ಬುಧವಾರ, ಮೇ 18, 2022
24 °C

ಸಾಮರಸ್ಯ ಸಾರಿದ ತಾಳವಾಡಿ ಕೊಂಡೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಜಿಲ್ಲೆಯ ಗಡಿ ಭಾಗದಲ್ಲಿರುವ ತಮಿಳುನಾಡಿಗೆ ಸೇರಿದ ತಾಳವಾಡಿ ಗ್ರಾಮದಲ್ಲಿ ಗುರುವಾರ ಮಾರಿಯಮ್ಮ ದೇವಿಯ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು. ತಾಳವಾಡಿ ಫಿರ್ಕಾದ 58 ಗ್ರಾಮಗಳು ಸೇರಿ ಚಾ.ನಗರ, ತಮಿಳುನಾಡಿನ ಈರೋಡ್, ಕೊಯಮತ್ತೂರಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದರು.ಗ್ರಾಮದ ಮುಖ್ಯಬೀದಿಯಲ್ಲಿರುವ ದೇಗುಲದ ಪಕ್ಕ ಮಸೀದಿ ಇದೆ. ಇದರ ಗೋಡೆಗೆ ಅಂಟಿಕೊಂಡಂತೆ ಟಿಪ್ಪುಸುಲ್ತಾನ್ ಕಾಲದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲ ಸ್ವಾಮಿಯ ಗುಡಿ ಇದೆ. ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ಜರುಗುವುದು ವಿಶೇಷ.ನಾಲ್ಕು ದಶಕದ ಹಿಂದೆ ಜಾತ್ರೆ ಸಂಬಂಧ ಘರ್ಷಣೆಯಾಗಿತ್ತು. ನಂತರ ಊರಿನ ಎಲ್ಲಾ ಕೋಮಿನ ಮುಖಂಡರು ಕುಳಿತು ಚರ್ಚಿಸಿ ಯಾವುದೇ ಗಲಾಟೆಗೆ ಅವಕಾಶ ನೀಡದಂತೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವುದರೊಂದಿಗೆ ಜಾತ್ರಾ ಮಹೋತ್ಸವದ ಆಚರಣೆಗೆ ಮುಂದಾಗಿದ್ದಾರೆ.ಈ ಪ್ರದೇಶದಲ್ಲಿ ಮೂರು ಮಂದಿರಗಳು ಒಟ್ಟಿಗೆ ಇವೆ. ಧ್ವನಿವರ್ಧಕವನ್ನು ಜಾತ್ರೆಯಲ್ಲಿ ಮಾತ್ರ ಬಳಸಲಾಗುತ್ತದೆ. ಮುಸ್ಲಿಂ ಸಮುದಾಯ ಬಾಂಧವರು ಕೂಡ ಸಕ್ರಿಯವಾಗಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.ಕೊಂಡೋತ್ಸವದ ಹಿಂದಿನ ದಿನ ಗ್ರಾಮದ ಬೀದಿಗಳಲ್ಲಿ ಮಾರಿಯಮ್ಮ ದೇವಿಯ ಉತ್ಸವ ನಡೆಯಿತು. ಚಂಡಿಮೇಳ, ಗೊರವರ ಕುಣಿತ, ವೀರಗಾಸೆ, ಬೀರೇದೇವರ ಕುಣಿತ ಇತ್ಯಾದಿ ಜಾನಪದ ಕಲಾ ತಂಡಗಳು ಮತ್ತು ಮಂಗಳ ವಾದ್ಯಗಳೊಂದಿಗೆ ಅದ್ದೂರಿಯಾಗಿ ಉತ್ಸವ ನಡೆಯಿತು.ಜಾತ್ರೆ ವೇಳೆ ಯಾರ ಮನೆಯಲ್ಲಿಯೂ ಘಾಟು, ಒಗ್ಗರಣೆ, ಕರಿದ ತಿನಿಸು, ಮಾಂಸಾಹಾರ ಮಾಡುವುದಿಲ್ಲ. ಜತೆಗೆ, ಸತ್ತವರ ಶವವನ್ನು ಊರೊಳಗೆ ತರುವಂತಿಲ್ಲ. ಇದನ್ನು ಎಲ್ಲ ಕೋಮಿನವರು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ.ಈ ಜಾತ್ರೆ ಅಂಗವಾಗಿ ಗ್ರಾಮದ ಒಂದೊಂದು ಜನಾಂಗದವರಿಗೂ ನಿರ್ದಿಷ್ಟ ಜವಾಬ್ದಾರಿ ವಹಿಸ ಲಾಗಿದೆ. ಹಾಲುಮತಸ್ಥರು ಕೊಂಡಕ್ಕೆ ಸೌದೆ ತರು ತ್ತಾರೆ.ನಾಯಕ ಜನಾಂಗದವರು ಅದನ್ನು ಹೊತ್ತಿಸಿ ಕೆಂಡ ಮಾಡುತ್ತಾರೆ. ಬ್ರಾಹ್ಮಣರು ದೇವಿಯ ಪೂಜೆ ಮಾಡಿದರೆ, ಲಿಂಗಾಯತರು ಮತ್ತು ಲಿಂಗಾಯತ ಶೆಟ್ಟರು ತೇರು ಸಿದ್ಧಪಡಿಸುತ್ತಾರೆ.  ಉಪ್ಪಾರ ಶೆಟ್ಟರದ್ದು ಹೂವಿನ ಅಲಂಕಾರ ಮಾಡುವ ಜವಾಬ್ದಾರಿ. ನೈವೇದ್ಯಕ್ಕೆ ಹೊಸ ಮಡಿಕೆ ಇರುವುದು ಕುಂಬಾರಶೆಟ್ಟರ ಹೊಣೆ. ಪರಿಶಿಷ್ಟರು ಚಪ್ಪರ ಹಾಕಿ ಕೊಂಬು, ಕಹಳೆ, ತಮಟೆ ವಾದ್ಯ ನುಡಿಸುತ್ತಾರೆ.ಈ ಹಿಂದೆ 20ರಿಂದ 30 ಮಂದಿ ಕೊಂಡ ಹಾಯುತ್ತಿದ್ದರು. ನೂಕುನುಗ್ಗಲಿನ ಪರಿಣಾಮ ಕೊಂಡದ ಮೇಲೆ ಬಿದ್ದು ಗಾಯಗೊಂಡ ದುರ್ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಒಬ್ಬರು ಮಾತ್ರ ಕೊಂಡ ಹಾಯುವ ಪದ್ಧತಿ ಚಾಲ್ತಿಗೆ ಬಂದಿದೆ. ಈಗ ಶಿವಣ್ಣ ಎಂಬುವರು ಮಾತ್ರ ಕೊಂಡ ಹಾಯುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.