವ ಕಣ್ತುಂಬಿಕೊಳ್ಳುವರೇ ಹೆಚ್ಚು.50 ಅಡಿ ಎತ್ತರದ ಬಣ್ಣ ಬಣ್ಣದ ಟ್ಯೂಬ್ ಲೈಟ್‌ಗಳಿಂದ ಸಾಲಂಕೃತಗೊಂಡಿರುವ ಚಿರಕಿ ಗಾಣಾದಲ್ಲಿ ಕುಳಿತುಕೊಂಡವರ ಆನಂದಕ್ಕೆ ಪಾರವೇ ಇಲ್ಲ. ಚಿಕ್ಕಮಕ್ಕಳು, ಯುವಕರು, ವಿದ್ಯಾರ್ಥಿಗಳು ಆಸಕ್ತಿಯಿಂದ ಈ ಚಿರಕಿ ಗಾಣಾದಲ್ಲಿ ಕುಳಿತು ಸಂತಸಪಟ್ಟರು.ಅದೇ ರೀತಿ ಮೂನ್ ಡ್ಯಾನ್ಸ್, ಬ್ರೇಕ್ ಡ್ಯಾನ್ಸ್, ಅಕ್ಟೋಪಸ್ ರೈಡಿಂಗ್, ಸ್ಪೀಡ್ ಹೆಲಿಕ್ಯಾಪ್ಟರ್, ಸ್ಪೀಡ್ ಫೋರ್ ವ್ಹೀಲರ್, ಟೂ ವ್ಹೀಲರ್, ಚುಕು-ಬುಕು ಟ್ರೇನು, ವಿಮಾನ, ಹಡಗು... ಸೇರಿದಂತೆ ವಿವಿಧ ನಮೂನೆಯ ಮಕ್ಕಳ ಮನರಂಜನಾ ಪರಿಕರಗಳು ಮಕ್ಕಳನ್ನು ಕೈ ಬೀಸಿ ಕರೆದು ಭರಪೂರ ಮನರಂಜನೆ ಒದಗಿಸಿದವು.ಇನ್ನೂ ಚಿಕ್ಕಮಕ್ಕಳ ಫೇವರಿಟ್ ಆಗಿರುವ ಬಾಲ ಹನುಮಾನ ಕಾರ್ಟೂನ್ ರೂಪದಲ್ಲಿರುವ ಟೂ ವ್ಹೀಲರ್ ರೈಡಿಂಗ್ ಸಹ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿ ಎಲ್ಲರನ್ನೂ ಆಕರ್ಷಿಸಿತು. ಮಿಕ್ಕಿ ಮೌಸ್, ಡೋನಾಲ್ಡ್ ಡಕ್ ಮಾದರಿಯಲ್ಲಿ ಮಕ್ಕಳು ಜಿಗಿದು, ಕುಣಿದು ಕುಪ್ಪಳಿಸಲು ಮುಗಿ ಬಿದ್ದರು. ಆಟದ ಜತೆಗೆ ಮಿಠಾಯಿಯೂ, ಮಕ್ಕಳ ಆಟಿಕೆಗಳು ಜಾತ್ರೆಯಲ್ಲಿ ಲಭ್ಯ. ಮಕ್ಕಳು ಬೊಂಬಾಯಿ ಮಿಠಾಯಿ ಸವಿ ಸವಿಯುತ್ತಾ ಚಿರಕಿ ಗಾಣಾದಲ್ಲಿ ಕುಳಿತು ಜಾತ್ರೆಯ ಸೊಬಗನ್ನು ಕಣ್ತುಂಬಿಕೊಂಡರು. ಇಷ್ಟದ ಆಟಿಕೆ ಕೊಂಡರು.ಈ ಬಾರಿಯ ಜಾತ್ರೆ ಯಲ್ಲೂ ‘ಪನ್ನಾಲಾಲ್’ ಎಂಬ ಹೆಸರಿನ ಕತ್ತೆಯ ಕಮಾಲ್ ಮುಂದು ವರೆಯಿತು. ಕತ್ತೆಯ ಪ್ರಶ್ನೋತ್ತರ ಮಕ್ಕಳ ಮನಸ್ಸಿಗೆ ಮುದ ನೀಡಿತು. ದೊಡ್ಡವರು ಪನ್ನಾಲಾಲ್‌ ಕಮಾಲ್‌ಗೆ ತಲೆದೂಗಿದರು. ನಿತ್ಯ ಸಹಸ್ರ, ಸಹಸ್ರ ಸಂಖ್ಯೆಯ ಜನರನ್ನು ಇದು ಆಕರ್ಷಿಸಿತು.

ಜಾದೂ ಪ್ರದರ್ಶನ, ಗೋಲಾಕಾರದಲ್ಲಿ ಕಾರನ್ನು ಓಡಿಸುವ ಸಾಹಸ ಪ್ರದರ್ಶನವೂ ಸಹ ಈ ಬಾರಿಯ ಆಕರ್ಷಣೆಯ ಕೇಂದ್ರ ಬಿಂದುವಾಗಿ ಮಕ್ಕಳ ಮನ ಸೆಳೆಯಿತು.ಹೋದ ವರ್ಷದ ಹುರುಪಿಲ್ಲ. ಮೆರುಗಿಲ್ಲ. ಆದರೂ ರಜೆ ದಿನಗಳಲ್ಲಿ ಮಕ್ಕಳನ್ನು ಜಾತ್ರಾ ಬೀದಿಗೆ ಕರೆತಂದು ಎಲ್ಲವನ್ನೂ ತೋರಿಸಿ ಅವರ ಮನಸ್ಸು ಮುದಗೊಳಿಸುವ ಕಾಯಕ ನಡೆಸಿದೆವು

ವೀರಭದ್ರ ಉಪಾಸೆ,

ವಿಜಯಪುರ ನಾಗರಿಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.